More

    ಸಮರ್ಪಕ ವಿದ್ಯುತ್ ಪೂರೈಕೆಗೆ ಆಗ್ರಹ

    ಮುಂಡರಗಿ: ಸಮರ್ಪಕ ವಿದ್ಯುತ್ ಪೂರೈಕೆಗೆ ಒತ್ತಾಯಿಸಿ ತಾಲೂಕಿನ ಕೊರ್ಲಹಳ್ಳಿ, ಗಂಗಾಪೂರ, ಶೀರನಹಳ್ಳಿ, ಬೀಡನಾಳ ಗ್ರಾಮದ ಹಲವು ರೈತರು ಮಂಗಳವಾರ ರಾತ್ರಿ ಪಟ್ಟಣದ ವಿದ್ಯುತ್ ಪ್ರಸರಣ ಘಟಕವನ್ನು ಬಂದ್ ಮಾಡಿ ದಿಢೀರ್ ಪ್ರತಿಭಟನೆ ನಡೆಸಿದರು.

    ರಾಜ್ಯ ಕಬ್ಬು ಬೆಳೆಗಾರರ ಸಂಘದ ಪ್ರಧಾನ ಕಾರ್ಯದರ್ಶಿ ವೀರನಗೌಡ ಪಾಟೀಲ ಮಾತನಾಡಿ, ‘ಸರ್ಕಾರದ ಆದೇಶದಂತೆ ರೈತರ ಪಂಪ್​ಸೆಟ್​ಗಳಿಗೆ ಹಗಲು ನಿರಂತರ 7 ತಾಸು ತ್ರೀ ಫೇಸ್ ವಿದ್ಯುತ್ ಪೂರೈಸಬೇಕು. ಆದರೆ, ಐದಾರು ವರ್ಷಗಳಿಂದಲೂ 6 ತಾಸು ತ್ರೀ ಫೇಸ್ ಮಾತ್ರ ಪೂರೈಸಲಾಗುತ್ತಿದೆ. ಡಿಸೆಂಬರ್​ನಿಂದಲೂ ಈಗ ಕೊಡುತ್ತಿರುವ 6 ತಾಸು ತ್ರೀ ಫೇಸ್ ವಿದ್ಯುತ್ ಸಹ ನಿರಂತರವಾಗಿ ಪೂರೈಸುತ್ತಿಲ್ಲ. 6 ತಾಸು ತ್ರೀ ಫೇಸ್​ನಲ್ಲಿ 7-8 ಬಾರಿ ಟ್ರಿಪ್ ಆಗಿ ವಿದ್ಯುತ್ ಹೋಗುತ್ತದೆ. ಪ್ರತಿ ಸಾರಿ ಟ್ರಿಪ್ ಆದಾಗ ನಾಲ್ಕೈದು ಕಿ.ಮೀ.ದೂರದಲ್ಲಿರುವ ಹೊಲದಿಂದ ತುಂಗಭದ್ರಾ ನದಿ ದಂಡೆಗೆ ಬಂದು ಮೋಟರ್ ಆನ್ ಮಾಡುವಂತಾಗಿದೆ. ಇದರಿಂದ ರೈತರಿಗೆ ತುಂಬಾ ತೊಂದರೆಯಾಗಿದೆ. ಈ ಬಗ್ಗೆ ಹೆಸ್ಕಾಂ ಎಇಇ, ಇಇ ಅವರ ಗಮನಕ್ಕೆ ತಂದರೂ ಇದುವರೆಗೆ ಸಮಸ್ಯೆ ಸರಿಪಡಿಸದೆ ನಿಷ್ಕಾಳಜಿ ತೋರುತ್ತಿದ್ದಾರೆ’ ಎಂದು ಆಕ್ರೋಶ ವ್ಯಕ್ತಪಡಿಸಿದರು.

    ಸಮರ್ಪಕ ವಿದ್ಯುತ್ ಪೂರೈಕೆ ಇಲ್ಲದ ಕಾರಣ ಬೆಳೆಗಳಿಗೆ ಸರಿಯಾಗಿ ನೀರಿಲ್ಲದೆ ಒಣಗುವ ಹಂತ ತಲುಪಿವೆ. ಆದ್ದರಿಂದ ಈ ಬಗ್ಗೆ ಗಮನ ಹರಿಸಿ ರೈತರ ಪಂಪ್​ಸೆಟ್​ಗಳಿಗೆ ಸಮರ್ಪಕ ವಿದ್ಯುತ್ ಪೂರೈಕೆ ಮಾಡಬೇಕು ಎಂದು ಒತ್ತಾಯಿಸಿದರು.

    ಪ್ರತಿಭಟನಾ ಸ್ಥಳಕ್ಕೆ ಸಿಪಿಐ ಸುನೀಲ ಸವದಿ ಭೇಟಿ ನೀಡಿ ರೈತರೊಂದಿಗೆ ರ್ಚಚಿಸಿದರು. ಸಮರ್ಪಕ ವಿದ್ಯುತ್ ಪೂರೈಕೆ ಕುರಿತಂತೆ ತಹಸೀಲ್ದಾರ್ ಸಮ್ಮುಖದಲ್ಲಿ ಹೆಸ್ಕಾಂ ಅಧಿಕಾರಿಗಳೊಂದಿಗೆ ಬುಧವಾರ ಸಭೆ ನಡೆಸಿ ಸಮಸ್ಯೆ ಬಗೆಹರಿಸಲಾಗುತ್ತದೆ ಎಂದರು. ತಹಸೀಲ್ದಾರ್ ಆಶಪ್ಪ ಪೂಜಾರಿ ಅವರು ದೂರವಾಣಿ ಮೂಲಕ ರೈತರಿಗೆ ಸಮಸ್ಯೆ ಪರಿಹರಿಸುವ ಭರವಸೆ ನೀಡಿದರು. ಇದಕ್ಕೆ ಸ್ಪಂದಿಸಿ ರೈತರು ಪ್ರತಿಭಟನೆ ಕೈಬಿಟ್ಟರು. ರೈತರ ಪ್ರತಿಭಟನೆಯಿಂದಾಗಿ ಪಟ್ಟಣ ಸೇರಿ ತಾಲೂಕಿನ ವಿವಿಧೆಡೆ ಸುಮಾರು ಒಂದೂವರೆ ತಾಸು ವಿದ್ಯುತ್ ಸ್ಥಗಿತಗೊಂಡಿತ್ತು.

    ಬಾಪೂಜಿ ಮಧ್ಯಪಾಟಿ, ಅಶೋಕ ಸೀಗೇನಹಳ್ಳಿ, ಮಾಬುಸಾಬ್ ಮುಂಡರಗಿ, ಮಹೇಶ ಪುರದ, ಚಂದ್ರು ಗಾಂಜಿ, ಮಂಜಪ್ಪ ಮುದೆಯಣ್ಣವರ, ಆನಂದ ಹುಲಿಕಟ್ಟಿ, ಬಸಯ್ಯ ಹಿರೇಮಠ, ಭೀಮಪ್ಪ ಕೊಂಬಿನ್, ಖಾಸಿಂ ಹಂಚಿನಾಳ, ರಾಜಶೇಖರ ಹುಲಿಕಟ್ಟಿ, ಗಂಗಾಧರ ಬಟ್ಟೂರ, ಬಾಷಾ ಸಾಬಣ್ಣವರ, ಪಾಂಡು ಗೊಂಡಬಾಳ ಇತರರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts