More

    ಸರ್ಕಾರದಿಂದ ಪರಿಹಾರ ಕೊಡಿಸುವೆ

    ಚಿಂಚೋಳಿ: ನಾಗರಾಳ ಜಲಾಶಯದಿಂದ ತಾಲೂಕಿನಲ್ಲಿ ಸಾಕಷ್ಟು ಹಾನಿ ಸಂಭವಿಸಿದ್ದು, ಸಮಗ್ರ ಪರಿಶೀಲನೆ ನಡೆಸಲಾಗುತ್ತಿದೆ. ವರದಿ ತಯಾರಿಸಿ, ಸರ್ಕಾರಕ್ಕೆ ಸಲ್ಲಿಸುವ ಮೂಲಕ ಹಾನಿಗೊಳಗಾದವರಿಗೆ ಅಗತ್ಯ ಪರಿಹಾರ ದೊರಕಿಸಿಕೊಡಲು ಶ್ರಮಿಸುವೆ ಎಂದು ಶಾಸಕ ಡಾ. ಅವಿನಾಶ ಜಾಧವ್ ಭರವಸೆ ನೀಡಿದರು.
    ಡ್ಯಾಮ್ ನೀರಿನಿಂದ ಪ್ರವಾಹ ಉಂಟಾಗಿ ಹಾನಿ ಸಂಭವಿಸಿದ ಚಿಂಚೋಳಿ, ಚಂದಾಪುರ, ನೀಮಾಹೊಸಳ್ಳಿ, ಗೌಡನಹಳ್ಳಿ, ಗಾರಂಪಳ್ಳಿ, ಕನಕಪುರ, ತಾದಲಾಪುರ, ಚಿಮ್ಮನಚೋಡ, ನಾಗರಾಳ ಸೇರಿ ವಿವಿಧ ಹಳ್ಳಿಗಳಿಗೆ ಬುಧವಾರ ಭೇಟಿ ನೀಡಿದ ಅವರು, ನಾಗರಾಳ ಜಲಾಶಯಕ್ಕೆ ಒಳ ಹರಿವು ಹೆಚ್ಚಾಗಿದ್ದು, ಹೀಗಾಗಿ ಏಕಾಏಕಿ ನೀರು ಹೊರಗೆ ಬಿಡಲಾಗಿದೆ. ಇದರಿಂದ ತಾಲೂಕಿನಲ್ಲಿ ಪ್ರವಾಹ ಉಂಟಾಗಿದೆ ಎಂದರು.
    ಪ್ರವಾಹದಿಂದ ಫಲವತ್ತಾದ ಮಣ್ಣು ಹಾಗೂ ಬೆಳೆ ಕೊಚ್ಚಿ ಹೋಗಿದೆ. ಮನೆಗಳಿಗೆ ನೀರು ನುಗ್ಗಿ ದಿನಸಿ ವಸ್ತುಗಳು, ಉಡುಪು, ವಿವಿಧ ಸಾಮಗ್ರಿಗಳು ನೀರು ಪಾಲಾಗಿವೆ. ಮುಂದೇನು ಮಾಡಬೇಕು ಎಂಬುದು ತೋಚದಂತಾಗಿದೆ ಎಂದು ಜನರು ಹಾಗೂ ರೈತರು ಅಳಲು ತೋಡಿಕೊಂಡರು. ಜಿಪಂ ಸದಸ್ಯ ಸಂಜೀವನ್ ಯಾಕಾಪುರ, ತಹಸೀಲ್ದಾರ್ ಅರುಣಕುಮಾರ ಕುಲಕರ್ಣಿ , ತಾಪಂ ಇಒ ಅನೀಲಕುಮಾರ ರಾಠೋಡ್, ಜಲಾಶಯ ಎಇಇ ಹಣಮಂತ ಪೂಜಾರಿ, ಪ್ರಮುಖರಾದ ಶರಣಪ್ಪ ತಳವಾರ, ಶಾಂತರೆಡ್ಡಿ ನರನಾಳ, ಚಂದ್ರಶೇಖರ ಗುತ್ತೇದಾರ್, ಬಂಡಾರೆಡ್ಡಿ, ಶ್ರೀಮಂತ ಕಟ್ಟಿಮನಿ, ಲಕ್ಷ್ಮಣ ಅವಂಟಿ, ಜಗನ್ನಾಥ ಇಟಗಿ, ಪವನ ಗೋಪನಪಳ್ಳಿ, ಭೀಮಶೆಟ್ಟಿ ಮುರುಡಾ, ಜಗದೀಶಸಿಂಗ್ ಠಾಕೂರ್, ಗೋಪಾಲ ಜಾಧವ್, ಶಿವಯೋಗಿ ರುಸ್ತುಂಪುರ, ಅಜಿಮೋದ್ದಿನ್, ಎಂ.ಎ. ಹುಸೇನ್, ಧನರಾಜ ಬೊಮ್ಮ, ಗೋವಿಂದರೆಡ್ಡಿ, ಪವನಕುಮಾರ ಮೇತ್ರಿ ಇತರರಿದ್ದರು.

    ಅಧಿಕಾರಿಗಳೊಂದಿಗೆ ತುರ್ತು ಸಭೆ
    ನಾಗರಾಳ ಜಲಾಶಯದ ಪ್ರವಾಸಿ ಮಂದಿರದಲ್ಲಿ ಡ್ಯಾಂ ಹಾಗೂ ತಾಲೂಕು ಅಧಿಕಾರಿಗಳ ಜತೆ ಶಾಸಕ ಡಾ. ಅವಿನಾಶ ಜಾಧವ್ ತುರ್ತು ಸಭೆ ನಡೆಸಿದರು. ಶಾಸಕ ಡಾ. ಜಾಧವ್ ಮಾತನಾಡಿ, ಚಿಮ್ಮನಚೋಡದಿಂದ ಜಟ್ಟೂರ್ವರೆಗೆ ನದಿ ಪಾತ್ರದಲ್ಲಿನ ಭೂಮಿ ಹಾಗೂ ಮನೆಗಳ ಸರ್ವೆ ಕಾರ್ಯ ನಡೆಸಬೇಕು. ಕಂದಾಯ, ಕೃಷಿ, ತೋಟಗಾರಿಕೆ, ತಾಲೂಕು ಪಂಚಾಯಿತಿ ಸೇರಿ ಸಂಬಂಧಿತ ಇಲಾಖೆಯಿಂದ ಜಂಟಿ ಸರ್ವೆ ನಡೆಸಿ ಸಮಗ್ರ ವರದಿ ಸಿದ್ಧಪಡಿಸಿ ಸರ್ಕಾರಕ್ಕೆ ಸಲ್ಲಿಸಬೇಕು ಎಂದು ತಾಕೀತು ಮಾಡಿದರು. ತಹಸೀಲ್ದಾರ್ ಅರುಣಕುಮಾರ ಕುಲಕರ್ಣಿ ಮಾತನಾಡಿ, ಈಗಾಗಲೇ ಶೇ.60 ಸರ್ವೆ ಕಾರ್ಯ ಆರಂಭವಾಗಿದ್ದು, ಶೀಘ್ರ ಸರ್ಕಾರಕ್ಕೆ ವರದಿ ಸಲ್ಲಿಸಲಾಗುವುದು ಎಂದು ಮಾಹಿತಿ ನೀಡಿದರು.

    ಜಲಾಶಯದಿಂದ ಏಕಾಏಕಿ ನೀರು ಬಿಟ್ಟು ಪರಿಣಾಮ ಹಾನಿಯಾಗಿದೆ. ಮುಖ್ಯಮಂತ್ರಿಗಳಿಗೆ, ಸಂಸದರಿಗೆ, ಜಿಲ್ಲಾಧಿಕಾರಿಗಳಿಗೆ ವಾಸ್ತವ ಸ್ಥಿತಿ ತಿಳಿಸಲಾಗಿದೆ. ಸಾರ್ವಜನಿಕರ ದೂರಿನ ಅನ್ವಯ ತನಿಖೆಗೆ ಈಗಾಗಲೇ ಜಿಲ್ಲಾಧಿಕಾರಿಗಳು ತಂಡ ರಚಿಸಿದ್ದಾರೆ. ವರದಿ ಬಂದ ನಂತರ ತಪ್ಪಿತಸ್ಥರ ವಿರುದ್ಧ ಕ್ರಮ ಜರುಗಲಿದೆ. ಯಾವುದೇ ಕಾರಣಕ್ಕೂ ತಪ್ಪಿತಸರಿಗೆ ಕ್ಷಮೇ ಇಲ್ಲ.
    | ಡಾ. ಅವಿನಾಶ ಜಾಧವ್, ಶಾಸಕ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts