More

    ಸರ್ಕಾರದಿಂದ ಜಲಮೂಲ ಸಂರಕ್ಷಣೆಗೆ ಕ್ರಮ

    ರಾಮನಗರ: ನೀರಿನ ಮಿತ ಬಳಕೆಯ ಜತೆಗೆ ನೀರಿನ ಮೂಲಗಳನ್ನು ಸಂರಕ್ಷಿಸುವ ಕೆಲಸವನ್ನು ಸರ್ಕಾರ ವಿವಿಧ ಯೋಜನೆಗಳ ಮೂಲಕ ಮಾಡುತ್ತಿದೆ ಎಂದು ಜಿಲ್ಲಾ ಪಂಚಾಯತಿ ಉಪಕಾರ್ಯದರ್ಶಿ ಟಿ. ಕೆ. ರಮೇಶ್ ಹೇಳಿದರು.


    ರಾಮನಗರ ಜಿಲ್ಲೆ, ಚನ್ನಪಟ್ಟಣ ತಾಲೂಕಿನ ತಗಚಗೆರೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹನುಮಂತ ದೇವಾಲಯ ಮುಂಭಾಗವಿರುವ ಅಮೃತ ಸರೋವರ ಕೆರೆಯ ಬಳಿ ಜಿಪಂ ಉಪ ಕಾರ್ಯದರ್ಶಿ ಟಿ.ಕೆ. ರಮೇಶ್ ನೀರಿನ ಸಂರಕ್ಷಣೆ ಕುರಿತು ಶುಕ್ರವಾರ ರೈತರೊಂದಿಗೆ ಸಂವಾದ ನಡೆಸುವ ಮೂಲಕ ರಾಷ್ಟ್ರೀಯ ರೈತ ದಿನಾಚರಣೆಯನ್ನು ಆಚರಿಸಿದರು.

    ಸಂವಾದದ ಕುರಿತು ಉದ್ದೇಶ ರೈತರಿಗೆ ಮಾಹಿತಿ ನೀಡಿದ ರಮೇಶ್, ಸರ್ಕಾರ ಜಲಮೂಲಗಳ ರಕ್ಷಣೆಗೆ ರೂಪಿಸಿರುವ ಯೋಜನೆಗಳನ್ನು ಚರ್ಚಿಸಿ ನೀರಿನ ರಕ್ಷಣೆ ಜತೆಗೆ ಸರ್ಕಾರದ ಯೋಜನೆಗಳನ್ನು ಕುರಿತು ನಿಮ್ಮ ಬಳಿಯೇ ಚರ್ಚಿಸಿ ಅಭಿಪ್ರಾಯ ಪಡೆದು ಅದರಂತೆ ಕೆಲಸ ರೂಪಿಸುವುದು ಕಾರ್ಯಕ್ರಮದ ಉದ್ದೇಶವಾಗಿದೆ ಎಂದರು.

    ನಂತರ ಕಿಸಾನ್ ದಿವಸ್ ರೈತ ಸಂವಾದವನ್ನು ಕುರಿತು ಮಾತನಾಡಿದ ಅವರು, ರೈತರ ಅನುಕೂಲಕ್ಕಾಗಿ ಸರ್ಕಾರ ಹಲವು ಯೋಜನೆಗಳನ್ನು ಜಾರಿ ಮಾಡಿದೆ. ನರೇಗಾ ಯೋಜನೆಯಡಿ ಪಂಚಾಯಿತಿ ಮಟ್ಟದಲ್ಲಿ ದನದ ಕೊಟ್ಟಿಗೆ, ಮೇಕೆ ಶೆಡ್, ಪೌಷ್ಟಿಕ ಕೈತೋಟ, ಇಂಗು ಗುಂಡಿ ಅಲ್ಲದೆ, ಅನುಷ್ಠಾನ ಇಲಾಖೆಗಳಿಂದ ಮಾವು, ತೆಂಗು, ಬಾಳೆ, ಸೀಬೆ ವಿವಿಧ ತೋಟಗಾರಿಕೆ ಬೆಳೆಗಳಿಗೂ ಅನುದಾನ ನೀಡಿ ರೈತರ ಬದುಕಿಗೆ ಆಸರೆಯಾಗಿವೆ. ಎಲ್ಲ ರೈತ ಕುಟುಂಬಗಳು ಈ ಯೋಜನೆಗಳ ಉಪಯೋಗ ಪಡೆದುಕೊಂಡಾಗ ಮಾತ್ರ ಸರ್ಕಾರದ ಯೋಜನೆಗಳಿಗೆ ಸಾರ್ಥಕತೆ ಸಿಕ್ಕಂತಾಗುತ್ತದೆ ಎಂದರು. ಹಾಗೂ ಗ್ರಾಮದಲ್ಲಿನ ಸಮಸ್ಯೆಗಳನ್ನು ಸ್ಥಳದಲ್ಲೇ ಆಲಿಸಿ ಪರಿಹರಿಸುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚಿಸಿದರು.


    ನೀರಿನ ಮಿತವಿಲ್ಲದ ಬಳಕೆ ಹಾಗೂ ಜಲ ಮೂಲಗಳ ಅಳಿಯುವಿಕೆಯಿಂದಾಗಿ ಭವಿಷ್ಯದಲ್ಲಿ ನೀರಿನ ಅಭಾವ ಎದುರಿಸಬೇಕಾಗುತ್ತದೆ. ಇದನ್ನು ಅರಿತು ಜನರು ಇಂದಿನಿಂದಲೇ ನೀರಿನ ಮಿತ ಬಳಕೆಯ ಜತೆಗೆ ಜಲಮೂಲಗಳನ್ನು ಸಂರಕ್ಷಣೆ ಮಾಡಬೇಕಿದೆ ಎಂದರು.

    ರೈತರ ಅನುಕೂಲಕ್ಕಾಗಿ ಸರ್ಕಾರ ರೂಪಿಸುವ (ಇ-ಶ್ರಮ್ ಕಾರ್ಡ್, ಆರೋಗ್ಯ ಕಾರ್ಡ್, ನರೇಗಾ ಜಾಬ್ ಕಾರ್ಡ್) ಮತ್ತಿತರ ಯೋಜನೆಗಳನ್ನು ತಿಳಿದು ಸದ್ಬಳಕೆ ಮಾಡಿಕೊಳ್ಳಬೇಕು ಎಂದು ತಿಳಿಸಿದರು.

    ತಾಲೂಕು ಸಹಾಯಕ ನಿರ್ದೇಶಕ ಸಿದ್ದಲಿಂಗಯ್ಯ ಮಾತನಾಡಿ, ಸಾರ್ವಜನಿಕ ಜಲಮೂಲಗಳ ಜತೆಗೆ ರೈತರು ವೈಯಕ್ತಿಕವಾಗಿಯೂ ಜಲ ಮೂಲಗಳನ್ನು ರಕ್ಷಿಸಬೇಕಿದೆ. ಹೊಲಗಳಲ್ಲಿ ಬದುಗಳ ನಿರ್ಮಾಣದಿಂದ ಮಳೆ ನೀರಿನ ಶೇಖರಣೆ ಮಾಡುವುದಲ್ಲದೆ, ತೋಟಗಾರಿಕೆ ಬೆಳೆ ಬೆಳೆಯುವುದು ವಿವಿಧ ಗಿಡಗಳನ್ನು ಹೊಲಗಳ ಬದಿಗಳಲ್ಲಿ ಬೆಳೆಸುವುದರಿಂದ ಮಣ್ಣಿನ ಸವಕಳಿ ತಪ್ಪಿಸುವುದು ಹಾಗೂ ವಿವಿಧ ರೀತಿಯಲ್ಲಿ ರೈತರು ನೀರಿನ ಸಂರಕ್ಷಣೆಯಲ್ಲಿ ಪಾಲ್ಗೊಳ್ಳಬಹುದುದಾಗಿದೆ ಎಂದರು.

    ಚನ್ನಪಟ್ಟಣ ತಾಲೂಕು ಪಂಚಾಯಿತಿ ಸಹಾಯಕ ನಿರ್ದೇಶಕ ಸಿದ್ದಲಿಂಗಯ್ಯ , ಪಿಡಿಒಗಳು, ಗ್ರಾಪಂ ಅಧ್ಯಕ್ಷರು, ಸದಸ್ಯರು, ತಾಲೂಕು ತಾಂತ್ರಿಕ ಸಂಯೋಜಕ ಸಚಿನ್, ತಾಂತ್ರಿಕ ಅಭಿಯಂತ ಮಂಜುನಾಥ್, ತಾಲೂಕು ಐಇಸಿ ಸಂಯೋಜಕಿ ಭವ್ಯ, ಬಿಎಫ್‌ಟಿ, ಗ್ರಾಮ ಕಾಯಕ ಮಿತ್ರರು, ಗ್ರಾಮ ಪಂಚಾಯತಿ ಕಾರ್ಯದರ್ಶಿಗಳು, ಗ್ರಾಮ ಪಂಚಾಯತಿ ಸಿಬ್ಬಂದಿಗಳು ಹಾಗೂ ಸ್ಥಳಿಯರು ಹಾಗೂ ರೈತರು ಭಾಗಿಯಾಗಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts