More

    ಸಾಹಿತ್ಯದತ್ತ ಸೆಳೆಯುವ ಕೆಲಸವಾಗಲಿ ; ಬೆಂಗಳೂರು ವಿವಿ ಪರೀಕ್ಷಾಂಗ ಕುಲಸಚಿವ ಪ್ರೊ.ಬಿ.ರಮೇಶ್ ಸಲಹೆ

    ತುಮಕೂರು: ನೆಲಮೂಲ ಸಂಸ್ಕೃತಿಯನ್ನು ಸಾಹಿತ್ಯದಲ್ಲಿ ಅಳವಡಿಸಿಕೊಂಡು ಯುವ ಸಮೂಹವನ್ನು ಸಾಹಿತ್ಯ, ಸಾಂಸ್ಕೃತಿಕ ವಿಚಾರಗಳತ್ತ ಸೆಳೆಯುವ ಕೆಲಸವಾಗಬೇಕು ಎಂದು ಬೆಂಗಳೂರು ವಿವಿ ಪರೀಕ್ಷಾಂಗ ಕುಲಸಚಿವ ಪ್ರೊ.ಬಿ.ರಮೇಶ್ ಅಭಿಪ್ರಾಯಪಟ್ಟರು.

    ನಗರದ ಕನ್ನಡ ಭವನದಲ್ಲಿ ಅರುಣೋದಯ ಶೈಕ್ಷಣಿಕ ಮತ್ತು ಗ್ರಾಮೀಣಾಭಿವೃದ್ದಿ ಟ್ರಸ್ಟ್, ಕಸಾಪ, ರಾಜ್ಯ ಯುವ ಬರಹಗಾರರ ಒಕ್ಕೂಟ, ಭೂಮಿ ಬಳಗ, ಧವನ ಭೂಮಿಕ ಸಾಂಸ್ಕೃತಿಕ ಟ್ರಸ್ಟ್, ಸೆಂಟರ್ ಫಾರ್ ಇನ್‌ಕ್ಲೂಸಿಸ್ ಸೊಷಿಯಲ್ ಡೆವಲ್ಪಮೆಂಟ್ ಟ್ರಸ್ಟ್ ಸಹಯೋಗದಲ್ಲಿ ಭಾನುವಾರ ಆಯೋಜಿಸಿದ್ದ ಡಾ.ಓ.ನಾಗರಾಜು ಅವರ ‘ನಮ್ದೂ ಒಂದು ಬಾಳು ಕೃತಿ’ ಬಿಡುಗಡೆಗೊಳಿಸಿ ಮಾತನಾಡಿದರು.
    ಡಾ.ಓ.ನಾಗರಾಜು ತಮ್ಮ ಸಾಹಿತ್ಯ ಕೃಷಿಯ ಮೂಲಕ ಕಿರಿಯರಿಗೆ ಅಗತ್ಯ ಮಾರ್ಗದರ್ಶನ ನೀಡುವ ಕೆಲಸ ಮಾಡುತ್ತಿದ್ದಾರೆ, ನೆಲಮೂಲ ಸಂಸ್ಕೃತಿಯ ಬಗ್ಗೆ ಜಾಗೃತಿ ಮೂಡಿಸುವ ಕೆಲಸ ಕೂಡ ಸಾಹಿತ್ಯದ ಮೂಲಕವೇ ಸಾಗಬೇಕು ಈ ನಿಟ್ಟಿನಲ್ಲಿ ಸಾಹಿತ್ಯ ಕೃತಿ ಹೆಚ್ಚಾಗಿ ಬರಬೇಕು ಎಂದು ಆಶಿಸಿದರು.

    ಸಾಹಿತ್ಯದ ವೇದಿಕೆಯಲ್ಲಿ ಹಿರಿಯ, ಕಿರಿಯ ಸಾಧಕರನ್ನು ಗೌರವಿಸುವುದರ ಮೂಲಕ ಹಿರಿಯರ ಸೇವೆ ನೆನೆಯುವ, ಕಿರಿಯರಿಗೆ ಮತ್ತಷ್ಟು ಜವಾಬ್ದಾರಿಗಳನ್ನು ಹೆಚ್ಚಿಸುವ ಕೆಲಸವನ್ನು ಕಾರ್ಯಕ್ರಮದ ಆಯೋಜಕರು ಮಾಡಿದ್ದಾರೆ. ಇದು ಸಾಂಸ್ಕೃತಿಕ ಪ್ರಜ್ಞೆಯನ್ನು ಬೆಳೆಸುವ ಪ್ರಕ್ರಿಯೆ ಒಟ್ಟೊಟ್ಟಿಗೆ ಜರುಗುತ್ತಿರುವುದು ಒಳ್ಳೆಯ ಬೆಳವಣಿಗೆ ಎಂದರು.

    ತುಮಕೂರು ವಿವಿ ಡಿ.ವಿ.ಗುಂಡಪ್ಪ ಕನ್ನಡ ಅಧ್ಯಯನ ಕೇಂದ್ರದ ನಿರ್ದೇಶಕ ಡಾ.ಡಿ.ವಿ.ಪರಶಿವಮೂರ್ತಿ ಮಾತನಾಡಿ, ಮೂರು ನೀಳ್ಗತೆಗಳಲ್ಲಿ ಲೇಖಕರು ತನ್ನ ಜಾತಿ, ಭಾಷೆ, ಧರ್ಮದ ಗಡಿ ಮೀರಿ ವಿಸ್ತರಿಸಿಕೊಳ್ಳುವ ಕೆಲಸ ಮಾಡಿದ್ದಾರೆ. ಜಾತಿ ಮೀರಿ ಬೆಳೆಯುವ ಸಂದರ್ಭದಲ್ಲಿ ಎದುರಿಸಬೇಕಾದ ಸಾಮಾಜಿಕ ಬಿಕ್ಕಟ್ಟುಗಳನ್ನು ಅತ್ಯಂತ ವಾಸ್ತವದ ಚಿತ್ರಣ ನೀಡಿದ್ದಾರೆ. ವ್ಯವಸ್ಥೆಯ ದಾಟಿ ಬದುಕುವ ಮೊಳಕೆ ಚಿವುಟುವ ಕೆಲಸ ನಿರಂತರವಾಗಿ ನಡೆಯುತ್ತಿದೆ ಎಂಬ ಆತಂಕವನ್ನು ವ್ಯಕ್ತಪಡಿಸಿದರು.

    ಪರಿಶಿಷ್ಟ ಸರ್ಕಾರಿ ನೌಕರರ ಸಮನ್ವಯ ಸಮಿತಿ ಜಿಲ್ಲಾಧ್ಯಕ್ಷ ಡಾ.ವೈ.ಕೆ.ಬಾಲಕೃಷ್ಣಪ್ಪ, ಲೇಖಕ ಡಾ.ಓ.ನಾಗರಾಜು, ಹರಿಕಥಾ ವಿದ್ವಾನ್ ಡಾ.ಲಕ್ಷ್ಮಣದಾಸ್, ಜನಪದ ಕಲಾವಿದ ಡಾ.ಕಂಟಲಗೆರೆ ಸಣ್ಣ ಹೊನ್ನಯ್ಯ, ಕಸಾಪ ಜಿಲ್ಲಾಧ್ಯಕ್ಷೆ ಬಾ.ಹ.ರಮಾಕುಮಾರಿ, ಪ್ರೊ.ಜಯಶೀಲ ಮಾತನಾಡಿದರು. ನಗರಸಭೆ ಮಾಜಿ ಸದಸ್ಯ ನರಸೀಯಪ್ಪ, ಭೂಮಿ ಬಳಗದ ಕೋಟೆ ಕುಮಾರ್ ವೇದಿಕೆಯಲ್ಲಿದ್ದರು.
    ಸಮಾರಂಭದಲ್ಲಿ ನಿವೃತ್ತ ನೌಕರರು, ಹೊಸದಾಗಿ ಸರ್ಕಾರಿ ವೃತ್ತಿಗೆ ಸೇರಿದ ನೌಕರರು, ಪಿಎಚ್‌ಡಿ ಪದವಿ ಪಡೆದವರಿಗೆ, ಸಾಹಿತ್ಯ ಪ್ರಶಸ್ತಿ ಪುರಸ್ಕೃತರನ್ನು ಸನ್ಮಾನಿಸಲಾಯಿತು.

    ಬಾಳು ಒಂದು ನಿರಂತರವಾದ ಚಲನೆ, ಸಾಹಿತ್ಯವೂ ನಿರಂತರ ಪ್ರಕ್ರಿಯೆ. ಅಂತರಜಾತಿ ವಿವಾಹ, ಅಂತರ ಧರ್ಮಿಯ ಮದುವೆಗಳನ್ನೇ ಕಥಾ ವಸ್ತುವಾಗಿಸಿ ಕೊಂಡು ಬಂದಿರುವ ಹಲವು ಕೃತಿಗಳು, ಗಂಡು ಅಥವಾ ಹೆಣ್ಣಿನ ಕೊಲೆಯಲ್ಲಿಯೋ, ಮದುವೆ ಮನೆಯ ದೃಶ್ಯದೊಂದಿಗೆ ಮುಕ್ತಾಯವಾಗಿ ಮುಂದೇನು ಎಂಬ ಪ್ರಶ್ನೆಯನ್ನು ಹುಟ್ಟು ಹಾಕಿರುವುದೇ ಹೆಚ್ಚು, ಈ ಕೃತಿಯಲ್ಲಿ ಅದರ ಮುಂದುವರೆದ ಭಾಗವೂ ಇದೆ. ಇಂದು ಇಂದಿನ ಅಗತ್ಯ.
    ಡಾ.ರವಿಕುಮಾರ್ ನೀಹಾ ವಿಮರ್ಶಕ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts