More

    ಸಿಂಚಾಯಿ ಯೋಜನೆಗೆ ಸ್ಥಳ ಪರಿಶೀಲನೆ ರೈತರ ಸಹಭಾಗಿತ್ವದಲ್ಲಿ 57 ಕಾರ್ಯಕ್ರಮಗಳ ಅನುಷ್ಠಾನ ತಾಲೂಕಿನ 22 ಗ್ರಾಮಗಳಲ್ಲಿ ವಿವಿಧ ಕಾಮಗಾರಿ

    ತ್ಯಾಮಗೊಂಡ್ಲು: ಪ್ರಧಾನ ಮಂತ್ರಿ ಕೃಷಿ ಸಿಂಚಾಯಿ ಯೋಜನೆಯ ಜಲಾನಯನ ಅಭಿವೃದ್ಧಿ ಘಟಕ 2.0 ಯೋಜನೆಯಡಿ ಕೇಂದ್ರ ಭೂಸಂಪನ್ಮೂಲ ಇಲಾಖೆ ತಾತ್ವಿಕವಾಗಿ ಅನುಮೋದನೆ ನೀಡಿರುವ 57 ಯೋಜನೆಗಳನ್ನು ರೈತರ ಸಹಭಾಗಿತ್ವದಲ್ಲಿ ಅನುಷ್ಠಾನಗೊಳಿಸುವ ಉದ್ದೇಶದಿಂದ ಹೋಬಳಿಯ ಮಣ್ಣೆ ಗ್ರಾಮದ ಜಲಾನಯನ ಪ್ರದೇಶಗಳಿಗೆ ಅಧಿಕಾರಿಗಳು ಗುರುವಾರ ಭೇಟಿ ನೀಡಿ ಪರಿಶೀಲಿಸಿದರು.

    ಈ ಬಗ್ಗೆ ಮಾಹಿತಿ ನೀಡಿದ ಯೋಜನೆಯ ಜಿಲ್ಲಾ ಸಂಚಾಲಕ ಶಿವಪ್ರಸಾದ್, ಜಿಲ್ಲೆಯಲ್ಲಿ ನೆಲಮಂಗಲ ತಾಲೂಕು ಮಾತ್ರ ಈ ಯೋಜನೆಗೆ ಆಯ್ಕೆಯಾಗಿದೆ. ತಾಲೂಕಿನ 22 ಗ್ರಾಮಗಳನ್ನು ಯೋಜನೆಯಡಿ ಆಯ್ಕೆ ಮಾಡಲಾಗಿದೆ. ಪ್ರಥಮ ಯೋಜನಾ ವರದಿಗೆ ಕೇಂದ್ರದ ಅಂಗೀಕಾರ ದೊರೆತಿದೆ. ಈಗ ವಿಸ್ತೃತ ಯೋಜನಾ ವರದಿ ಸಲ್ಲಿಸಲು ಮಾಸಾಂತ್ಯದವರೆಗೆ ಸಮಯ ನೀಡಲಾಗಿದೆ. ಅದರಂತೆ 22 ಹಳ್ಳಿಗಳ ಜಲಾನಯನ ಪ್ರದೇಶಗಳಿಗೆ ಭೇಟಿ ನೀಡಲಾಗುತ್ತಿದೆ ಎಂದರು.

    ಯೋಜನೆಯಲ್ಲಿ ಕೃಷಿ ಹೊಂಡ, ಬದು ನಿರ್ಮಾಣ, ಕೋಡಿ ನಿರ್ಮಾಣ, ನಾಲಾ ಬದು, ಚೆಕ್ ಡ್ಯಾಂ, ಕೃಷಿ ಅರಣ್ಯ, ತೋಟಗಾರಿಕಾ ಕಾರ್ಯಕ್ರಮ, ಪಶುಗಳಿಗೆ ಮೇವು ಅಭಿವೃದ್ಧಿ ಹಾಗೂ ಉಚಿತ ಪಶು ಆರೋಗ್ಯ ಶಿಬಿರ ಆಯೋಜನೆ ಮತ್ತಿತರ ಕಾರ್ಯಕ್ರಮಗಳನ್ನು ಆಯಾ ಗ್ರಾಮಗಳ ರೈತರ ಸಹಭಾಗಿತ್ವದಲ್ಲಿ ಹಮ್ಮಿಕೊಳ್ಳಲಾಗುವುದು. ಹಳ್ಳಿಗಳಲ್ಲಿ ಕ್ರಿಯಾಯೋಜನೆ ಜಾರಿ ಮಾಡಲು ಅಲ್ಲಿನ ರ‌್ಯೆತರ ಮತ್ತು ಗ್ರಾಪಂ ಸಹಭಾಗಿತ್ವ ಮತ್ತು ಸ್ಥಳೀಯ ಸ್ವಸಹಾಯ ಗುಂಪುಗಳ ಅವಶ್ಯವಿದೆ ಎಂದು ಮಾಹಿತಿ ನೀಡಿದರು.

    ಐಎಫ್‌ಎಚ್‌ಡಿ ಸಂಯೋಜಕ ಧನುಷ್, ಜಲಾನಯನ ಇಲಾಖೆ ಸಹಾಯಕ ಲಕ್ಷ್ಮೀಶ್, ಡಬ್ಲ್ಯುಡಬ್ಲ್ಯುಡಿಪಿ ತಂಡದ ನಾಯಕ ಮುಕುಂದ್, ರೈತರಾದ ಪ್ರಜ್ವಲ್, ವಿನಯ್, ನರಸಿಂಹಮೂರ್ತಿ ಮತ್ತಿತರರಿದ್ದರು.

    ವಿವಿಧ ಇಲಾಖೆಗಳ ಸಹಭಾಗಿತ್ವದಲ್ಲಿ, ಶೇ.60 ಕೇಂದ್ರ ಸರ್ಕಾರ, ಶೇ.40 ರಾಜ್ಯ ಸರ್ಕಾರದ ಅನುದಾನದಂತೆ ಒಟ್ಟು 7.67 ಕೋಟಿ ರೂ. ವೆಚ್ಚದಲ್ಲಿ ಕಾಮಗಾರಿ ಕೈಗೊಳ್ಳಲಾಗುವುದು. ರೈತರ ಸರ್ವತೋಮುಖ ಬೆಳವಣಿಗೆಗೆ ಸಮಗ್ರ ಬೇಸಾಯ ಪದ್ಧತಿ ಅಳವಡಿಕೆಗೆ ಯೋಜನೆಯ ಒಟ್ಟು ವೆಚ್ಚದ ಶೇ.15 ಅನುದಾನವನ್ನು ಜಲಾನಯನ ಅಭಿವೃದ್ಧಿ ಘಟಕ 2.0 ಯೋಜನೆಯಿಂದ ನೀಡಲಾಗುತ್ತದೆ.
    ಜಿ.ಎಸ್. ಜಯಸ್ವಾಮಿ, ಜಂಟಿ ಕೃಷಿ ನಿರ್ದೇಶಕ

    ಜಲಾನಯನ ಅಭಿವೃದ್ಧಿ ಘಟಕ ಯೋಜನೆಯಲ್ಲಿ ಭೂರಹಿತರು ಕೂಡ ಫಲಾನುಭವಿಗಳು ಆಗಿರುತ್ತಾರೆ. ಸ್ವಸಹಾಯ ಸಂಘಗಳ ಸದಸ್ಯರಿಗೆ ಉಪ ಕಸುಬನ್ನು ಉತ್ತಮಪಡಿಸಿಕೊಳ್ಳಲು ತಲಾ 25 ಸಾವಿರ ರೂ.ನಂತೆ ಸುತ್ತು ನಿಧಿ ನೀಡಲಾಗುವುದು. ಕಿರು ಉದ್ಯಮ ಹೊಂದಿರುವವರು ಮೌಲ್ಯವರ್ದನೆ ಮಾಡಿಕೊಳ್ಳಬಹುದು. ರೈತ ಉತ್ಪಾದಕ ಸಂಸ್ಥೆಗಳ ಮೂಲಕ ಮಾರುಕಟ್ಟೆ ವ್ಯವಸ್ಥೆ ಮಾಡಿಕೊಳ್ಳಬಹುದು, 1,500 ಸದಸ್ಯರನ್ನು ಹೊಂದಿರುವ ಸಂಘಗಳಿಗೆ 10 ಲಕ್ಷ ರೂ.ವರೆಗೂ ಧನಸಹಾಯ ನೀಡಲಾಗುವುದು.
    ರಾಘವೇಂದ್ರ, ನೆಲಮಂಗಲ ಕೃಷಿ ಇಲಾಖೆ ಸಹಾಯಕ ನಿರ್ದೇಶಕ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts