More

    ಸರದಿಯಲ್ಲಿ ಕೈಚೀಲ, ಎಣ್ಣೆಡಬ್ಬಿ…

    ಹುಬ್ಬಳ್ಳಿ: ಇಲ್ಲಿಯ ಅಮರಗೋಳ ಎಪಿಎಂಸಿ ಆವರಣದ ಅಕ್ಕಿಹೊಂಡ (ದಿನಸಿ) ಮಾರ್ಕೆಟ್​ನಲ್ಲಿ ದಿನಕ್ಕೊಂದು ವಿಶೇಷತೆ ಕಂಡು ಬರುತ್ತಿದೆ. ಬೆಳಗ್ಗೆಯಿಂದ ಸಂಜೆ 7ರವರೆಗೂ ದಿನಸಿ ಮಾರ್ಕೆಟ್ ತೆರೆದಿದ್ದರೂ ಜನ ಮಾತ್ರ ಬೆಳಗ್ಗೆಯೇ ಹೆಚ್ಚಿನ ಸಂಖ್ಯೆಯಲ್ಲಿ ಜಮಾಯಿಸುತ್ತಿದ್ದಾರೆ.

    ಹುಬ್ಬಳ್ಳಿ- ಧಾರವಾಡ ಅವಳಿ ನಗರದ ಜನರಷ್ಟೇ ಅಲ್ಲ, ಅಕ್ಕಪಕ್ಕದ ಹಳ್ಳಿ, ಜಿಲ್ಲೆಯ ಜನರೂ ಕೂಡ ದಿನಸಿಗಾಗಿ ಹುಬ್ಬಳ್ಳಿಗೆ ಬರುತ್ತಿದ್ದಾರೆ. ರಿಟೇಲ್, ಹೋಲ್​ಸೇಲ್ ಮಾರಾಟ ಮಳಿಗೆಗಳು ಇಲ್ಲಿರುವುದರಿಂದ ಒಂದೊಮ್ಮೆ ಎಪಿಎಂಸಿಗೆ ಬಂದವರು ಎಲ್ಲ ಖರೀದಿ ಕೆಲಸ ಮುಗಿಸಿಕೊಂಡೇ ಹೋಗುತ್ತಾರೆ. ಹಾಗಾಗಿ ಮಂಗಳವಾರವೂ ಸಹಜವಾಗಿ ಜನದಟ್ಟಣೆ ಇತ್ತು.

    ಸರದಿಯಲ್ಲಿ ಕೈಚೀಲ, ಪ್ಲಾಸ್ಟಿಕ್ ಚೀಲ, ಎಣ್ಣೆ ಡಬ್ಬಿ, ನೀರಿನ ಬಾಟಲ್, ಇಟ್ಟಂಗಿ, ಕಲ್ಲು, ಕಟ್ಟಿಗೆ ಇತ್ಯಾದಿಗಳನ್ನು ಬೆಳಗ್ಗೆ ಅಂಗಡಿ ಬಾಗಿಲು ತೆರೆಯುವ ಮೊದಲೇ ಇಟ್ಟು ಹೋಗುತ್ತಿದ್ದಾರೆ. ಅಂಗಡಿಗಳ ಮುಂದೆ ಹಾಕಲಾಗಿರುವ ಪೆಂಡಾಲ್ ಒಳಗೆ ಸರದಿ ನಿಲ್ಲಲು ವ್ಯವಸ್ಥೆ ಮಾಡಲಾಗಿದೆ. ಪರಸ್ಪರ ಅಂತರ ಕಾಯ್ದುಕೊಳ್ಳಲು ಸೂಚಿಸಲಾಗುತ್ತದೆ. ಆದಾಗ್ಯೂ ಜನರ ಮನೋಭಾವನೆ ಬದಲಾಗುತ್ತಿಲ್ಲ. ಸರದಿ ಬರದಿದ್ದರೂ ಅಂಗಡಿ ಎದುರಲ್ಲೇ ಜನರ ಮಧ್ಯೆ ನಿಲ್ಲುತ್ತಿದ್ದಾರೆ. ಇವರಿಗೆ ತಿಳಿ ಹೇಳುವುದೇ ಪೊಲೀಸರಿಗೆ ಕೆಲಸವಾಗಿಬಿಟ್ಟಿದೆ.

    ಹೋಲ್​ಸೇಲ್ ದರದಲ್ಲಿ ಇಲ್ಲಿಂದ ದಿನಸಿ ವಸ್ತುಗಳನ್ನು ಕೊಂಡೊಯ್ದು ಮಾರಾಟ ಮಾಡುವ ಅಂಗಡಿಕಾರರೇ ಹೆಚ್ಚಿನ ಸಂಖ್ಯೆಯಲ್ಲಿ ಬರುತ್ತಿದ್ದಾರೆ. ಜತೆಗೆ ಮನೆಗಳಿಗೆ ದಿನಸಿ ಒಯ್ಯುವವರೂ ಇರುತ್ತಾರೆ. ಈ ಎಲ್ಲ ಕಾರಣಗಳಿಗೆ ಸಾಮಾನ್ಯ ದಿನಗಳಿಗಿಂತ ಕರೊನಾ ಲಾಕ್​ಡೌನ್ ದಿನಗಳಲ್ಲಿ ಹೆಚ್ಚಿನ ಜನರು ಕಂಡು ಬರುತ್ತಿದ್ದಾರೆ. ಮಾರುಕಟ್ಟೆ ಗಿಜಿಗಿಡುವಂತೆ ಮಾಡುತ್ತಿದ್ದಾರೆ.

    ತರಕಾರಿಗಾಗಿ ಮುಗಿಬಿದ್ದರು: ಸೋಮವಾರ ತರಕಾರಿ ಮಾರುಕಟ್ಟೆಗೆ ರಜೆ ಇತ್ತು. ಮಂಗಳವಾರ ಸಹಜವಾಗಿ ಹೆಚ್ಚಿನ ಪ್ರಮಾಣದಲ್ಲಿ ತರಕಾರಿ ಬಂದಿತ್ತು. ಅದೇ ರೀತಿ ಜನಸಂದಣಿ ಹೆಚ್ಚಾಗಿತ್ತು. ಸಗಟು ವ್ಯಾಪಾರಸ್ಥರಷ್ಟೇ ಅಲ್ಲ, ಮನೆಗಳಿಗೆ ತರಕಾರಿ ಕೊಂಡೊಯ್ಯುವವರ ಗದ್ದಲವೂ ಇತ್ತು. ರಿಟೇಲ್ ವ್ಯಾಪಾರಕ್ಕೆ ಅವಕಾಶ ಇಲ್ಲ ಎಂದು ಎಪಿಎಂಸಿ ಅಧಿಕಾರಿಗಳು ಹೇಳುತ್ತಾರೆ. ಆದರೆ, ಎಪಿಎಂಸಿ ಆವರಣದಲ್ಲಿ ಎಗ್ಗಿಲ್ಲದೆ ರಿಟೇಲ್ ವ್ಯಾಪಾರವೂ ನಡೆಯುತ್ತಿದೆ. ಜನರು ಕೂಡ ಮತ್ತೆ ಸಿಗುತ್ತದೆಯೋ ಇಲ್ಲವೋ ಎಂಬಂತೆ ಮುಗಿಬಿದ್ದು ತರಕಾರಿ ಖರೀದಿ ಮಾಡುತ್ತಿದ್ದಾರೆ.

    ಎಪಿಎಂಸಿ ಅನಿವಾರ್ಯ: ಅಕ್ಕಪಕ್ಕದ ಜಿಲ್ಲೆ, ಬಡಾವಣೆ, ಊರುಗಳಲ್ಲಿ ಈಗ ಎಲ್ಲಿಯೂ ಸಂತೆ ನಡೆಯುತ್ತಿಲ್ಲ. ದಿನಸಿಯೂ ಅಷ್ಟಾಗಿ ಸಿಗುತ್ತಿಲ್ಲ. ತರಕಾರಿಗಾಗಿ ಜನ ಓಣಿಯಲ್ಲಿ ಬರುವ ಗಾಡಿಗಳನ್ನು ನೆಚ್ಚಿಕೊಳ್ಳಬೇಕು. ಹಾಗಾಗಿ ಹುಬ್ಬಳ್ಳಿ ಎಪಿಎಂಸಿಯೇ ಎಲ್ಲದಕ್ಕೂ ಅನಿವಾರ್ಯವಾಗುತ್ತಿದೆ. ದಿನದಿಂದ ದಿನಕ್ಕೆ ಎಪಿಎಂಸಿಯಲ್ಲಿ ದಟ್ಟಣೆ ಹೆಚ್ಚುತ್ತಿದೆ. ಲಾಕ್​ಡೌನ್ ಸಂದರ್ಭದಲ್ಲೂ ದಿನಸಿ ಮಾರ್ಕೆಟ್​ನಲ್ಲಿ ದರಗಳು ಅಷ್ಟಾಗಿ ಹೆಚ್ಚಳವಾಗಿಲ್ಲ. ಸಾರಿಗೆ ವ್ಯವಸ್ಥೆ ಇಲ್ಲದ ಕಾರಣ ನಾಲ್ಕೈದು ರೂಪಾಯಿ ಮಾತ್ರ ಹೆಚ್ಚಳವಾಗಿದೆ ಎನ್ನುತ್ತಾರೆ ವ್ಯಾಪಾರಸ್ಥರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts