More

    ಸತ್ಯಾಗ್ರಹ ಸೌಧದ ಸಮಗ್ರ ಅಭಿವೃದ್ಧಿಗೆ ಕ್ರಮ

     ಮದ್ದೂರು: ಪಟ್ಣಣದ ಶಿವಪುರದಲ್ಲಿರುವ ಐತಿಹಾಸಿಕ ಸ್ಥಳವಾದ ಸತ್ಯಾಗ್ರಹ ಸೌಧದ ಸಮಗ್ರ ಅಭಿವೃದ್ಧಿ ನನ್ನ ಗುರಿಯಾಗಿದೆ ಎಂದು ಸಂಸದೆ ಸುಮಲತಾ ಅಂಬರೀಷ್ ಹೇಳಿದರು.

    ‘ವಿಜಯವಾಣಿ’ ಪತ್ರಿಕೆಯಲ್ಲಿ ಸತ್ಯಾಗ್ರಹಸೌಧದ ಅವ್ಯವಸ್ಥೆ ಕುರಿತು ಅ.1 ರಂದು ಮೂಲ ಸೌಕರ್ಯ ಒದಗಿಸಲು ಜನರ ಒತ್ತಾಯ, ಅ.2 ರಂದು ಕೇಳಿಸದೆ ಸೌಧದ ಮೂಕರೋದನೆ?, ಅ.11ರಂದು ಐತಿಹಾಸಿಕ ಸ್ಮಾರಕದ ಬಗ್ಗೆ ನಿರ್ಲಕ್ಷ್ಯವೇಕೆ? ಶೀರ್ಷಿಕೆಯಡಿ ವಿಶೇಷ ವರದಿ ಪ್ರಕಟವಾಗಿದ್ದ ಹಿನ್ನೆಲೆಯಲ್ಲಿ ಶುಕ್ರವಾರ ಅಧಿಕಾರಿಗಳ ವಿಶೇಷ ಸಭೆ ಕರೆದು ಮಾತನಾಡಿದರು.

    ಶಿವಪುರ ಸತ್ಯಾಗ್ರಹಸೌಧ ಐತಿಹಾಸಿಕ ಸ್ಥಳವಾಗುವ ಜತೆಗೆ ಭಾವನಾತ್ಮಕವಾಗಿ ಜನರಿಗೆ ಮತ್ತಷ್ಟು ಹತ್ತಿರವಾಗಬೇಕು. ಜಿಲ್ಲೆ, ರಾಜ್ಯ ಮತ್ತು ದೇಶದ ಎಲ್ಲ ಜನರಿಗೂ ಈ ಸೌಧದ ಮಹತ್ವ ಮತ್ತು ಹಿರಿಮೆ ತಿಳಿಯಬೇಕು. ಈ ನಿಟ್ಟಿನಲ್ಲಿ ಸೌಧದ ಅಭಿವೃದ್ಧಿಗೆ ನಾನು ಸೇರಿದಂತೆ ಎಲ್ಲರೂ ಕೈ ಜೋಡಿಸಬೇಕು ಎಂದು ಮನವಿ ಮಾಡಿದರು.
    ಇದನ್ನು ಪ್ರವಾಸೋದ್ಯಮ ಸ್ಥಳವನ್ನಾಗಿ ಮಾರ್ಪಡಿಸಬೇಕೆಂದು ಸಂಬಂಧಿಸಿದ ಅಧಿಕಾರಿಗಳು ಮತ್ತು ಪ್ರವಾಸೋದ್ಯಮ ಸಚಿವರಿಗೆ ಮನವಿ ಮಾಡಿದ್ದೆ. ಆದರೆ ಅವರು ಅನುದಾನ ಲಭ್ಯವಿಲ್ಲ ಎನ್ನುತ್ತಿದ್ದಾರೆ. ಈ ಬಗ್ಗೆ ಮುಂದಿನ ದಿನಗಳಲ್ಲಿ ಮತ್ತೊಮ್ಮೆ ಜಿಲ್ಲಾ ಮಟ್ಟದ ಅಧಿಕಾರಿಗಳ ಸಭೆ ನಡೆಸಿ ಸತ್ಯಾಗ್ರಹ ಸೌಧಕ್ಕೆ ಕಾಯಕಲ್ಪ ರೂಪಿಸಲಾಗುವುದು ಎಂದು ಭರವಸೆ ನೀಡಿದರು.

    ಮನವಿ: ಸೌಧದ ಆವರಣದಲ್ಲಿ ಇತಿಹಾಸ ತಿಳಿಸುವ ಪುಸ್ತಕಗಳನ್ನು ಸಂಗ್ರಹಿಸಿ ಗ್ರಂಥಾಲಯ ಮಾಡಬೇಕು. ಅರ್ಧಕ್ಕೆ ನಿಂತಿರುವ ಸಭಾಂಗಣವನ್ನು ಪೂರ್ಣಗೊಳಿಸಬೇಕು. ಧ್ವಜ ಸತ್ಯಾಗ್ರಹ ಸೌಧದ ಅಭಿವೃದ್ಧಿ ಯಾಗಿ ಪ್ರಾಧಿಕಾರ ರಚನೆಯಾಗಬೇಕು. ಸೌಧಕ್ಕೆ ವಿದ್ಯುತ್ ದೀಪಗಳನ್ನು ಅಳವಡಿಸಬೇಕು. ನಿರ್ವಹಣೆ ಹೊಣೆಯನ್ನು ಸಂಘ ಸಂಸ್ಥೆಗಳಿಗೆ ನೀಡಬೇಕು ಎಂದು ಕರ್ನಾಟಕ ಸಂಘದ ಅಧ್ಯಕ್ಷ ಪ್ರೊ.ಜಯಪ್ರಕಾಶ್ ಗೌಡ, ಎಂ.ಎಚ್.ಚನ್ನೇಗೌಡ ವಿದ್ಯಾಸಂಸ್ಥೆಯ ಕಾರ್ಯದರ್ಶಿ ಅಪೂರ್ವಚಂದ್ರ, ಕರ್ನಾಟಕ ಜಾನಪದ ಪರಿಷತ್ ಜಿಲ್ಲಾ ಘಟಕದ ಅಧ್ಯಕ್ಷ ಡಿ.ಪಿ.ಸ್ವಾಮಿ ಸೇರಿದಂತೆ ಇತರರು ಸಭೆಯಲ್ಲಿ ಮನವಿ ಮಾಡಿದರು.

    ಪುರಸಭಾ ಅಧ್ಯಕ್ಷ ಸುರೇಶ್‌ಕುಮಾರ್, ಸ್ಥಾಯಿ ಸಮಿತಿ ಅಧ್ಯಕ್ಷ ಪ್ರಸನ್ನಕುಮಾರ್, ಸದಸ್ಯರಾದ ಮಹೇಶ್, ಲತಾ ರಾಮು, ಪುರಸಭಾ ಮುಖ್ಯ ಅಧಿಕಾರಿ ಅಶೋಕ್, ಕರ್ನಾಟಕ ಸಂಘದ ಅಧ್ಯಕ್ಷ ಜಯಪ್ರಕಾಶ್‌ಗೌಡ, ಕರ್ನಾಟಕ ಜಾನಪದ ಪರಿಷತ್ ಜಿಲ್ಲಾ ಘಟಕದ ಅಧ್ಯಕ್ಷ ಡಿ.ಪಿ.ಸ್ವಾಮಿ. ಕಸಾಪ ತಾಲೂಕು ಘಟಕದ ಅಧ್ಯಕ್ಷ ಸುನೀಲ್ ಕುಮಾರ್, ಜಿಪಂ ಮಾಜಿ ಅಧ್ಯಕ್ಷ ವಿವೇಕಾನಂದ, ಪುರಸಭಾ ಮಾಜಿ ಅಧ್ಯಕ್ಷೆ ಸೌಭಾಗ್ಯಮ್ಮ ಮಹದೇವು ಹಾಗೂ ತಾಲೂಕು ಅಧಿಕಾರಿಗಳು ಹಾಜರಿದ್ದರು.

    ವಿಜಯವಾಣಿಗೆ ಪ್ರಶಂಸೆ: ವಿಜಯವಾಣಿ ಪತ್ರಿಕೆಯಲ್ಲಿ ಹಲವಾರು ಬಾರಿ ಶಿವಪುರ ಸತ್ಯಾಗ್ರಹಸೌಧದ ಸಮಸ್ಯೆ ಬಗ್ಗೆ ವರದಿ ಮಾಡಿರುವುದು ಮೆಚ್ಚುಗೆ ವಿಷಯವಾಗಿದೆ ಎಂದು ಸಂಸದೆ ಸುಮಲತಾ ಅಂಬರೀಷ್ ಸಭೆಯಲ್ಲಿ ಪ್ರಶಂಸೆ ವ್ಯಕ್ತಪಡಿಸಿದರು.

     

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts