More

    ಸಾವಯವ ಸ್ವಾವಲಂಬಿ ಕೃಷಿಯಲ್ಲಿ ಯಶಸ್ಸು

    ಗೋಕರ್ಣ: ಮಹರ್ಷಿ ದೈವರಾತರು ಪಟ್ಟಣದ ಅಶೋಕೆ ಪ್ರದೇಶದಲ್ಲಿ 50ರ ದಶಕದಲ್ಲಿ ಯೋಗಾಶ್ರಮವನ್ನು ಸ್ಥಾಪಿಸಿದರು. ಆಹಾರ ಸ್ವಾವಲಂಬನೆಗಾಗಿ ಕೃಷಿ ಪ್ರಯೋಗಗಳನ್ನು ಕೂಡ ಇಲ್ಲಿ ಕೈಗೊಂಡರು. ಈಗ ಅವರ ಕುಟುಂಬ ಸದಸ್ಯರು ಈ ಸಾವಯವ ಸ್ವಾವಲಂಬಿ ಕೃಷಿಗೆ ಚೇತರಿಕೆ ನೀಡಿ ಸಾಕಷ್ಟು ಯಶಸ್ಸನ್ನು ಕಂಡಿದ್ದಾರೆ.

    ಮಹರ್ಷಿ ದೈವರಾತರು ಅಶೋಕೆಯಲ್ಲಿ ಸ್ಥಾಪಿಸಿದ ಯೋಗಾಶ್ರಮದ ಮುಖ್ಯ ಉದ್ದೇಶವೇ ಆಶ್ರಮವಾಸಿಗಳ ನಿತ್ಯದ ಜೀವನಕ್ಕೆ ಬೇಕಾದ ಬಹುತೇಕ ಆಹಾರ ಪದಾರ್ಥಗಳನ್ನು ಇಲ್ಲಿಯೇ ಬೆಳೆದು ಆಹಾರ ಸ್ವಾಲಂಬನೆ ಸಾಧಿಸುವುದಾಗಿತ್ತು. ತಮ್ಮ ಜೀವಿತಾವಧಿಯಲ್ಲಿ ಮಹರ್ಷಿಗಳು ಅಶೋಕೆಯಲ್ಲಿ ಅದರ ಕೆಲ ಹಂತದ ಪ್ರಯೋಗಗಳನ್ನು ಮಾಡಿ ಯಶಸ್ವಿಯಾಗಿದ್ದರು. ಆದರೆ, 1975ರಲ್ಲಿ ತಮ್ಮ 84ನೇ ವಯಸ್ಸಿನಲ್ಲಿ ಮಹರ್ಷಿಗಳು ಬ್ರಹ್ಮೈಕ್ಯರಾದ ತರುವಾಯ ಈ ಪ್ರಯೋಗಗಳು ಮುಂದುವರಿಯದೆ ಹಾಗೆಯೇ ಉಳಿದವು. ಮಹರ್ಷಿಗಳ ಸ್ವಾವಲಂಬಿ ಕೃಷಿ ಜೀವನವನ್ನು ಪುನಃ ಅಳವಡಿಸಿಕೊಳ್ಳುವ ಪ್ರಯತ್ನವನ್ನು ಅವರ ಕುಟುಂಬ ಈಗ ಮಾಡುತ್ತಿದೆ. ಮಹರ್ಷಿಗಳ ಮರಿಮೊಮ್ಮಗ ಡಾ. ಪತಂಜಲಿ ವೇದಶ್ರವ ಶರ್ಮ ಅವರ ನೇತೃತ್ವದಲ್ಲಿ ಕಳೆದ ಮೂರು ವರ್ಷಗಳಿಂದ ಈ ಕೃಷಿ ಪ್ರಯೋಗ ಮುಂದುವರಿದು ಸಾಕಷ್ಟು ಯಶಸ್ಸನ್ನು ಕಂಡಿದೆ.

    ಅಶೋಕೆಯ ಸಸ್ಯ ಸಂಜೀವಿನಿ: ಅಶೋಕೆಯಲ್ಲಿನ ಸಸ್ಯ ಸಂಜೀವಿನ ಪಂಚಕರ್ಮ ಆಯುರ್ವೆದಿಕ ಕೇಂದ್ರದ ಸುತ್ತಲಿನ ಭೂಮಿಯನ್ನು ಕೃಷಿಗೆ ಹದವಾಗಿಸಿ ಸಾವಯವ ಕೃಷಿ ನಡೆಸಲಾಗುತ್ತಿದೆ. ಈ ಕೇಂದ್ರಕ್ಕೆ ಚಿಕಿತ್ಸೆಗೆ ಬರುವವರಿಗೆ ಮತ್ತು ಇಲ್ಲಿ ಕೆಲಸ ಮಾಡುವವರ ಜೀವನಕ್ಕೆ ಅವಶ್ಯವಿರುವ ಬಹುತೇಕ ಆಹಾರ ಪದಾರ್ಥಗಳನ್ನು ಇಲ್ಲಿಯೇ ಬೆಳೆಯಲಾಗುತ್ತಿದೆ. ಇದಕ್ಕಾಗಿ ಏಳು ಎಕರೆ ಭೂ ಪ್ರದೇಶವನ್ನು ಬಳಸಲಾಗುತ್ತಿದೆ. ವರ್ಷದ 12 ತಿಂಗಳೂ ಇಲ್ಲಿನ ಭೂಮಿಯಲ್ಲಿ ಬೇರೆ ಬೇರೆ ಧಾನ್ಯಗಳನ್ನು ನಿರಂತರವಾಗಿ ಉತ್ತಿ ಬೆಳೆಸಲಾಗುತ್ತಿದೆ. ಹೀಗಾಗಿ, ಆಹಾರ ಪದಾರ್ಥಕ್ಕಾಗಿ ಮಾರುಕಟ್ಟೆಯನ್ನು ಅವಲಂಬಿಸುವ ಪರಿಸ್ಥಿತಿ ಸಂಪೂರ್ಣ ತಪ್ಪಿದೆ.

    ಮಳೆ ಪ್ರಾರಂಭದಲ್ಲಿ ಅಪರೂಪದ ಕೆಂಪು ಮಿಶ್ರಿತ ಮೇದಿನಿ ತಳಿಯ ಭತ್ತವನ್ನು ನಾಟಿ ಮಾಡಲಾಗುತ್ತದೆ. ಜೊತೆಗೆ ಪ್ರತ್ಯೇಕ ಭೂಮಿಯಲ್ಲಿ ಶೇಂಗಾ ಹಾಕಲಾಗುತ್ತದೆ. ಕಬ್ಬನ್ನು ಇಲ್ಲಿ ನಿರಂತರ ಬೆಳೆದು ಸಕ್ಕರೆ ಮೇಲಿನ ಅವಲಂಬನೆಯನ್ನು ತೊರೆಯಲಾಗಿದೆ. ಭತ್ತದ ನಂತರ ಬಿಳಿ ಎಳ್ಳು, ಅಳಸಂದೆ, ಮೆಕ್ಕೆ ಜೋಳ, ರಾಗಿ ಹಾಗೂ ವಿವಿಧ ಧಾನ್ಯಗಳನ್ನು ಕೃಷಿ ಮಾಡಲಾಗುತ್ತದೆ. ಇದರ ಸಂಗಡ ನಿತ್ಯ ಬೇಕಾದ ಪಡುವಲ, ಸವತೆ, ಕುಂಬಳ, ಹೀರೆ, ಬೆಂಡೆ, ನಾನಾ ಬಗೆಯ ಸೊಪ್ಪು ತರಕಾರಿಗಳು ಕೂಡ ಇಲ್ಲಿಯೇ ಬೆಳೆಯುತ್ತವೆ. ಮಳೆಗಾಲದ ಮೂರು ತಿಂಗಳಿಗೆ ಸಾಕಾಗುವಷ್ಟು ತರಕಾರಿಗಳನ್ನು ಸಂಗ್ರಹಿಸಿಡಲಾಗುತ್ತದೆ. ಇವುಗಳ ಜೊತೆಗೆ ಆಯುರ್ವೆದ ಚಿಕಿತ್ಸೆಗೆ ಬೇಕಾದ ಎಲ್ಲ ಸಸ್ಯಗಳ ಪ್ರತ್ಯೇಕವಾದ ವಿಶಾಲ ವನವೂ ಇಲ್ಲಿದೆ.

    ಜೀವಾಮೃತ ಗೊಬ್ಬರ, ಸಾವಯವ ಕೀಟನಾಶಕ: ಇಲ್ಲಿನ ಎಲ್ಲ ಬೆಳೆಗಳಿಗೆ ಸಗಣಿ ಮತ್ತು ಗೋ ಮೂತ್ರದಿಂದ ಸಿದ್ಧ ಪಡಿಸಲಾದ ಜೀವಾಮೃತವನ್ನು ಮಾತ್ರ ಗೊಬ್ಬರವಾಗಿ ಉಪಯೋಗಿಸಲಾಗುತ್ತಿದೆ. ಇದಕ್ಕಾಗಿ 55 ಗೋವುಗಳನ್ನು ಸಲಹುವ ಗೋಶಾಲೆಯಿದೆ. ಆಧುನಿಕ ಕ್ರಿಮಿ ನಾಶಕದ ಬದಲು ಅಂಟುವಾಳ ಮತ್ತು ಬೇವಿನ ಎಣ್ಣೆಯಿಂದ ಇಲ್ಲಿಯೇ ತಯಾರಿಸಲಾಗುವ ಔಷಧಗಳನ್ನು ಅಗತ್ಯವಿದ್ದರೆ ಸಿಂಪಡಿಸಲಾಗುತ್ತದೆ. ಇದರ ಜೊತೆಗೆ ಬೇವಿನ ಹಿಂಡಿಯನ್ನು ಗದ್ದೆಗೆ ಚೆಲ್ಲುವ ಮೂಲಕವೂ ಕ್ರಿಮಿ ಕೀಟಗಳನ್ನು ನಿಯಂತ್ರಿಸಲಾಗುತ್ತದೆ. ಆಧುನಿಕ ರಸ ಗೊಬ್ಬರ ಮತ್ತು ಕೀಟ ನಾಶಕವನ್ನು ಸಂಪೂರ್ಣವಾಗಿ ದೂರವಿಟ್ಟು ಸಾವಯವ ಪದ್ಧತಿ ಅನುಸರಿಸಲಾಗುತ್ತಿದೆ. ಹೀಗಾಗಿ, ಬೆಳೆದ ವಸ್ತುಗಳು ಕೊಳೆಯುವುದಿಲ್ಲ ಮತ್ತು ಬೇಗನೆ ನಾಶವಾಗುವುದಿಲ್ಲ.

    ಮಹರ್ಷಿ ದೈವರಾತರು ಪ್ರಾರಂಭಿಸಿದ್ದ ಸಾವಯವ ಕೃಷಿ ಮೂಲಕ ಸ್ವಾವಲಂಬನೆಯ ಬದುಕು ಕಟ್ಟುವ ಪ್ರಯತ್ನ ಮಾಡಲಾಗುತ್ತಿದೆ. ಆಧುನಿಕ ದಿನದಲ್ಲಿಯೂ ಮಹರ್ಷಿಗಳ ಪ್ರಯೋಗ ಯಶಸ್ವಿಯಾಗಬಲ್ಲದು ಎನ್ನುವುದಕ್ಕೆ ಅಶೋಕೆಯ ಸಸ್ಯ ಪಾಲನಾ ಕ್ಷೇತ್ರ ಸಾಕ್ಷಿಯಾಗಿದೆ. ಸಾವಯವಕ್ಕೆ ಸಾವಿಲ್ಲ ಎಂಬುದೂ ಇಲ್ಲಿ ಋಜುವಾತಾಗುತ್ತಿದೆ.
    | ಡಾ. ಪತಂಜಲಿ ಶರ್ಮ ಸಸ್ಯ ಸಂಜೀವಿನಿ ಅಶೋಕೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts