More

    ಸರ್ಕಾರ ಸ್ಮಾರ್ಟ್ ವಿಲೇಜ್‌ಗಳ ಬಗ್ಗೆಯೂ ಯೋಚಿಸಲಿ

    ಪಾಂಡವಪುರ: ಸದನದಲ್ಲಿ ಕುಳಿತು ಸ್ಮಾರ್ಟ್ ಸಿಟಿ ಬಗ್ಗೆ ಮಾತನಾಡುವ ನಾವು ಸ್ಮಾರ್ಟ್ ವಿಲೇಜ್‌ಗಳ ಬಗ್ಗೆ ಯೋಚಿಸುತ್ತಿಲ್ಲ ಎಂದು ಮೇಲುಕೋಟೆ ಕ್ಷೇತ್ರದ ಶಾಸಕ ದರ್ಶನ್ ಪುಟ್ಟಣ್ಣಯ್ಯ ಸದನದಲ್ಲಿ ಗಂಭೀರ ಚರ್ಚೆ ನಡೆಸಿದರು.
    ಬಜೆಟ್ ಮೇಲಿನ ಚರ್ಚೆ ವೇಳೆ ವಿಷಯ ಪ್ರಸ್ತಾಪಿಸಿ ಅವರು ಮಾತನಾಡಿ, ಇಷ್ಟು ವರ್ಷ ಕಳೆದರೂ ಸ್ಮಾರ್ಟ್ ಸಿಟಿಗಳ ಆಲೋಚನೆ ಮತ್ತು ಚರ್ಚೆಯಲ್ಲೇ ನಾವು ಕಾಲ ಕಳೆಯುತ್ತಿದ್ದೇವೆ. ಸ್ವಾತಂತ್ರ್ಯ ಬಂದು ಇಷ್ಟು ವರ್ಷವಾದರೂ ಹಳ್ಳಿಗಳು ಇದ್ದ ಸ್ಥಿತಿಯಲ್ಲೇ ಇರಬೇಕೆ? ಸ್ಮಾರ್ಟ್ ವಿಲೇಜ್ ಬಗ್ಗೆ ಸರ್ಕಾರ ಯಾಕೆ ಗಮನ ಹರಿಸಿಲ್ಲ ಎಂದು ಪ್ರಶ್ನಿಸಿದರು.
    ಸಿಲಿಕಾನ್ ಸಿಟಿಯಲ್ಲಿ ಕುಳಿತು ಸರ್ಕಾರಿ ಕಚೇರಿಗಳ ಸರ್ವರ್ ಡೌನ್ ಸಮಸ್ಯೆ ಬಗ್ಗೆ ಚರ್ಚೆ ಮಾಡುವ ಬದಲು ಸಮಸ್ಯೆಯ ಪರಿಹಾರಕ್ಕೆ ಸೂಕ್ತ ಮಾರ್ಗಗಳನ್ನು ಕಂಡು ಕೊಳ್ಳಬೇಕಾದ ಅವಶ್ಯಕತೆ ಇದೆ ಎಂದರು.
    ತಾಲೂಕು ಕಚೇರಿ, ತಾಲೂಕು ಪಂಚಾಯಿತಿ, ಗ್ರಾಪಂ ಪಂಚಾಯಿತಿ, ಗ್ರಾಮ ಒನ್ ಹೀಗೆ ಹಲವು ಕ್ರಮಗಳಲ್ಲಿ ಸರ್ಕಾರಿ ಸವಲತ್ತುಗಳನ್ನು ಪಡೆಯಲು ನಾಗರಿಕರು ಗಂಟೆಗಟ್ಟಲೆ ಸರತಿ ಸಾಲಿನಲ್ಲಿ ಕಾಯ್ದು ನಿಲ್ಲಬೇಕಿದೆ. ವಿಶ್ವದ ಸಾಕಷ್ಟು ದೇಶಗಳ ಸರ್ವರ್‌ಗಳನ್ನು ನಿಯಂತ್ರಿಸುವ ಸಾಮರ್ಥ್ಯವಿರುವ ನಮಗೆ ನಮ್ಮಲ್ಲಿನ ಸಮಸ್ಯೆ ನಿವಾರಿಸಿಕೊಳ್ಳಲು ಸಾಧ್ಯವಾಗಿಲ್ಲ. ಸರ್ವರ್ ಸಮಸ್ಯೆಯಿಂದ ಜನ ರೋಸಿ ಹೋಗಿದ್ದಾರೆ. ಹೀಗಾಗಿ ಸರ್ಕಾರಿ ಸೇವೆ ಪಡೆಯಲು ಹೈರಾಣಾಗುತ್ತಿರವ ಜನರಿಗೆ ಸಮಸ್ಯೆಯಿಂದ ಮುಕ್ತಿ ನೀಡಬೇಕಿದೆ. ಇದಕ್ಕಾಗಿ ಸರ್ಕಾರ ಸರ್ವರ್‌ಗಳ ದೋಷ ಸರಿಪಡಿಸಲು ಹೆಚ್ಚಿನ ಹಣ ವಿನಿಯೋಗಿಸಬೇಕೆಂದು ಸದನದ ಗಮನ ಸೆಳೆದರು.
    ನೀರಾವರಿ, ಶಿಕ್ಷಣ ಮತ್ತು ಆರೋಗ್ಯ ಕ್ಷೇತ್ರಗಳಿಗೆ ಪ್ರಸಕ್ತ ಬಜೆಟ್‌ನಲ್ಲಿ ಸರ್ಕಾರ ನೀಡಿರುವ ಅನುದಾನದ ಪ್ರಮಾಣದಲ್ಲಿ ಶೇ.17ರಷ್ಟು ಕಡಿತವಾಗಿದೆ. ರಾಜ್ಯ ಸರ್ಕಾರ ಘೋಷಣೆ ಮಾಡಿರುವ ಗ್ಯಾರಂಟಿಗಳ ಯೋಜನೆ ಜಾರಿ ಮಾಡಲು ಹಣದ ಅವಶ್ಯಕತೆ ಇರುವ ಕಾರಣ ಈ ವ್ಯತ್ಯಾಸವಾಗಿದೆ ಎಂಬ ಅರಿವು ನಮಗೂ ಇದೆ. ಬೇರೆ ರಾಜ್ಯಗಳಿಗೆ ಹೋಲಿಸಿದರೆ ಈ ಕ್ಷೇತ್ರಗಳು ನೀಡಿರುವ ಅನುದಾನದ ಪ್ರಮಾಣ ತೀರ ಕಡಿಮೆ. ಈ ಕ್ಷೇತ್ರಗಳಿಗೆ ಹೆಚ್ಚು ಹೂಡಿಕೆ ಮಾಡಿದರೆ ಜನ ಆರೋಗ್ಯ ಮತ್ತು ಶಿಕ್ಷಣಕ್ಕಾಗಿ ಖಾಸಗಿ ಕ್ಷೇತ್ರಗಳಿಗೆ ಹಣ ವ್ಯಯಿಸುವುದು ತಪ್ಪುತ್ತದೆ. ಸರ್ಕಾರ ಈ ನಿಟ್ಟಿನಲ್ಲಿ ಗಮನ ಹರಿಸಬೇಕು ಎಂದು ವಿಚಾರ ಮಂಡಿಸಿದರು.

    ರಾಜ್ಯದಲ್ಲಿರುವ 1400 ಕೃಷಿ ಉತ್ಪನ್ನ ಘಟಕ (ಎಫ್‌ಪಿಒ)ಗಳ ಪೈಕಿ ಶೇ.95 ರಷ್ಟು ಘಟಕಗಳು ಸ್ವತಂತ್ರವಾಗಿ ಕೆಲಸ ನಿರ್ವಹಿಸುತ್ತಿಲ್ಲ. ಬಹುತೇಕ ಘಟಕಗಳು ಬೃಹತ್ ಸಂಸ್ಥೆಗಳ ಪರವಾಗಿ ಕಾರ್ಯ ನಿರ್ವಹಿಸುತ್ತಿವೆ. ಹೀಗಾಗಿ, ಇವುಗಳ ಉತ್ಪಾದನೆ ಮತ್ತು ಸಂಸ್ಕರಣೆಗಳ ಮೇಲೆ ಸರ್ಕಾರ ನಿಗಾ ಇಡಬೇಕು. ಜತೆಗೆ ಘಟಕಗಳ ಅಭಿವೃದ್ಧಿಗೆ ಸರ್ಕಾರ ಮೀಸಲಿರಿಸಿರುವ ಹಣ ತುಂಬ ಕಡಿಮೆಯಾಗಿದೆ. ರಾಜ್ಯದಲ್ಲಿ ಮುಂಗಾರು ವೈಫಲ್ಯದ ಕಾರಣ ಈ ವರ್ಷದಲ್ಲಿ 42 ರೈತರು ಆತ್ಮಹತ್ಯೆಗೆ ಶರಣಾಗಿದ್ದಾರೆ. ರೈತರು ಎರಡೆರಡು ಬಾರಿ ಬಿತ್ತನೆ ಮಾಡಿ ಕೈಸುಟ್ಟುಕೊಂಡಿರುವ ಪರಿಣಾಮ ಆತ್ಮಹತ್ಯೆ ಪ್ರಕರಣಗಳು ಹೆಚ್ಚುತ್ತಿದೆ. ಸರ್ಕಾರ ಈ ಬಗ್ಗೆ ಗಮನ ಹರಿಸಿ ವಿಶೇಷ ಪ್ಯಾಕೇಜ್ ಜಾರಿ ಮಾಡುವುದರ ಜತೆಗೆ ರೈತರ ಸಾಲ ವಸೂಲಾತಿಯನ್ನು ತಕ್ಷಣ ನಿಲ್ಲಿಸಬೇಕು ಎಂದು ಸರ್ಕಾರಕ್ಕೆ ಮನದಟ್ಟು ಮಾಡಿಕೊಟ್ಟರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts