More

    ಸಾಗರ: ಶಾಸಕ ಹರತಾಳು ಹಾಲಪ್ಪ ಮಧ್ಯಸ್ಥಿಕೆ; ಪೌರಕಾರ್ಮಿಕರ ಪ್ರತಿಭಟನೆ ಅಂತ್ಯ

    ಸಾಗರ: ಹಣ್ಣಿನ ಅಂಗಡಿ ತೆರವು ವಿಚಾರದಲ್ಲಿ ಉಂಟಾಗಿದ್ದ ಸಂಘರ್ಷ ಶಾಸಕ ಹರತಾಳು ಹಾಲಪ್ಪ ಅವರ ಮಧ್ಯಪ್ರವೇಶದಿಂದ ಅಂತ್ಯಗೊಂಡಿದೆ. ಪೌರಾಯುಕ್ತ ಎಚ್.ಕೆ.ನಾಗಪ್ಪ ಅವರ ಮೇಲೆ ಹಲ್ಲೆ ನಡೆಸಿದವರನ್ನು ಬಂಧಿಸಲು ಶುಕ್ರವಾರ ಸಂಜೆವರೆಗೆ ಗಡುವು ನೀಡಿದ್ದ ಪೌರ ಕಾರ್ಮಿಕರು ಷರತ್ತಿನ ಮೇಲೆ ಮುಷ್ಕರ ಹಿಂತೆಗೆದುಕೊಂಡು ಕರ್ತವ್ಯಕ್ಕೆ ಹಾಜರಾಗಿದ್ದಾರೆ. ಒಂದು ವೇಳೆ ಸಂಧಾನಸಭೆಯಲ್ಲಿ ಕೊಟ್ಟಿರುವ ಮಾತಿನ ಪ್ರಕಾರ ಪೊಲೀಸ್ ಇಲಾಖೆ ಅಧಿಕಾರಿಗಳು ನಡೆದುಕೊಳ್ಳದಿದ್ದರೆ ರಾಜ್ಯಾದ್ಯಂತ ಮತ್ತೆ ಮುಷ್ಕರ ಆರಂಭ ಮಾಡುತ್ತೇವೆ ಎಂದು ಎಚ್ಚರಿಕೆ ನೀಡಿದ್ದಾರೆ.
    ಅನಿರ್ಧಿಷ್ಟಾವಧಿ ಮುಷ್ಕರ ಹಿಂತೆಗೆದುಕೊಂಡು ನೀರು ಪೂರೈಕೆ ಮತ್ತು ನೈರ್ಮಲ್ಯೀಕರಣ ಚಟುವಟಿಕೆ ಸ್ಥಗಿತಗೊಳಿಸಿದ್ದ ಪೌರ ಕಾರ್ಮಿಕರು, ಗುರುವಾರ ಸಂಜೆ ನಗರಸಭೆ ಅಧ್ಯಕ್ಷರ ಉಪಸ್ಥಿತಿಯಲ್ಲಿ ನಡೆದ ಸಂಧಾನ ಸಭೆಯಲ್ಲಿ ನೀರು ಸರಬರಾಜು ಮಾಡಲು ಒಪ್ಪಿಕೊಂಡಿದ್ದರು. ಆದರೆ ತಡರಾತ್ರಿ ಸಂಘದ ಮೂವರ ಮೇಲೆ ಕಳ್ಳತನ ಪ್ರಕರಣ ದಾಖಲಾಗಿದ ಕಾರಣ ಪ್ರತಿಭಟನೆಯನ್ನು ಮತ್ತೆ ಅನಿರ್ಧಿಷ್ಟಾವಧಿ ಮುಂದುವರಿಸುವ ನಿರ್ಣಯ ಕೈಗೊಂಡಿದ್ದರು.
    ಎರಡು ದಿನಗಳಿಂದ ಕಸ ವಿಲೇವಾರಿ ಇಲ್ಲದೆ ನಗರದ ತುಂಬೆಲ್ಲಾ ರಸ್ತೆ ಇಕ್ಕೆಲಗಳಲ್ಲಿ ಕಸದ ರಾಶಿ ಬಿದ್ದಿತ್ತು, ಪರಿಸ್ಥಿತಿ ಹೀಗೇ ಮುಂದುವರಿದರೆ ಕುಡಿಯಲು ನೀರು ಇಲ್ಲ, ಕಸದ ರಾಶಿಯಿಂದ ಸಮಸ್ಯೆ ತೀವ್ರವಾಗುವ ಲಕ್ಷಣಗಳಿದ್ದವು.
    ಪರಿಸ್ಥಿತಿ ವಿಕೋಪಕ್ಕೆ ತೆರಳುವ ಲಕ್ಷಣಗಳು ಗೋಚರಿಸುತ್ತಿದ್ದಂತೆ ಶಾಸಕ ಹರತಾಳು ಹಾಲಪ್ಪ ಶುಕ್ರವಾರ ಜಿಲ್ಲಾ ಮಟ್ಟದ ಅಧಿಕಾರಿಗಳ ಸಮ್ಮುಖದಲ್ಲಿ ತುರ್ತು ಸಭೆ ನಡೆಸಿದರು. ಸುದೀರ್ಘ ಚರ್ಚೆ ನಂತರ ಶಾಸಕರ ಮಾತಿಗೆ ಮನ್ನಣೆ ನೀಡಿದ ಪೌರಕಾರ್ಮಿಕರು ಮುಷ್ಕರ ಹಿಂತೆಗೆದುಕೊಂಡು ಕರ್ತವ್ಯಕ್ಕೆ ಹಾಜರಾಗಲು ಸಮ್ಮತಿಸಿದರು.
    ಷರತ್ತು ಏನು?:  ನಗರಸಭೆ ಅಧಿಕಾರಿಗಳಾದ ಮದನ್, ಶೈಲೇಶ್ ಮತ್ತು ಪೌರಕಾರ್ಮಿಕ ಸಂಘದ ಅಧ್ಯಕ್ಷ ನಾಗರಾಜ ಮೇಸ್ತ್ರಿ ವಿರುದ್ದ ಹಣ್ಣಿನ ಅಂಗಡಿ ಮಾಲೀಕ ದಾಖಲು ಮಾಡಿರುವ ದೂರಿನ ಪ್ರಕರಣವನ್ನು 90 ದಿನಗೊಳಗೆ ಮುಕ್ತಾಯಗೊಳಿಸಬೇಕು. ಈ ಅವಧಿಯಲ್ಲಿ ಮುಕ್ತಾಯ ಮಾಡದಿದ್ದರೆ ಮತ್ತೆ ಮುಷ್ಕರ ಆರಂಭಿಸಲಾಗುವುದು ಎಂದು ಪೌರಕಾರ್ಮಿಕ ಸಂಘದ ಪದಾಧಿಕಾರಿಗಳು ಸಂಧಾನ ಸಭೆಯಲ್ಲಿ ಸ್ಪಷ್ಟಪಡಿಸಿದ್ದಾರೆ. ದೂರು ದಾಖಲು ಮಾಡಿಕೊಳ್ಳುವ ಪೂರ್ವದಲ್ಲಿ ಪೊಲೀಸ್ ಅಧಿಕಾರಿಗಳು ಸತ್ಯಾಸತ್ಯತೆ ಪರಿಶೀಲನೆ ಮಾಡಬೇಕಾಗಿತ್ತು. ಈ ಪ್ರಕರಣವನ್ನು ನಿಗದಿತ ಅವಧಿಯಲ್ಲಿ ಇತ್ಯರ್ಥಪಡಿಸದಿದ್ದರೆ ಪೌರಕಾರ್ಮಿಕರ ಹೋರಾಟದೊಂದಿಗೆ ನಾನೂ ಇರುತ್ತೇನೆ ಎಂದು ಹಾಲಪ್ಪ ತಿಳಿಸಿದ್ದಾರೆ.
    ದೂರು ಸರಿಯಲ್ಲ: ರಸ್ತೆಬದಿ ಅಂಗಡಿ ತೆರವು ಮಾಡಲು ಹೋದ ಪೌರಕಾರ್ಮಿಕರ ಮೇಲೆ ಕಳ್ಳತನ ಪ್ರಕರಣ ದಾಖಲು ಮಾಡಿದ್ದು ಸರಿಯಲ್ಲ. ಪೊಲೀಸ್ ಅಧಿಕಾರಿಗಳು ದೂರು ದಾಖಲು ಮಾಡಿಕೊಳ್ಳುವ ಪೂರ್ವದಲ್ಲಿ ಸತ್ಯಾಸತ್ಯತೆ ಪರಿಶೀಲನೆ ಮಾಡಬೇಕಿತ್ತು ಎಂದು ಶಾಸಕ ಹರತಾಳು ಹಾಲಪ್ಪ ಹೇಳಿದರು. ಮುಷ್ಕರದಿಂದ ಸಾರ್ವಜನಿಕರಿಗೆ ಆಗುತ್ತಿರುವ ತೊಂದರೆಯನ್ನು ಗಮನಕ್ಕೆ ತಂದಾಗ ಪೌರಕಾರ್ಮಿಕರು ಪ್ರತಿಭಟನೆ ಹಿಂತೆಗೆದುಕೊಳ್ಳುವ ಭರವಸೆ ನೀಡಿದ್ದಾರೆ ಪೌರಕಾರ್ಮಿಕರ ನ್ಯಾಯಯುತ ಹೋರಾಟದ ಜೊತೆ ನಾನಿರುತ್ತೇನೆ ಎಂದು ಹೇಳಿದರು.
    ಬೀದಿ ವ್ಯಾಪಾರ ಮಾಡುವವರು ಮನಬಂದಂತೆ ಅಂಗಡಿಗಳನ್ನು ಹಾಕಿಕೊಳ್ಳುವಂತಿಲ್ಲ ಜಿಲ್ಲಾಧಿಕಾರಿ ಆದೇಶದ ಅನ್ವಯ ಸಾಗರದಲ್ಲಿಯೂ ಅಗತ್ಯ ಕ್ರಮ ಕೈಗೊಳ್ಳಲಾಗುತ್ತದೆ. ಬೀದಿ ವ್ಯಾಪಾರಕ್ಕೂ ಒಂದು ಶಿಸ್ತು ಇರಬೇಕು. ರೈತರಿಗೂ ಇದೇ ನೀತಿ ಅನ್ವಯ ಮಾಡಬಾರದು. ತರಕಾರಿಗಳನ್ನು ಬೆಳೆದ ರೈತರು ಒಂದೆರಡು ತಾಸುಗಳ ಕಾಲ ಸಾಗರ ನಗರಕ್ಕೆ ತರಕಾರಿ ತಂದು ಮಾರುತ್ತಾರೆ. ಅಧಿಕಾರಿಗಳು ಅವರಿಗೆ ತೊಂದರೆ ಮಾಡಬಾರದು ಎಂದು ಹೇಳಿದರು.
    ಇಬ್ಬರ ಬಂಧನ: ನಗರಸಭೆ ಆಯುಕ್ತರ ಮೇಲೆ ಹಲ್ಲೆ ಮಾಡಿದ ಆರೋಪದ ಮೇಲೆ ನಗರಸಭೆ ಸದಸ್ಯ ತಸ್ರೀಫ್ ಇಬ್ರಾಹಿಂ, ಮಹ್ಮದ್ ಜಿಲಾನಿ, ಶಹಬಾದ್ ಅಹ್ಮದ್, ವಸೀಂ, ರಷೀದ್ ಹಾಗೂ ಇತರ 50 ಜನರ ವಿರುದ್ಧ ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ಮಹ್ಮದ್ ಜಿಲಾನಿ ಮತ್ತು ಆಸಿಫ್ ಎಂಬುವರನ್ನು ಬಂಧಿಸಲಾಗಿದೆ.

     

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts