More

    ಸರ್ಕಾರ ಸೇವೆ ಕಾಯಂಗೊಳಿಸಲಿ

    ಬೆಳಗಾವಿ: ರಾಜ್ಯಾದ್ಯಂತ ಹಲವು ವರ್ಷಗಳಿಂದ ಗುತ್ತಿಗೆ ಆಧಾರದಲ್ಲಿ ಸೇವೆ ಸಲ್ಲಿಸುತ್ತಿರುವ ಶುಶ್ರೂಷಕ ಹಾಗೂ ಶುಶ್ರೂಷಕಿಯರ ಸೇವೆಯನ್ನು ಕಾಯಂಗೊಳಿಸುವುದು, ಸಮಾನ ಕೆಲಸಕ್ಕೆ ಸಮಾನ ವೇತನ ನೀಡುವುದು ಸೇರಿ ವಿವಿಧ ಬೇಡಿಕೆ ಈಡೇರಿಸುವಂತೆ ಒತ್ತಾಯಿಸಿ ರಾಜ್ಯ ಆರೋಗ್ಯ ಇಲಾಖೆಯ ಶುಶ್ರೂಷಕ, ಶುಶ್ರೂಷಕಿಯರ ಗುತ್ತಿಗೆ ನೌಕರರ ಕ್ಷೇಮಾಭಿವೃದ್ಧಿ ಸಂಘದ ನೇತೃತ್ವದಲ್ಲಿ ಜಿಲ್ಲಾಡಳಿತದ ಮೂಲಕ ಮುಖ್ಯಮಂತ್ರಿಗೆ ಮನವಿ ರವಾನಿಸಲಾಯಿತು.

    ಶುಶ್ರೂಷಕ ಹಾಗೂ ಶುಶ್ರೂಷಕಿಯರು ವಿವಿಧ ವಿಭಾಗಗಳಲ್ಲಿ ಹಲವು ವರ್ಷಗಳಿಂದ ಕಡಿಮೆ ಸಂಬಳದಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ರಾಜ್ಯಾದ್ಯಂತ ಕಾಯಂ ಸಿಬ್ಬಂದಿ ನಿರ್ವಹಿಸಿದಷ್ಟೇ ಕೆಲಸವನ್ನು ಅತಿ ಕಡಿಮೆ ಸಂಬಳದಲ್ಲಿ ನಿರ್ವಹಿಸುತ್ತ ಬಂದಿದ್ದೇವೆ. ಸದ್ಯ 13 ಸಾವಿರ ರೂ. ನಿಗದಿಪಡಿಸಿದ್ದು, ಈ ಪೈಕಿ ಕೈಗೆ 11 ಸಾವಿರ ರೂ. ಸಿಗುತ್ತದೆ. ಹೀಗಾಗಿ ಜೀವನ ನಿರ್ವಹಣೆ ಕಷ್ಟವಾಗುತ್ತಿದೆ. ಕರೊನಾ ಸಂಕಷ್ಟ ಕಾಲದಲ್ಲಿ ಜೀವವನ್ನು ಪಣಕ್ಕಿಟ್ಟು ಸೇವೆ ನೀಡಿದ್ದೇವೆ.

    ಸರ್ಕಾರದ ಎಲ್ಲ ಮಾರ್ಗಸೂಚಿ, ಸಲಹೆಗಳನ್ನು ತಪ್ಪದೆ ಪಾಲಿಸಿಕೊಂಡು ಬಂದಿದ್ದೇವೆ. ಇನ್ನು ಮುಂದೆ ಕೂಡ ಇಲಾಖೆ ಹಾಗೂ ಸರ್ಕಾರದೊಂದಿಗೆ ಎಂತಹ ಕಷ್ಟದ ಸಂದರ್ಭದಲ್ಲೂ ಸೇವೆ ಸಲ್ಲಿಸಲು ಬದ್ಧರಾಗಿದ್ದೇವೆ. ಈ ಸೇವೆ ಬಿಟ್ಟು ಯಾವುದೇ ವೃತ್ತಿ ನಮಗೆ ಬರುವುದಿಲ್ಲ. ಆದ್ದರಿಂದ ಸೇವೆ ಕಾಯಂ ಮಾಡಬೇಕು. ಪೌರ ಕಾರ್ಮಿಕರಿಗೆ ಮತ್ತು 108 ಸಿಬ್ಬಂದಿಗೆ ನೀಡುತ್ತಿರುವ ವೇತನವನ್ನು ನಮಗೂ ನೀಡಬೇಕು. ನಮ್ಮ ಸೇವೆ ಕಾಯಂ ಮಾಡಿಕೊಳ್ಳುವವರೆಗೆ ಗುತ್ತಿಗೆ-ಹೊರಗುತ್ತಿಗೆ ಆಧಾರದಲ್ಲಾಗಲಿ ಅಥವಾ ನೇರ ನೇಮಕಾತಿಯಲ್ಲಾಗಲಿ ಶುಶ್ರೂಷಕ, ಶುಶ್ರೂಷಕಿಯರನ್ನು ನೇಮಿಸಿಕೊಳ್ಳಬಾರದು. ನಮ್ಮ ಬೇಡಿಕೆಗಳಿಗೆ ಸ್ಪಂದಿಸದಿದ್ದರೆ ರಾಜ್ಯಾದ್ಯಂತ ಕೆಲಸ ನಿರ್ವಹಿಸುತ್ತಿರುವ ಶುಶ್ರೂಷಕ, ಶುಶ್ರೂಷಕಿಯರು ಉಗ್ರ ಹೋರಾಟ ಹಮ್ಮಿಕೊಳ್ಳಬೇಕಾಗುತ್ತದೆ ಎಂದು ಮನವಿ ಮೂಲಕ ಎಚ್ಚರಿಸಿದ್ದಾರೆ.

    ಸಂಘದ ಅಧ್ಯಕ್ಷೆ ರೂಪಾದೇವಿ ಬಾಳೇಕುಂದ್ರಿ, ಸುಜಾತಾ ಗಂಡಗೋಲೆ, ಫಕೀರವ್ವ ಪೂಜೇರ, ಅನಿತಾ ಸಿಂಗೆ, ಶೈಲಾ ಹುಲಕುಂದ, ಗೀತಾ ಸಿಂಗೆಣ್ಣವರ, ಲಕ್ಷ್ಮೀ ಮಾದುಬಣ್ಣವರ, ಗೀತಾ ಬಾವಿಕಟ್ಟಿ, ಉಮಾದೇವಿ ಕರಗಣ್ಣವರ, ಶೋಭಾ ಗಾಣಗಿ, ಉಮಾ ಕಾಂಬಳೆ, ಸಯೀದಾ ಇನಾಮದಾರ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts