More

    ಸಾಧಕರಿಗೆ ಪ್ರಶಸ್ತಿ ದೊರೆಯುವಂತಾಗಲಿ


    ವಾಲ್ಮೀಕಿ ಸಂಘಟನೆಗಳ ಒಕ್ಕೂಟದ ಮೈಸೂರು ಜಿಲ್ಲಾಧ್ಯಕ್ಷ ತಾಯೂರು ಪ್ರಕಾಶ್ ಅಭಿಮತ


    ತಿ.ನರಸೀಪುರ: ಸಮಾಜ ಸೇವಕ ಹಾಗೂ ಅನಾಥ ಶವಗಳ ಮುಕ್ತಿದಾತ ಡಾ.ಎಂ.ಮಾದೇಶ್ ಅವರನ್ನು 67ನೇ ಕನ್ನಡ ರಾಜ್ಯೋತ್ಸವ ಅಂಗವಾಗಿ ಶ್ರೀ ಮಹರ್ಷಿ ವಾಲ್ಮೀಕಿ ಚಾರಿಟಬಲ್ ಟ್ರಸ್ಟ್ ವತಿಯಿಂದ ಸನ್ಮಾನಿಸಲಾಯಿತು.

    ಪಟ್ಟಣದ ಕಬಿನಿ ಅತಿಥಿ ಗೃಹದಲ್ಲಿ ಬುಧವಾರ ಆಯೋಜಿಸಿದ್ದ ಸರಳ ಸಮಾರಂಭದಲ್ಲಿ ಎಂ.ಮಾದೇಶ್ ಅವರಿಗೆ ನೆನಪಿನ ಕಾಣಿಕೆ ನೀಡಿ ಗೌರವಿಸಲಾಯಿತು.

    ವಾಲ್ಮೀಕಿ ಸಂಘಟನೆಗಳ ಒಕ್ಕೂಟದ ಮೈಸೂರು ಜಿಲ್ಲಾಧ್ಯಕ್ಷ ತಾಯೂರು ಪ್ರಕಾಶ್, ಯಾವುದೇ ಪ್ರತಿಫಲಾಪೇಕ್ಷೆ ಇಲ್ಲದೆ ಸಾವಿರಕ್ಕೂ ಹೆಚ್ಚು ಶವಗಳ ಸಂಸ್ಕಾರ ಮಾಡಿರುವ ಡಾ.ಮಾದೇಶ್ ಅವರ ಸೇವೆ ಅನನ್ಯ. ಶವಗಳನ್ನು ಕಂಡ ಕೂಡಲೇ ದೂರ ನಿಲ್ಲುವ ಇಂದಿನ ಕಾಲ ಮಾನದಲ್ಲಿ ಅನಾಥ ಶವಗಳ ಬಗ್ಗೆ ಮಾಹಿತಿ ತಿಳಿದಾಕ್ಷಣ ಸ್ಥಳಕ್ಕೆ ತೆರಳಿ ತಮ್ಮ ಸ್ವಂತ ಖರ್ಚಿನಲ್ಲಿ ಸಂಸ್ಕಾರ ನೆರವೇರಿಸುವ ಇವರ ಸೇವೆ ಶ್ಲಾಘನೀಯ. ಇಂತಹ ಅಪರೂಪದ ವ್ಯಕ್ತಿಗಳನ್ನು ಗುರುತಿಸಿ ರಾಜ್ಯ ಸರ್ಕಾರ ಪ್ರಶಸ್ತಿ ನೀಡಿ ಗೌರವಿಸಬೇಕಿದೆ ಎಂದರು.

    ಈ ಬಾರಿಯ ಕನ್ನಡ ರಾಜ್ಯೋತ್ಸವ ಪ್ರಶಸ್ತಿಗೆ ಇವರ ಹೆಸರೂ ಚಾಲ್ತಿಯಲ್ಲಿತ್ತಾದರೂ ಕೊನೆ ಗಳಿಗೆಯಲ್ಲಿ ಹೆಸರು ಬದಲಾವಣೆಯಾಗಿದ್ದು ಬೇಸರ ತರಿಸಿದೆ. ಮುಂದಿನ ಬಾರಿಯಾದರೂ ಸರ್ಕಾರ ಇಂತಹ ಸಾಧಕರನ್ನು ಗುರುತಿಸಿ ರಾಜ್ಯ ಪ್ರಶಸ್ತಿ ನೀಡುವ ಕೆಲಸ ಮಾಡಬೇಕಿದೆ ಎಂದರು.

    ಸನ್ಮಾನ ಸ್ವೀಕರಿಸಿ ಮಾತನಾಡಿದ ಡಾ.ಎಂ.ಮಾದೇಶ್, ಯಾವುದೇ ಪ್ರಶಸ್ತಿ, ಸನ್ಮಾನಕ್ಕಾಗಿ ನಾನು ಅನಾಥ ಶವಸಂಸ್ಕಾರ ಮಾಡುತ್ತಿಲ್ಲ.ಈ ಕಾಯಕದಿಂದ ಮನಸ್ಸಿಗೆ ಸಮಾಧಾನ ದೊರಕುತ್ತಿದೆ. ಟ್ರಸ್ಟ್‌ನವರು ನನ್ನ ಸೇವೆ ಗುರುತಿಸಿ ಸನ್ಮಾನಿಸಿರುವುದು ಸಂತಸ ತಂದಿದ್ದು, ಮುಂದೆ ಇನ್ನೂ ಹೆಚ್ಚಿನ ಸಮಾಜ ಸೇವೆಯಲ್ಲಿ ತೊಡಗಿಕೊಳ್ಳುತ್ತೇನೆ ಎಂದು ತಿಳಿಸಿದರು.

    ಕಾರ್ಯಕ್ರಮದಲ್ಲಿ ಟ್ರಸ್ಟ್ ಅಧ್ಯಕ್ಷ ಯಡದೊರೆ ಮಹೇಶ್ ನಾಯಕ್, ಕಸಾಪ ಟೌನ್ ಅಧ್ಯಕ್ಷ ಕೃಷ್ಣಮೂರ್ತಿ, ಮುಖಂಡರಾದ ದೇವರಾಜು, ಮುರುಳಿ, ರಂಗಸ್ವಾಮಿ, ಕಾಂತರಾಜ ಅರಸ್, ಮಾದೇಶ್, ಬಾಳೆ ಮಂಜು, ಕುಮಾರ್, ಭಾರತ ಮಾತ ಕಟ್ಟಡ ಕಾರ್ಮಿಕರ ಸಂಘದ ಅಧ್ಯಕ್ಷ ರಾಜೇಶ್ ಮತ್ತಿತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts