More

    ಪತ್ರಿಕಾ ವಿತರಕರ ಕಾರ್ಯ ಶ್ಲಾಘನೀಯ

    ವಿಜಯಪುರ: ಪತ್ರಿಕೆ ಸಂಸ್ಥೆಗಳು ಹಾಗೂ ಓದುಗರ ನಡುವೆ ಕೊಂಡಿಯಾಗಿ, ಚಳಿ, ಮಳೆ, ಗಾಳಿಯೆನ್ನದೇ ಸಕಾಲಕ್ಕೆ ಪತ್ರಿಕೆಗಳನ್ನು ಓದುಗರ ಮನೆಗೆ ತಲುಪಿಸುವ ಕಾರ್ಯವನ್ನು ಮಾಡುತ್ತಿರುವ ಪತ್ರಿಕಾ ವಿತರಕರ ಕಾರ್ಯ ಶ್ಲಾಘನೀಯ ಎಂದು ತುಳಸಿಗಿರೀಶ ಫೌಂಡೇಶನ್ ಅಧ್ಯಕ್ಷ ಡಾ. ಬಾಬು ರಾಜೇಂದ್ರ ನಾಯಿಕ ಹೇಳಿದರು.

    ನಗರದ ಪತ್ರಿಕಾ ಭವನದಲ್ಲಿ ತುಳಸಿಗಿರೀಶ ಫೌಂಡೇಶನ್ ವತಿಯಿಂದ ಅಂತಾರಾಷ್ಟ್ರೀಯ ಪತ್ರಿಕಾ ವಿತರಕರ ದಿನಾಚರಣೆ ನಿಮಿತ್ತ ಹಮ್ಮಿಕೊಂಡಿದ್ದ ಪತ್ರಿಕಾ ವಿತರಕರಿಗೆ ಸನ್ಮಾನ ಕಾರ್ಯಕ್ರಮದಲ್ಲಿ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

    ಪತ್ರಿಕಾ ವಿತರಕರಿಗೆ ಹಲವಾರು ಸಮಸ್ಯೆಗಳಿವೆ. ಆದರೆ ಸರ್ಕಾರದಿಂದ ಅವರಿಗೆ ಹೇಳಿಕೊಳ್ಳುವಂತ ಯಾವುದೇ ಸೌಲಭ್ಯ ದೊರೆಯುತ್ತಿಲ್ಲ. ಯಾರಿಗೆ ಸರ್ಕಾರದ ಸೌಲಭ್ಯ ಸಿಗುವುದಿಲ್ಲವೋ ಅಂತವರಿಗೆ ಸೌಲಭ್ಯ ಒದಗಿಸುವ ಕೆಲಸವನ್ನು ಫೌಂಡೇಶನ್ ವತಿಯಿಂದ ಮಾಡಲಾಗುತ್ತಿದೆ ಎಂದರು.
    ಪತ್ರಿಕಾ ವಿತರಕರಿಗೆ ನಮ್ಮ ತುಳಸಿಗಿರೀಶ ಆಸ್ಪತ್ರೆಯಲ್ಲಿ ಉಚಿತ ಚಿಕಿತ್ಸೆಯನ್ನು ನೀಡಲಾಗುವುದು. ಜೊತೆಗೆ ಎಲ್ಲರಿಗೂ ಉಚಿತವಾಗಿ ಸಾಮೂಹಿಕ ಜೀವವಿಮೆಯನ್ನು ಫೌಂಡೇಷನ್ ವತಿಯಿಂದ ಮಾಡಿಸಿಕೊಡಲಾಗುವುದು. ನಿಮ್ಮ ಸಂಕಷ್ಟದಲ್ಲಿ ಜೊತೆಗಿದ್ದು ನಿಮ್ಮ ಬೇಡಿಕೆಗಳಿಗೆ ಸ್ಪಂದಿಸುವ ಕೆಲಸವನ್ನು ಮಾಡಲಾಗುವುದು ಎಂದು ಹೇಳಿದರು.

    ವಿಜಯವಾಣಿ ಸ್ಥಾನಿಕ ಸಂಪಾದಕ ಕೆ.ಎನ್. ರಮೇಶ್ ಮಾತನಾಡಿ, ಪತ್ರಿಕಾ ವಿತರಕರು ಕಾಯಕ ಯೋಗಿಗಳಂತೆ. ಎಷ್ಟೇ ಕಷ್ಟದ ಸಂದರ್ಭದಲ್ಲೂ ಎದೆಗುಂದದೆ ನಿರಂತರವಾಗಿ ಓದುಗರಿಗೆ ಪತ್ರಿಕೆಯನ್ನು ಮುಟ್ಟಿಸುವ ಕೆಲಸವನ್ನು ಪ್ರಾಮಾಣಿಕತೆಯಿಂದ ಮಾಡುತ್ತಿರುವುದು ಶ್ಲಾಘನೀಯ. ತಮಗೆ ಶೈಕ್ಷಣಿಕ, ಆರೋಗ್ಯ ಸಮಸ್ಯೆಗಳು ಎದುರಾದಾಗ ಅವರ ಸೇವೆಗೆ ಪತ್ರಿಕಾ ಬಳಗವು ಸಿದ್ಧವಿದೆ. ಒಗ್ಗಟ್ಟಿನಿಂದ ಪತ್ರಿಕಾ ವಿತರಕರ ಸಂಘವನ್ನು ಕಟ್ಟಿಕೊಳ್ಳಿ, ಸರ್ಕಾರದಿಂದ ದೊರೆಯಬೇಕಾದ ಎಲ್ಲಾ ಸೌಲಭ್ಯಗಳನ್ನು ಒದಗಿಸುವ ನಿಟ್ಟಿನಲ್ಲಿ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘವೂ ಸಂಪೂರ್ಣವಾಗಿ ಬೆಂಬಲಿಸಲಿದೆ ಎಂದರು.

    ಸಂಯುಕ್ತ ಕರ್ನಾಟಕ ಹಿರಿಯ ವರದಿಗಾರ, ಮುಖ್ಯ ವಕ್ತಾರರಾಗಿ ಆಗಮಿಸಿದ ವಾಸುದೇವ್ ಹೆರಕಲ್ ಮಾತನಾಡಿ, ಪತ್ರಿಕಾ ವಿತರಕರಾಗಿ ಮಾಜಿ ರಾಷ್ಟ್ರಪತಿ ಡಾ. ಅಬ್ದುಲ್ ಕಲಾಂ ಸೇರಿದಂತೆ ಹಲವಾರು ಗಣ್ಯರು ಸೇವೆ ಸಲ್ಲಿಸಿ ಜೀವನದಲ್ಲಿ ಸಾಧನೆ ಮಾಡಿದ್ದಾರೆ. ಯಾವುದೇ ಕೆಲಸವೂ ಸಣ್ಣದಲ್ಲ. ಶ್ರದ್ಧೆಯಿಂದ ಕೆಲಸ ಮಾಡಿದರೆ ಯಶಸ್ಸು ಖಂಡಿತ ಎಂದರು. ತುಳಸಿಗಿರೀಶ ಫೌಂಡೇಶನ್‌ನ ಮುಖ್ಯಸ್ಥರಾದ ಡಾ. ಬಾಬು ರಾಜೇಂದ್ರ ನಾಯಿಕ ಕಾರ್ಯ ಶ್ಲಾಘನೀಯ. ಇದೇ ಸಂದರ್ಭದಲ್ಲಿ ಸಂಯುಕ್ತ ಕರ್ನಾಟಕ ಹಿರಿಯ ಪತ್ರಿಕಾ ವಿತರಕರಾಗಿದ್ದ ಡಗಲ್, ಡಗಲ್ ರಂಗಚಾರ್ಯರನ್ನು ನೆನೆದದ್ದು ವಿಶೇಷವಾಗಿತ್ತು.
    ಉದಯವಾಣಿ ಹಿರಿಯ ವರದಿಗಾರ ಗುರು ಕಮತರ ಮಾತನಾಡಿ, ಪತ್ರಿಕೆ, ಪತ್ರಕರ್ತ ಹಾಗೂ ವಿತರಕರ ನಡುವೆ ಅವಿನಾಭಾವ ಸಂಬಂಧವಿದೆ. ಪತ್ರಿಕೆಗಳು ಮುಚ್ಚುತ್ತವೆ ಎಂಬ ಸಂದರ್ಭದಲ್ಲಿ ಅದರ ಬೆನ್ನೆಲುಬಾಗಿ ನಿಂತು ನಾವಿದ್ದೇವೆ ಎಂಬುದನ್ನು ತೋರಿಸಿದ್ದೀರಿ. ಕರೋನಾದಂತ ಸಂಕಷ್ಟದ ಸಮಯದಲ್ಲಿ ನಾವಿದ್ದೇವೆ ಎಂಬುದನ್ನು ತೋರಿಸಿಕೊಟ್ಟಿದ್ದೀರಿ. ನಾವು ಯಾವಾಗಲೂ ನಿಮ್ಮೊಂದಿಗೆ ಇರುತ್ತೇವೆ ಎಂದರು.

    ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾಧ್ಯಕ್ಷ ಸಂಗಮೇಶ ಚೂರಿ ಮಾತನಾಡಿ, ನಮ್ಮ ಸಂಘ ಯಾವತ್ತೂ ನಿಮ್ಮ ಸೇವೆಗೆ ಸಿದ್ಧವಿದೆ. ಎಲ್ಲರೂ ಸಂಘಟಿತರಾಗಿ ನಿಮ್ಮ ಶ್ರೇಯೋಭಿವೃದ್ಧಿಗೆ ದುಡಿಯೋಣ. ಸರ್ಕಾರದಿಂದ ದೊರೆಯಬೇಕಾದ ಎಲ್ಲಾ ಸೌಲಭ್ಯಗಳನ್ನು ದೊರಕಿಸಿಕೊಡಲು ಪ್ರಾಮಾಣಿಕ ಪ್ರಯತ್ನ ಮಾಡುವುದಾಗಿ ಹೇಳಿದರು.

    ಪತ್ರಿಕಾ ವಿತರಕರ ಸಂಘದ ಅಧ್ಯಕ್ಷ ಬಾಬು ಮಂಗಾನವರ, ಡಾ. ಸಂಜು ಸೀಳಿನ, ವಿಜಯವಾಣಿ ಪ್ರಸಾರಾಂಗ ವ್ಯವಸ್ಥಾಪಕ ಈರಣ್ಣ ಅವಟಿ, ವಿಜಯ ಕರ್ನಾಟಕ ಪ್ರತಿಕೆ ಪ್ರಸಾರಾಂಗ ಪ್ರತಿನಿಧಿ ಹಣಮೇಶ ಕುಲಕರ್ಣಿ, ಕನ್ನಡಪ್ರಭಾ ಪತ್ರಿಕೆ ಪ್ರಸಾರಾಂಗ ಪ್ರತಿನಿಧಿ ಪ್ರವೀಣ ಕುಂದರಗಿ, ನೂರಾರು ಪತ್ರಿಕಾ ವಿತರಕರು ಉಪಸ್ಥಿತರಿದ್ದರು.

    ಪತ್ರಿಕಾ ವಿತರಕರಿಗಾಗಿ ಆಯೋಜಿಸಲಾಗಿ ಮ್ಯೂಜಿಕಲ್ ಚೇರ್ ಸ್ಪರ್ಧೆಯಲ್ಲಿ ವಿಜೇತರಾದ ಸುರೇಶ್ ಬೂದಿಹಾಳ (ಪ್ರಥಮ) ಶರಣು ಸಜ್ಜನ್ (ದ್ವಿತೀಯ), ಶಿವಾಜಿ ಮೋರೆ (ತೃತೀಯ) ಅವರಿಗೆ ನಗದು ಬಹುಮಾನ ವಿತರಿಸಲಾಯಿತು. ಎಲ್ಲಾ ಪತ್ರಿಕಾ ವಿತರಕನ್ನು ಆತ್ಮೀಯವಾಗಿ ಸನ್ಮಾನಿಸಲಾಯಿತು. ಲಘು ಉಪಹಾರದ ವ್ಯವಸ್ಥೆ ಮಾಡಲಾಗಿತ್ತು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts