More

    ಸ್ಮಶಾನ ಜಾಗ ಹದ್ದುಬಸ್ತು ಮಾಡಲು ಒತ್ತಾಯ

    ಎಚ್.ಡಿ.ಕೋಟೆ: ಸ್ಮಶಾನಕ್ಕೆ ಮೀಸಲಿಟ್ಟ ಜಾಗವನ್ನು ಕಂದಾಯ ಇಲಾಖೆ ಹಾಗೂ ಸರ್ವೇ ಇಲಾಖೆಯ ಅಧಿಕಾರಿಗಳು ಸರ್ವೇ ಮಾಡಿ, ಹದ್ದುಬಸ್ತು ಮಾಡಿಕೊಡದೆ ವಿಳಂಬ ಮಾಡುತ್ತಿದ್ದಾರೆ ಎಂದು ಆರೋಪಿಸಿ ತಾಲೂಕು ಆಡಳಿತಸೌಧದ ಎದುರು ಪಟ್ಟಣದ ಸಿದ್ದಪ್ಪಾಜಿ ರಸ್ತೆಯ ನಿವಾಸಿಗಳು ಪ್ರತಿಭಟನೆ ನಡೆಸಿದರು.

    ಸಿದ್ದಪ್ಪಾಜಿ ರಸ್ತೆಯ ಮುನ್ನೂರಕ್ಕೂ ಹೆಚ್ಚು ಮಹಿಳೆಯರು ಹಾಗೂ ನಿವಾಸಿಗಳು ಶನಿವಾರ ತಾಲೂಕು ಆಡಳಿತಸೌಧದ ಬಾಗಿಲಿಗೆ ಅಡ್ಡಲಾಗಿ ಕುಳಿತು ಸಂಬಂಧಪಟ್ಟ ಅಧಿಕಾರಿಗಳ ವಿರುದ್ಧ ಘೋಷಣೆ ಕೂಗಿ ಆಕ್ರೋಶವ್ಯಕ್ತಪಡಿಸಿದರು.

    ಪರಿಶಿಷ್ಟ ಜಾತಿ ಜನಾಂಗಕ್ಕೆ ಮೀಸಲಿಟ್ಟ ಸ್ಮಶಾನ ಜಾಗವನ್ನು ಉಚ್ಚ ನ್ಯಾಯಾಲಯದ ಆದೇಶ ಇದ್ದರು ಕೂಡ ಅಧಿಕಾರಿಗಳು ಸರ್ವೇ ನಡೆಸಿ ಹದ್ದುಬಸ್ತು ಮಾಡಲು ವಿಳಂಬ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.

    ಎಚ್.ಡಿ.ಕೋಟೆ ಗ್ರಾಮದ ಸ.ನಂ.57/2 ರಲ್ಲಿ 0.15 ಗುಂಟೆ ಹಾಗೂ ಸ.ನಂ.239 ರಲ್ಲಿ 0.27 ಗುಂಟೆ ಹಾಗೂ ತಾರಕ ನದಿ ಪಕ್ಕದಲ್ಲಿ ಇದ್ದ ಹೆಚ್ಚುವರಿ ಜಾಗವನ್ನು ಪರಿಶಿಷ್ಟ ಜಾತಿಯವರಿಗೆ ಸ್ಮಶಾನ ಭೂಮಿ ಕಲ್ಪಿಸಬೇಕು ಎಂದು ಮೈಸೂರು ವಿಶೇಷ ಜಿಲ್ಲಾಧಿಕಾರಿಗಳು 1994ರಲ್ಲಿ ಆದೇಶ ನೀಡಿದ್ದಾರೆ. ಈ ಆದೇಶವನ್ನು ಪ್ರಶ್ನಿಸಿ ಸ್ಮಶಾನ ಒತ್ತುವರಿದಾರರು ನ್ಯಾಯಾಲಯಕ್ಕೆ ದಾವೆ ಹೂಡಿದ ನಂತರ ಹೈಕೋರ್ಟ್ ಇವರ ದಾವೆಯನ್ನು ವಜಾ ಮಾಡಿ ಸ್ಮಶಾನಕ್ಕೆ ನೀಡಬೇಕು ಎಂದು ಜಿಲ್ಲಾಧಿಕಾರಿಗೆ ನಿರ್ದೇಶನ ನೀಡಿದೆ. ಆದರೂ ಅಧಿಕಾರಿಗಳು ಸ್ಮಶಾನ ಜಾಗವನ್ನು ತೆರವುಗೊಳಿಸದೆ ಭೂಮಾಲೀಕರಿಗೆ ಸಹಕಾರ ನೀಡುತ್ತಿದ್ದಾರೆ ಎಂದು ದೂರಿದರು.

    ಲಾರಿ ಪ್ರಕಾಶ್ ಮಾತನಾಡಿ, ಕೋರ್ಟ್ ಆದೇಶ ಉಲ್ಲಂಘನೆ ಮಾಡಿ ಸ್ಮಶಾನ ಜಾಗವನ್ನು ಒತ್ತುವರಿ ಮಾಡಿಕೊಂಡಿರುವವರ ವಿರುದ್ಧ ಕ್ರಮ ಜರುಗಿಸಿ ಜಾಗವನ್ನು ಸಂಬಂಧಪಟ್ಟವರು ಬಿಡಿಸಿಕೊಡಬೇಕು. ತಪ್ಪಿದಲ್ಲಿ ಮುಂದಿನ ದಿನಗಳಲ್ಲಿ ಹೋರಾಟ ರೂಪಿಸುವುದಾಗಿ ಹೇಳಿದರು.
    ತಹಸೀಲ್ದಾರ್ ಶ್ರೀನಿವಾಸ್ ಮಾತನಾಡಿ, ಹೈಕೋರ್ಟ್ ಆದೇಶದ ಪ್ರಕಾರ ಈಗಾಗಲೇ ದುರಸ್ತಿ ಆಗಿರುವ ಸ್ಮಶಾನ ಜಾಗದ ಪೋಡ್ ರದ್ದು ಮಾಡಲು ಸರ್ವೇ ಇಲಾಖೆ ಅಧಿಕಾರಿಗಳಿಗೆ ವರದಿ ಸಲ್ಲಿಸಲಾಗಿದೆ. ಹೈಕೋರ್ಟ್ ಆದೇಶವನ್ನು ಉಲ್ಲಂಘನೆ ಮಾಡಿರುವ ಒತ್ತುವರಿದಾರರ ವಿರುದ್ಧ ಕ್ರಮ ಜರುಗಿಸಲು ಭೂ ದಾಖಲೆ ಅಧಿಕಾರಿಗಳು ಕ್ರಮವಹಿಸಲಿದ್ದಾರೆ ಎಂದು ತಿಳಿಸಿದರು.

    ಯಜಮಾನ ಸೋಮಣ್ಣ, ಪುರಸಭಾ ಸದಸ್ಯ ನಂಜಪ್ಪ, ಚಾ.ಸೋಮಣ್ಣ, ಸ್ವಾಮಿ, ಎಚ್.ಸಿ.ವೆಂಕಟೇಶ, ವೈರಮುಡಿ ಮಂಜು, ಚನ್ನ ಕೋಟೆ, ಲಾಟರಿ ನಾಗರಾಜು, ಸಿದ್ದರಾಜು, ಸದಾಶಿವ, ಶ್ರೀನಿವಾಸ್, ನಂಜುಂಡಿ, ಆಟೋ ಗುರು, ಹುಚ್ಚಪ್ಪ, ಆಕಾಶ್, ತೇಜು ಗುರುಮಲ್ಲು, ಕೃಷ್ಣ, ಮಹೇಶ, ಕಾರಹುಂಡಿ ಸೋಮಣ್ಣ, ಪುಟ್ಟಮಾದ, ಸಿಂಗ್ರಯ್ಯ, ಹಾಲಯ್ಯ, ನರಸಿಂಹ, ಅಂಬೇಡ್ಕರ್ ಸೇನೆ ತಾಲೂಕು ಅಧ್ಯಕ್ಷ ಮಹಾದೇವಸ್ವಾಮಿ, ಪಾರ್ಥಸಾರಥಿ, ಆಟೋ ರಾಮು, ನಾಗಣ್ಣ, ಸಂದೇಶ, ವರನಂದಮ್ಮ, ಈರಮ್ಮ, ಗೌರಮ್ಮ ಇತರರು ಇದ್ದರು.


    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts