More

    ಸಹಕಾರಿ ಸಂಘ-ಸಂಸ್ಥೆಗಳಲ್ಲಿ ರಾಜಕೀಯ ಸಲ್ಲದು

    ಹುಕ್ಕೇರಿ: ರೈತರಿಗೆ ಆರ್ಥಿಕ ಬೆನ್ನೆಲುಬು ಆಗಿರುವ ಗ್ರಾಮೀಣ ಪ್ರದೇಶದ ಪಿಕೆಪಿಎಸ್‌ನಲ್ಲಿ ರಾಜಕೀಯ ಸಲ್ಲದು. ರಾಜಕೀಯ ಮಾಡುವುದಿದ್ದರೆ ಅದು ಸಂಘ-ಸಂಸ್ಥೆಗಳನ್ನು ಹೊರತುಪಡಿಸಿ ಮಾಡಿ ಎಂದು ಬಿಡಿಸಿಸಿ ಬ್ಯಾಂಕ್ ಅಧ್ಯಕ್ಷ ರಮೇಶ ಕತ್ತಿ ಹೇಳಿದರು.

    ತಾಲೂಕಿನ ಎಲಿಮುನ್ನೋಳಿ ಗ್ರಾಮದ ಶ್ರೀ ಮಹಾಲಕ್ಷ್ಮೀ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ನೂತನ ಪದಾಧಿಕಾರಿಗಳಿಂದ ಬೆಲ್ಲದ ಬಾಗೇವಾಡಿಯಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದ ಅವರು, ಒಂದು ಸ್ಥಾನಕ್ಕೆ ನಡೆದ ಚುನಾವಣೆಯಿಂದ ಸಂಘಕ್ಕೆ ಅಂದಾಜು 2 ಲಕ್ಷ ರೂ.ವೆಚ್ಚ ಆಗಿರಬಹುದು. ಇದು ಸಂಘಕ್ಕೆ ನಷ್ಟವಾಗುವ ಜತೆಗೆ ಗ್ರಾಮಸ್ಥರು ಮತ್ತು ಸದಸ್ಯರಲ್ಲಿ ವೈಮನಸ್ಸಿಗೆ ಕಾರಣವಾಯಿತು ಎಂದು ಬೇಸರ ವ್ಯಕ್ತಪಡಿಸಿದರು.

    ಗ್ರಾಪಂ, ತಾಪಂ, ಜಿಪಂ ಹಾಗೂ ವಿಧಾನಸಭೆ, ಲೋಕಸಭಾ ಚುನಾವಣೆಯಲ್ಲಿ ರಾಜಕೀಯ ಮಾಡಲು ಎಲ್ಲರಿಗೂ ಸ್ವಾತಂತ್ರ್ಯವಿದೆ. ಇಂತಹ ಚುನಾವಣೆಗಳಲ್ಲಿ ಮುಕ್ತವಾಗಿ ರಾಜಕಾರಣ ಮಾಡಿದರೆ ಯಾರಿಗೂ ನಷ್ಟವಾಗುವುದಿಲ್ಲ. ಆದರೆ, ಸಹಕಾರಿ ಸಂಘ-ಸಂಸ್ಥೆಗಳಲ್ಲಿ ಚುನಾವಣೆ ಮಾಡಿದರೆ ನಾಡಿಗೆ ಅನ್ನ ನೀಡುವ ಅನ್ನದಾತನಿಗೆ ಅನ್ಯಾಯ ಮಾಡಿದಂತಾಗುತ್ತದೆ ಎಂಬುದನ್ನು ಪ್ರತಿಯೊಬ್ಬರೂ ಗಮನದಲ್ಲಿ ಇಟ್ಟುಕೊಳ್ಳಬೇಕು ಎಂದು ಸಲಹೆ ನೀಡಿದರು. ಸಂಘದ ಅಭಿವೃದ್ಧಿ ಜತೆಗೆ ರೈತನಿಗೆ ಬೇಕಾದ ಆರ್ಥಿಕ ಕ್ಷಮತೆಗಾಗಿ ಎಲ್ಲ ಸಹಾಯ-ಸಹಕಾರವನ್ನು ನಾನು ಮತ್ತು ನನ್ನ ಸಹೋದರ ಸಚಿವ ಉಮೇಶ ಕತ್ತಿ ನೀಡಲು ಸಿದ್ಧ ಎಂದರು.

    10 ಸ್ಥಾನಕ್ಕೆ ಅವಿರೋಧ ಆಯ್ಕೆ: 2022 ರಿಂದ ಮುಂದಿನ ಐದು ವರ್ಷಗಳ ಅವಧಿಗೆ ಸಂಘದ ನಿರ್ದೇಶಕ ಮಂಡಳಿಗೆ ಚುನಾವಣೆ ಘೋಷಣೆಯಾಗಿತ್ತು. ವಿದ್ಯುತ್ ಸಹಕಾರಿ ಸಂಘದ ನಿರ್ದೇಶಕ ಪೃಥ್ವಿ ರಮೇಶ ಕತ್ತಿ ಮತ್ತು ಗ್ರಾಮದ ಹಿರಿಯರ ಸಮ್ಮುಖದಲ್ಲಿ ನಡೆದ ಮಾತುಕತೆಯಿಂದ 11 ಸ್ಥಾನಗಳ ಪೈಕಿ 10ಕ್ಕೆ ಅವಿರೋಧ ಆಯ್ಕೆ ಜರುಗಿತು. ಆದರೆ, ಬಿನ್ ಸಾಲಗಾರ ಕ್ಷೇತ್ರಕ್ಕೆ ಒಮ್ಮತ ಮೂಡದ್ದರಿಂದ ಚುನಾವಣೆ ನಡೆದು ಮಹಾಂತೇಶ ಬಸಗೌಡ ಮಗೆಣ್ಣವರ ಆಯ್ಕೆಯಾದರು.

    ನೂತನ ನಿರ್ದೇಶಕರಾದ ಜಿನಗೌಡ ಇಮಗೌಡನವರ, ಕಲಗೌಡ ಮಲಗೌಡನವರ, ಕೆಂಪಣ್ಣ ವಾಸೇದಾರ, ದುಂಡಪ್ಪ ಮರೆಣ್ಣವರ, ಬಲರಾಮ ಬೋನಿ, ಕಾಶವ್ವ ಮೆಟಗುಡ್ಲಿ, ಶ್ರೀಮಂತಿ ಚೌಗಲಾ, ಸಪುರಾಬೇಗಂ ಮುಲ್ಲಾ, ಬಾಳಾಸಾಹೇಬ ದೇಸಾಯಿ, ಶಿವಪ್ಪ ದೊಡಮನಿ, ಮಹಾಂತೇಶ ಮಗೆಣ್ಣವರ ಹಾಗೂ ಹಿರಿಯರು, ಜನಪ್ರತಿನಿಧಿಗಳಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts