More

    ಸಾರ್ವಜನಿಕ ಗಣೇಶ ಸ್ಥಾಪನೆಗೆ ಅನುಮತಿ ನೀಡಲು ಆಗ್ರಹ

    ಧಾರವಾಡ: ಸಾರ್ವಜನಿಕ ಸ್ಥಳಗಳಲ್ಲಿ ಗಣೇಶ ಮೂರ್ತಿ ಸ್ಥಾಪನೆಗೆ ಸರ್ಕಾರ ನಿಷೇಧ ಹೇರಿದ್ದನ್ನು ಖಂಡಿಸಿ ಶ್ರೀರಾಮಸೇನೆ ನೇತೃತ್ವದಲ್ಲಿ ವಿವಿಧ ಸಂಘಟನೆಗಳ ವತಿಯಿಂದ ಜಿಲ್ಲಾಧಿಕಾರಿ ಕಚೇರಿ ಎದುರು ಸೋಮವಾರ ಪ್ರತಿಭಟನೆ ನಡೆಸಲಾಯಿತು.

    ಶ್ರೀರಾಮಸೇನೆ ಸಂಸ್ಥಾಪಕ ಪ್ರಮೋದ ಮುತಾಲಿಕ ನೇತೃತ್ವದಲ್ಲಿ ಹಮ್ಮಿಕೊಂಡಿದ್ದ ಪ್ರತಿಭಟನೆಗೆ ಕಲಾಕಾರರು, ಸಾರ್ವಜನಿಕ ಗಣೇಶ ಮಂಡಳ, ಶಾಮಿಯಾನ, ಇಲೆಕ್ಟ್ರಿಷಿಯನ್, ವಿವಿಧ ಸಂಘಟನೆಗಳ ಪದಾಧಿಕಾರಿಗಳು ಬೆಂಬಲ ನೀಡಿದ್ದರು.

    ದೇಶದಲ್ಲಿ ತುರ್ತು ಪರಿಸ್ಥಿತಿ ಹೇರಿದ್ದರೂ ಸಾರ್ವಜನಿಕ ಗಣೇಶ ಸ್ಥಾಪನೆಗೆ ವಿಘ್ನ ಎದುರಾಗಿರಲಿಲ್ಲ. ಆದರೆ, ಈಗ ಕೋವಿಡ್ ಹೆಸರಿನಲ್ಲಿ ನಿಷೇಧ ಹೇರಿರುವುದು ಸರಿಯಲ್ಲ. ದೇವಸ್ಥಾನ, ಬಾರ್, ಜಿಮ್ಳನ್ನು ತೆರಯಲು ಅವಕಾಶ ನೀಡಿರುವ ಸರ್ಕಾರ ಸಾರ್ವಜನಿಕ ಗಣೇಶೋತ್ಸವಕ್ಕೆ ನಿಷೇಧ ಹೇರಿರುವ ಕ್ರಮ ತಪ್ಪು ಎಂದು ದೂರಿದರು.

    ಪ್ರಮೋದ ಮುತಾಲಿಕ ಮಾತನಾಡಿ, ಸರ್ಕಾರ ಈ ನಿರ್ಣಯ ಕೈಗೊಂಡ ದಿನದಿಂದಲೇ ಹೋರಾಟ ನಡೆಸಲಾಗುತ್ತಿದೆ. ಆದಾಗ್ಯೂ ಸರ್ಕಾರಕ್ಕೆ ಕಿವಿ ಕೇಳದಂತಾಗಿದೆ. ಸರ್ಕಾರದ ಚರ್ಮ ದಪ್ಪವಾಗಿದೆ. ಹಿಂದುತ್ವ, ಸಂಸ್ಕಾರ, ಸಂಪ್ರದಾಯ ಎಂದು ಹೇಳುವ ಬಿಜೆಪಿ ಸರ್ಕಾರ ಅಧಿಕಾರಿದಲ್ಲಿದ್ದರೂ ನಿಷೇಧ ಹೇರಿರುವುದಕ್ಕೆ ನಮ್ಮ ಧಿಕ್ಕಾರವಿದೆ. ಮಹಾರಾಷ್ಟ್ರದಲ್ಲಿ ಕೋವಿಡ್ ಹಾವಳಿ ಹೆಚ್ಚಿದ್ದರೂ ಅಲ್ಲಿನ ಸರ್ಕಾರ ಕೆಲ ನಿಯಮಗಳೊಂದಿಗೆ ಅನುಮತಿ ನೀಡಿದೆ. ಅದೇ ರೀತಿ ರಾಜ್ಯ ಸರ್ಕಾರವೂ ಆದೇಶ ಹೊರಡಿಸಬೇಕು. 24 ಗಂಟೆಯಲ್ಲಿ ಸರ್ಕಾರ ಅನುಮತಿ ನೀಡಬೇಕು. ಅನುಮತಿ ನೀಡದೇ ಇದ್ದರೂ ನಾವು ಗಣೇಶ ಮೂರ್ತಿ ಪ್ರತಿಷ್ಠಾಪನೆ ಮಾಡಿಯೇ ಮಾಡುತ್ತೇವೆ. ಬೇಕಾದರೆ ನಮ್ಮನ್ನು ಬಂಧಿಸಲಿ ಎಂದು ಎಚ್ಚರಿಸಿದರು.

    ಇದಕ್ಕೂ ಪೂರ್ವದಲ್ಲಿ ಕಲಾವಿದ ಮಂಜುನಾಥ ಹಿರೇಮಠ ಅವರು ಸ್ಥಳದಲ್ಲೇ ಗಣೇಶ ಮೂರ್ತಿ ಸಿದ್ಧಪಡಿಸುವ ಮೂಲಕ ತಮ್ಮ ಸಾತ್ವಿಕ ಅಸಮಾಧಾನವನ್ನು ವಿಭಿನ್ನ ರೀತಿಯಲ್ಲಿ ಹೊರಹಾಕಿದರು. ನಂತರ ಜಿಲ್ಲಾಡಳಿತದ ಮೂಲಕ ಸರ್ಕಾರಕ್ಕೆ ಮನವಿಪತ್ರ ರವಾನಿಸಲಾಯಿತು.

    ಶಿವಾಜಿ ಡೇಂಬ್ರೆ, ಮಂಜುನಾಥ ಕಾಟಕರ, ಓಂಕಾರ, ಅಣ್ಣಪ್ಪ ದೇವಟಗಿ, ಮೈಲಾರ ಗುಡ್ಡಪ್ಪನವವರ, ಮಡಿವಾಳಪ್ಪ, ಮಹಾಲಿಂಗ ಅಗಳಿ, ವಿವಿಧ ಸಂಘಟನೆಗಳ ಪದಾಧಿಕಾರಿಗಳು, ಇತರರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts