More

    ಸಹಜ ಸ್ಥಿತಿಯತ್ತ ದ.ಕ. ಮೊದಲ ಹೆಜ್ಜೆ: ಬಟ್ಟೆ, ಪಾದರಕ್ಷೆ ಅಂಗಡಿಗಳಲ್ಲಿ ಜನಸಂದಣಿ

    ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಲಾಕ್‌ಡೌನ್ ಸಡಿಲಗೊಂಡಿರುವ ಹಿನ್ನೆಲೆಯಲ್ಲಿ ಬುಧವಾರ ವಾಣಿಜ್ಯ ಚಟುವಟಿಕೆ ಚುರುಕುಗೊಂಡಿದೆ.
    ಬಟ್ಟೆ, ಪಾದರಕ್ಷೆ ಅಂಗಡಿಗಳಲ್ಲಿ ಜನಸಂದಣಿ ಕಂಡುಬಂತು. ಅಗತ್ಯ ವಸ್ತುಗಳಾದ ದಿನಸಿ, ತರಕಾರಿ, ಮಾಂಸದಂಗಡಿಗಳಲ್ಲಿ ಜನರ ಸಂಖ್ಯೆ ಕಡಿಮೆ ಇತ್ತು. ಇತರೆ ಕೆಲವು ಅಂಗಡಿಗಳ ಮಾಲೀಕರು ಅಂಗಡಿ ಶುಚಿಗೊಳಿಸುವುದರಲ್ಲಿ, ಸಾಮಗ್ರಿ ಜೋಡಿಸುವುದರಲ್ಲಿ ತಲ್ಲೀನರಾಗಿದ್ದರು. ಮಾರುಕಟ್ಟೆಗಳಲ್ಲಿ 11 ಗಂಟೆ ತನಕ ಹೆಚ್ಚಿನ ಜನ ಕಂಡು ಬಂದರು.

    ತಾಲೂಕು ಕೇಂದ್ರಗಳಾದ ಸುಳ್ಯ, ಪುತ್ತೂರು, ಕಡಬ, ಬಂಟ್ವಾಳ, ಬೆಳ್ತಂಗಡಿ, ಮೂಡುಬಿದಿರೆ ಮೊದಲಾದ ಕಡೆಗಳಲ್ಲೂ ಹೆಚ್ಚಿನ ಅಂಗಡಿಗಳು ತೆರೆದಿವೆ. ಮಧ್ಯಾಹ್ನ 2 ಗಂಟೆ ಹೊತ್ತಿಗೆ ಅಂಗಡಿಗಳು ಬಂದ್ ಆದವು. ಹೋಟೆಲ್‌ಗಳನ್ನು ತೆರೆದು ಒಟ್ಟು ಆಸನ ಸಾಮರ್ಥ್ಯದ ಶೇ.50ರಷ್ಟು ಗ್ರಾಹಕರಿಗೆ ಕುಳಿತು ತಿನ್ನಬಹುದು ಎಂದು ಜಿಲ್ಲಾಡಳಿತ ಹೇಳಿದ್ದರೂ, ಕೆಲವು ಹೋಟೆಲ್‌ಗಳು ಪಾರ್ಸೆಲ್‌ಗೆ ಸೀಮಿತವಾದವು. ತೆರೆದ ಹೋಟೆಲ್‌ಗಳಲ್ಲೂ ಗ್ರಾಹಕರು ಕಡಿಮೆ ಇದ್ದರು.

    ವಾಹನ ದಟ್ಟಣೆ: ಮಂಗಳೂರಿನಲ್ಲಿ ವಾಹನಗಳು ಹೆಚ್ಚಿನ ಸಂಖ್ಯೆಯಲ್ಲಿ ರಸ್ತೆಗಿಳಿದಿದ್ದವು. ಪ್ರಮುಖ ರಸ್ತೆಗಳಲ್ಲಿ ಕೆಲಸ ನಡೆಯುತ್ತಿರುವುದರಿಂದ ಬೆಳಗ್ಗೆಯಿಂದಲೇ ದಟ್ಟಣೆ ಉಂಟಾಯಿತು. ಎಂ.ಜಿ.ರಸ್ತೆ, ಬಂಟ್ಸ್‌ಹಾಸ್ಟೆಲ್, ಹಂಪನಕಟ್ಟೆ, ಪುರಭವನ ಮುಂಭಾಗದ ರಸ್ತೆಯಲ್ಲಿ ಮಧ್ಯಾಹ್ನದ ತನಕ ದಟ್ಟಣೆ ಇತ್ತು. ಸಂಚಾರಿ ಪೊಲೀಸರು ದಟ್ಟಣೆ ನಿವಾರಿಸಲು ಹರಸಾಹಸಪಡಬೇಕಾಯಿತು. ಅರ್ಧ ಕಿಲೋಮೀಟರ್ ಕ್ರಮಿಸಲು ಅರ್ಧ ತಾಸು ಬೇಕಾಯಿತು ಎಂದು ಕೆಲವು ವಾಹನ ಸವಾರರು ತಿಳಿಸಿದ್ದಾರೆ. ಮಧ್ಯಾಹ್ನ 2 ಗಂಟೆ ಬಳಿಕ ಪೊಲೀಸರು ತಪಾಸಣೆ ಬಿಗುಗೊಳಿಸಿದರು. ನಗರದ ನಂತೂರು, ಸರ್ಕಿಟ್ ಹೌಸ್, ಕ್ಲಾಕ್ ಟವರ್, ಕೊಟ್ಟಾರ ಚೌಕಿ ಮೊದಲಾದ ಕಡೆ ಚೆಕ್‌ಪೋಸ್ಟ್‌ಗಳಲ್ಲಿ ವಾಹನ ತಪಾಸಣೆ ನಡೆಸಿದರು. ಅನವಶ್ಯಕವಾಗಿ ತಿರುಗಾಡುತ್ತಿದ್ದವರಿಗೆ ದಂಡ ವಿಧಿಸಲಾಯಿತು. ತಾಲೂಕು ಕೇಂದ್ರಗಳಲ್ಲೂ ವಾಹನ ಸಂಚಾರ ಅಧಿಕವಾಗಿತ್ತು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts