More

    ಸಾರಿಗೆ ಸಂಸ್ಥೆ ನೌಕರರ ಪ್ರತಿಭಟನೆ

    ಯಲ್ಲಾಪುರ: ಪಟ್ಟಣದ ಕೆಎಸ್​ಆರ್​ಟಿಸಿ ಘಟಕದ ವಿಶ್ರಾಂತಿ ಗೃಹದಲ್ಲಿ ಕ್ವಾರಂಟೈನ್ ಆಗಿದ್ದ 10ಕ್ಕೂ ಹೆಚ್ಚು ಸಿಬ್ಬಂದಿಯನ್ನು ಏಕಾಏಕಿ ಶುಕ್ರವಾರ ರಾತ್ರಿ ಹೊರ ಹಾಕಿದ್ದನ್ನು ಖಂಡಿಸಿ ಸಿಬ್ಬಂದಿ ಘಟಕದ ಎದುರು ಶನಿವಾರ ಪ್ರತಿಭಟನೆ ನಡೆಸಿದರು.

    ಶುಕ್ರವಾರ ರಾತ್ರಿ 11.30ರ ವೇಳೆಗೆ ಸ್ಥಳಕ್ಕಾಗಮಿಸಿದ ತಹಸೀಲ್ದಾರ್ ಡಿ.ಜಿ. ಹೆಗಡೆ, ಘಟಕದ ಪಕ್ಕದಲ್ಲಿರುವ ಸಣ್ಣ ಹೋಟೆಲ್ ಒಂದರ ಚಿಕ್ಕ ಕೋಣೆಯಲ್ಲಿ ಉಳಿಯಲು ತಾತ್ಕಾಲಿಕ ವ್ಯವಸ್ಥೆ ಕಲ್ಪಿಸಿದ್ದರು. ಶನಿವಾರ ಬೆಳಗ್ಗೆ ಮುಂದಿನ ವ್ಯವಸ್ಥೆ ಮಾಡುವುದಾಗಿ ಅಧಿಕಾರಿಗಳು ಹೇಳಿದ್ದರು. ಆದರೆ, ಬೆಳಗ್ಗೆ 11 ಗಂಟೆಯಾದರೂ ಯಾವುದೇ ಅಧಿಕಾರಿಗಳು ಬಾರದ ಹಿನ್ನೆಲೆಯಲ್ಲಿ ಸಿಬ್ಬಂದಿ ಘಟಕದ ಎದುರು ಪ್ರತಿಭಟನೆಗೆ ಕುಳಿತರು.

    ಘಟಕದ ನಿರ್ವಾಹಕರೊಬ್ಬರಿಗೆ ಕರೊನಾ ಪಾಸಿಟಿವ್ ಬಂದ ನಂತರ 284 ಸಿಬ್ಬಂದಿ ಪೈಕಿ ಪ್ರಾಥಮಿಕ ಸಂಪರ್ಕದ ಕಾರಣ ನೀಡಿ ಕೇವಲ 40 ಸಿಬ್ಬಂದಿಯ ಗಂಟಲ ದ್ರವ ಪರೀಕ್ಷೆ ಮಾಡಲಾಗಿದ್ದು, ಕೆಲವರ ವರದಿ ಮಾತ್ರ ಬಂದಿದೆ. ವರದಿ ಬರುವವರೆಗೆ ಹೋಂ ಕ್ವಾರಂಟೈನ್​ನಲ್ಲಿ ಇರುವಂತೆ ಸೂಚಿಸಿದ್ದರು. ಮನೆಯಲ್ಲಿ ಇರೋಣವೆಂದು ಹೋದರೆ ಬಾಡಿಗೆ ಮನೆಯ ಮಾಲೀಕರು ಬಿಡುತ್ತಿಲ್ಲ. ಹಾಗಾಗಿ ಅನಿವಾರ್ಯವಾಗಿ ಘಟಕದ ವಿಶ್ರಾಂತಿ ಗೃಹದಲ್ಲಿ ಕ್ವಾರಂಟೈನ್ ಆಗಿದ್ದೆವು. ಶುಕ್ರವಾರ ದಿಢೀರ್ ಆಗಿ ನಮ್ಮನ್ನು ಹೊರ ಹೋಗುವಂತೆ ಅಧಿಕಾರಿಗಳು ಸೂಚಿಸಿದ್ದಾರೆ. ಬೇರೆ ವ್ಯವಸ್ಥೆ ಕಲ್ಪಿಸುವುದಾಗಿ ಹೇಳಿ ಅಮಾನವೀಯತೆ ತೋರಿದ್ದಾರೆ ಎಂದು ಪ್ರತಿಭಟನಾಕಾರರು ದೂರಿದರು.

    ವಿಶ್ರಾಂತಿ ಗೃಹದಲ್ಲಿ ಬೇಡ ಎಂದು ಮೊದಲೇ ಹೇಳಿದ್ದರೆ ಉಳಿಯುತ್ತಿರಲಿಲ್ಲ. ಇಷ್ಟು ದಿನ ಉಳಿಯಲು ಬಿಟ್ಟು ಏಕಾಏಕಿ ಹೊರ ಹಾಕಿದ್ದೇಕೆ. ಬಹುತೇಕ ಹೊರ ಜಿಲ್ಲೆಯವರೆ ಆದ ನಾವು ಊರಿಗೆ ಹೋಗೋಣವೆಂದರೆ, ಕ್ವಾರಂಟೈನ್​ನಲ್ಲಿದ್ದವರು ಹೊರ ಹೋಗಬಾರದೆಂಬ ನಿಯಮವಿದೆ. ವರದಿ ಬರುವವರೆಗೆ ನಮ್ಮ ಗತಿಯೇನು ಎಂದು ಶಂಕರಗೌಡ ಹಳ್ಳೂರು, ಪುಂಡಲೀಕ ಹಿರಗಟ್ಟಿ ಇತರರು ಆಕ್ರೋಶ ವ್ಯಕ್ತಪಡಿಸಿದರು.

    ಈ ಕುರಿತು ಮಾಧ್ಯಮದವರಿಗೆ ಪ್ರತಿಕ್ರಿಯಿಸಿದ ಘಟಕ ವ್ಯವಸ್ಥಾಪಕ ಶಿವಾನಂದ ಹತಪಕ್ಕಿ, ಸಿಬ್ಬಂದಿಯನ್ನು ಏಕಾಏಕಿ ಹೊರಹಾಕಿಲ್ಲ. ಗಂಟಲ ದ್ರವ ಪರೀಕ್ಷೆಯ ವರದಿ ಬರುವವರೆಗೆ ಅವರಿಗೆ ಹೋಂ ಕ್ವಾರಂಟೈನ್ ವಿಧಿಸಲಾಗಿದೆ. ಕರ್ತವ್ಯ ಮುಗಿಸಿ ಬಂದ ಇತರ ಸಿಬ್ಬಂದಿ ಕೆಲವೊಮ್ಮೆ ಅದೇ ಕೋಣೆಯಲ್ಲಿ ವಿಶ್ರಾಂತಿ ಪಡೆಯುತ್ತಿರುತ್ತಾರೆ. ಅವರಿಗೂ ಅಪಾಯ ಉಂಟಾಗಬಾರದೆಂಬ ಉದ್ದೇಶದಿಂದ ಮನೆಗೆ ಹೋಗುವಂತೆ ಸೂಚಿಸಲಾಗಿದೆ ಎಂದರು.

    ಶಿರಸಿ ವಿಭಾಗೀಯ ಸಾರಿಗೆ ಅಧಿಕಾರಿ ಸುರೇಶ ನಾಯ್ಕ ಮಾತನಾಡಿ, ನೌಕರರಿಗೆ ಬೇರೆಡೆ ಕ್ವಾರಂಟೈನ್​ಗೆ ವ್ಯವಸ್ಥೆ ಮಾಡಲು ಪ್ರಯತ್ನ ನಡೆಸಿದ್ದೇವೆ. ತಹಸೀಲ್ದಾರ್ ಸಲಹೆಯಂತೆ ಲಾಜ್​ಗಳಲ್ಲಿ ವ್ಯವಸ್ಥೆ ಕಲ್ಪಿಸಲು ಪ್ರಯತ್ನಿಸಿದರೂ ಮಾಲೀಕರು ಒಪ್ಪಿಗೆ ನೀಡುತ್ತಿಲ್ಲ. ಹೀಗಾಗಿ ಅನಿವಾರ್ಯವಾಗಿ ಮನೆಗೆ ಹೋಗುವಂತೆ ಸೂಚಿಸಿದ್ದೆವು. ಈಗಲೂ ಅವರ ಕ್ವಾರಂಟೈನ್​ಗೆ ವ್ಯವಸ್ಥೆ ಮಾಡಲು ಪ್ರಯತ್ನ ಮುಂದುವರಿಸಿದ್ದೇವೆ ಎಂದರು.

    ಕ್ವಾರಂಟೈನ್​ನಲ್ಲಿದ್ದವರೂ ಕರ್ತವ್ಯದಲ್ಲಿ?: ಗಂಟಲ ದ್ರವ ಪರೀಕ್ಷೆಯ ನಂತರ ಕ್ವಾರಂಟೈನ್​ನಲ್ಲಿರಬೇಕಾದ ಘಟಕದ ಕೆಲ ಚಾಲಕ, ನಿರ್ವಾಹಕರು ವರದಿ ಬರುವ ಮುನ್ನವೇ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಕೆಲವು ಸಿಬ್ಬಂದಿ ಕ್ವಾರಂಟೈನ್ ಆಗಬೇಕಾಗಿದ್ದರೂ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ನಮ್ಮ ರಕ್ಷಣೆಗಾಗಿ ಮಾಸ್ಕ್, ಗ್ಲೌಸ್, ಸ್ಯಾನಿಟೈಸರ್ ಯಾವ ವ್ಯವಸ್ಥೆಯೂ ಇಲ್ಲ ಎಂದು ಧರಣಿ ನಿರತ ಸಿಬ್ಬಂದಿ ದೂರಿದ್ದಾರೆ.

    ವೇತನ ತಾರತಮ್ಯ: ಕರೊನಾ ವೇಳೆ ಕರ್ತವ್ಯ ನಿರ್ವಹಿಸಿದ ಸಿಬ್ಬಂದಿಗೆ ವೇತನ ನೀಡುವಲ್ಲಿಯೂ ಇಲಾಖೆ ತಾರತಮ್ಯ ಮಾಡಿದೆ ಎಂದು ಸಿಬ್ಬಂದಿ ದೂರಿದ್ದಾರೆ. ಕರ್ತವ್ಯ ನಿರ್ವಹಿಸಿದ ಕೆಲವರ ವೇತನ ಕಡಿತಗೊಳಿಸಲಾಗಿದೆ. ಕರ್ತವ್ಯಕ್ಕೆ ಬಾರದವರಿಗೂ ಪೂರ್ಣ ವೇತನ ನೀಡಲಾಗಿದೆ ಎಂದು ದೂರಿದ್ದಾರೆ.

    ಪರ್ಯಾಯ ವ್ಯವಸ್ಥೆ ಮಾಡದೇ ಹೊರ ಹಾಕಿದ್ದೇಕೆ ?: ಕೆಎಸ್​ಆರ್​ಟಿಸಿ ಸಿಬ್ಬಂದಿಯ ಪ್ರತಿಭಟನೆ ವಿಷಯ ತಿಳಿದ ವಾ.ಕ.ರ.ಸಾ ನಿಗಮದ ಅಧ್ಯಕ್ಷ ವಿ. ಎಸ್. ಪಾಟೀಲ ಶನಿವಾರ ಪಟ್ಟಣದ ಲೋಕೋಪಯೋಗಿ ಪ್ರವಾಸಿ ಮಂದಿರದಲ್ಲಿ ಅಧಿಕಾರಿಗಳನ್ನು ಕರೆಸಿ ಮಾಹಿತಿ ಪಡೆದರು. ಮೇಲಧಿಕಾರಿಗಳ ಮೇಲೆ ಸಿಬ್ಬಂದಿ ದೂರು ಸಲ್ಲಿಸುತ್ತಿದ್ದಾರೆ. ಪರ್ಯಾಯ ವ್ಯವಸ್ಥೆ ಮಾಡದೆ ಏಕಾಏಕಿ ವಿಶ್ರಾಂತಿ ಗೃಹದಿಂದ ಅವರನ್ನು ಹೊರ ಹಾಕಿದ್ದೇಕೆ ಎಂದು ಪ್ರಶ್ನಿಸಿದರು. ಇಂತಹ ಕ್ರಮಗಳಿಂದ ಇಲಾಖೆಗೆ ಕೆಟ್ಟ ಹೆಸರು ಬರುತ್ತದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

    ನೌಕರರು ವೇತನ ತಾರತಮ್ಯದ ಆರೋಪ ಮಾಡಿದ್ದು, ಅದನ್ನು ಪರಿಶೀಲಿಸಿ ವರದಿ ಸಲ್ಲಿಸಬೇಕು. ಯಾವುದೇ ಲಾಜ್ ಲಭ್ಯವಾಗದಿದ್ದರೆ, ಕಲ್ಯಾಣ ಮಂಟಪ ಅಥವಾ ಹಾಲ್​ಗಳಲ್ಲಿ ವ್ಯವಸ್ಥೆ ಕಲ್ಪಿಸಬೇಕು ಎಂದು ಸೂಚಿಸಿದರು. ಎಪಿಎಂಸಿಯ ರೈತಭವನದಲ್ಲಿ ವ್ಯವಸ್ಥೆ ಮಾಡುವಂತೆ ತಹಸೀಲ್ದಾರ್ ಹಾಗೂ ಎಪಿಎಂಸಿ ಕಾರ್ಯದರ್ಶಿಗಳಿಗೆ ದೂರವಾಣಿ ಮೂಲಕ ಸೂಚನೆ ನೀಡಿದರು. ಶಿರಸಿ ವಿಭಾಗೀಯ ಸಾರಿಗೆ ಅಧಿಕಾರಿ ಸುರೇಶ ನಾಯಕ, ಕಾರ್ವಿುಕ ಕಲ್ಯಾಣಾಧಿಕಾರಿ ಪ್ರಕಾಶ ನಾಯಕ, ತಾ.ಪಂ. ಸದಸ್ಯ ನಟರಾಜ ಗೌಡರ್, ಪ್ರಮುಖರಾದ ಗಣಪತಿ ಬೋಳಗುಡ್ಡೆ, ಶ್ರೀನಿವಾಸ ಗಾಂವ್ಕಾರ, ಗಣಪತಿ ಹೆಗಡೆ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts