More

    ಸಮಾಜದ ಋಣ ತೀರಿಸಲು ಪ್ರಯತ್ನಿಸಿ

    ಧಾರವಾಡ: ಜೀವನದಲ್ಲಿ ಸ್ವಾವಲಂಬಿಯಾಗಿ ಬದುಕುವ ಮೂಲಕ ಸಮಾಜದ ಋಣ ತೀರಿಸುವ ಪ್ರಯತ್ನ ಮಾಡಬೇಕು ಎಂದು ಪೇಜಾವರ ಅಧೋಕ್ಷಜ ಮಠದ ಶ್ರೀ ವಿಶ್ವಪ್ರಸನ್ನತೀರ್ಥ ಸ್ವಾಮೀಜಿ ಹೇಳಿದರು.

    ಬೆಂಗಳೂರಿನ ನಿಲಯ ಪ್ರತಿಷ್ಠಾನ ಹಾಗೂ ಪ್ರಹ್ಲಾದ ವಿದ್ಯಾರ್ಥಿ ನಿಲಯ ಪ್ರತಿಷ್ಠಾನದ ಸಹಯೋಗದಲ್ಲಿ ಇಲ್ಲಿನ ಮಾಳಮಡ್ಡಿಯ ಪ್ರಹ್ಲಾದ ವಿದ್ಯಾರ್ಥಿ ನಿಲಯದಲ್ಲಿ ಶನಿವಾರ ಹಮ್ಮಿಕೊಂಡಿದ್ದ ಸಮಾರಂಭದಲ್ಲಿ ವಿದ್ಯಾರ್ಥಿಗಳಿಗೆ ಶಿಷ್ಯವೇತನ ವಿತರಿಸಿ ಆಶೀರ್ವಚನ ನೀಡಿದರು.

    ನಮ್ಮ ಸಂಪಾದನೆಯಲ್ಲಿ ಸಮಾಜದ ಪಾಲೂ ಇದೆ. ಹೀಗಾಗಿ ಗಳಿಕೆಯ ಒಂದಿಷ್ಟು ಭಾಗವನ್ನು ಸಮಾಜದ ಕಾರ್ಯಕ್ಕೆ ವಿನಿಯೋಗಿಸಬೇಕು. ಸಮಾಜದಿಂದ ಪಡೆದಿದ್ದನ್ನು ಮರಳಿ ನೀಡುವ ಮನೋಭಾವ ಬೆಳೆಸಿಕೊಂಡಾಗ ಮಾತ್ರ ಸಮಾಜದ ಅಭಿವೃದ್ಧಿ ಸಾಧ್ಯ. ಶಿಷ್ಯ ವೇತನ ಪಡೆಯುವ ವಿದ್ಯಾರ್ಥಿಗಳು ಉತ್ತಮ ಶಿಕ್ಷಣ ಪಡೆದು, ಉನ್ನತ ಹುದ್ದೆಗಳನ್ನು ಅಲಂಕರಿಸುವ ಮೂಲಕ ಉಳಿದ ವಿದ್ಯಾರ್ಥಿಗಳಿಗೆ ಸಹಾಯ ಮಾಡುವ ಕೆಲಸ ಮಾಡಬೇಕು ಎಂದರು.

    ಮನೋವೈದ್ಯ ಡಾ. ಆನಂದ ಪಾಂಡುರಂಗಿ ಮಾತನಾಡಿ, ಶಿಸ್ತು ರಹಿತ ಶಿಕ್ಷಣಕ್ಕೆ ಬೆಲೆ ಇಲ್ಲ. ಮಕ್ಕಳಿಗೆ ಸರಿಯಾದ ಸಮಯಕ್ಕೆ ಸೂಕ್ತ ಮಾರ್ಗದರ್ಶನ ಸಿಕ್ಕಲ್ಲಿ ಸನ್ಮಾರ್ಗದಲ್ಲಿ ನಡೆಯುತ್ತಾರೆ. ಮಕ್ಕಳು ತಾವು ಗುರಿ ಮುಟ್ಟಲು ಸನ್ಮಾರ್ಗದಲ್ಲೇ ಪ್ರಯತ್ನ ಮಾಡಬೇಕು. ಇದನ್ನು ಬಿಟ್ಟು ಆಕರ್ಷಣೀಯ ಜೀವನ ಶೈಲಿಗೆ ಮಾರುಹೋಗಿ ಅನ್ಯ ದಿಕ್ಕಿನಲ್ಲಿ ಸಾಗಿ ಜೀವನ ಹಾಳಾಗಲು ಅವಕಾಶ ನೀಡಬಾರದು ಎಂದರು.

    ಪುಣೆಯ ಡಿಆರ್​ಡಿಒ ಸಹ ನಿರ್ದೇಶಕ ಶ್ರೀಧರ ಕಟ್ಟಿ ಮಾತನಾಡಿ, ಸಂಸ್ಕಾರ ಮತ್ತು ಶಿಸ್ತು ಇದ್ದಾಗ ಒಳ್ಳೆ ಕಾರ್ಯ ಮತ್ತು ಸೇವಾ ಮನೋಭಾವ ಬೆಳೆಯಲು ಸಾಧ್ಯ. ನಿಲಯ ಪ್ರತಿಷ್ಠಾನ ಸೇವಾ ಮನೋಭಾವದಿಂದ ಒಳ್ಳೆಯ ಕಾರ್ಯ ಮಾಡುತ್ತಿದೆ. ಮಕ್ಕಳು ಇದರ ಸದುಪಯೋಗ ಪಡೆದು ಸಮಾಜದಲ್ಲಿ ಉತ್ತಮ ನಾಗರಿಕರಾಗಬೇಕು. ಸಹಾಯ ಮರೆಯದೆ ತಾವೂ ಸಹಾಯ ಮಾಡಬೇಕು ಎಂದರು.

    ಅಖಿಲ ಭಾರತ ಮಾಧ್ವ ಮಹಾ ಮಂಡಲ ಅಧ್ಯಕ್ಷ ಎಚ್.ವಿ. ಗೌತಮ ಮಾತನಾಡಿದರು. ಪ್ರಹ್ಲಾದ ವಿದ್ಯಾರ್ಥಿ ನಿಲಯದ ಅಧ್ಯಕ್ಷ ಡಾ. ಎಸ್.ಆರ್. ಕೌಲಗುಡ್ಡ ಅಧ್ಯಕ್ಷತೆ ವಹಿಸಿದ್ದರು. ಮಾಧ್ವ ಮಹಾ ಮಂಡಲ ಪ್ರಧಾನ ಕಾರ್ಯದರ್ಶಿ ಶ್ರೀಪಾದ ಸಿಂಗನಮಲ್ಲಿ, ಕೆ.ಆರ್. ದೇಶಪಾಂಡೆ, ರಂಗನಾಥ ಯಾದವಾಡ, ಡಾ. ಆರ್. ವೈ. ಕಟ್ಟಿ, ಭೀಮಸೇನಾಚಾರ್ಯ ಕೊಳ್ಳಿ, ವಿದ್ಯಾಸಾಗರ ದೀಕ್ಷಿತ, ನಿಯಲದ ಹಳೇ ವಿದ್ಯಾರ್ಥಿಗಳು, ಇತರರು ಇದ್ದರು.

    ಜಿಲ್ಲೆಯ 50 ವಿದ್ಯಾರ್ಥಿಗಳಿಗೆ ಒಟ್ಟು 6.40 ಲಕ್ಷ ರೂ. ಶಿಷ್ಯವೇತನ ವಿತರಣೆ ಮಾಡಲಾಯಿತು. ಗುರುರಾವ ಕುಲಕರ್ಣಿ ಸ್ವಾಗತಿಸಿದರು. ಮಹೇಶ ದೇಶಪಾಂಡೆ ಪ್ರಾಸ್ತಾವಿಕವಾಗಿ ಮಾತನಾಡಿದರು. ಡಾ. ಹ.ವೆಂ. ಕಾಖಂಡಕಿ ನಿರೂಪಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts