More

    ಸಮಸ್ಯೆಗಳ ಸುರಿಮಳೆಗೈದ ನಗರಸಭೆ ಸದಸ್ಯರು

    ಹುಣಸೂರು: ಚಿಕ್ಕಹುಣಸೂರು ಪ್ರದೇಶದಲ್ಲಿ 50ಕ್ಕೂ ಹೆಚ್ಚು ಬಡಕುಟುಂಬಗಳ ವಸತಿ ಆಸ್ತಿಯನ್ನು ಸರ್ವೇ ಕಾರ್ಯ ನಡೆಸಿ ಇ ಸ್ವತ್ತು ನೀಡಿ, ಧಾರಾಕಾರ ಮಳೆಯಿಂದಾಗಿ ನಗರದ ಎಲ್ಲ ರಸ್ತೆಗಳು ಗುಂಡಿಮಯವಾಗಿದ್ದು ತೇಪೆ ಕಾರ್ಯವನ್ನಾದರೂ ಮಾಡಿಸಿ, ವಾಸಸ್ಥಳ ದೃಢೀಕರಣವನ್ನು ಪ್ರಭಾರ ಪೌರಾಯುಕ್ತರು ನೀಡುತ್ತಿಲ್ಲ, ಜನರಿಗೇನು ಉತ್ತರ ಕೊಡೋಣ…?

    ಗುರುವಾರ ನಗರಸಭೆ ಸಭಾಂಗಣದಲ್ಲಿ ಆಯೋಜಿಸಿದ್ದ ಸಾಮಾನ್ಯ ಸಭೆಯಲ್ಲಿ ಸದಸ್ಯರು ನಾಗರಿಕರು ಎದುರಿಸುತ್ತಿರುವ ಜ್ವಲಂತ ಸಮಸ್ಯೆಗಳ ಕುರಿತು ಬೆಳಕು ಚೆಲ್ಲಿ ಅಧಿಕಾರಿಗಳನ್ನು ಎಚ್ಚರಿಸಿದ ಪರಿ ಇದಾಗಿತ್ತು.

    25ನೇ ವಾರ್ಡ್ ಸದಸ್ಯ ಮಂಜು ಮಾತನಾಡಿ, ತಮ್ಮ ವಾರ್ಡ್ ವ್ಯಾಪ್ತಿಯ ಚಿಕ್ಕಹುಣಸೂರು ಪ್ರದೇಶವು 1996ರಲ್ಲಿ ಗೋವಿಂದನಹಳ್ಳಿ ಪಂಚಾಯಿತಿಯಿಂದ ಸೇರ್ಪಡೆಗೊಂಡಿದ್ದು, ಈ ಪ್ರದೇಶದಲ್ಲಿ 80-90 ವರ್ಷಗಳಿಂದ ವಾಸಿಸುತ್ತಿರುವ 50ಕ್ಕೂ ಹೆಚ್ಚು ಬಡಕುಟುಂಬಗಳ ಮನೆಗಳ ಖಾತೆ ಆಗಿಲ್ಲ. ಪಂಚಾಯಿತಿಯಿಂದ ಮಾಲೀಕರ ಹೆಸರು ಮಾತ್ರ ದಾಖಲಾಗಿದೆ. ನಿವೇಶನದ ಅಳತೆಯಾಗಲಿ, ಇನ್ಯಾವುದೇ ದಾಖಲೆಯಿಲ್ಲ. ಹಾಗಾಗಿ ನಗರಸಭೆಯಿಂದ ಈ ಮನೆಗಳ ಸರ್ವೇ ಕಾರ್ಯ ನಡೆಸಿ ಇ ಸ್ವತ್ತು ಮಾಡಿಕೊಡುವಂತೆ ವಿಷಯ ಮಂಡಿಸಿದ್ದೇನೆ, ಪ್ರಯೋಜನವಾಗಿಲ್ಲ. ಬಡವರಿಗೆ ಸಹಾಯ ಮಾಡಲಾಗದೆ ಅಸಹಾಯಕನಾಗಿದ್ದೇನೆ. ಈ ಬಾರಿ ಇದಕ್ಕೆ ಸ್ಪಷ್ಟ ಉತ್ತರ ನೀಡಲೇಬೇಕೆಂದು ಹಟ ಹಿಡಿದರು.

    ನಗರಸಭೆಯ ಮುಖ್ಯ ಲೆಕ್ಕಾಧಿಕಾರಿ ಪುಟ್ಟರಾಜು ಮಾತನಾಡಿ, ಅನುಭೋಗದಲ್ಲಿರುವ ಕುಟುಂಬದ ವಸತಿ ಪ್ರದೇಶವನ್ನು ನಗರಸಭೆಯಿಂದ ಗುರುತಿಸಿ ಅಕ್ಕಪಕ್ಕದವರಿಂದ ನಿರಪೇಕ್ಷಣಾ ಕುರಿತು ಅಫಿಡವಿಟ್ ಪ್ರಮಾಣಪತ್ರ ಮಾಡಿಸಿ ಆ ಕುಟುಂಬಗಳಿಗೆ ಇ-ಸ್ವತ್ತು ಮಾಡಿಕೊಡಲು ಅವಕಾಶವಿದೆ ಎಂದರು. ಪ್ರಭಾರ ಪೌರಾಯುಕ್ತೆ ಎಲ್.ರೂಪಾ, 2 ತಿಂಗಳಲ್ಲಿ ಈ ಪ್ರಕ್ರಿಯೆಯನ್ನು ಪೂರ್ಣಗೊಳಿಸಲಾಗುವುದು ಎಂದು ನೀಡಿದರು.

    ಕೃಷ್ಣರಾಜ ಗುಪ್ತ ಮಾತನಾಡಿ, ಧಾರಾಕಾರ ಮಳೆಗೆ ನಗರದ ಎಸ್‌ಜೆ ರಸ್ತೆ, ಬಜಾರ್ ರಸ್ತೆ ಸೇರಿದಂತೆ ಪ್ರಮುಖ ರಸ್ತೆಗಳಲ್ಲೇ ಗುಂಡಿಮಯವಾಗಿದೆ. ಓಡಾಡಲೂ ಆಗದಂತಹ ಪರಿಸ್ಥಿತಿ ಇದೆ. ವರ್ಷದ ಹಿಂದೆ 1ಕೋಟಿ ರೂ.ವೆಚ್ಚದಡಿ ನಿರ್ಮಾಣಗೊಂಡ ಎಸ್‌ಜೆ ರಸ್ತೆ ಅತ್ಯಂತ ಕಳಪೆ ಕಾಮಗಾರಿಯಿಂದ ಕೂಡಿದೆ. ಗುಂಡಿಯಾಗಿರುವ ಪ್ರದೇಶಕ್ಕೆ ಕನಿಷ್ಠ ತೇಪೆ ಕಾರ್ಯವನ್ನಾದರೂ ಮಾಡಿಸಬೇಕು. 3 ತಿಂಗಳ ಹಿಂದೆ 30 ಲಕ್ಷ ರೂ.ವೆಚ್ಚದಡಿ ಹಾಕಿದ್ದ ಪ್ಯಾಚ್‌ವರ್ಕ್ ಪ್ರಯೋಜನಕ್ಕೆ ಬಾರದಂತಾಗಿದೆ ಎಂದರು,. ಜರೂರಾಗಿ ತಾತ್ಕಾಲಿಕ ಕ್ರಮ ಕೈಗೊಳ್ಳುವುದಾಗಿ ಅಧ್ಯಕ್ಷೆ ಗೀತಾ ನಿಂಗರಾಜು ಉತ್ತರಿಸಿದರು.

    ವಾಸಸ್ಥಳ ದೃಡೀಕರಣವೂ ಸಿಗುತ್ತಿಲ್ಲ: ಶರವಣ ಮಾತನಾಡಿ, 2 ತಿಂಗಳುಗಳಿಂದ ಖಾಲಿಯಾಗಿರುವ ನಗರಸಭೆ ಪೌರಾಯಕ್ತ ಹುದ್ದೆಯನ್ನು ಪ್ರಭಾರ ಆಯುಕ್ತರಾಗಿ ಪರಿಸರ ಇಂಜಿನಿಯರ್ ರೂಪಾ ನಿರ್ವಹಿಸುತ್ತಿದ್ದಾರೆ. ಆದರೆ ಪ್ರಭಾರ ಪೌರಾಯುಕ್ತರು ಕಂದಾಯ ವಿಭಾಗದ ಯಾವುದೇ ಸೇವೆಗಳನ್ನೂ ನೀಡುತ್ತಿಲ್ಲ. ಖಾತೆ ಬದಲಾವಣೆ, ನಮೂನೆ 3 ನೀಡುವುದು, ಎನ್‌ಒಸಿ, ವಾಸಸ್ಥಳ ದೃಢೀಕರಣ ಯಾವ ಸೇವೆಯೂ ನಾಗರಿಕರಿಗೆ ಸಿಗುತ್ತಿಲ್ಲ. ಜನರಿಗೆ ಉತ್ತರ ಕೊಟ್ಟು ಸಾಕಾಗಿದೆ. ನಿಮ್ಮ ಕೈಯಲ್ಲಿ ಮಾಡಲಾಗಿದ್ದಿದ್ದರೆ ಮೇಲಾಧಿಕಾರಿಗಳಿಗೆ ತಿಳಿಸಿ ಜವಾಬ್ದಾರಿ ಕಳದುಕೊಳ್ಳಿರಿ. ನವೆಂಬರ್ 2ರಿಂದ ನೀವು ಈ ಸೇವೆಗಳನ್ನು ಒದಗಿಸಲೇಬೇಕು ಎಂದು ಒತ್ತಾಯಿಸಿದಾಗ, ಪ್ರಭಾರ ಪೌರಾಯುಕ್ತರು ಮಾತನಾಡಿ, ಹೊಸ ಪೌರಾಯುಕ್ತರು ನೇಮಕಗೊಳ್ಳಲಿದ್ದಾರೆಂಬ ನಿರೀಕ್ಷೆಯಿಂದ ಹಾಗೆ ಮಾಡಿದ್ದೆ. ನ.2ರವರೆಗೂ ಪೌರಾಯುಕ್ತರು ನೇಮಕಗೊಳ್ಳದಿದ್ದರೆ ನಾನೇ ಕಂದಾಯ ಇಲಾಖೆ ಕೀ ಪಡೆದು ಸೇವೆ ನೀಡುತ್ತೇನೆ ಎಂದು ತಿಳಿಸಿದರು.

    ಅಂಬೇಡ್ಕರ್ ಪುತ್ಥಳಿ ಸ್ಥಾಪಿಸಿ: ತಾಲೂಕಿನ ವಿವಿಧ ಸಂಘಟನೆಗಳು ನಗರದ ಅಂಬೇಡ್ಕರ್ ಭವನದ ಮುಂಭಾಗ ಅಂಬೇಡ್ಕರ್ ಪುತ್ಥಳಿ ಸ್ಥಾಪಿಸಲು ಒತ್ತಾಯಿಸಿರುವ ಕುರಿತು ಚರ್ಚಿಸಿದ ರಮೇಶ್, ಈ ಕುರಿತು ಎಲ್ಲ ಸದಸ್ಯರು ಸಹಮತ ಹೊಂದಿದ್ದು, ಅಲ್ಲೇ ಸ್ಥಾಪಿಸಲು ಕ್ರಮಕೈಗೊಳ್ಳಿರೆಂದು ಅಧ್ಯಕ್ಷರಿಗೆ ಕೋರಿದಾಗ, ಪೌರಾಯುಕ್ತೆ ಮಾತನಾಡಿ, ಸರ್ಕಾರದಿಂದ 2012ರಲ್ಲಿ ಮಹನೀಯರ ಪುತ್ಥಳಿ ಸ್ಥಾಪನೆಗೆ ಹಲವಾರು ನಿರ್ದೇಶನಗಳನ್ನು ನೀಡಿದ್ದು, ಅದರಂತೆ ನಡೆದುಕೊಳ್ಳಬೇಕಿದೆ ಎಂದರು.

    ನಗರದ ಡಿವೈಎಸ್‌ಪಿ ಕಚೇರಿ ಮುಂಭಾಗ ನಂದಿನಿ ಹಾಲು ಮಾರಾಟ ಕೇಂದ್ರಕ್ಕೆ ನಿವೇಶನ ಕೋರಿರುವ ಕುರಿತು ಪ್ರಸ್ತಾಪಿಸಿದ ಸ್ವಾಮಿಗೌಡ, ನಗರ ವ್ಯಾಪ್ತಿಯಲ್ಲಿ ಸ್ಥಾಪಿಸಿರುವ ಹಾಲು ಕೇಂದ್ರಗಳ ಬಾಡಿಗೆ ಸರಿಯಾಗಿ ಪಾವತಿಯಾಗುತ್ತಿಲ್ಲ. ಬಾಡಿಗೆ ಪಾವತಿಗೆ ಕ್ರಮವಹಿಸಿರಿ. ಯಾವುದೇ ಕಾರಣಕ್ಕೂ ಬಾಡಿಗೆ ಪಾವತಿಯಾಗದೆ ನಂದಿನಿ ಹಾಲು ಕೇಂದ್ರಕ್ಕೆ ಜಾಗ ನೀಡಬಾರದೆಂದು ಒತ್ತಾಯಿಸಿದಾಗ ಸಭೆ ಅನುಮೋದನೆ ನೀಡಿತು.

    ನಗರದ ಕಾಫಿ ವರ್ಕ್ಸ್ ವಸತಿ ಪ್ರದೇಶದಲ್ಲಿ ವಿದ್ಯುತ್ ಸಂಪರ್ಕಕ್ಕಾಗಿ ಕಟ್ಟಡ ಪರವಾನಗಿ ಮತ್ತು ವಿದ್ಯುತ್ ಎನ್‌ಒಸಿ ಪಡೆಯಲು 7-8 ಸಾವಿರ ರೂ.ಶುಲ್ಕ ವಿಧಿಸಿದ್ದೀರಲ್ಲ ಯಾಕೆ? ಬಡವರು ಬದುಕಬಾರದೇ? ಕಾಫಿ ವರ್ಕ್ಸ್ ವಸತಿ ಪ್ರದೇಶದ ನಾಗರಿಕರಿಗೆ ಕುಡಿಯುವ ನೀರಿನ ಪೂರೈಕೆ ಕೂಡ ಸರಿಯಾಗಿ ಆಗುತ್ತಿಲ್ಲ. ರಸ್ತೆ, ಚರಂಡಿಯಿಲ್ಲ. ಕೂಡಲೇ ಶುಲ್ಕ ಪರಿಷ್ಕರಿಸಿ ಮೂಲಸೌಕರ್ಯ ಕಲ್ಪಿಸರೆಂದು ಸದಸ್ಯ ಹರೀಶ್ ಅಧ್ಯಕ್ಷರ ಮುಂಭಾಗಕ್ಕೆ ಬಂದು ಆಕ್ರೋಶ ವ್ಯಕ್ತಪಡಿಸಿದರು. ಈ ಕುರಿತು ಪರಿಶೀಲಿಸುವುದಾಗಿ ಪ್ರಭಾರ ಪೌರಾಯುಕ್ತೆ ಸಮಾಧಾನಿಸಿದರು.

    1.34 ಕೋಟಿ ರೂ. ಕಂದಾಯ ಬಾಕಿ : ನಗರದ ಎಸ್‌ಸಿವಿಡಿಎಸ್ ಜನತಾ ಚಿತ್ರಮಂದಿರವು ನಗರಸಭೆ ಆಸ್ತಿಯಾಗಿದ್ದು, ಚಿತ್ರಮಂದಿರದ ಬಾಡಿಗೆದಾರ 2015ರಿಂದ ಬಾಡಿಗೆ ಪಾವತಿಸದೆ ಒಟ್ಟು 1.34 ಕೋಟಿ ರೂ.ಬಾಕಿ ಉಳಿಸಿಕೊಂಡಿದ್ದಾರೆ. ಈ ಕುರಿತು 3 ಬಾರಿ ನೋಟಿಸ್ ಮತ್ತು ಇದೀಗ ಲೀಗಲ್ ನೋಟಿಸ್ ನೀಡಲಾಗಿದೆ ಎಂದು ಕಂದಾಯ ಅಧಿಕಾರಿ ಸಭೆಗೆ ಮಾಹಿತಿ ನೀಡಿದರು. ಮೊದಲು ಕಟ್ಟಡವನ್ನು ನಗರಸಭೆ ಸುಪರ್ದಿಗೆ ಪಡೆಯಬೇಕು. ಕಂದಾಯ ವಸೂಲಿಗೆ ನಿರ್ದಾಕ್ಷಿಣ್ಯ ಕ್ರಮವಹಿಸಿರೆಂದು ರಮೇಶ್ ಒತ್ತಾಯಿಸಿದರು.

    ಸ್ವಾಮಿಗೌಡ ಹುಡಾ ಸದಸ್ಯ : ಹುಣಸೂರು ನಗರ ಪ್ರಾಧಿಕಾರದ ಸದಸ್ಯರಾಗಿ ವಾರ್ಡ್ ನಂ.5ರ ಸದಸ್ಯ ಸ್ವಾಮಿಗೌಡರನ್ನು ನೇಮಿಸಲಾಗಿದೆ ಎಂದು ನಗರಸಭಾಧ್ಯಕ್ಷೆ ಗೀತಾ ನಿಂಗರಾಜು ಸಭೆಯಲ್ಲಿ ಘೋಷಿಸಿದರು. ಈ ಹಿಂದೆ ಸದಸ್ಯರಾಗಿದ್ದ 8ನೇ ವಾರ್ಡಿನ ಪಕ್ಷೇತರ ಸದಸ್ಯ ಎಚ್.ಪಿ.ಸತೀಶ್ ಕುಮಾರ್‌ರ ಅವಧಿ ಪೂರ್ಣಗೊಂಡ ಹಿನ್ನೆಲೆಯಲ್ಲಿ ಸ್ವಾಮಿಗೌಡರನ್ನು ನೇಮಿಸಲಾಗಿದೆ ಎಂದು ತಿಳಿಸಿದರು. ಸದಸ್ಯರು ಸ್ವಾಮಿಗೌಡರನ್ನು ಅಭಿನಂದಿಸಿದರು.

    ಉಪಾಧ್ಯಕ್ಷೆ ಆಶಾ ಕೃಷ್ಣನಾಯಕ, ಸದಸ್ಯರಾದ ಗಣೇಶ್ ಕುಮಾರಸ್ವಾಮಿ, ಹರೀಶ್, ಅನುಷಾ, ಸೌರಭ ಸಿದ್ದರಾಜು, ವಿವೇಕ್, ದೇವರಾಜ್, ಮಾಲಿಕ್ ಪಾಷಾ, ರಾಣಿ ಪೆರುಮಾಳ್, ಅಧಿಕಾರಿಗಳು ಮತ್ತು ಸಿಬ್ಭಂದಿ ಹಾಜರಿದ್ದರು.

    Array

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts