More

    ಸನವಳ್ಳಿ ಡ್ಯಾಮ್ ನೀರು ಅರಣ್ಯ ಪಾಲು

    ಮುಂಡಗೋಡ: ತಾಲೂಕಿನ ಸನವಳ್ಳಿ ಡ್ಯಾಮ್ೆ ಬಂದು ಸೇರಬೇಕಿದ್ದ ನೀರು ಪಟ್ಟಣದ ಹೊರವಲಯದಲ್ಲಿ ಕಾಲುವೆ ಒಡೆದಿದ್ದರಿಂದ ಅರಣ್ಯದಲ್ಲಿ ಹರಿದು ಪೋಲಾಗುತ್ತಿದೆ. ಇದಕ್ಕೆ ಪಟ್ಟಣದ ಸಣ್ಣ ನೀರಾವರಿ ಇಲಾಖೆ ಉಪವಿಭಾಗದ ಅಧಿಕಾರಿಗಳ ನಿರ್ಲಕ್ಷ್ಯೇ ಕಾರಣ ಎಂಬುದು ಸನವಳ್ಳಿ ಗ್ರಾಮಸ್ಥರ ಆರೋಪವಾಗಿದೆ.

    ಶಿಗ್ಗಾಂವಿ ತಾಲೂಕಿನಿಂದ ಕಾಲುವೆ ಮೂಲಕ ಹರಿದು ಬರುವ ನೀರು ಸನವಳ್ಳಿ ಡ್ಯಾಮ್ ಸೇರುವಂತೆ ಬಸವನಕಟ್ಟಿ ಹತ್ತಿರ ಚೆಕ್ ಡ್ಯಾಮ್ ನಿರ್ವಿುಸಲಾಗಿದೆ. ಇಲ್ಲಿ ನೀರು ಸಂಗ್ರಹವಾದ ನಂತರ ಹೆಚ್ಚುವರಿಯಾಗುವ ನೀರು ಕಾಲುವೆ ಮೂಲಕ ಹರಿದು ಬಂದು ಡ್ಯಾಮ್ ಸೇರಬೇಕು. ಪ್ರತಿ ವರ್ಷ ಕಾಲುವೆ ನಿರ್ವಹಣೆಗಾಗಿ ಅನುದಾನ ಬರುತ್ತದೆ. ಆದರೆ, ಸಣ್ಣ ನೀರಾವರಿ ಇಲಾಖೆಯವರು ಸಮರ್ಪಕವಾಗಿ ಅನುದಾನದ ಬಳಕೆ ಮಾಡುತ್ತಿಲ್ಲ. ಕಾಲುವೆ ಒಡೆದು ಡ್ಯಾಮ್ ಸೇರುವ ನೀರು ಅರಣ್ಯದ ಮೂಲಕ ಹರಿದು ಪೋಲಾಗುತ್ತಿದೆ.

    ಗ್ರಾಮಸ್ಥರಿಂದ ವ್ಯಾಪಕ ದೂರುಗಳು ಬಂದ ಹಿನ್ನೆಲೆಯಲ್ಲಿ ಕಳೆದ ತಿಂಗಳು ತಹಸೀಲ್ದಾರ್ ಶ್ರೀಧರ ಮುಂದಲಮನಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದರು. ಜಲಾಶಯದ ಕಾಲುವೆಗಳನ್ನು ಒಂದು ವಾರದೊಳಗಾಗಿ ದುರಸ್ತಿಗೊಳಿಸಿ ನೀರು ಡ್ಯಾಮ್ ಸೇರುವಂತೆ ಮಾಡಬೇಕು. ಇಲ್ಲವಾದರೆ ತಪ್ಪಿತಸ್ಥ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದ್ದರು.

    ಆಗಿನ ಮಟ್ಟಿಗೆ ಸ್ಪಂದಿಸಿದ ಸಣ್ಣ ನೀರಾವರಿ ಇಲಾಖೆಯ ಎಇಇ ಗಿರೀಶ ಜೋಶಿ ಅವರು ತಕ್ಕ ಮಟ್ಟಿಗೆ ದುರಸ್ತಿ ಮಾಡಿಸಿದರು. ಪೂರ್ಣ ಪ್ರಮಾಣದಲ್ಲಿ ದುರಸ್ತಿ ಮಾಡದ ಕಾರಣ ಕಳೆದ 2-3 ದಿನಗಳಿಂದ ಕಾಲುವೆ ಮೂಲಕ ಹರಿದು ಬಂದ ಮಳೆ ನೀರು ಅಪಾರ ಪ್ರಮಾಣದಲ್ಲಿ ಪೋಲಾಗಿ ಅರಣ್ಯದ ಪಾಲಾಗುತ್ತಿದೆ.

    ಆದಷ್ಟು ಬೇಗ ಕಾಲುವೆ ದುರಸ್ತಿಗೊಳಿಸಿ ನೀರು ಡ್ಯಾಮ್ ಸೇರುವಂತೆ ಮಾಡಬೇಕು ಎಂದು ಸನವಳ್ಳಿಯ ಮಹಾದೇವಪ್ಪ ಕೆರಿಹೊಲದವರ, ಮಂಜುನಾಥ ಕೋಣನಕೇರಿ, ಗುಡದಯ್ಯ ಕಳಸಗೇರಿ, ಸಂಪತ್ ಕ್ಯಾಮನಕೇರಿ ಇತರರು ಆಗ್ರಹಿಸಿದ್ದಾರೆ.

    ನೀರು ಪೋಲಾಗುತ್ತಿರುವ ಬಗ್ಗೆ ಸಣ್ಣ ನೀರಾವರಿ ಇಲಾಖೆ ಎಇಇ ಅವರಿಗೆ ಹತ್ತಾರು ಬಾರಿ ತಿಳಿಸಿದ್ದೇವೆ. ದೂರವಾಣಿ ಕರೆ ಮಾಡಿದರೆ ಸ್ವೀಕರಿಸುವುದಿಲ್ಲ. 2-3 ತಿಂಗಳಿನಿಂದ ಹೇಳುತ್ತ ಬಂದರೂ ಕಾಲುವೆ ದುರಸ್ತಿ ಕಾರ್ಯ ಕೈಗೆತ್ತಿಕೊಂಡಿಲ್ಲ. ಅಧಿಕಾರಿಗಳು 2 ಬಾರಿ ಬಂದು ಸ್ಥಳಕ್ಕೆ ಭೇಟಿ ನೀಡಿದ್ದಾರೆ. ಸನವಳ್ಳಿ ಡ್ಯಾಮ್ ಸೇರುವ ಕಾಲುವೆ ನೀರು ಪೋಲಾಗಲು ಮತ್ತು ಚಿಗಳ್ಳಿ ಡ್ಯಾಮ್ ಒಡ್ಡು ಒಡೆಯಲು ಸಣ್ಣ ನೀರಾವರಿ ಇಲಾಖೆ ಎಇಇ ಗಿರೀಶ ಜೋಶಿ ಅವರ ಬೇಜವಾಬ್ದಾರಿಯೇ ಕಾರಣ.

    | ನಾಗರಾಜ ಗುಬ್ಬಕ್ಕನವರ ಸನವಳ್ಳಿ ನಿವಾಸಿ

    ನೀರು ಪೋಲಾಗದಂತೆ ಕಾಲುವೆ ದುರಸ್ತಿ ಕಾರ್ಯ ಕೈಗೊಳ್ಳಲು ಶೀಘ್ರದಲ್ಲಿ ಕೆಲಸಗಾರರನ್ನು ಕಳುಹಿಸುತ್ತೇನೆ.

    | ಗಿರೀಶ ಜೋಶಿಎಇಇ ಸಣ್ಣ ನೀರಾವರಿ ಇಲಾಖೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts