More

    ಸವದತ್ತಿ ಪುರಸಭೆ ಬಾಗಿಲು ಹಾಕಿ ಪ್ರತಿಭಟನೆ

    ಸವದತ್ತಿ, ಬೆಳಗಾವಿ: ಕುಡಿಯುವ ನೀರು, ರಸ್ತೆ ಸೇರಿ ವಿವಿಧ ಬೇಡಿಕೆಗಳನ್ನೊಳಗೊಂಡ ತಮ್ಮ ಮನವಿ ಸ್ವೀಕರಿಸಲು ನಿರಾಕರಿಸಿದ ಇಲ್ಲಿನ ಪುರಸಭೆ ಸಿಬ್ಬಂದಿ ವರ್ತನೆ ಖಂಡಿಸಿದ ಸಾರ್ವಜನಿಕರು ಅವರನ್ನು ಕಚೇರಿಯಿಂದ ಹೊರದಬ್ಬಿ ಬಾಗಿಲು ಹಾಕಿ ಮಂಗಳವಾರ ಪ್ರತಿಭಟನೆ ನಡೆಸಿದರು.

    ಪ್ರತಿಭಟನಾಕಾರರು ಮಾತನಾಡಿ, ಸ್ಮಶಾನಗಳಲ್ಲಿ ರಾತ್ರಿ ವಿದ್ಯುತ್ ವ್ಯವಸ್ಥೆ ಇಲ್ಲದ್ದರಿಂದ ಶವ ಸಂಸ್ಕಾರಕ್ಕೆ ತೊಂದರೆಯಾಗುತ್ತಿದೆ. ಸ್ವಚ್ಛತೆಗೆ ಆದ್ಯತೆ ನೀಡುತ್ತಿಲ್ಲವೆಂದು ಹಲವು ಬಾರಿ ಮನವಿ ಸಲ್ಲಿಸಿದರೂ ಸ್ಪಂದಿಸುತ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

    ಸಮೀಪದಲ್ಲೇ ಮಲಪ್ರಭೆ ಹರಿಯುತ್ತಿದ್ದರೂ ಪಟ್ಟಣದಲ್ಲಿ ನೀರಿಗೆ ಹಾಹಾಕಾರವಿದೆ. 6ರಿಂದ 8 ದಿನಗಳಿಗೊಮ್ಮೆ ನೀರು ಬಿಡುತ್ತಾರೆ. ಕಳೆದ ಕೆಲ ವರ್ಷಗಳಿಂದ 24/7 ನೀರು ಯೋಜನೆ ಮಂಜೂರಾಗಿ ಅನುಮೋದನೆಗೊಳ್ಳತ್ತಲೇ ಇದೆ. ಇದುವರೆಗೂ ಜಾರಿಗೆ ಬಂದಿಲ್ಲ.

    ಈ ನಡುವೆ ಯೋಜನೆಯ ಲಾಭವನ್ನು ಯಾರು ಪಡೆಯುತ್ತಿದ್ದಾರೆ ಎಂದು ಪುರಸಭೆ ಮುಖ್ಯಾಧಿಕಾರಿ ಪ್ರಕಾಶ ಚನ್ನಪ್ಪವರ ಮತ್ತು ಅಧ್ಯಕ್ಷ ರಾಜಶೇಖರ ಕಾರದಗಿ ಅವರನ್ನು ಸಾರ್ವಜನಿಕರು ತರಾಟೆಗೆ ತೆಗೆದುಕೊಂಡರು.

    ಪಟ್ಟಣದ ಚರಂಡಿಗಳು ತ್ಯಾಜ್ಯದಿಂದ ತುಂಬಿ ದುರ್ನಾತ ಬೀರುತ್ತಿವೆ. ಇದರಿಂದ ಹಂದಿಗಳ ಉಪಟಳ ಹೆಚ್ಚಾಗಿದ್ದು, ಸ್ವಚ್ಛತೆ ಇಲ್ಲದಾಗಿದೆ. ಅತಿವೃಷ್ಟಿಯಿಂದ ಹಾನಿಗೀಡಾದ ಮನೆಗಳಿಗೆ ಇದುವರೆಗೂ ಪರಿಹಾರ ದೊರೆತಿಲ್ಲ.

    ಅಧಿಕಾರಿಗಳ ಮೌನ ಜನರಿಗೆ ಅನ್ಯಾಯ ಮಾಡುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿ, ಒಂದು ತಿಂಗಳಲ್ಲಿ ಎಲ್ಲ ನ್ಯೂನತೆ ಸರಿಪಡಿಸದಿದ್ದಲ್ಲಿ ನಿರಾಶ್ರಿತರೆಲ್ಲ ಸೇರಿ ಪುರಸಭೆ ಎದುರು ವಾಸ್ತವ್ಯ ಹೂಡುತ್ತೇವೆ ಎಂದು ಎಚ್ಚರಿಸಿದರು.

    ಪುರಸಭೆ ಮುಖ್ಯಾಧಿಕಾರಿ ಪ್ರಕಾಶ ಚನ್ನಪ್ಪನವರ ಮಾತನಾಡಿ, ವಾರದಲ್ಲಿ ಸ್ಮಶಾನದಲ್ಲಿ ಮೂಲಸೌಲಭ್ಯ ಕಲ್ಪಿಸುವ ಕುರಿತು ಕ್ರಮವಹಿಸಲಾಗುವುದು. ಎಲ್ಲ ಸಮಸ್ಯೆ ಬಗೆಹರಿಸಲು ಪ್ರಯತ್ನಿಸಲಾಗುವುದು ಎಂದು ಭರವಸೆ ನೀಡಿದರು.

    ಬಸವರಾಜ ಕಪ್ಪಣ್ಣವರ, ಶಂಕರ ಹೆಬ್ಬಳ್ಳಿ, ಶಂಕರ ಇಜಂತಕರ, ಬಿ.ಎನ್. ಪ್ರಭುನವರ, ಅಲ್ಲಮಪ್ರಭು ಪ್ರಭುನವರ, ಮುತ್ತು ಬಿರಾಜನವರ, ಗಿರೀಶ ಅಣ್ಣಿಗೇರಿ, ನಾಗಪ್ಪ ಪ್ರಭುನವರ, ಸೋಮಲಿಂಗ ಬೆಳವಡಿ, ಮಹಾರಾಜಗೌಡ ಪಾಟೀಲ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts