More

    ಸಿಎಸ್‌ಸಿಯಲ್ಲಿ ಉಚಿತ ನೋಂದಣಿ

    ಬಾಗಲಕೋಟೆ: ಕೇಂದ್ರ ಹಾಗೂ ರಾಜ್ಯ ಸರ್ಕಾರದಿಂದ ಅಸಂಘಟಿತ ವರ್ಗಗಳ ಕಾರ್ಮಿಕರಿಗೆ ಸಾಮಾಜಿಕ ಭದ್ರತಾ ಯೋಜನೆಗಳ ಸೌಲಭ್ಯ ಒದಗಿಸುವ ನಿಟ್ಟಿನಲ್ಲಿ ಕಾರ್ಮಿಕರ ದತ್ತಾಂಶವನ್ನು ಸಿದ್ಧಪಡಿಸಲು ಇ-ಶ್ರಮ ಪೋರ್ಟಲ್‌ನಲ್ಲಿ ಜಿಲ್ಲೆಯ ಎಲ್ಲ ಸಾಮಾನ್ಯ ಸೇವಾ ಕೇಂದ್ರ (ಸಿಎಸ್‌ಸಿ) ಗಳಲ್ಲಿ ಉಚಿತವಾಗಿ ನೋಂದಣಿ ಮಾಡಿಕೊಳ್ಳಲಾಗುತ್ತಿದೆ ಎಂದು ಜಿಲ್ಲಾಧಿಕಾರಿ ಕೆ.ರಾಜೇಂದ್ರ ಹೇಳಿದರು.

    ಜಿಲ್ಲಾಧಿಕಾರಿ ಸಭಾಂಗಣದಲ್ಲಿ ಅಸಂಘಟಿತ ಕಾರ್ಮಿಕರ ನೋಂದಣಿಗಾಗಿ ಕೇಂದ್ರ ಸರ್ಕಾರ ಅಭಿವೃದ್ಧಿ ಪಡಿಸಿರುವ ಸಮಗ್ರ ರಾಷ್ಟ್ರೀಯ ಡೇಟಾಬೇಸ್ ಸಿದ್ಧಪಡಿಸಲು ನಿಟ್ಟಿನಲ್ಲಿ ಗುರುವಾರ ಹಮ್ಮಿಕೊಂಡಿದ್ದ ಜಿಲ್ಲಾಮಟ್ಟದ ಸಮಿತಿ ಸಭೆ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಆಧಾರ್ ಸಂಖ್ಯೆಗೆ ಜೋಡಣೆಯಾದ ಅಸಂಘಟಿತ ಕಾರ್ಮಿಕರ ರಾಷ್ಟ್ರೀಯ ದತ್ತಾಂಶವನ್ನು ಸಿದ್ಧಪಡಿಸಲು ಕಾರ್ಮಿಕ ಹಾಗೂ ಉದ್ಯೋಗ ಮಂತ್ರಾಲಯವು ಇ-ಶ್ರಮ ಪೋರ್ಟಲ್ ಅಭಿವೃದ್ಧಿ ಪಡಿಸಿದೆ ಎಂದರು.

    ಯಾವ ವರ್ಗದವರಿಗೆ ಸೌಲಭ್ಯ
    ಕಟ್ಟಡ ಮತ್ತು ಇತರ ನಿರ್ಮಾಣ ಕಾರ್ಮಿಕರು, ಕೃಷಿ ಕಾರ್ಮಿಕರು, ಮೀನುಗಾರರು, ಆಶಾ ಕಾರ್ಯಕರ್ತೆಯರು, ಮನೆಗೆಲಸ ಕಾರ್ಮಿಕರು, ಚಾಲಕರು, ಟೇಲರ್‌ಗಳು, ಬೀದಿಬದಿ ವ್ಯಾಪಾರಿಗಳು, ಸಣ್ಣ ಮತ್ತು ಅತಿ ಸಣ್ಣ ರೈತರು, ಪಶು ಸಂಗೋಪನಗಾರರು, ನೇಕಾರರು, ಬಡಗಿ ಕೆಲಸಗಾರರು, ಫೋಟೋಗ್ರಾರ್, ಕ್ಷೌರಿಕ, ತರಕಾರಿ, ಹಣ್ಣು ಮಾರಾಟಗಾರರು, ಪತ್ರಿಕಾ ಮಾರಾಟಗಾರರು, ಕೂಲಿ ಕಾರ್ಮಿಕರು (ನರೇಗಾ), ಅಂಗಡಿ ವ್ಯಾಪಾರಿಗಳು, ಚರ್ಮ ಕೈಗಾರಿಕಾ ಕಾರ್ಮಿಕರು, ಆನ್‌ಲೈನ್ ಸೇವಾ ಕಾರ್ಮಿಕರು, ಹೋಟೆಲ್ ಕಾರ್ಮಿಕರು, ಬೇಕರಿ ವ್ಯಾಪಾರಸ್ಥರು, ವಲಸೆ ಕಾರ್ಮಿಕ, ಮೆಕಾನಿಕ್ ಕಾರ್ಮಿಕರು ಈ ಸೌಲಭ್ಯ ಪಡೆಯಬಹುದಾಗಿದೆ ಎಂದು ತಿಳಿಸಿದರು.

    ನೋಂದಣಿಂದಾಗುವ ಪ್ರಯೋಜನ
    ಸಾಮಾಜಿಕ ಭದ್ರತೆ ಹಾಗೂ ಕಲ್ಯಾಣ ಯೋಜನೆ, ದತ್ತಾಂಶವು ಸರ್ಕಾರಕ್ಕೆ ಅಸಂಘಟಿತ ಕಾರ್ಮಿಕರಿಗೆ ವಿಶೇಷ ನೀತಿಗಳು ಹಾಗೂ ಯೋಜನೆಗಳನ್ನು ರೂಪಿಸಲು, 1 ವರ್ಷದ ಅವಧಿಗೆ ಪ್ರಧಾನಮಂತ್ರಿ ಸುರಕ್ಷಾ ಬಿಮಾ ಯೋಜನೆಯಡಿ ಅಪಘಾತದಿಂದ ಮರಣ ಹೊಂದಿದಲ್ಲಿ ಅಥವಾ ಶಾಶ್ವತ ದುರ್ಬಲತೆ ಹೊಂದಿದಲ್ಲಿ 2 ಲಕ್ಷ ರೂ. ಹಾಗೂ ಭಾಗಶಃ ಅಂಗವೈಕಲ್ಯಕ್ಕೆ 1 ಲಕ್ಷ ರೂ. ಪರಿಹಾರ ಪಡೆಯಬಹುದಾಗಿದೆ. ರಾಷ್ಟ್ರೀಯ ವಿಪತ್ತು, ಕೋವಿಡ್ ಸಾಂಕ್ರಾಮಿಕ ಪಿಡುಗಿನಂತಹ ಪರಿಸ್ಥಿತಿಯಲ್ಲಿ ಅರ್ಹ ಕಾರ್ಮಿಕರಿಗೆ ನೆರವು ಪಡೆಯಲು ಸಹಾಯಕಾರಿಯಾಗಿದೆ ಎಂದು ಹೇಳಿದರು.

    ಸಭೆಯಲ್ಲಿ ಬೆಳಗಾವಿ ವಿಭಾಗದ ಸಹಾಯಕ ಕಾರ್ಮಿಕ ಆಯುಕ್ತ ಎಂ.ಬಿ. ಅನಸಾರಿ, ಜಿಪಂ ಉಪಕಾರ್ಯದರ್ಶಿ ಅಮರೇಶ ನಾಯಕ, ಜಿಲ್ಲಾ ಕಾರ್ಮಿಕ ಅಧಿಕಾರಿ ಬಿ.ಆರ್. ಜಾಧವ, ಲೋಕೋಪಯೋಗಿ ಮುಖ್ಯ ಇಂಜಿನಿಯರ್ ಪ್ರಶಾಂತ ಗಿಡದಾನಪ್ಪಗೋಳ, ಬಿಟಿಡಿಎ ಪುನರ್ವಸತಿ ಆಯುಕ್ತ ಗಣಪತಿ ಪಾಟೀಲ, ನಗರಸಭೆ ಆಯುಕ್ತ ವಿ.ಮುನಿಶಾಮಪ್ಪ, ಜಿಲ್ಲಾ ಬಾಲಕಾರ್ಮಿಕ ಸಂಸ್ಥೆಯ ಯೋಜನಾ ನಿರ್ದೇಶಕ ಸುಧಾಕರ ಬಡಿಗೇರ ಸೇರಿದಂತೆ ವಿವಿಧ ಕಾರ್ಮಿಕ ಸಂಘಟನೆಗಳ ಮುಖ್ಯಸ್ಥರು ಉಪಸ್ಥಿತರಿದ್ದರು.

    ಡಿ.31 ಕೊನೆಯ ದಿನ
    ಜಿಲ್ಲೆಯಲ್ಲಿರುವ 452 ಸಾಮಾನ್ಯ ಸೇವಾ ಕೇಂದ್ರ (ಸಿಎಸ್‌ಸಿ) ಗಳಿಗೆ ಭೇಟಿ ನೀಡಿ ಉಚಿತವಾಗಿ ನೋಂದಾಯಿಸಬಹುದಾಗಿದೆ. ನೋಂದಣಿಗೆ 16 ರಿಂದ 59 ವಯೋಮಿತಿ ಹೊಂದಿದವರಾಗಿರಬೇಕು. ಆದಾಯ ತೆರಿಗೆ ಪಾವತಿದಾರರಾಗಿರಬಾರದು. ಆಧಾರ್ ಕಾರ್ಡ್, ಆಧಾರ್ ಸಂಖ್ಯೆಗೆ ಜೋಡಣೆಯಾದ ಮೊಬೈಲ್ ನಂಬರ್, ಬ್ಯಾಂಕ್ ಖಾತೆ ವಿವರ ಅವಶ್ಯವಾಗಿ ತೆಗೆದುಕೊಂಡು ಹೋಗಬೇಕು. ನೋಂದಣಿಗೆ ಡಿ.31 ಕೊನೆಯ ದಿನವಾಗಿದೆ ಎಂದು ಜಿಲ್ಲಾಧಿಕಾರಿ ಕೆ. ರಾಜೇಂದ್ರ ತಿಳಿಸಿದರು.

    ಆಯಾ ಇಲಾಖೆಯಡಿ ಬರುವ ಅಸಂಘಟಿತ ವಲಯಗಳಲ್ಲಿ ಬರುವ ವಿವಿಧ ವರ್ಗದ ಕಾರ್ಮಿಕರ ನೋಂದಣಿಗೆ ಕ್ರಮವಹಿಸಬೇಕು. ಅಲ್ಲದೆ, ವಿವಿಧ ಕಾರ್ಮಿಕರ ಹಾಗೂ ಅಸಂಘಟಿತ ವಲಯದ ಸಂಘಟನೆಗಳ ಸಹಕಾರ ಸಹ ಅಗತ್ಯವಾಗಿದೆ. ಕಾರ್ಮಿಕ ಮಕ್ಕಳ ಶಿಕ್ಷಣಕ್ಕೆ ಸರ್ಕಾರ ಸಾಕಷ್ಟು ಸೌಲಭ್ಯಗಳಿದ್ದು, ಇದರ ಪ್ರಯೋಜನ ಪಡೆದುಕೊಳ್ಳಬೇಕು.
    ಕೆ. ರಾಜೇಂದ್ರ, ಜಿಲ್ಲಾಧಿಕಾರಿ
    Community-verified icon

    
    
    Community-verified icon

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts