More

    ಸಮೃದ್ಧವಾಗಿದೆ ಹುಣಸೆ ಫಸಲು: ತೋಟಗಾರಿಕಾ ಬೆಳೆ ಕಳೆದುಕೊಂಡ ರೈತನಿಗೆ ಆಸರೆಯಾದ ಬೆಳೆ

    ಶ್ರೀನಿವಾಸಪುರ: ಹವಾಮಾನ ವೈಪರೀತ್ಯ, ಅಧಿಕ ಮಳೆಯಿಂದಾಗಿ ಬಹುತೇಕ ಬೆಳೆಗಳು ನಾಶವಾಗಿದ್ದು, ರೈತ ವಾರ್ಷಿಕ ಬೆಳೆಗಳಾದ ಮಾವು ಮತ್ತು ಹುಣಸೆಯನ್ನೇ ನಂಬಿ ಬದುಕಬೇಕಿದೆ.

    ಕರೊನಾದಿಂದ 2 ವರ್ಷ ಸಂಕಷ್ಟಕ್ಕೆ ಸಿಲುಕಿದ್ದ ರೈತನಿಗೆ ಮಳೆ ಮತ್ತಷ್ಟು ನಷ್ಟ ಉಂಟು ಮಾಡಿದ್ದು, ಗಾಯದ ಮೇಲೆ ಬರೆ ಎಳೆದಂತಾಗಿದೆ. ಕೃಷಿ ಬೆಳೆಗಳಾದ ಅಾಗಿ, ಅವರೆ, ನೆಲೆಗಡಲೆ ಸೇರಿ ತೋಟಗಾರಿಕಾ ಬೆಳೆಗಳೂ ಜಲಾಮೃತಗೊಂಡಿವೆ. ಉಳಿದಿರುವುದು ವಾರ್ಷಿಕ ಬೆಳೆಗಳಾದ ಮಾವು ಮತ್ತು ಹುಣಸೆ ಮಾತ್ರ. ಹುಣಸೆ ಫಸಲು ಈ ವರ್ಷ ಸಮೃದ್ಧವಾಗಿದ್ದು ರೈತ ಇದನ್ನೇ ನಂಬಿ ಬದುಕುವಂತಾಗಿದೆ.

    15 ವರ್ಷಗಳ ಹಿಂದೆ ಕೋಲಾರ ಜಿಲ್ಲೆಯಲ್ಲಿ ಹುಣಸೆ ಹಣ್ಣು ಮತ್ತು ಕಾಯಿಗೆ ಎಲ್ಲಿಲ್ಲದ ಬೇಡಿಕೆ ಇದ್ದು, ಚೆನೈಗೆ ಸಾಗಾಣಿಕೆ ಮಾಡುತ್ತಿದ್ದರು. ಇದರಿಂದ ಹುಣಸೆ ಕಾಯಿ ಮತ್ತು ಹಣ್ಣಿಗೆ ಬೇಡಿಕೆ ಹೆಚ್ಚಾಗಿತ್ತು. ಕ್ರಮೇಣ ರೈತರು ಟೊಮ್ಯಾಟೊ ಹೆಚ್ಚಾಗಿ ಬೆಳೆದಂತೆಲ್ಲ ಹುಣಸೆಗೆ ಮಾರುಕಟ್ಟೆ ಇಳಿದು ಬೆಲೆ ಕುಸಿಯುತ್ತಿದ್ದಂತೆ ಹುಣಸೆ ಮರಗಳಿಗೆ ಕೊಡಲಿ ಏಟು ನೀಡಿದರು. ಆ ಜಾಗದಲ್ಲಿ ಮಾವು ಮತ್ತು ಟೊಮ್ಯಾಟೊ ಬೆಳೆ ಬಂದಿತ್ತು.

    ಕೋಲಾರ ಜಿಲ್ಲೆಯ ರೈತರು ಹೆಚ್ಚಾಗಿ ಟೊಮ್ಯಾಟೊ ಬೆಳೆಯಲು ಮುಂದಾದ ಕಾರಣ ಹುಣಸೆ ಕಾಯಿ ಮತ್ತು ಹಣ್ಣನ್ನು ಕೇಳುವವರೇ ಇಲ್ಲವಂತಾಗಿತ್ತು. ಕಳೆದ 2-3 ವರ್ಷಗಳಿಂದ ಹುಣಸೆ ಹಣ್ಣು ಮತ್ತು ಕಾಯಿಗೆ ಬೇಡಿಕೆ ಹೆಚ್ಚಾದಂತೆ ಉಳಿದಿರುವ ಹುಣಸೆ ಮರಗಳನ್ನು ಜೋಪಾನವಾಗಿ ನೋಡಿಕೊಳ್ಳಲು ರೈತರು ಮುಂದಾಗಿದ್ದಾರೆ.

    ಈ ವರ್ಷ ರೈತ ಎಲ್ಲ ಬೆಳೆಗಳ ಫಸಲು ಕಳೆದುಕೊಂಡಿದ್ದು ಹುಣಸೆ ಮತ್ತು ಮಾವು ಫಸಲನ್ನೇ ನಂಬಿ ಕೂರುವಂತಾಗಿದೆ. ಅದಕ್ಕೆ ತಕ್ಕಂತೆ ಈ ವರ್ಷ ಹುಣಸೆ ಮರಗಳಲ್ಲಿ ಉತ್ತಮ ಫಸಲು ಬಂದಿದೆ. ಜನವರಿ ನಂತರ ಮಾವಿನ ಮರಗಳಲ್ಲಿ ಹೂವು ಕಾಣಿಸಿಕೊಳ್ಳುತ್ತದೆ. ತೇವಾಂಶ ಹೆಚ್ಚಾದರೆ ಮಾವಿಗೆ ಫಸಲಿಗೂ ಹೊಡೆತ ಬೀಳಬಹುದೆಂಬ ಆತಂಕ ರೈತರಲ್ಲಿದೆ.

    ಹುಣಸೆ ಮರಗಳಲ್ಲಿ ಉತ್ತಮ ಫಸಲು ಇದೆ. ರೈತ ಈಗ ಎಲ್ಲ ಬೆಳೆ ಕಳೆದುಕೊಂಡಿದ್ದಾನೆ. ಹುಣಸೆ ಈಗಾಗಲೆ ಫಸಲು ಬಂದಿದೆ, ಮಾವು ಹೂ ಬರಲು ಇನ್ನು ಎರಡು ತಿಂಗಳು ಬೇಕು. ತೇವಾಂಶ ಹೀಗೆ ಮುಂದುವರಿದರೆ ಮಾವಿನ ಫಸಲಿಗೂ ಪೆಟ್ಟು ಬೀಳಲಿದೆ.
    ಎಂ.ಶ್ರೀನಿವಾಸ್, ಹಿರಿಯ ಸಹಾಯಕ ನಿರ್ದೇಶಕ, ತೋಟಗಾರಿಕೆ ಇಲಾಖೆ

    ಈ ವರ್ಷ ಹುಣಸೆ ಮರಗಳಲ್ಲಿ ಉತ್ತಮವಾಗಿ ಫಸಲು ಬಂದಿದೆ. ಕಳೆದ ವರ್ಷ ವ್ಯಪಾರಸ್ಥರು ಮರಗಳ ಮೇಲೆಯೆ ಫಸಲನ್ನು ಖರೀದಿಸಲು ಬರುತ್ತಿದ್ದರು. ಈ ವರ್ಷ ಇದುವರೆಗೂ ಫಸಲು ಖರೀದಿಸಲು ವ್ಯಪಾರಸ್ಥರು ಬಂದಿಲ್ಲ. ರೈತ ಮಳೆಯಿಂದಾಗಿ ಎಲ್ಲ ಬೆಳೆಗಳ ಫಸಲನ್ನು ಕಳೆದುಕೊಂಡಿದ್ದಾನೆ. ಹುಣಸೆಗೆ ಉತ್ತು ಬೆಲೆ ಸಿಕ್ಕಿದರೆ ರೈತ ಖುಷಿ ಪಡುತ್ತಾನೆ.
    ವೆಂಕಟರಾಮರೆಡ್ಡಿ, ರೈತ ಆರ್. ತಿಮ್ಮಸಂದ್ರ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts