More

    ಸಿಡಿಪಿಒ ವಿರುದ್ಧ ಶಿಸ್ತು ಕ್ರಮ

    ಶಿರಹಟ್ಟಿ: ಕಳೆದ ಏಪ್ರಿಲ್ ಹಾಗೂ ಮೇ ತಿಂಗಳಲ್ಲಿ ಅಂಗನವಾಡಿ ಮಕ್ಕಳಿಗೆ ಹಾಗೂ ಬಾಣಂತಿಯರಿಗೆ ಮೊಟ್ಟೆ ವಿತರಿಸದೆ, ಸಿಡಿಪಿಒ ಮೃತ್ಯುಂಜಯ ಅವರು ಬಿಲ್ ಪಾವತಿಸಲು ಪ್ರಸ್ತಾವನೆ ಸಲ್ಲಿಸಿದ್ದಾರೆ. ಈ ಬಗ್ಗೆ ಅವರ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳುವಂತೆ ಜಿಪಂ ಸಿಇಒ ಅವರ ಗಮನಕ್ಕೆ ತರಲಾಗುತ್ತದೆ ಎಂದು ತಾಪಂ ಇಒ ಡಾ. ಎನ್.ಎಚ್. ಓಲೇಕಾರ ತಿಳಿಸಿದರು.

    ಪಟ್ಟಣದ ತಾಪಂ ಸಾಮರ್ಥ್ಯಸೌಧದ ಸಭಾ ಭವನದಲ್ಲಿ ಸೋಮವಾರ ಆಯೋಜಿಸಿದ್ದ ತಾಪಂ ಮಾಸಿಕ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿದ ತಾಪಂ ಉಪಾಧ್ಯಕ್ಷೆ ಪವಿತ್ರಾ ಶಂಕಿನದಾಸರ, ಅಂಗನವಾಡಿ ಮಕ್ಕಳು ಹಾಗೂ ಬಾಣಂತಿಯರಿಗೆ ಎರಡು ತಿಂಗಳು ಮೊಟ್ಟೆ ಹಾಗೂ ಪೌಷ್ಟಿಕ ಆಹಾರ ನೀಡಿಲ್ಲ. ಈ ಕುರಿತು ಪಾಲಕರಿಂದ ದೂರು ಕೇಳಿ ಬಂದಿದೆ. ಈ ಬಗ್ಗೆ ಯಾವ ಕ್ರಮ ಕೈಗೊಂಡಿದ್ದೀರಿ ಎಂದು ಸಿಡಿಪಿಒ ಅವರನ್ನು ಪ್ರಶ್ನಿಸಿದರು.

    ಪ್ರತಿಕ್ರಿಯಿಸಿದ ಸಿಡಿಪಿಒ, ‘ಕರೊನಾ ನಿಯಂತ್ರಣದ ಹಿನ್ನೆಲೆಯಲ್ಲಿ ಅಂಗನವಾಡಿ ಕೇಂದ್ರಗಳನ್ನು ಮುಚ್ಚಲಾಗಿತ್ತು. ಹೀಗಾಗಿ ಮಕ್ಕಳಿಗೆ ಗರ್ಭಿಣಿಯರಿಗೆ ಹಾಗೂ ಬಾಣಂತಿಯರಿಗೆ ಅವರ ಮನೆಗಳಿಗೆ ಹೋಗಿ ಮೊಟ್ಟೆ, ಪೌಷ್ಟಿಕ ಆಹಾರ ನೀಡಿ ಎಂದು ಅಂಗನವಾಡಿ ಕಾರ್ಯಕರ್ತೆಯರಿಗೆ ಸೂಚನೆ ನೀಡಲಾಗಿತ್ತು’ ಎಂದರು. ಆಗ ಮಧ್ಯ ಪ್ರವೇಶಿಸಿದ ತಾಪಂ ಇಒ, ‘ನಾನು ಸ್ವತಃ ಹಳ್ಳಿಗಳಿಗೆ ಹೋಗಿ ಪರಿಶೀಲನೆ ಮಾಡಿದ್ದೇನೆ. ಏಪ್ರಿಲ್ ತಿಂಗಳಲ್ಲಿ 232 ಅಂಗವಾಡಿ ಕೇಂದ್ರಗಳ ಮಕ್ಕಳಿಗೆ ಮೊಟ್ಟೆ ನೀಡಿಲ್ಲ. ಈ ಕುರಿತು ಕಾರ್ಯಕರ್ತೆಯರನ್ನು ಕೇಳಿದರೆ ಸಕಾರಾತ್ಮಕ ಉತ್ತರ ಬಂದಿಲ್ಲ. ವಾಸ್ತವ ಹೀಗಿದ್ದರೂ ನೀವು ಮೊಟ್ಟೆ ವಿತರಿಸಿದ್ದರ ಬಗ್ಗೆ ಪೂರಕ ದಾಖಲೆ ಸೃಷ್ಟಿಸಿ ಬಿಲ್ ಸಂದಾಯಕ್ಕೆ ಪ್ರಸ್ತಾವನೆ ಸಲ್ಲಿಸಿದ್ದು ಸರಿಯೇ? ಅಪೌಷ್ಟಿಕತೆಯಿಂದ ಬಳಲುವ ಬಡ ಮಕ್ಕಳ ಹಾಗೂ ಬಾಣಂತಿಯರ ಆರೋಗ್ಯದ ಹಿತದೃಷ್ಟಿಯಿಂದ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆ ಸದ್ಬಳಕೆಯಾಗದಿದ್ದರೆ ಏನು ಪ್ರಯೋಜನ? ಪ್ರತಿ ಸಭೆಯಲ್ಲೂ ಸಮರ್ಪಕ ಮಾಹಿತಿ ನೀಡದೆ ಉಡಾಫೆ ಉತ್ತರ ನೀಡುತ್ತಿದ್ದೀರಿ. ಈ ಬಗ್ಗೆ ಸೂಕ್ತ ಕ್ರಮಕ್ಕೆ ಜಿಪಂ ಸಿಇಒ ಅವರ ಗಮನಕ್ಕೆ ತರಲಾಗುವುದು’ ಎಂದರು.

    ಗ್ರಾಮಾಂತರ ಪ್ರದೇಶದಲ್ಲಿ ಯಾವುದೇ ಇಲಾಖೆಯಿಂದ ಅಭಿವೃದ್ಧಿಪರ ಕಾರ್ಯಗಳು ಕೈಗೊಳ್ಳುವ ಪೂರ್ವದಲ್ಲಿ ವ್ಯಾಪ್ತಿಗೆ ಸಂಬಂಧಿಸಿದ ಜಿಪಂ, ತಾಪಂ ಸದಸ್ಯರ ಗಮನಕ್ಕೆ ತಂದು ಅವರನ್ನು ಆಹ್ವಾನಿಸಿ ಕಾರ್ಯಕ್ರಮ ನಡೆಸಿ ಎಂದು ತಾಪಂ ಇಒ ಡಾ. ಓಲೇಕಾರ ಅಧಿಕಾರಿಗಳಿಗೆ ಸೂಚನೆ ನೀಡಿದರು.

    ತಾಪಂ ಅಧ್ಯಕ್ಷ ಈಶ್ವರಪ್ಪ ಲಮಾಣಿ ಸಭೆಯ ಅಧ್ಯಕ್ಷತೆ ವಹಿಸಿದ್ದರು. ಸಾಮಾಜಿಕ ನ್ಯಾಯ ಸಮಿತಿ ಅಧ್ಯಕ್ಷ ಮಂಜುನಾಥ ಜೋಗಿ, ಸದಸ್ಯ ತಿಪ್ಪಣ್ಣ ಕೊಂಚಿಗೇರಿ ಹಾಗೂ ಅಧಿಕಾರಿಗಳು ಉಪಸ್ಥಿತರಿದ್ದರು.

    ಲಾಟರಿ ಮೂಲಕ ತಾಡಪತ್ರಿ ವಿತರಿಸಿ: ಪ್ರತಿ ವರ್ಷ ಸಹಾಯಧನದ ಅಡಿಯಲ್ಲಿ ಕೃಷಿ ಇಲಾಖೆಯಿಂದ ತಾಡಪತ್ರಿಗಳನ್ನು ಹಂಚಿಕೆ ಮಾಡಲಾಗುತ್ತದೆ. ತಾಡಪತ್ರಿಗಳ ಹಂಚಿಕೆ ಸಂಬಂಧ ಜಿಪಂ, ತಾಪಂ ಸದಸ್ಯರಿಗೆ ಇಂತಿಷ್ಟು ರೈತರ ಹೆಸರು ಶಿಫಾರಸು ಮಾಡಲು ಸಲಹೆ ನೀಡುತ್ತೀರಿ. ಈ ಶಿಫಾರಸಿನ ಗೊಡವೆ ನಮಗೆ ಬೇಡ. ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಪ್ರಚಾರ ಮಾಡಿ ಲಾಟರಿ ಪದ್ಧತಿ ಅನುಸರಿಸಿ ಹಂಚಿಕೆ ಮಾಡಿ ಎಂದು ತಾಪಂ ಸದಸ್ಯ ತಿಪ್ಪಣ್ಣ ಕೊಂಚಿಗೇರಿ ಕೃಷಿ ಅಧಿಕಾರಿ ನರಸಮ್ಮನವರಿಗೆ ಸಲಹೆ ನೀಡಿದರು. ಅಲ್ಲದೆ, ತಾಲೂಕಿನ ಹೊಸಳ್ಳಿಯಿಂದ ಶಿರಹಟ್ಟಿವರೆಗೆ ರಸ್ತೆಯುದ್ದಕ್ಕೂ ಅಡ್ಡಾದಿಡ್ಡಿ ಬೆಳೆದು ನಿಂತ ಮುಳ್ಳಿನ ಕಂಟಿಗಳನ್ನು ಸ್ವಚ್ಛಗೊಳಿಸಿ ವಾಹನ ಸಂಚಾರಕ್ಕೆ ಅನುವು ಮಾಡಿ ಅಪಘಾತ ತಪ್ಪಿಸಿ ಎಂದು ಪಿಡಬ್ಲ್ಯುಡಿ ಸಹಾಯಕ ಇಂಜಿನಿಯರ್ ಡಿ.ಬಿ. ನರೇಂದ್ರ ಅವರಿಗೆ ಸೂಚಿಸಿದರು.

    ಕರೊನಾ ಸೋಂಕಿತರ ನಿಯಂತ್ರಣ ಕಷ್ಟ: ಕಳೆದ ಮಾರ್ಚ್​ನಿಂದ ಇದುವರೆಗೆ ತಾಲೂಕಿನಲ್ಲಿ 3,500 ಜನರನ್ನು ಕರೊನಾ ರ್ಯಾಪಿಡ್ ಪರೀಕ್ಷೆಗೊಳಪಡಿಸಲಾಗಿದೆ. ಅವರಲ್ಲಿ 349 ಜನರ ವರದಿ ಪಾಸಿಟಿವ್ ಬಂದ ಹಿನ್ನೆಲೆಯಲ್ಲಿ ಚಿಕಿತ್ಸೆ ನೀಡಲಾಗಿದೆ. 282 ಜನ ಗುಣವಾಗಿದ್ದಾರೆ. ವಿವಿಧ ಕಾರಣಗಳಿಂದ 15 ಜನರು ಮೃತಪಟ್ಟಿದ್ದಾರೆ. ಕರೊನಾ ಸೋಂಕು ನಿಯಂತ್ರಣ ಅಸಾಧ್ಯವಾಗಿದ್ದು, ದಿನೇ ದಿನೆ ಹೆಚ್ಚುತ್ತಲಿದೆ. ಜನರು ಈ ಬಗ್ಗೆ ಜಾಗೃತಿ ವಹಿಸಬೇಕು ಎಂದು ತಾಲೂಕು ಆರೋಗ್ಯಾಧಿಕಾರಿ ಡಾ. ಸುಭಾಸ ದೈಗೊಂಡ ತಿಳಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts