More

    ಸಮರ್ಪಕ ವಿದ್ಯುತ್ ವಿತರಣೆಗೆ ಆಗ್ರಹ – ಎಚ್.ಬಸವಾಪುರದಲ್ಲಿ ಟೈರ್ ಸುಟ್ಟು ಪ್ರತಿಭಟನೆ -ಒಂದೂವರೆ ತಾಸು ರಸ್ತೆ ತಡೆ

    ದಾವಣಗೆರೆ: ಕೃಷಿ ಪಂಪ್‌ಸೆಟ್‌ಗಳಿಗೆ ಸಮರ್ಪಕ ವಿದ್ಯುತ್ ಪೂರೈಸುತ್ತಿಲ್ಲ ಎಂದು ಆರೋಪಿಸಿ, ತಾಲೂಕಿನ ಎಚ್.ಬಸವಾಪುರ, ಕ್ಯಾತನಹಳ್ಳಿ ಹಾಗೂ ಹುಚ್ಚವ್ವನಹಳ್ಳಿ ಗ್ರಾಮಸ್ಥರು, ರೈತರು ಶುಕ್ರವಾರ ಎಚ್.ಬಸವಾಪುರ ಗ್ರಾಮದಲ್ಲಿ ಪ್ರತಿಭಟನೆ ನಡೆಸಿದರು.
    ಒಂದೂವರೆ ತಾಸು ಕಾಲ ಗ್ರಾಮದ ಆನಗೋಡು-ಹೊಳಲ್ಕೆರೆ ಮುಖ್ಯರಸ್ತೆ ತಡೆದು ಪ್ರತಿಭಟಿಸಿದ ರೈತರು ಸ್ಥಳಕ್ಕೆ ಬೆಸ್ಕಾಂ ಅಧಿಕಾರಿಗಳು ಬರುವಂತೆ ಪಟ್ಟು ಹಿಡಿದರು. ಟೈರ್‌ಗಳನ್ನು ಸುಟ್ಟು ಆಕ್ರೋಶ ವ್ಯಕ್ತಪಡಿಸಿದರು.
    ಒಂದು ತಿಂಗಳಿಂದ ಮಳೆಯಿಲ್ಲದೆ ರೈತರು ಪರಿತಪಿಸುತ್ತಿದ್ದಾರೆ. ಕೃಷಿ ಪಂಪ್‌ಸೆಟ್, ಬೋರ್‌ವೆಲ್ ನೀರು ಪಡೆಯಲು ಸಮರ್ಪಕ ವಿದ್ಯುತ್ ಪೂರೈಸಲಾಗುತ್ತಿಲ್ಲ. ಏಳು ತಾಸು ನೀಡುವುದಾಗಿ ಹೇಳುವ ಬೆಸ್ಕಾಂ ಅಧಿಕಾರಿಗಳು ಐದು ತಾಸು ಸಹ ಗುಣಮಟ್ಟದ ವಿದ್ಯುತ್ ನೀಡುತ್ತಿಲ್ಲ ಎಂದು ರೈತರು ಕಿಡಿ ಕಾರಿದರು.
    ಕಳೆದ 15 ದಿನದಿಂದ ಲೋಡ್‌ಶೆಡ್ಡಿಂಗ್ ಮಾಡಲಾಗುತ್ತಿದೆ. ಇದರ ನೆಪದಲ್ಲಿ ರಾತ್ರಿ 2 ತಾಸು, ಬೆಳಗ್ಗೆ 3 ತಾಸು ವಿದ್ಯುತ್ ಕೊಡುವಲ್ಲಿಯೂ ವ್ಯತ್ಯಾಸ ಮಾಡಲಾಗುತ್ತಿದೆ. ರೈತರು ರಾತ್ರಿ ವೇಳೆ ಹೊಲಕ್ಕೆ ಹೋಗದಿದ್ದರೂ ವಿದ್ಯುತ್ ನೀಡುವುದಾಗಿ ಹೇಳುತ್ತಿದ್ದಾರೆ ಎಂದು ರೈತರು ಸಿಟ್ಟು ಪ್ರದರ್ಶಿಸಿದರು.
    ಸ್ಥಳಕ್ಕೆ ಬೆಸ್ಕಾಂ ಎಇಇ ತೀರ್ಥೇಶ್ ಹಾಗೂ ವಿಭಾಗ ಅಧಿಕಾರಿ ಚೇತನ್ ಸ್ಥಳಕ್ಕೆ ಧಾವಿಸಿ ರೈತರ ಅಹವಾಲು ಆಲಿಸಿದರು. ನಮಗೆ ನಿಮ್ಮ ಸಬೂಬು ಬೇಡ. ರೈತರಿಗೆ ಸಮರ್ಪಕ ವಿದ್ಯುತ್ ನೀಡಿ. ಇನ್ನೆರಡು ದಿನದಲ್ಲಿ ಇದು ಕಾರ್ಯಗತ ಆಗದಿದ್ದಲ್ಲಿ ಮತ್ತೆ ರಸ್ತೆ ತಡೆ ನಡೆಸುವುದಾಗಿ ಎಚ್ಚರಿಕೆ ನೀಡಿದರು.
    ಗ್ರಾಪಂ ಮಾಜಿ ಅಧ್ಯಕ್ಷ ಆರ್.ಸಿ.ಗಣೇಶ್, ಹುಚ್ಚವ್ವನಹಳ್ಳಿ ಗ್ರಾಪಂ ಮಾಜಿ ಅಧ್ಯಕ್ಷ ಶಾಂತಕುಮಾರ್ ಕ್ಯಾತನಹಳ್ಳಿ, ಬಿಜೆಪಿ ಮುಖಂಡ ಬಿ.ಎಸ್.ರಮೇಶ್, ಎನ್.ಬಿ. ಮಹೇಶ್, ಅಶೋಕ್, ಕಾಂಗ್ರೆಸ್ ಮುಖಂಡ ಆರ್. ಸಿದ್ದೇಶ್, ಪ್ರಗತಿಪರ ರೈತ ಜಿ.ಎಂ. ಕಲ್ಲೇಶ್, ಕೆ.ಜಿ.ಸತೀಶ್, ಹಿಂಡಸಘಟ್ಟ ನಾಗರಾಜಪ್ಪ, ಹುಚ್ಚವ್ವನಹಳ್ಳಿ ಮಂಜುನಾಥ್ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts