More

    ಸತ್ಯಾಂಶ ಮುಚ್ಚಿಡುತ್ತಿದೆಯೇ ಜಿಲ್ಲಾಡಳಿತ?

    ಗದಗ: ಜಿಲ್ಲೆಯಲ್ಲಿ ನಿತ್ಯ ದಾಖಲಾಗುವ ಕರೊನಾ ಸೋಂಕಿತರ ಸಂಖ್ಯೆ, ಮೃತಪಟ್ಟವರ ಸಂಖ್ಯೆಯನ್ನು ಜಿಲ್ಲಾಡಳಿತ ಮುಚ್ಚಿಡುತ್ತಿದೆಯೇ? ಟೆಸ್ಟಿಂಗ್ ಪ್ರಮಾಣವನ್ನು ಕಡಿತಗೊಳಿಸಿ ನೈಜ ಸ್ಥಿತಿಯನ್ನು ಮರೆಮಾಚುತ್ತಿದೆಯೇ ಎಂಬ ಸಂಶಯ ಜನರಲ್ಲಿ ಮೂಡಿದೆ.
    ಏಕೆಂದರೆ ಮೇ 14ರಂದು ರಾಜ್ಯ ಸರ್ಕಾರ ಬಿಡುಗಡೆಗೊಳಿಸಿದ ಹೆಲ್ತ್ ಬುಲೆಟಿನ್​ನಲ್ಲಿ ಗದಗ ಜಿಲ್ಲೆಯ ಸೋಂಕಿತರ ಸಂಖ್ಯೆ 591. ಆದರೆ, ಜಿಲ್ಲಾಡಳಿತ ನೀಡಿದ ಸೋಂಕಿತರ ಸಂಖ್ಯೆ 459!. ಉಳಿದ 140 ಜನ ಸೋಂಕಿತರು ಎಲ್ಲಿದ್ದಾರೆ. ಅವರ ಆರೋಗ್ಯ ಸ್ಥಿತಿ ಹೇಗಿದೆೆ? ಕಳೆದ ಒಂದು ತಿಂಗಳಿಂದಲೂ ಜಿಲ್ಲಾಡಳಿತ ಇದೇ ರೀತಿ ಸೋಂಕಿತರ ಸಂಖ್ಯೆಯನ್ನು ಮುಚ್ಚಿಡುತ್ತಿದೆಯೇ? ನಿತ್ಯ ಜಿಲ್ಲೆಯಲ್ಲಿ ಕರೊನಾ ಸೋಂಕಿನಿಂದ ಸಾವಿಗೀಡಾಗುತ್ತಿರುವವರ ಸಂಖ್ಯೆ 3-4 ಎಂಬ ಮಾಹಿತಿ ನೀಡಲಾಗುತ್ತಿದೆ. ಆದರೆ, ವಾಸ್ತವದಲ್ಲಿ ಎಷ್ಟು ಜನರು ಮೃತಪಡುತ್ತಿದ್ದಾರೆ ಎನ್ನುವುದು ಜಿಲ್ಲಾಡಳಿತವೇ ಸ್ಪಷ್ಟಪಡಿಸಬೇಕಿದೆ.
    ಸರ್ಕಾರಿ ಆಸ್ಪತ್ರೆಗಳಲ್ಲಿ ವೆಂಟಿಲೇಟರ್​ಗಳ ಕೊರತೆಯಿಂದ ಅನೇಕರು ಮೃತಪಟ್ಟಿದ್ದಾರೆ. ಇದರ ಸಂಖ್ಯೆ ಇನ್ನೂ ಏರುತ್ತಲೇ ಇದೆ. ಆಕ್ಸಿಜನ್ ಪೂರೈಕೆ ಸಮರ್ಪಕವಾಗಿಲ್ಲ ಎಂಬ ಆರೋಪಗಳು ಕೇಳಿಬರುತ್ತಿದೆ. ಇದರ ಜತೆಗೆ ಕೋವಿಡ್ ಕೇರ್ ಸೆಂಟರ್​ಗಳಲ್ಲಿ ಎಷ್ಟು ಸೋಂಕಿತರಿದ್ದಾರೆ. ಅವರಿಗೆ ಮಾತ್ರೆಗಳು ಸೇರಿದಂತೆ ಇತರೆ ಸೌಲಭ್ಯ ನೀಡಲಾಗಿದೆ ಎಂಬ ಕುರಿತು ಇದುವರೆಗೆ ಜಿಲ್ಲಾಡಳಿತ ಸಮರ್ಪಕ ಮಾಹಿತಿ ನೀಡಿಲ್ಲ. ಆದರೆ, ಜಿಲ್ಲೆಯಲ್ಲಿನ ಕೆಲ ಕೋವಿಡ್ ಕೇರ್ ಸೆಂಟರ್​ನಲ್ಲಿರುವ ಸೋಂಕಿತರಿಗೆ ಐದು ದಿನಗಳ ಮಾತ್ರೆಗಳನ್ನು ನೀಡಿ ಕೈತೊಳೆದುಕೊಳ್ಳಲಾಗಿದೆ. ಅವರ ಆರೋಗ್ಯ ಕುರಿತು ಕಾಳಜಿಯನ್ನೂ ಮಾಡುತ್ತಿಲ್ಲ ಎನ್ನುವುದು ಅನೇಕ ಸೋಂಕಿತರ ಆರೋಪವಾಗಿದೆ.
    40ರಷ್ಟು ಸೋಂಕಿತರ ಪ್ರಮಾಣ: ಗದಗ ಜಿಲ್ಲೆಯಲ್ಲಿ ಕರೊನಾ ಸೋಂಕಿತರ ಪ್ರಮಾಣ ಶೇ. 40ರಷ್ಟಿದ್ದು, ಶರವೇಗದಲ್ಲಿ ಸೋಂಕು ವ್ಯಾಪಿಸತೊಡಗಿದೆ. ಅಲ್ಲದೆ, ಮುಂದಿನ ದಿನಗಳಲ್ಲಿ ಕರೊನಾ ಹೆಚ್ಚಾಗುವ ಸಂಭವ ಇರುವಂತಹ ರಾಜ್ಯದ 23 ಜಿಲ್ಲೆಗಳ ಪೈಕಿ ಗದಗ ಜಿಲ್ಲೆಯೂ ಇರುವುದು ಭಾರಿ ಆತಂಕಕ್ಕೆ ಎಡೆಮಾಡಿದೆ. ಆದರೂ ಜಿಲ್ಲಾಡಳಿತ ಈ ವಿಷಯವನ್ನು ಗಂಭೀರವಾಗಿ ತೆಗೆದುಕೊಂಡಂತೆ ಕಾಣಿಸುತ್ತಿಲ್ಲ. ಕರೊನಾ ಟೆಸ್ಟಿಂಗ್ ಸಂಖ್ಯೆಯನ್ನು ಕಡಿಮೆ ಮಾಡಿರುವುದು ಅನೇಕ ಸಂದೇಹಗಳಿಗೆ ಕಾರಣವಾಗಿದೆ. ಐಸಿಎಂಆರ್ ಪ್ರಕಾರ ಶೇ. 10ಕ್ಕಿಂತ ಹೆಚ್ಚಿರುವ ಜಿಲ್ಲೆಗಳಲ್ಲಿ ತಕ್ಷಣವೇ ಕಟ್ಟುನಿಟ್ಟಾಗಿ ಲಾಕ್ ಮಾಡಬೇಕು ಎಂದು ಎಚ್ಚರಿಕೆ ನೀಡಲಾಗಿದೆ. ಆದರೂ, ಜಿಲ್ಲೆಯಲ್ಲಿ ಯಾವುದೇ ಬಿಗಿ ಕ್ರಮಗಳನ್ನು ಕೈಗೊಂಡಿಲ್ಲ. ಮಾಸ್ಕ್ ಧರಿಸಿ, ಪರಸ್ಪರ ಅಂತರ ಕಾಪಾಡಿಕೊಳ್ಳಿ, ಮನೆಯಿಂದ ಹೊರಗೆ ಬರಬೇಡಿ ಎಂಬೆರಡು ಕಿವಿಮಾತು ಹೇಳಿ ಸಭೆಯನ್ನು ಬರಕಾಸ್ತುಗೊಳಿಸಲಾಗುತ್ತಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts