More

    ಸಮಾಜದ ಸಮಸ್ಯೆಗಳಿಗೆ ಧ್ವನಿಯಾಗಿ

    ಕೋಲಾರ: ಸಮಸ್ಯೆಗಳಿಗೆ ಧ್ವನಿಯಾಗುವ ಪತ್ರಕರ್ತರಿಗೆ ಸಮಾಜದಲ್ಲಿ ಗೌರವವಿದೆ, ಒಳ್ಳೆಯದ್ದನ್ನು ಒಳ್ಳೆಯದೆನ್ನುವ, ಕೆಟ್ಟವರನ್ನು ಕೆಟ್ಟದೆನ್ನುವ ನಿಷ್ಠುರವಾದಿಗಳಾಗಬೇಕು ಎಂದು ಮಾಜಿ ಶಾಸಕ ಕೊತ್ತೂರು ಮಂಜುನಾಥ್ ಹೇಳಿದರು.

    26 ಲಕ್ಷ ರೂ. ಕೊಡುಗೆ ನೀಡಿ ನವೀಕರಿಸಿದ ಹವಾನಿಯಂತ್ರಿತ ಮಿನಿಸಭಾಂಗಣವನ್ನು ಪತ್ರಕರ್ತರ ಭವನದಲ್ಲಿ ಭಾನುವಾರ ಉದ್ಘಾಟಿಸಿ ಮಾತನಾಡಿ, ಪತ್ರಿಕೋದ್ಯಮ ನಾಲ್ಕನೇ ಅಂಗವಾಗಿ ಜನರ ಸಮಸ್ಯೆಗಳ ಬಗ್ಗೆ ಬೆಳಕು ಚೆಲ್ಲುವ ಕೆಲಸ ಮಾಡುತ್ತಿದೆ. ನಿಷ್ಠುರವಾದಿಗಳಾದರೂ ಚಿಂತೆಯಿಲ್ಲ, ಯಾರನ್ನೂ ಮೆಚ್ಚಿಸಲು ಬರೆಯಬೇಡಿ, ಸತ್ಯ ಬರೆಯಿರಿ. ವೃತ್ತಿ ಘನತೆಗೆ ಕುತ್ತು ಬರದಂತೆ ನಡೆದುಕೊಳ್ಳಿ, ಅವರಿಗೆ ಸಮಾಜದಲ್ಲಿ ಗೌರವ ಇದ್ದೇ ಇರುತ್ತದೆ ಎಂದರು.

    ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಶಿವಾನಂದ ತಗಡೂರು ಮಾತನಾಡಿ, ನೊಂದವರ ಧ್ವನಿಯಾಗಬೇಕಿದ್ದ ಪತ್ರಕರ್ತರಲ್ಲಿ ಒಂದು ವರ್ಗ ವಿಮುಖವಾಗುತ್ತಿದೆ. ನಮ್ಮ ಹಿಂದೆ ಒಳ್ಳೆಯ ಪತ್ರಕರ್ತ ಎಂದರೆ ಅದೇ ದೊಡ್ಡ ಗೌರವ. ನಿಷ್ಠುರತೆ ಕಳೆದುಕೊಂಡಾಗ ನಮ್ಮೊಳಗಿನ ಪತ್ರಕರ್ತ ಸತ್ತುಹೋದಂತೆ. ಪತ್ರಕರ್ತ ಸಮಾಜದ ಆಗುಹೋಗುಗಳ ಕನ್ನಡಿ. ಸಮಾಜದ ರೋಗಕ್ಕೆ ವೈದ್ಯರಾಗಿರಬೇಕು. ಅಸಹಾಯಕರ ಪರ ಧ್ವನಿ ಎತ್ತುವ ವ್ಯಕ್ತಿತ್ವ ಉಳ್ಳವನೇ ಪತ್ರಕರ್ತ. ಎತ್ತರದ ಸ್ಥಾನದಲ್ಲಿರುವ ಮಾಧ್ಯಮದ ಘನತೆ ಉಳಿಸಬೇಕು ಎಂದರು.

    ಕರೊನಾ ಸಂದರ್ಭದಲ್ಲಿ ಪತ್ರಿಕೆಗಳಿಗೆ ಸರ್ಕಾರ ಬಾಕಿ ಉಳಿಸಿಕೊಂಡಿದ್ದ 56 ಕೋಟಿ ಜಾಹಿರಾತು ಬಾಕಿ ಹಣ ಬಿಡುಗಡೆ, ಕರೊನಾದಿಂದ ಮೃತಪಟ್ಟ ಪತ್ರಕರ್ತರ ಕುಟುಂಬಗಳಿಗೆ ತಲಾ 5 ಲಕ್ಷ ರೂ. ಪರಿಹಾರ ಕೊಡಿಸಲಾಗಿದೆ, ಎಲ್ಲ ಪತ್ರಕರ್ತರಿಗೂ ಆಯುಷ್ಮಾನ್ ಆರೋಗ್ಯ ಕಾರ್ಡ್ ನೀಡಲು ಸರ್ಕಾರ ಒಪ್ಪುವಂತೆ ಮಾಡಿದ್ದೇವೆ ಎಂದರು.

    ಪತ್ರಕರ್ತರ ಸಂಘದ ಕಾರ್ಯಕಾರಿ ಸಮಿತಿ ಸದಸ್ಯ ಬಿ.ವಿ. ಗೋಪಿನಾಥ್ ಮಾತನಾಡಿ, ಪತ್ರಕರ್ತರ ಮಕ್ಕಳಿಗೆ ಪ್ರತಿಭಾ ಪುರಸ್ಕಾರ, ಅನಾರೋಗ್ಯ ಪೀಡಿತರಿಗೆ ನೆರವು ನೀಡುವ ಕಾರ್ಯವನ್ನೂ ಇಡೀ ರಾಜ್ಯದಲ್ಲೇ ಮೊದಲು ಶುರು ಮಾಡುವ ಮೂಲಕ ಜಿಲ್ಲಾ ಪತ್ರಕರ್ತರ ಸಂಘ ರಾಜ್ಯಕ್ಕೆ ಮಾಡರಿಯಾಗಿದೆ. ಇದೀಗ ಮಿನಿಸಭಾಂಗಣ ಅಧುನೀಕರಣಗೊಳಿಸಿ ಸುಸಜ್ಜಿತ ಪತ್ರಿಕಾ ಭವನ ಹೊಂದಿರುವ ಹೆಗ್ಗಳಿಕೆಗೂ ಪಾತ್ರವಾಗಿದೆ ಎಂದರು.

    ಜಿಲ್ಲಾ ಅಧ್ಯಕ್ಷ ವಿ.ಮುನಿರಾಜು, ರಾಜ್ಯ ಸಂಘದ ಪ್ರಧಾನ ಕಾರ್ಯದರ್ಶಿ ಜಿ.ಸಿ.ಲೋಕೇಶ್, ಡಿಸಿಸಿ ಬ್ಯಾಂಕ್ ನಿರ್ದೇಶಕ ಎಂ.ಎಲ್.ಅನಿಲ್ ಕುಮಾರ್, ನಗರಸಭೆ ಪೌರಾಯುಕ್ತ ಶ್ರೀಕಾಂತ್, ಸಂಘದ ರಾಜ್ಯಕಾರ್ಯಕಾರಿ ಸದಸ್ಯ ಮಹಮದ್ ಯುನೂಸ್, ಪ್ರಧಾನ ಕಾರ್ಯದರ್ಶಿ ಎಸ್.ಕೆ.ಚಂದ್ರಶೇಖರ್, ಖಜಾಂಚಿ ಎ.ಜಿ.ಸುರೇಶ್‌ಕುಮಾರ್, ಉಪಾಧ್ಯಕ್ಷ ಶ್ರೀನಿವಾಸಮೂರ್ತಿ, ಹಿರಿಯ ಪತ್ರಕರ್ತರಾದ ಎಂ.ಜಿ.ಪ್ರಭಾಕರ್, ಸಿ.ಎಂ.ಮುನಿಯಪ್ಪ, ವಾಸುದೇವಹೊಳ್ಳ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts