More

    ಸಾಧನೆಗೆ ಮೆಟ್ಟಿಲಾಗಲಿ ಕಷ್ಟಗಳು -ಶಿವಾನಂದ ಕಾಪಶಿ ಸಲಹೆ

    ದಾವಣಗೆರೆ: ವಿದ್ಯಾರ್ಥಿಗಳು ಕಷ್ಟಗಳಿಗೆ ಎದೆಗುಂದದೆ ಸಾಧನೆಗೆ ಮೆಟ್ಟಿಲು ಮಾಡಿಕೊಂಡು ಮುನ್ನಡೆಯಬೇಕು ಎಂದು ನಿಕಟಪೂರ್ವ ಜಿಲ್ಲಾಧಿಕಾರಿ ಶಿವಾನಂದ ಕಾಪಶಿ ಹೇಳಿದರು.
    ಅಜ್ಜಂಪುರಶೆಟ್ರು ಪ್ರತಿಭಾ ಪ್ರತಿಷ್ಠಾನದಿಂದ ಲಿಂ.ಸಿದ್ದೇಶ್ವರ ಸ್ವಾಮಿಗಳ ಸ್ಮರಣಾರ್ಥ ನಗರದ ಮೋತಿ ಚನ್ನಬಸಮ್ಮ ವೀರಪ್ಪ ಕಲ್ಯಾಣ ಮಂಟಪದಲ್ಲಿ ಭಾನುವಾರ ಹಮ್ಮಿಕೊಂಡಿದ್ದ 18ನೇ ವಾರ್ಷಿಕ ಪ್ರತಿಭಾ ಪುರಸ್ಕಾರ ಕಾರ್ಯಕ್ರಮದಲ್ಲಿ ಮಾತನಾಡಿದರು.
    ಜೀವನದಲ್ಲಿ ಪ್ರತಿಯೊಬ್ಬರೂ ಹಲವು ಕಷ್ಟಗಳನ್ನು ಎದುರಿಸಿ ಸಾಧನೆ ಮಾಡಿರುತ್ತಾರೆ. ನಾನು ಸಹ ಒಂದು ಮಠದಲ್ಲಿದ್ದು ಬೆಳೆದುಬಂದಿದ್ದೇನೆ ಎಂದು ತಿಳಿಸಿದರು.
    ಪ್ರತಿಭಾ ಪುರಸ್ಕಾರದಂತಹ ಸಮಾಜಮುಖಿ ಕಾರ್ಯಕ್ರಮ ದೀಪದಿಂದ ದೀಪ ಹಚ್ಚಿದಂತೆ ನಿರಂತರ ನಡೆಯಬೇಕು. ಉಳ್ಳವರು ಕಷ್ಟದಲ್ಲಿದ್ದವರನ್ನು ಗುರುತಿಸಿ ನೀಡುವ ಪುರಸ್ಕಾರ ವಿದ್ಯಾರ್ಥಿಗಳ ಸಾಧನೆಗೆ ನವಚೈತನ್ಯ ತಂದುಕೊಡುವ ಜತೆಗೆ ಸಮಾಜ ಸೇವೆಯ ಪ್ರೇರಣೆಯನ್ನೂ ನೀಡಲಿದೆ ಎಂದು ತಿಳಿಸಿದರು.
    ಬೆಂಗಳೂರಿನ ಉದ್ಯಮಿ ಎನ್.ಎಂ. ಶಿವಕುಮಾರ್ ಮಾತನಾಡಿ, ತಾವೊಬ್ಬ ಸ್ವಾಮೀಜಿ ಎಂಬುದನ್ನು ತೋರಿಸಿಕೊಳ್ಳದೆ ನಡೆದ ಸಿದ್ದೇಶ್ವರ ಸ್ವಾಮಿಗಳ ಸರಳ ಬದುಕು ಎಲ್ಲರಿಗೂ ಆದರ್ಶವಾಗಿದೆ. ಅವರ ಪ್ರವಚನಗಳು ಎಲ್ಲರನ್ನೂ ಸೂಜಿಗಲ್ಲಿನಂತೆ ಸೆಳೆಯುತ್ತಿದ್ದವು. ಕೋಪ ತ್ಯಜಿಸಿ ನಗುನಗುತ್ತ ಜೀವನ ನಡೆಸಬೇಕು ಎಂಬ ಅವರ ಸಂದೇಶವನ್ನು ಎಲ್ಲರೂ ಅಳವಡಿಸಿಕೊಳ್ಳಬೇಕು ಎಂದರು.
    ವಿದ್ಯಾರ್ಥಿಗಳು ಶಿಕ್ಷಣದ ಜತೆಗೆ ಸಂಸ್ಕಾರವನ್ನು ಬೆಳೆಸಿಕೊಳ್ಳಬೇಕು. ನಿತ್ಯ ಜೀವನದಲ್ಲಿ ಯೋಗವನ್ನು ರೂಢಿಸಿಕೊಳ್ಳಬೇಕು ಎಂದು ಹೇಳಿದರು.
    ವೈದ್ಯ ಡಾ.ಎಸ್.ಎಂ. ಎಲಿ ಮಾತನಾಡಿ, ಸಿದ್ದೇಶ್ವರ ಸ್ವಾಮೀಜಿ ಅತ್ಯಂತ ಸರಳ ಹಾಗೂ ಆದರ್ಶದ ಬದುಕು ನಡೆಸಿದರು. ಅವರ ಜೀವನ ಎಲ್ಲರಿಗೂ ಮಾರ್ಗದರ್ಶನ ಆಗಬೇಕು. ಪ್ರತಿಭಾವಂತ ವಿದ್ಯಾರ್ಥಿಗಳು ಅಧ್ಯಯನದ ಮೂಲಕ ಉನ್ನತ ಸಾಧನೆ ಮಾಡಬೇಕು ಎಂದು ಹೇಳಿದರು.
    ಬಸವ ಬಳಗದ ಅಧ್ಯಕ್ಷ ಎ.ಎಚ್. ಹುಚ್ಚಪ್ಪ ಮಾಸ್ತರ್ ಅಧ್ಯಕ್ಷತೆ ವಹಿಸಿದ್ದರು. ಅಜ್ಜಂಪುರ ಶೆಟ್ರು ರಾಜಶೇಖರ್ ಉಪಸ್ಥಿತರಿದ್ದರು. ಮೃತ್ಯುಂಜಯ ಪ್ರಾಸ್ತಾವಿಕ ಮಾತನಾಡಿದರು. ಎಸ್ಸೆಸ್ಸೆಲ್ಸಿ-ಪಿಯುಸಿಯಲ್ಲಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಿಗೆ ಪುರಸ್ಕಾರ ನೀಡಲಾಯಿತು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts