More

    ಸಿಂದಗಿ‌ ವಿಧಾನ ಸಭೆ ಉಪ ಚುನಾವಣೆ, ಮೋರಟಗಿಯಲ್ಲಿ ಬಿಜೆಪಿ ಪ್ರಚಾರ ಸಭೆ, ಮಾಜಿ ಸಿಎಂ ಯಡಿಯೂರಪ್ಪ ಹೇಳಿಕೆ, ಹಣ ಹೆಂಡ ತೋಳ್ಬಲವೇ ಕಾಂಗ್ರೆಸ್ ಅಧಿಕಾರದ ಗುಟ್ಟು

    ವಿಜಯಪುರ: ಎಲ್ಲ ವರ್ಗ, ಜಾತಿ ಹಾಗೂ ಧರ್ಮದವರು ಒಂದೇ ತಾಯಿ ಮಕ್ಕಳೆಂದು ಭಾವಿಸಿ ಎಲ್ಲರಿಗೂ ಸೌಲಭ್ಯ ಒದಗಿಸಿದ ಸರ್ಕಾರ ಬಿಜೆಪಿ ಎಂದ ಮಾಜಿ ಸಿಎಂ ಬಿ.ಎಸ್‌. ಯಡಿಯೂರಪ್ಪ ಕೇವಲ ಹಣ, ಹೆಂಡ, ತೋಳ್ಬಲವೇ ಕಾಂಗ್ರೆಸ್ ಅಧಿಕಾರದ ಮೂಲ ಎಂದು ಟೀಕಿಸಿದರು.
    ಸಿಂದಗಿ ತಾಲೂಕಿನ ಮೋರುಟಗಿ ಗ್ರಾಮದಲ್ಲಿ ಬುಧವಾರ ನಡೆದ ಬಿಜೆಪಿ ಪ್ರಚಾರ ಸಭೆಯಲ್ಲಿ ಮಾತನಾಡಿದ ಅವರು, ಈ ಹಿಂದೆ
    ಹಣ, ಹೆಂಡ, ಅಧಿಕಾರ ಹಾಗೂ ತೋಳ್ಬಲದಿಂದ, ಜಾತಿಯ ವಿಷ ಬೀಜ ಬಿತ್ತಿ ಕಾಂಗ್ರೆಸ್ ಅಧಿಕಾರ ಅನುಭವಿಸಿತು. ಆದರೆ ಬಿಜೆಪಿ ಕೇವಲ ನರೇಂದ್ರ ಮೋದಿ ಬಲದಿಂದ ಇಪ್ಪತ್ತಾರು ರಾಜ್ಯಗಳಲ್ಲಿ ಅಧಿಕಾರ ನಡೆಸುತ್ತಿದೆ. ಮೋದಿ ಬಗ್ಗೆ ಯಾರು ಏನೇ ಟೀಕೆ ಮಾಡಿದರೂ ಅದು ಅವರ ಯೋಗ್ಯತೆ ತಿಳಿಸುತ್ತದೆ ಎಂದರು.
    ನನ್ನ ಅವಧಿಯಲ್ಲಿ ಸಮಾಜದ ಪ್ರತಿಯೊಂದು ವರ್ಗಕ್ಕೆ ಸವಲತ್ತು ನೀಡಿದೆ. ಸಂಧ್ಯಾ ಸುರಕ್ಷಾ ಯೋಜನೆ ಜಾರಿಗೆ ತಂದಿದೆ.
    ಬಡತನದ ಬೇಗೆಯಿಂದ ಯಾರೊಬ್ಬರು ಸಾಯಬಾರದು ಎಂದು ಬೊಮ್ಮಾಯಿ ಸರ್ಕಾರ ನಿರ್ಧಾರ ಮಾಡಿದೆ. ಅದರಂತೆ ಎಲ್ಲ ಬಡವರಿಗೆ ಮನೆ ಕಟ್ಟಿಸಿಕೊಡುವ ತೀರ್ಮಾನ ಮಾಡಿದ್ದೇವೆ. ಸರ್ಕಾರದ ಸೌಲಭ್ಯಕ್ಕಾಗಿ ಕಚೇರಿಗೆ ಅಲೆಯಬೇಕಿಲ್ಲ. ನೇರವಾಗಿ ಫಲಾನುಭವಿಗೆ ತಲುಪಿಸುವ ಕೆಲಸ ಬಿಜೆಪಿ ಮಾಡಿದೆ ಎಂದರು.
    ಕಿಸಾನ್ ಸಮ್ಮಾನ್ ಯೋಜನೆಯಡಿ ರೈತರ ಖಾತೆಗೆ 10 ಸಾವಿರ ರೂ‌. ನೇರವಾಗಿ ಜಮೆ ಮಾಡಲಾಗುತ್ತಿದೆ. ಎಲ್ಲ ವರ್ಗದ ಜನರಿಗೆ ನ್ಯಾಯ ಒದಗಿಸಿದ್ದೇವೆ ಎಂದರು.
    ಹಿಂದು, ಮುಸ್ಲಿಂ, ಕ್ರಿಶ್ಚಿಯನ್ ಎಂಬ ಬೇಧವಿಲ್ಲದೇ ಎಲ್ಲರೂ ಒಂದೇ ತಾಯಿ ಮಕ್ಕಳಂತೆ ಕಾಣಿದ್ದೇವೆ. ಅದರಂತೆ ಎಲ್ಲ ವರ್ಗಕ್ಕೂ ಯೋಜನೆ ರೂಪಿಸಲಾಗಿದೆ ಎಂದರು.

    ಸಚಿವ ಗೋವಿಂದ ಕಾರಜೋಳ‌ ಮಾತನಾಡಿ, ಕಾಂಗ್ರೆಸ್ ಅಭ್ಯರ್ಥಿ ಗೆದ್ದರೆ ಸರ್ಕಾರದ ಭಾಗ ಆಗಲ್ಲ. ರಮೇಶ ಭೂಸನೂರ ಗೆದ್ದರೆ ಸರ್ಕಾರದ ಭಾಗ ಆಗುತ್ತಾರೆ. ಕ್ಷೇತ್ರದ ಅಭಿವೃದ್ಧಿ ಆಗುತ್ತದೆ. ಹೀಗಾಗಿ 20 ಸಾವಿರಕ್ಕೂ ಅಧಿಕ ಮತಗಳಿಂದ ರಮೇಶ ಭೂಸನೂರ ಅವರನ್ನು ಗೆಲ್ಲಿಸಬೇಕು ಎಂದರು.
    ಮಲ್ಲಿಕಾರ್ಜುನ ಖರ್ಗೆ ಅವರು ಕಾಂಗ್ರೆಸ್ ನಿಂದ ಮಾತ್ರ ಸಂವಿಧಾನದ ಉಳಿವು ಸಾಧ್ಯ ಎಂದರು. ಆದರೆ. ಸಂವಿಧಾನ ಬರೆದ ಡಾ.ಅಂಬೇಡ್ಕರ್ ಅವರನ್ನು ಕಾಂಗ್ರೆಸ್ ಸೋಲಿಸಿದ್ದು ಏಕೆ? ಡಾ.ಅಂಬೇಡ್ಕರ್ ಅವರು ನಿಧನರಾದಾಗ ಅವರ ಅಂತ್ಯಸಂಸ್ಕಾರ ಕ್ಕೆ ದೆಹಲಿಯಲ್ಲಿ ಆರು ಅಡಿ- ಮೂರು ಅಡಿ ಜಾಗ ನೀಡಲಿಲ್ಲ ಏಕೆ? ಎಂದು ನೀವು ಕೇಳಬೇಕಿತ್ತು ಎಂದರು.
    ದೀನ ದಲಿತರು, ಅಲ್ಪಾಸಂಖ್ಯಾತರ ಬಗ್ಗೆ ಮೊಸಳೆ ಕಣ್ಣೀರು ಹಾಕುವ ಕಾಂಗ್ರೆಸ್ ನಾಯಕರಿಗೆ ಮತದಾರರು ಕೇಳಬೇಕು, ಕಳೆದ ಅರವತ್ತು ವರ್ಷದಲ್ಲಿ ಕಾಂಗ್ರೆಸ್ ದಲಿತರು ಹಾಗೂ ಅಲ್ಪಾಸಂಖ್ಯಾತರಿಗೆ ಏನು ಮಾಡಿದೆ? ಎಂದು ನೀವು ಕೇಳಬೇಕೆಂದು ಜನರಿಗೆ ತಿಳಿಸಿದರು.
    ಕಳೆದ ಏಳು ವರ್ಷದಲ್ಲಿ ನರೇಂದ್ರ ಮೋದಿ ಸಾಧನೆ ವಿಶ್ವವೇ ಮೆಚ್ಚಿದೆ. ರತ್ನ ಗಂಬಳಿ ಹಾಕಿ ಸ್ವಾಗತಿಸುತ್ತಿದ್ದಾರೆ. ಮೋದಿ ವಿಶ್ವ ನಾಯಕ ಆಗಬೇಕೆಂದು ಆಶಿಸುತ್ತಿದ್ದಾರೆ ಎಂದರು.
    ಕಾಂಗ್ರೆಸ್ ಹಳ್ಳಿ ಹಳ್ಳಿಗಳಲ್ಲಿ ಏಜೆನ್ಸಿ ಗಳನ್ನು ಹುಟ್ಟಿ ಹಾಕಿತ್ತು. ಸರ್ಕಾರದ ಸೌಲಭ್ಯ ಪಡೆಯಲು ಈ ಏಜೆನ್ಸಿಗಳಿಗೆ ಕರೆದುಕೊಂಡು ಹೋಗಬೇಕಿತ್ತು. ಆದರೆ ಇಂದು ಮೋದಿ ಕಿಸಾನ್ ಸಮ್ಮಾನ್ ಯೋಜನೆ ಮೂಲಕ ರೈತರ ಖಾತೆಗೆ ನೇರವಾಗಿ ಹಣ ಹಾಕುತ್ತಿದ್ದಾರೆ. ರೈತರಿಗೆ 10 ಸಾವಿರ ರೂ.ಕೊಡಿಸಲು ಯಾರಾದರೂ ಬಿಜೆಪಿ ಏಜೆಂಟ್ ರು ಬಂದಿದ್ದಾರಾ? ಎಂದು ಪ್ರಶ್ನಿಸಿದರು.
    ಪ್ರಧಾನ ಮಂತ್ರಿ ಮುದ್ರಾ ಯೋಜನೆಯಡಿ ದೀನ ದಲಿತರಿಗೆ ಸಾಲ ಸೌಲಭ್ಯ ಒದಗಿಸಿದ್ದಾರೆ. ಭ್ರಷ್ಟಾಚಾರಕ್ಕೆ ಕಡಿವಾಣ ಹಾಕಿದ್ದಾರೆ ಎಂದರು.
    ಯಡಿಯೂರಪ್ಪ ಅವರು ಹೆಣ್ಣು ಮಕ್ಕಳಿಗಾಗಿ ಭಾಗ್ಯ ಲಕ್ಷ್ಮಿ ಯೋಜನೆ ಜಾರಿಗೊಳಿಸಿದರು. ಎರಡು ಬಾರಿ ಪ್ರವಾಹ ಬಂದಾಗ 60 ಸಾವಿರ ಕೋಟಿ ರೂ‌.ಹಾನಿಯಾದಾಗ ಸಮರೋಪಾದಿಯಲ್ಲಿ ಪರಿಹಾರ ನೀಡಿದರು. ಕರೊನಾ ಬಂದರೂ ಅಭಿವೃದ್ಧಿ ಕಾರ್ಯ ನಿಲ್ಲಿಸಲಿಲ್ಲ. 2300 ಕೋಟಿ ರೂ. ಪರಿಹಾರ ನೀಡಿದರು ಎಂದರು.
    ನರೇಂದ್ರ ಮೋದಿ ಅಕ್ಕಿ ಪಡೆದು ಕಾಂಗ್ರೆಸ್ ಚೀಲದ ತಟ್ಟಿನಲ್ಲಿ ಹಾಕಿ ಬಡವರಿಗೆ ಹತ್ತು ಕೆಜಿ ಅಕ್ಕಿ ಕೊಟ್ಟೆ ಎಂಬುದನ್ನೇ ಕಾಂಗ್ರೆಸ್ ನಾಯಕರು ಪ್ರಚಾರ ಮಾಡುತ್ತಿದ್ದಾರೆ. ಮೋದಿ ಕೊಟ್ಟ ಅಕ್ಕಿ ಶ್ರೇಷ್ಟವೋ ಕಾಂಗ್ರೆಸ್ ನ ತಟ್ಟು ಶ್ರೇಷ್ಟವೋ ತೀರ್ಮಾನಿಸಿ ಎಂದರು.
    ಮಾಜಿ ಡಿಸಿಎಂ ಲಕ್ಷ್ಮಣ ಸವದಿ ಮಾತನಾಡಿ, ಸಿಂದಗಿ ಕ್ಷೇತ್ರದ ಸಮಗ್ರ ಅಭಿವೃದ್ಧಿ ಗೆ ಬಿಜೆಪಿ ಸಿದ್ದವಾಗಿದೆ. ಅದಕ್ಕಾಗಿಯೇ ಪ್ರಚಾರಕ್ಕೆ ಎಲ್ಲ ಸಚಿವರನ್ನು ಕರೆಯಿಸುತ್ತಿದ್ದೇವೆ. ಇಲ್ಲಿನ ಎಲ್ಲ ಸಮಸ್ಯೆಗಳ ಪಟ್ಟಿ ಮಾಡಿ ಬಗೆ ಹರಿಸುವ ಕೆಲಸ ಮಾಡುತ್ತಿದ್ದೇವೆ ಎಂದರು.
    ಹಾಲುಮತ ಸಮಾಜಕ್ಕೆ ಹೇಳುತ್ತೇನೆ ಬೇರೆ ಪಕ್ಷದಲ್ಲಿ ಬರೀ ಕಂಬಳಿ ಇರಬಹುದು. ನಮ್ಮ ಪಕ್ಷದಲ್ಲಿ ರತ್ನಗಂಬಳಿ ಇವೆ ಎಂದು ಎಂಟಿಬಿ ನಾಗರಾಜ ಅವರನ್ನು ಉದ್ದೇಶಿಸಿ ಹೇಳಿದರು.
    ನಾವು ಯಾವಾಗಲೂ ಹಿಂಡುವ ಎಮ್ಮೆಗೆ ಮಣೆ ಹಾಕಬೇಕೆ ಹೊರತು ಗೊಡ್ಡೆಮ್ಮಿಗೆ ಅಲ್ಲ. ಹೀಗಾಗಿ ರಮೇಶ ಭೂಸನೂರ ಹಿಂಡುವ ಎಮ್ಮೆ ಹೀಗಾಗಿ ಅವರನ್ನು ಗೆಲ್ಲಿಸುವ ಮೂಲಕ ಅಭಿವೃದ್ಧಿ ಯ ಹಾಲು ಹಿಂಡಿಕೊಳ್ಳಬೇಕು. ಬರುವ ಮೂವತ್ತನೇ ತಾರೀಖಿಗೆ ಕರ ಹಾಕೋದೆ, 2 ನೇ ತಾರೀಖಿಗೆ ಹಾಲು ಹಿಂಡಿಕೊಳ್ಳೋದೆ ಎಂದು ಸವದಿ ಮಾರ್ಮಿಕವಾಗಿ ಮಾತನಾಡಿದರು
    ಅಭ್ಯರ್ಥಿ ರಮೇಶ ಭೂಸನೂರ ಮಾತನಾಡಿ, ಅಭಿವೃದ್ಧಿ ವಿಷಯಗಳಿನ್ನುಟ್ಟುಕೊಂಡು ಮತ ಯಾಚಿಸಿದರು.
    ಸಚಿವ ಎಂ.ಟಿ.ಬಿ. ನಾಗರಾಜ ಹಾಗೂ ಶಾಸಕ ಎ.ಎಸ್. ಪಾಟೀಲ‌ ನಡಹಳ್ಳಿ ಮಾತನಾಡಿದರು.
    ಶಾಸಕ‌ರಾದ ಶರಣು ಸಲಗಾರ, ಸೋಮನಗೌಡ ಪಾಟೀಲ ಸಾಸನೂರ, ರಾಜ ಬೀಜ ಹಾಗೂ ಸಾವಯವ ಪ್ರಮಾಣನ ಸಂಸ್ಥೆ ಅಧ್ಯಕ್ಷ ವಿಜುಗೌಡ ಪಾಟೀಲ, ಅಶೋಕ ಅಲ್ಲಾಪುರ, ಮಾಜಿ ಸಚಿವ ಎಸ್.ಕೆ. ಬೆಳ್ಳುಬ್ಬಿ, ಜಿ.ಎಸ್. ನ್ಯಾಮಗೌಡ, ಆರ್.ಎಸ್. ಪಾಟೀಲ ಕೂಚಬಾಳ, ಉಮೇಶ ಕೋಳಕೂರ ಮತ್ತಿತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts