More

    ಸದ್ಯಕ್ಕೆ ರಾಜ್ಯದಲ್ಲಿಲ್ಲ ಲಸಿಕೆ ಸಮಸ್ಯೆ, ಆರೋಗ್ಯ ಸಚಿವ ಡಾ.ಸುಧಾಕರ್ ಸ್ಪಷ್ಟನೆ

    ಚಿಕ್ಕಬಳ್ಳಾಪುರ: ರಾಜ್ಯಕ್ಕೆ ಜೂನ್‌ನಲ್ಲಿ ಹೆಚ್ಚು ಲಸಿಕೆ ಬರುತ್ತಿರುವುದರಿಂದ ಯಾವುದೇ ಸಮಸ್ಯೆ ಉಂಟಾಗುತ್ತಿಲ್ಲ, ಇಲ್ಲಿಯವರೆಗೂ ಕರ್ನಾಟಕದಲ್ಲಿ 1.70 ಕೋಟಿ ಲಸಿಕೆ ನೀಡಲಾಗಿದೆ ಎಂದಿರುವ ಆರೋಗ್ಯ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಡಾ.ಕೆ ಸುಧಾಕರ್, ಚಿಕ್ಕಬಳ್ಳಾಪುರ ಜಿಲ್ಲೆಯಲ್ಲೂ ಅಭಿಯಾನಕ್ಕೆ ಹೆಚ್ಚಿನ ಒತ್ತು ನೀಡಲಾಗಿದೆ ಎಂದರು.

    ತಾಲೂಕಿನ ಪೆರೇಸಂದ್ರದ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಸೋಮವಾರ ಲಸಿಕೆ ಅಭಿಯಾನಕ್ಕೆ ಚಾಲನೆ ನೀಡಿ, ಲಸಿಕೆ ಬಗ್ಗೆ ಜನರಲ್ಲಿದ್ದ ಭಯ, ಆತಂಕ ದೂರವಾಗಿದೆ. ಹಾಗಾಗಿ ಮುಕ್ತ ಮನಸ್ಸಿನಿಂದ ಲಸಿಕೆ ಹಾಕಿಸಿಕೊಳ್ಳಲು ಮುಂದೆ ಬರುತ್ತಿದ್ದಾರೆ. ಗ್ರಾಮೀಣ ಪ್ರದೇಶದಲ್ಲೂ ಮಹತ್ವದ ಅರಿವು ಮೂಡಿದೆ ಎಂದು ಸಂತಸ ವ್ಯಕ್ತಪಡಿಸಿದರು.

    ಲಸಿಕೆಯಲ್ಲಿ ಭಾರತವು ಅತ್ಯಂತ ಉತ್ತಮ ಸಾಧನೆ ತೋರಿದೆ. ಇತರ ದೇಶಗಳಿಗೆ ಹೋಲಿಸಿದರೆ ನಮ್ಮ ದೇಶದಲ್ಲಿ ಲಸಿಕೆ ಪ್ರಮಾಣದ ವೇಗ ಜೋರಾಗಿದೆ. ಎರಡೂ ಡೋಸ್ ಲಸಿಕೆ ಪಡೆದರೂ ಮುಂಜಾಗ್ರತಾ ಕ್ರಮವಾಗಿ ಮಾರ್ಗಸೂಚಿ ನಿಯಮಗಳನ್ನು ತಪ್ಪದೇ ಪಾಲಿಸಬೇಕು. ನಿರ್ಲಕ್ಷ್ಯ ವಹಿಸಿದರೆ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ ಎಂದು ಎಚ್ಚರಿಸಿದರು.

    ಜಿಲ್ಲೆಯಲ್ಲಿ ತ್ವರಿತ ಸೋಂಕು ಪತ್ತೆ, ಗುಣಮಟ್ಟದ ಚಿಕಿತ್ಸೆ ಮತ್ತು ಆರೈಕೆ, ಲಸಿಕೀಕರಣದಲ್ಲಿ ಉತ್ತಮ ಸಾಧನೆಯಿಂದಾಗಿ ಸೋಂಕನ್ನು ಸಮರ್ಪಕವಾಗಿ ನಿಯಂತ್ರಿಸಲು ಸಾಧ್ಯವಾಗುತ್ತಿದೆ. ಇದರ ಜತೆಗೆ ಪ್ರತಿಯೊಬ್ಬರ ಸಹಕಾರ ಸಹ ಮುಖ್ಯವಾಗಿದೆ ಎಂದು ಜಿಲ್ಲಾಧಿಕಾರಿ ಆರ್.ಲತಾ ತಿಳಿಸಿದರು.

    ಉಪ ವಿಭಾಗಾಧಿಕಾರಿ ಎ.ಎನ್.ರಘುನಂದನ್, ತಹಸೀಲ್ದಾರ್ ಗಣಪತಿ ಶಾಸ್ತ್ರಿ, ಇಒ ಹರ್ಷವರ್ಧನ್, ತಾಲೂಕು ಆರೋಗ್ಯ ಅಧಿಕಾರಿ ಮಂಜುಳಾ ಮತ್ತಿತರರು ಇದ್ದರು.

    ಗಂಭೀರ ಸಮಸ್ಯೆಗೆ ನಿರ್ಲಕ್ಷ್ಯ ಕಾರಣ: ರಾಜ್ಯದಲ್ಲಿ ಹಂತ ಹಂತವಾಗಿ ಅನ್‌ಲಾಕ್ ನಿಯಮಗಳನ್ನು ಜಾರಿಗೊಳಿಸಲಾಗುತ್ತಿದೆ. ಆದರೆ ಜನರು ನಿರ್ಲಕ್ಷ್ಯ ತೋರಬಾರದು, ಇಲ್ಲದಿದ್ದಲ್ಲಿ ಮತ್ತೆ ಗಂಭೀರ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ಸೋಂಕಿನ ದುಷ್ಪರಿಣಾಮ ಮತ್ತು ಸರ್ಕಾರದ ನಿಯಂತ್ರಣ ಕ್ರಮಗಳ ಮಹತ್ವವನ್ನು ಅರ್ಥಮಾಡಿಕೊಳ್ಳಬೇಕು, ಮಾರ್ಗಸೂಚಿಗಳನ್ನು ಕಡ್ಡಾಯವಾಗಿ ಪಾಲಿಸಬೇಕೆಂದು ಸುಧಾಕರ್ ಮನವಿ ಮಾಡಿದರು.

    1 ಲಕ್ಷ ರೂಪಾಯಿ ನೆರವು ಸ್ವಾಗತಾರ್ಹ: ಕರೊನಾದಿಂದ ಮೃತಪಟ್ಟವರ ಕುಟುಂಬಕ್ಕೆ ಸರ್ಕಾರ ತಲಾ 1 ಲಕ್ಷ ರೂ. ಪರಿಹಾರ ಘೋಷಿಸಿರುವುದು ಶ್ಲಾಘನೀಯ. ಇದರಿಂದ 200 ಕೋಟಿ ರೂ. ಅನುದಾನ ಭರಿಸಬೇಕಾಗುತ್ತದೆ ಎಂದು ಸಚಿವ ಡಾ ಕೆ.ಸುಧಾಕರ್ ತಿಳಿಸಿದರು. ಬಿಪಿಎಲ್ ಕಾರ್ಡ್ ಹೊಂದಿರುವ ಕುಟುಂಬ ಸದಸ್ಯರ ಪೈಕಿ ಹಿರಿಯರು ಮೃತಪಟ್ಟಲ್ಲಿ 1 ಲಕ್ಷ ರೂ. ನೀಡುವುದಾಗಿ ಮುಖ್ಯಮಂತ್ರಿ ಯಡಿಯೂರಪ್ಪ ಘೋಷಿಸಿದ್ದಾರೆ. ಇದು ಕರೊನಾ ಸಂಕಷ್ಟದ ಸಂದರ್ಭದಲ್ಲಿ ತೊಂದರೆ ಅನುಭವಿಸುತ್ತಿರುವ ಕುಟುಂಬಕ್ಕೆ ಆಸರೆಯಾಗುತ್ತದೆ ಎಂದು ಅಭಿಪ್ರಾಯಪಟ್ಟರು.

    ಟ್ರಸ್ಟ್‌ನಿಂದ 1 ಲಕ್ಷ ರೂ.: ಪೆರೆಸಂದ್ರ, ಆರೂರು ಮತ್ತು ದೊಡ್ಡಪೈಲಗುರ್ಕಿ ಗ್ರಾಪಂ ವ್ಯಾಪ್ತಿಯಲ್ಲಿ ಶ್ರೀ ಸಾಯಿಕೃಷ್ಣ ಚಾರಿಟಬಲ್ ಟ್ರಸ್ಟ್ ವತಿಯಿಂದ ಆಶಾ ಕಾರ್ಯಕರ್ತೆಯರಿಗೆ ಐದು ಸಾವಿರ ಆರ್ಥಿಕ ನೆರವು ಮತ್ತು ದಿನಸಿ ಕಿಟ್ ನೀಡಿದ ಸಚಿವರು, ಚಿಕ್ಕಬಳ್ಳಾಪುರಕ್ಕೆ ಸಂಬಂಧಿಸಿದಂತೆ ಕರೊನಾದಿಂದ ಮೃತಪಟ್ಟವರ ಕುಟುಂಬಗಳಿಗೆ ಟ್ರಸ್ಟ್‌ನಿಂದ ತಲಾ ಒಂದು ಲಕ್ಷ ರೂ. ನೀಡುವುದಾಗಿ ಪ್ರಕಟಿಸಲಾಗಿದ್ದು, ಲಾನುಭವಿಗಳಿಗೆ ಸೌಲಭ್ಯ ನೀಡಲಾಗುತ್ತಿದೆ ಎಂದು ತಿಳಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts