More

    ಸಿಎಎ ವಿರೋಧಿಸಿ ಗೋಡೆ ಬರಹ

    ನರಗುಂದ: ಕೆಲ ಕಿಡಿಗೇಡಿಗಳು ಪಟ್ಟಣದ ದೇವಸ್ಥಾನ, ಶಾಲೆ, ಗ್ರಂಥಾಲಯಗಳ ಗೋಡೆಗಳ ಮೇಲೆ ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿಸಿ ಬರೆದಿದ್ದು, ಪ್ರಕ್ಷುಬ್ಧ ವಾತಾವರಣ ಉಂಟುಮಾಡಿದೆ.

    ಪಟ್ಟಣದ ಐತಿಹಾಸಿಕ ಶ್ರೀ ವೆಂಕಟೇಶ್ವರ ದೇವಸ್ಥಾನ, ನಗರೇಶ್ವರ ದೇವಸ್ಥಾನ, ಸಿದ್ಧೇಶ್ವರ ಕಾಲೇಜ್, ಪುರಸಭೆ, ಸಾರ್ವಜನಿಕ ಗ್ರಂಥಾಲಯ, ಬಸ್ ನಿಲ್ದಾಣ ಸೇರಿ ಪಟ್ಟಣದ ಪ್ರಮುಖ ಸ್ಥಳಗಳಲ್ಲಿರುವ ಕಟ್ಟಡಗಳ ಗೋಡೆ ಮೇಲೆ ದುಷ್ಕರ್ವಿುಗಳು ‘ನೋ ಎನ್​ಆರ್​ಸಿ’, ‘ನೋ ಸಿಎಎ’ ಎಂಬ ಸಂದೇಶಗಳನ್ನು ಬರೆದಿರುವುದು ಗುರುವಾರ ನಸುಕಿನ ಜಾವ ಕಂಡುಬಂದಿದೆ.

    ಇದರಿಂದ ಆಕ್ರೋಶಗೊಂಡ ಕೆಲ ಹಿಂದುಪರ ಸಂಘಟನೆಗಳ ಸದಸ್ಯರು ಈ ಕೃತ್ಯವನ್ನು ಖಂಡಿಸಿ, ಗೋಡೆ ಬರಹ ಬರೆದವರನ್ನು ಕೂಡಲೆ ಬಂಧಿಸಿ ಅವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿ ಪುರಸಭೆ ಎದುರಿನ ಬಾಬಾಸಾಹೇಬರ ಪುತ್ಥಳಿಯಿಂದ ಪೊಲೀಸ್ ಠಾಣೆವರೆಗೆ ಬೈಕ್ ರ‍್ಯಾಲಿ ನಡೆಸಿದರು. ನಂತರ ಡಿವೈಎಸ್ಪಿ ಶಿವಾನಂದ ಕಟಗಿ, ಸಿಪಿಐ ಡಿ.ಬಿ. ಪಾಟೀಲ ಅವರಿಗೆ ಮನವಿ ಸಲ್ಲಿಸಿದರು.

    ಡಿವೈಎಸ್​ಪಿ ಶಿವಾನಂದ ಕಟಗಿ ಮಾತನಾಡಿ, ಪಟ್ಟಣದಲ್ಲಿ ಕೆಲ ಕಿಡಿಗೇಡಿಗಳು ಬರೆದಿರುವ ಬರಹಗಳನ್ನು ಖುದ್ದಾಗಿ ಗಮನಿಸಿದ್ದೇನೆ. ದೇವಸ್ಥಾನ, ಸರ್ಕಾರಿ ಕಚೇರಿಗಳ ಗೋಡೆಗಳ ಮೇಲೆ ಬರೆದ ಬರಹಗಳನ್ನು ಅಳಕಿಸುವಂತೆ ಸಿಪಿಐ ಡಿ.ಬಿ. ಪಾಟೀಲರಿಗೆ ಸೂಚನೆ ನೀಡಿದ ಮೇರೆಗೆ ಅವರು ಎಲ್ಲವನ್ನು ಈಗಾಗಲೇ ತೆಗೆಸಿದ್ದಾರೆ. ಈ ಕೃತ್ಯದಲ್ಲಿ ಭಾಗಿಯಾದವರ ಬಗ್ಗೆ ಇನ್ನೂ ಮಾಹಿತಿ ದೊರೆತಿಲ್ಲ. ಆರೋಪಿಗಳ ಬಂಧನಕ್ಕೆ ವಿಶೇಷ ತಂಡ ರಚಿಸಲಾಗಿದೆ. ಪಟ್ಟಣದ ಪ್ರಮುಖ ಸ್ಥಳಗಳಲ್ಲಿ ಅಳವಡಿಸಲಾಗಿರುವ ಸಿಸಿಟಿವಿ ದೃಶ್ಯಗಳನ್ನು ಆಧರಿಸಿ ತಪ್ಪಿತಸ್ಥರನ್ನು ಸದ್ಯದಲ್ಲಿಯೇ ಬಂಧಿಸಿ ಸೂಕ್ತ ಕಾನೂನು ಕ್ರಮ ಕೈಗೊಳ್ಳುತ್ತೇವೆ ಎಂದು ಭರವಸೆ ನೀಡಿದರು.

    ರವಿ ಹೊಂಗಲ, ನಿಂಗಪ್ಪ ನಾಗನೂರ, ಬಸು ಗಡೇಕಾರ, ವಿಠಲ ಕಾಪ್ಸೆ, ಸಂಗಣ್ಣ ಕಳಸ, ಮಹಾದೇವಪ್ಪ ಸುಣಗಾರ, ಲಂಕೇಶ ಮುದ್ದನಗೌಡ್ರ, ವಿಜಯ ಮಾನೆ, ಗೌರೀಶ ಪಾಟೀಲ, ಬಸವರಾಜ ಬಿರಾದಾರ, ಸೋಮು ಹೊಂಗಲ, ಮಹಾಂತೇಶ ಹಂಪಣ್ಣವರ, ಶಿವಾನಂದ ಕರಿಯಪ್ಪನವರ, ಮಣಿಕಂಠಯ್ಯ ಸಂಗಳಮಠ, ಇತರರು ಉಪಸ್ಥಿತರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts