More

    ಸಹಾಯಧನಕ್ಕಾಗಿ ವೃದ್ಧೆ ಪರದಾಟ

    ಬ್ಯಾಡಗಿ: ಪುರಸಭೆ ಮಂಜೂರು ಮಾಡಿದ ನಿವೇಶನದಲ್ಲಿ ಅಡಿಪಾಯ ಹಾಕಿಕೊಂಡು ನಾಲ್ಕು ವರ್ಷ ಕಳೆದರೂ ಮೊದಲ ಕಂತಿನ ಸಹಾಯಧನ ಜಮೆಯಾಗದ ಹಿನ್ನೆಲೆಯಲ್ಲಿ ನಿರ್ಗತಿಕ ಮಹಿಳೆಯೊಬ್ಬಳು ಮುಖ್ಯಮಂತ್ರಿಗೆ ದೂರು ಸಲ್ಲಿಸಿದ್ದಾರೆ.

    ಪಟ್ಟಣದ ಆಶ್ರಯ ಬಡಾವಣೆ ನಿರ್ಗತಿಕ ಹಾಗೂ ಅಂಗವಿಕಲ ವಯೋವೃದ್ಧೆ ಗಂಗಮ್ಮ ಇಚ್ಚಂಗಿ ಅವರಿಗೆ ಕೆಲ ವರ್ಷದ ಹಿಂದೆ ಪುರಸಭೆ ನಿವೇಶನ ಮಂಜೂರು ಮಾಡಿತ್ತು. ಬಳಿಕ ಪುರಸಭೆ ಕಾರ್ಯಾದೇಶದಂತೆ ನಿವೇಶನದಲ್ಲಿ ಅಡಿಪಾಯ ಹಾಕಲಾಗಿದೆ. ವಿವಿಧ ಕಾರಣಗಳಿಂದ ಈವರೆಗೂ ಒಂದು ರೂಪಾಯಿ ಹಣ ಮಂಜೂರಾಗಿಲ್ಲ. ಹೀಗಾಗಿ ಮಹಿಳೆ ಮನೆಯ ಸಹಾಯಧನಕ್ಕಾಗಿ ಪರದಾಡುವ ಮೂಲಕ ಬೀದಿವಾಸ ಅನುಭವಿಸುತ್ತಿದ್ದಾರೆ.

    ಎರಡು ಬಾರಿ ಬೆಂಗಳೂರಿನ ಮುಖ್ಯಮಂತ್ರಿಗಳ ಸಚಿವಾಲಯಕ್ಕೆ ಅಲೆದಾಡಿದ ವೃದ್ಧೆ, ಕೊನೆಗೆ ಮುಖ್ಯಮಂತ್ರಿಗಳ ವಿಶೇಷ ಕರ್ತವ್ಯಾಧಿಕಾರಿ ಡಾ.ಎ. ಲೋಕೇಶ ಅವರಿಂದ ಜ. 6ರಂದು ಮುಖ್ಯಮಂತ್ರಿಗಳ ಸಚಿವಾಲಯದಿಂದ ಟಿಪ್ಪಣೆ ಪತ್ರ ತಂದಿದ್ದಾಳೆ. ಪತ್ರದಲ್ಲಿ ಸದರಿಯವರು ಆಶ್ರಯ ಯೋಜನೆ ಮನೆಗೆ ಅರ್ಜಿ ಸಲ್ಲಿಸಿದ್ದು, ಸದರಿ ವೃದ್ಧ ಮಹಿಳೆಗೆ ಆಶ್ರಯ ಯೋಜನೆ ಮನೆ ಮಂಜೂರು ಮಾಡಲು ಅಗತ್ಯ ಕ್ರಮ ಕೈಗೊಳ್ಳುವಂತೆ ಜಿಲ್ಲಾ ಆಯುಕ್ತರು ಹಾಗೂ ಪುರಸಭೆ ಮುಖ್ಯಾಧಿಕಾರಿಗೆ ಪತ್ರ ರವಾನೆಯಾಗಿದೆ.

    36 ಮನೆಗಳು ಬ್ಲಾಕ್: 2015-16ನೇ ಸಾಲಿನಲ್ಲಿ ಪುರಸಭೆ ವತಿಯಿಂದ ಮಂಜೂರಾಗಿದ್ದ ಮನೆಗಳ ಪೈಕಿ ಎಲ್ಲರೂ ಅಡಿಪಾಯ ಹಾಗೂ ಬೇರೆ ಬೇರೆ ಹಂತದಲ್ಲಿ ಮನೆ ನಿರ್ವಿುಸಿಕೊಂಡಿದ್ದು, ಈವರೆಗೂ ಹಣ ಮಂಜೂರಾಗಿಲ್ಲ. ನಿರ್ಮಾಣ ವಿಳಂಬ ಹಾಗೂ ವಿವಿಧ ತಾಂತ್ರಿಕ ಕಾರಣಗಳಿಂದ ಆಶ್ರಯ ಮನೆ ಪಟ್ಟಿ ಬ್ಲಾಕ್ ಮಾಡಲಾಗಿದೆ ಎಂದು ಪುರಸಭೆ ಆಶ್ರಯ ಯೋಜನೆ ವಿಷಯ ನಿರ್ವಹಣಾಧಿಕಾರಿ ತಿಳಿಸಿದ್ದಾರೆ.

    ಬಡವಳಾದ ನಾನು ಆಶ್ರಯ ಮನೆಗಾಗಿ ಸಾಕಷ್ಟು ಅಲೆದಾಡಿದ್ದೇನೆ. ನನಗಿರುವ ಐವರು ಮಕ್ಕಳಲ್ಲಿ ಇಬ್ಬರು ಮೃತಪಟ್ಟಿದ್ದು, ಮೂವರು ನನ್ನನ್ನು ಬಿಟ್ಟು ಹೋಗಿದ್ದಾರೆ. ಅಂಗವಿಕಲತೆಯಿಂದ ಬೆರಳುಗಳ ತೊಂದರೆಯಿದ್ದರೂ, ಮೆಣಸಿನಕಾಯಿ ತುಂಬು ಬಿಡಿಸುವ ಮೂಲಕ ಅಲ್ಪಸ್ವಲ್ಪ ದುಡಿದು ಜೀವಿಸುತ್ತಿದ್ದೇನೆ. ಮನೆ ಮಂಜೂರಾತಿಗೆ ಮುಖ್ಯಮಂತ್ರಿಗಳಿಂದ ಭರವಸೆ ಸಿಕ್ಕಿದ್ದು, ಅವರ ಪತ್ರ ತಂದು ಟಪಾಲಿಗೆ ಕೊಟ್ಟಿರುವೆ. ಇನ್ನಾದರೂ ನನಗೆ ಆಶ್ರಯ ಕೊಡಿ.
    | ಗಂಗಮ್ಮ ಇಚ್ಚಂಗಿ, ನೊಂದ ವೃದ್ಧೆ

    2015-16ರಲ್ಲಿ 36, 2016-17ರಲ್ಲಿ 25, 2017-18ರಲ್ಲಿ 23 ಮನೆಗಳನ್ನು ಜಿಪಿಎಸ್ ಮಾಡಿ ವೆಬ್​ಸೈಟ್​ನಲ್ಲಿ ಹಾಕಲಾಗಿತ್ತು. ಆದರೆ, ಎಲ್ಲ ಮನೆಗಳನ್ನು ಬ್ಲಾಕ್ ಮಾಡಲಾಗಿದೆ. ಕುರಿತು ಸಂಬಂಧಿಸಿದ ಮೇಲಧಿಕಾರಿಗಳಿಗೆ ಪತ್ರ ಬರೆದು ಕೂಡಲೆ ವೆಬ್​ಸೈಟ್​ನಲ್ಲಿ ಬ್ಲಾಕ್ ತೆರವುಗೊಳಿಸುವಂತೆ ಮನವಿ ಮಾಡಿದ್ದೇನೆ. ರಾಜ್ಯಮಟ್ಟದಲ್ಲಿ ಸಮಸ್ಯೆಯಿದ್ದು, ವೆಬ್​ಸೈಟ್ ತೆರವುಗೊಳಿಸಿದ ಬಳಿಕ ಫಲಾನುಭವಿಗಳಿಗೆ ಹಣ ಮಂಜೂರು ಮಾಡಲಾಗುವುದು.
    | ಜೆ. ವೀರಾಚಾರ್ಯ, ಆಶ್ರಯ ಯೋಜನೆ ವಿಷಯ ನಿರ್ವಾಹಕರು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts