More

    ಸಾರಿಗೆ ಬಸ್‌ಗೆ ಮಗ ಚಾಲಕ! ಅಪ್ಪ ನಿರ್ವಾಹಕ!!

    ದಾವಣಗೆರೆ: ಜಿಲ್ಲಾ ಉಸ್ತುವಾರಿ ಸಚಿವ ಎಸ್.ಎಸ್. ಮಲ್ಲಿಕಾರ್ಜುನ್ ಹಾಗೂ ತಂದೆ, ಶಾಸಕ ಡಾ.ಶಾಮನೂರು ಶಿವಶಂಕರಪ್ಪ ಇಬ್ಬರೂ ಕೆಎಸ್‌ಆರ್‌ಟಿಸಿ ಡ್ರೈವರ್-ಕಂಡಕ್ಟರ್ ಆಗಿ ಕಾರ್ಯ ನಿರ್ವಹಿಸಿದರು!

    ಮಹಿಳಾ ಉಚಿತ ಬಸ್ ಪ್ರಯಾಣದ, ಕರ್ನಾಟಕ ಸರ್ಕಾರದ ನೂತನ ಶಕ್ತಿ ಯೋಜನೆಗೆ ಚಾಲನೆ ವೇಳೆ ಅಪ್ಪ-ಮಗ ಇಬ್ಬರೂ ಕೆಲ ನಿಮಿಷ ಸಾಂಕೇತಿಕವಾಗಿ ನಿರ್ವಾಹಕ- ಚಾಲಕನ ಪಾತ್ರ ನಿಭಾಯಿಸಿ ಗಮನ ಸೆಳೆದರು.
    ನಗರ ಸಾರಿಗೆ ಬಸ್‌ನ ಸ್ಟೇರಿಂಗ್ ಹಿಡಿದ ಮಲ್ಲಿಕಾರ್ಜುನ್ ಸ್ವಲ್ಪ ಮುಂದಕ್ಕೆ ವಾಹನ ಚಲಾಯಿಸಿ ಕೆಳಗಿಳಿದರು.ಅದೇ ಬಸ್‌ನ ಲೇಡಿ ಕಂಡಕ್ಟರ್ ಕೈಲಿದ್ದ ಆ್ಯಂಡ್ರಾಯ್ಡಾ ಟಿಕೆಟ್ ಯಂತ್ರದಿಂದ ತೆಗೆದ ಶೂನ್ಯ ಟಿಕೆಟ್ ಅನ್ನು ಪಡೆದ ಶಿವಶಂಕರಪ್ಪ ಅವರು ಮಹಿಳಾ ಪ್ರಯಾಣಿಕರೊಬ್ಬರಿಗೆ ನೀಡಿದರು.
    ಆರಂಭದಲ್ಲಿ ಕೆಲಕಾಲ ಸುರಿದ ತುಂತುರು ಮಳೆ ಬಳಿಕ ವೇದಿಕೆ ಕಾರ್ಯಕ್ರಮ ಸುಸೂತ್ರವಾಗಿ ನಡೆಯಿತು. ನಂತರ ಬಸ್‌ಗಳಿಗೆ ಚಾಲನೆ ನೀಡುವ ಹಂತದಲ್ಲಿ ಬಿರುಸು ಮಳೆಯಾಯಿತು. ಆದರೂ ಪ್ರಮೀಳೆಯರು ಶಕ್ತಿ ಪ್ರದರ್ಶಿಸಿದರು. ಬಸ್‌ಗಳತ್ತ ಮುಗಿ ಬಿದ್ದರು.
    ಬಸ್ ನಿಲ್ದಾಣದ ತುಂಬಾ ಮಹಿಳೆಯರ ಸಂಖ್ಯೆ ಹೆಚ್ಚಿತ್ತು. ಶಕ್ತಿ ಯೋಜನೆ ಆರಂಭದ ಕುರಿತಂತೆ ಧ್ವನಿಮುದ್ರಿತ ಮಾತುಗಳೇ ಪ್ರತಿಧ್ವನಿಸಿದವು. ಇತ್ತ ಮಧ್ಯಾಹ್ನ 1 ಗಂಟೆ ಯಾವಾಗ ಆಗುತ್ತೋ ಎಂಬ ತವಕದಲ್ಲಿದ್ದರು. ಆರಂಭದಲ್ಲಿ ಸ್ನೇಹಿತೆಯರೊಂದಿಗೆ ಸೆಲ್ಫೀ ಫೋಟೋ ತೆಗೆದುಕೊಳ್ಳುವ ಮೂಡ್‌ಗೆ ಜಾರಿದ್ದರು.
    ಕೆಲವು ಬಸ್‌ಗಳು ಮಾವಿನ ಸೊಪ್ಪು- ಬಾಳೆಕಂದು, ಹೂವು- ಬೆಲೂನ್ ಹಾಗೂ ಟೇಪುಗಳಿಂದ ಸಿಂಗಾರಗೊಂಡಿದ್ದವು. ಉಚಿತ ಪ್ರಯಾಣಕ್ಕೆ ಆಧಾರ್ ಕಾರ್ಡ್, ಚುನಾವಣಾ ಗುರ್ತಿನ ಚೀಟಿ, ಡ್ರೈವಿಂಗ್ ಲೈಸೆನ್ಸ್ ಮೊದಲಾದ ಗುರುತಿನ ಚೀಟಿ ತೋರಿಸಬೇಕೆಂಬ ನಿಯಮ ಮೊದಲ ದಿನದಲ್ಲಿ ಮಾಫಿ ಆಗಿತ್ತು. ಮಹಿಳೆಯರಿಂದಾಗಿ ಭರ್ತಿಯಾಗಿದ್ದ ಬಸ್‌ನಲ್ಲಿ ಶೂನ್ಯ ಟಿಕೆಟ್ ನೀಡಲು ಕಂಡಕ್ಟರ್‌ಗಳು ಪರದಾಡಬೇಕಾಯಿತು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts