More

    ಸರ್ಕಾರಿ ನೌಕರರ ಜಿಲ್ಲಾ ಕ್ರೀಡಾಕೂಟಕ್ಕೆ ತೆರೆ 

    ದಾವಣಗೆರೆ: ಜಿಲ್ಲಾ ಕ್ರೀಡಾಂಗಣದಲ್ಲಿ ಎರಡು ದಿನಗಳ ಕಾಲ ಹಮ್ಮಿಕೊಂಡಿದ್ದ ರಾಜ್ಯ ಸರ್ಕಾರಿ ನೌಕರರ ದಾವಣಗೆರೆ ಜಿಲ್ಲಾ ಮಟ್ಟದ ಕ್ರೀಡಾಕೂಟ ಮತ್ತು ಸರ್ಕಾರಿ ನೌಕರರ ಸಮುದಾಯ ಭವನದಲ್ಲಿ ಆಯೋಜಿಸಿದ್ದ ಸಾಂಸ್ಕೃತಿಕ ಸ್ಪರ್ಧೆಗಳಿಗೆ ಮಂಗಳವಾರ ಸಂಜೆ ತೆರೆ ಬಿದ್ದಿತು.
    ಜಿಲ್ಲಾಡಳಿತ, ಜಿಪಂ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಹಾಗೂ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ಸಹಯೋಗದಲ್ಲಿ ಕ್ರೀಡಾಕೂಟ ಆಯೋಜಿಸಲಾಗಿತ್ತು. ಸಮಾರೋಪದಲ್ಲಿ ವಿಜೇತರಿಗೆ ಬಹುಮಾನ ವಿತರಿಸಲಾಯಿತು.
    ಕ್ರೀಡೆ, ಸಾಂಸ್ಕೃತಿಕ ಸೇರಿ 170 ವಿಧದ ಸ್ಪರ್ಧೆಗಳಲ್ಲಿ 1100ಕ್ಕೂ ಹೆಚ್ಚು ಸರ್ಕಾರಿ ನೌಕರರು ಭಾಗಿಯಾಗಿದ್ದರು. ಪ್ರಥಮ ಬಹುಮಾನ ಪಡೆದ ನೌಕರರು ರಾಜ್ಯ ಮಟ್ಟದ ಕ್ರೀಡಾಕೂಟ, ಸಾಂಸ್ಕೃತಿಕ ಸ್ಪರ್ಧೆಗಳಿಗೆ ಆಯ್ಕೆಯಾಗಲಿದ್ದಾರೆ ಎಂದು ಸರ್ಕಾರಿ ನೌಕರರ ಸಂಘದ ಜಿಲ್ಲಾಧ್ಯಕ್ಷ ಬಿ. ಪಾಲಾಕ್ಷಿ ತಿಳಿಸಿದರು.
    ಗುಂಪು ಆಟಗಳ ಪೈಕಿ ಕಬಡ್ಡಿ ಕ್ರೀಡೆಯಲ್ಲಿ ಪುರುಷರ ವಿಭಾಗದಲ್ಲಿ ದಾವಣಗೆರೆಯ ನಾಗರಾಜ್ ಮತ್ತು ತಂಡ, ಮಹಿಳೆಯರ ವಿಭಾಗದಲ್ಲಿ ಅನು ಮತ್ತು ಅವರ ತಂಡ ಬಹುಮಾನ ಗಿಟ್ಟಿಸಿತು. ಕ್ರಿಕೆಟ್ ಪಂದ್ಯದಲ್ಲಿ ಸಿ.ಬಿ.ನಾಗರಾಜ್, ಅಣ್ಣಪ್ಪ ಮತ್ತು ತಂಡ ಪ್ರಥಮ ಸ್ಥಾನ ಪಡೆದುಕೊಂಡಿತು.
    ಸಾಮೂಹಿಕ ಸಾಂಸ್ಕೃತಿಕ ಸ್ಪರ್ಧೆಗಳ ಪೈಕಿ ಜಾನಪದ ನೃತ್ಯದಲ್ಲಿ ಪ್ರೇಮಾ ತಂಡದವರು, ಜಾನಪದ ಗೀತೆಯಲ್ಲಿ ಕಲ್ಪನಾ ಸಂಗಡಿಗರು ಹಾಗೂ ಕಿರುನಾಟಕ ಸ್ಪರ್ಧೆಯಲ್ಲಿ ಸುಮತಿ ಜಯಪ್ಪ ಮತ್ತು ತಂಡದವರು ಪ್ರಥಮ ಬಹುಮಾನ ಪಡೆದರು.
    ಜಿಲ್ಲಾ ಕಾರ್ಯದರ್ಶಿ ಸಿ. ಗುರುಮೂರ್ತಿ, ಗೌರವಾಧ್ಯಕ್ಷ ಡಾ.ಡಿ.ಉಮೇಶ್, ಬಿ.ಆರ್.ಸ್ವಾಮಿ, ಕ್ರೀಡಾ ಕಾರ್ಯದರ್ಶಿಗಳಾದ ಪುನೀತ್ ಶಂಕರ್, ಡಿ.ಎನ್. ಗಣೇಶ್, ಸಾಂಸ್ಕೃತಿಕ ಕಾರ್ಯದರ್ಶಿಗಳಾದ ಮಲ್ಲಿಕಾರ್ಜುನಯ್ಯ ಕೆ.ಆರ್, ಕಲ್ಪನಾ, ಬಿ.ಸಿ.ರವಿಚಂದ್ರ, ಕೆಎಂಎಚ್ ಸ್ವಾಮಿ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts