More

    ಸಮರ್ಪಣೆ ಭಾವದ ಕರ್ತವ್ಯವೇ ಕರ್ಮಯೋಗ

    ಶಿರಸಿ: ಕರ್ಮಯೋಗದ ಅನುಷ್ಠಾನದಿಂದ ಮಾನಸಿಕ ಉದ್ವೇಗ ಕಳೆಯುತ್ತದೆ. ಇದು ಗೀತೆಯು ನೀಡಿದ ದಿವ್ಯ ಔಷಧವಾಗಿದೆ ಎಂದು ಸ್ವರ್ಣವಲ್ಲೀ ಶ್ರೀ ಗಂಗಾಧರೇಂದ್ರ ಸರಸ್ವತೀ ಸ್ವಾಮೀಜಿ ಹೇಳಿದರು. ಭಗವದ್ಗೀತೆ ಅಭಿಯಾನದ ಅಂಗವಾಗಿ ಇಲ್ಲಿನ ಸ್ವರ್ಣವಲ್ಲೀ ಮಠದಲ್ಲಿ ಬುಧವಾರ ಆಯೋಜಿಸಿದ್ದ ಪ್ರವಚನ ಮಾಲಿಕೆಯ ಸಾನ್ನಿಧ್ಯ ವಹಿಸಿ ಶ್ರೀಗಳು ಮಾತನಾಡಿದರು.

    ಭಗವಂತನಿಗೆ ಸಮರ್ಪಣೆ ಭಾವನೆಯಿಂದ ಕರ್ಮವನ್ನು ಮಾಡುವುದೇ ಕರ್ಮಯೋಗ. ಜ್ಞಾನ- ಮೋಕ್ಷಗಳೇ ಈ ಕರ್ಮಯೋಗದ ಅಂತಿಮ ಲಕ್ಷ್ಯ ಆದರೆ, ಅನೇಕ ಲೌಕಿಕ ಪ್ರಯೋಜನಗಳೂ ಕರ್ಮಯೋಗದಿಂದ ಸಿದ್ಧಿಸುತ್ತವೆ. ಅವುಗಳಲ್ಲಿ ಮಾನಸಿಕ ಉದ್ವೇಗದ ನಿವಾರಣೆ ಕೂಡ ಒಂದಾಗಿದೆ. ಆಧುನಿಕ ಪ್ರಪಂಚವನ್ನು ಕಾಡುತ್ತಿರುವ ಜ್ವಲಂತ ಸಮಸ್ಯೆಗಳಲ್ಲಿ ಮಾನಸಿಕ ಉದ್ವೇಗವೂ ಒಂದು. ಅತಿಯಾದ ಫಲದ ನಿರೀಕ್ಷೆ ಹಾಗೂ ತಾನು, ತನ್ನದು ಎಂಬ ಗಾಢವಾದ ಭಾವಗಳೇ ಇದಕ್ಕೆ ಪ್ರಮುಖ ಕಾರಣಗಳಾಗಿವೆ. ಕರ್ತವ್ಯ ಮತ್ತು ಭಗವಂತನಿಗೋಸ್ಕರ ಎಂಬ ಭಾವದಿಂದ ಫಲದ ಕುರಿತು ಅತಿಯಾದ ಆಸಕ್ತಿ ಬಿಟ್ಟು ನಮಗೆ ವಿಹಿತವಾದ ಕರ್ಮವನ್ನು ಮಾಡಿದಾಗ ಮನಸ್ಸಿನಲ್ಲಿ ಯಾವುದೇ ಉದ್ವೇಗಗಳು ಉಂಟಾಗಲಾರವು. ಈ ಹಿನ್ನೆಲೆಯಲ್ಲಿ ಕರ್ಮಯೋಗದಿಂದ ಮಾನಸಿಕ ಉದ್ವೇಗ ಶಮನವಾಗುತ್ತದೆ ಎಂದರು.

    ಶರೀರ- ಇಂದ್ರಿಯ- ಅಂತಃಕರಣಗಳು ಸತ್ವ- ರಜ- ತಮೋ ಗುಣಗಳೆಂಬ ಮೂಲ ಪ್ರಕೃತಿಯಿಂದ ಹುಟ್ಟಿವೆ. ಈ ಶರೀರ- ಇಂದ್ರಿಯ- ಅಂತಃಕರಣಗಳೇ ಲೌಕಿಕ ಹಾಗೂ ಶಾಸ್ತ್ರೀಯವಾದ ಎಲ್ಲ ಕ್ರಿಯೆಗಳನ್ನೂ ಮಾಡುತ್ತವೆ. ಹಾಗಿದ್ದರೂ ತಾನು ಈ ಶರೀರಾದಿಗಳಿಗಿಂತ ಬೇರೆ ಎಂಬ ವಾಸ್ತವಿಕತೆಯ ಅರಿವು ಅಜ್ಞಾನಿಗಳಿಗೆ ಇರುವುದಿಲ್ಲ. ಆದ್ದರಿಂದ ಅಜ್ಞಾನಿಯು ತನ್ನನ್ನೇ ಕರ್ತಾ ಎಂದು ಭಾವಿಸುತ್ತಾನೆ. ಈ ಶರೀರಾದಿಗಳೇ ತಮ್ಮ ಕೆಲಸಗಳನ್ನು ನಿರ್ವಹಿಸುತ್ತವೆ. ಅಂತಹ ಶರೀರಾದಿಗಳಿಗಿಂತ ಅವುಗಳ ಕ್ರಿಯೆಗಳಿಗಿಂತಲೂ ತಾನು ಬೇರೆ ಎಂಬ ತತ್ವವನ್ನು ಜ್ಞಾನಿಯು ಅರಿತಿರುತ್ತಾನೆ. ಆದ್ದರಿಂದ ಕರ್ಮವನ್ನು ಮಾಡಿದರೂ ಜ್ಞಾನಿಗೆ ಅದು ಅಂಟಿಕೊಳ್ಳುವುದಿಲ್ಲ. ಇದುವೇ ಅಜ್ಞಾನಿಗಳ ದೃಷ್ಟಿಗೂ, ಜ್ಞಾನಿಗಳ ದೃಷ್ಟಿಗೂ ಇರುವ ವ್ಯತ್ಯಾಸ. ಹೀಗಿದ್ದರೂ ಜ್ಞಾನಿಯು ಅಜ್ಞಾನಿಗಳಲ್ಲಿರುವ ಕರ್ಮಶ್ರದ್ಧೆಯನ್ನು ವಿಚಲಿತಗೊಳಿಸಬಾರದು ಎಂಬುದು ಭಗವಂತನ ಆಶಯವಾಗಿದೆ ಎಂದು ಸ್ವರ್ಣವಲ್ಲೀ ಶ್ರೀಗಳು ಪ್ರವಚನದ ಮೂಲಕ ನಿರೂಪಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts