More

    ಸಣ್ಣ, ಪುಟ್ಟ ತಕರಾರನ್ನು ಬಗೆಹರಿಸಿ


    ಅಧಿಕಾರಿಗಳಿಗೆ ಶಾಸಕ ಎಚ್.ಪಿ.ಮಂಜುನಾಥ್ ಸೂಚನೆ


    ಹುಣಸೂರು: ಮುಂದಿನ ತಿಂಗಳು ಅಕ್ರಮ-ಸಕ್ರಮ ಸಮಿತಿ ಸಭೆ ನಡೆಯಲಿದ್ದು, ಕನಿಷ್ಠ ನೂರು ಅರ್ಜಿಯನ್ನು ಸಕ್ರಮಗೊಳಿಸಲು ತಾಲೂಕು ಕಂದಾಯ ಅಧಿಕಾರಿಗಳು ಕ್ರಮ ವಹಿಸಬೇಕೆಂದು ಶಾಸಕ ಎಚ್.ಪಿ.ಮಂಜುನಾಥ್ ಸೂಚನೆ ನೀಡಿದರು.

    ನಗರದ ತಾಲೂಕು ಕಚೇರಿ ಸಭಾಂಗಣದಲ್ಲಿ ಗುರುವಾರ ಆಯೋಜಿಸಿದ್ದ ಅಕ್ರಮ -ಸಕ್ರಮ ಸಾಗುವಳಿ ಸಮಿತಿಯ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
    ತಾಲೂಕಿನ ರೈತರು ಭೂಮಿ ಸಾಗುವಳಿಗಾಗಿ ಈ ಹಿಂದೆ ನಮೂನೆ 53 ಮತ್ತು 57 ರಲ್ಲಿ ಸಲ್ಲಿಸಿರುವ ನೂರು ಫೈಲ್‌ಗಳನ್ನು ಮುಂದಿನ ಸಭೆಯಲ್ಲಿಡಬೇಕು. ಅರ್ಜಿ ಸಲ್ಲಿಸಿರುವ ಕುಟುಂಬಗಳ ಸಣ್ಣ-ಪುಟ್ಟ ತಕರಾರುಗಳನ್ನು ಅಲ್ಲಿಯೇ ಬಗೆಹರಿಸುವ ಮೂಲಕ ಮಾನವೀಯತೆ ಮೆರೆಯಬೇಕು ಎಂದು ಹೇಳಿದರು.

    ಗೋಮಾಳ ಜಮೀನಿಗೆ ಅರ್ಜಿ ಸಲ್ಲಿಸಿರುವ ರೈತರನ್ನು ಸಾಗುವಳಿಗಾಗಿ ಕಚೇರಿ ಅಲೆಸಬಾರದು. ಸರ್ಕಾರ ಗೋಮಾಳ ಭೂಮಿಗೆ ಸಾಗುವಳಿ ನೀಡಲು ಅನುಮತಿ ನೀಡಿಲ್ಲ. ಗೋಮಾಳ ಸಾಗುವಳಿಗಾಗಿ ನಿತ್ಯ ತಾಲೂಕು ಕಚೇರಿ ಹಾಗೂ ಮಧ್ಯವರ್ತಿಗಳ ಮೊರೆ ಹೋಗಿ ಮೋಸ ಹೋಗಬಾರದು ಎಂದು ಸಲಹೆ ನೀಡಿದರು.

    53 ಅರ್ಜಿಗಳ ಪರಿಶೀಲನೆ: ಇಂದಿನ ಸಭೆಯಲ್ಲಿ ಒಟ್ಟು 53 ಅರ್ಜಿಗಳನ್ನು ಪರಿಶೀಲಿಸಲಾಗಿದ್ದು, ನಮೂನೆ 57ರಲ್ಲಿ ಸಲ್ಲಿಕೆಯಾಗಿದ್ದ 43 ಅರ್ಜಿಗಳು ಹಾಗೂ ಉಪ ವಿಭಾಗಾಧಿಕಾರಿಗಳ ನ್ಯಾಯಾಲಯದಿಂದ ಬಂದ 10 ಅರ್ಜಿಗಳನ್ನು ಪರಿಶೀಲನೆ ನಡೆಸಲಾಯಿತು. ಈ ಪೈಕಿ 27 ಅರ್ಜಿಗಳನ್ನು ಸಕ್ರಮಗೊಳಿಸಿ ನೋಟಿಸ್ ಹೊರಡಿಸಲು ಸಭೆಯಲ್ಲಿ ಅನುಮೋದನೆ ನೀಡಲಾಯಿತು.


    ಸಭೆಯಲ್ಲಿ ಸಮಿತಿ ಕಾರ್ಯದರ್ಶಿ ಡಾ.ಎಸ್.ಯು,ಅಶೋಕ್, ಅಕ್ರಮ ಸಕ್ರಮ ಸಮಿತಿ ಸದಸ್ಯರಾದ ನಾಗರಾಜ ಮಲ್ಲಾಡಿ, ವೆಂಕಟಮ್ಮ, ಗ್ರೇಡ್-2 ತಹಸೀಲ್ದಾರ್ ಶಕೀಲಾ ಬಾನ್, ಎಡಿಎಲ್‌ಆರ್ ಮಹಮದ್ ಹುಸೇನ್, ಉಪ ತಹಸೀಲ್ದಾರ್‌ಗಳಾದ ಚೆಲುವರಾಜ್, ವೆಂಕಟೇಶ್, ಆರ್.ಐ.ಗಳಾದ ನಂದೀಶ್, ಪ್ರಶಾಂತ್‌ರಾಜೇ ಅರಸ್, ಪ್ರಭಾಕರ್, ಭಾಸ್ಕರ್ ಹಾಜರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts