More

    ಸಂಸದ, ಶಾಸಕಿ ವಿರುದ್ಧ ಭುಗಿಲೆದ್ದ ಆಕ್ರೋಶ

    ಕಾರವಾರ: ಬೈತಖೋಲ್ ವಾಣಿಜ್ಯ ಬಂದರಿನ ಎರಡನೇ ಹಂತದ ವಿಸ್ತರಣೆ ಹಾಗೂ ಅಲೆ ತಡೆಗೋಡೆ ನಿರ್ಮಾಣ ಕಾಮಗಾರಿ ವಿರೋಧಿಸಿ ಮೀನುಗಾರರು ಪ್ರಾರಂಭಿಸಿರುವ ಪ್ರತಿಭಟನೆ ಎರಡನೇ ದಿನಕ್ಕೆ ಕಾಲಿಟ್ಟಿದೆ.

    ಮಂಗಳವಾರ ಮೀನುಗಾರರು ಸಂಸದ ಅನಂತ ಕುಮಾರ ಹೆಗಡೆ ಹಾಗೂ ಶಾಸಕಿ ರೂಪಾಲಿ ನಾಯ್ಕ ಅವರ ಭಾವಚಿತ್ರಕ್ಕೆ ಚಪ್ಪಲಿ ಹಾರ ಹಾಕಿ ಸೆಗಣಿ ಸಾರಿಸಿ ಆಕ್ರೋಶ ವ್ಯಕ್ತಪಡಿಸಿದರು. ಸೀರೆ ಉಡುಪಿನಲ್ಲಿ ಸಂಸದರ ಹಾಗೂ ಶಾಸಕಿ ರೂಪಾಲಿ ಅವರ ಮುಖಕ್ಕೆ ಮೀಸೆ ಬಿಡಿಸಿದ ಚಿತ್ರಗಳನ್ನು ಪ್ರದರ್ಶಿಸಿ ಘೊಷಣೆಗಳನ್ನು ಕೂಗಿದರು. ಅವಾಚ್ಯವಾಗಿ ನಿಂದಿಸಿದರು.

    ಜಿಲ್ಲಾಧಿಕಾರಿ ಕಚೇರಿಯ ಎದುರು ಇಡೀ ದಿನ ಧರಣಿ ನಡೆಸಿದರು. ಮೀನು ಮಾರುಕಟ್ಟೆ , ಮೀನುಗಾರಿಕೆ ಸಂಪೂರ್ಣ ಸ್ಥಗಿತಗೊಂಡಿತ್ತು. ಮೀನುಗಾರರ ಮನವೊಲಿಸಿ ಪ್ರತಿಭಟನೆ ಹಿಂಪಡೆಯುವಂತೆ ಮಾಡಲು ಎಸ್​ಪಿ ಶಿವಪ್ರಕಾಶ ದೇವರಾಜು ನಡೆಸಿದ ಮಾತುಕತೆ ವಿಫಲವಾಯಿತು.

    ಜ.15ರಂದೂ ಮೀನುಗಾರಿಕೆ ಹಾಗೂ ಮಾರುಕಟ್ಟೆ ಬಂದ್ ಮಾಡಿ, ಪ್ರತಿಭಟನೆ ಮುಂದುವರಿಸಲಾಗುವುದು. ಜ.16ರಂದು ನಗರದ ಇತರ ಅಂಗಡಿ ಮುಂಗಟ್ಟುಗಳನ್ನೂ ಮುಚ್ಚಿಸಿ ಬಂದ್ ಆಚರಿಸಲಾಗುವುದು ಎಂದು ಮೀನುಗಾರರ ಮುಖಂಡರು ತಿಳಿಸಿದ್ದಾರೆ. ಈ ನಡುವೆ ಅಲೆ ತಡೆಗೋಡೆ ಕಾಮಗಾರಿ ಮುಂದುವರಿದಿದ್ದು, ಪೊಲೀಸ್ ಭದ್ರತೆಯನ್ನೂ ಹೆಚ್ಚಿಸಲಾಗಿದೆ.

    ಕಂಪನಿಯಿಂದ ಕೇವಿಯಟ್ : ಅಲೆ ತಡೆಗೋಡೆ ಕಾಮಗಾರಿಗೆ ತಡೆ ಕೋರಿ ಯಾರಾದರೂ ಅರ್ಜಿ ಸಲ್ಲಿಸಿದರೆ ತಮ್ಮನ್ನು ಎದುರುದಾರರನ್ನಾಗಿ ಪರಿಗಣಿಸಬೇಕು ಎಂದು ಗುತ್ತಿಗೆ ಕಂಪನಿ ಹೈಕೋರ್ಟ್​ನಲ್ಲಿ ಕೇವಿಯಟ್ ಅರ್ಜಿ ಸಲ್ಲಿಸಿದೆ.

    ಮುಂಬೈನ ಡಿವಿಪಿ ಇನ್​ಫ್ರಾ ಪ್ರೊಜೆಕ್ಟ್ ಪ್ರೖೆ.ಲಿ. ಅಲೆ ತಡೆಗೋಡೆ ಕಾಮಗಾರಿ ಪಡೆದಿದ್ದು, ಪೊಲೀಸ್ ಭದ್ರತೆಯಲ್ಲಿ ಕಾಮಗಾರಿ ಆರಂಭಿಸಿದೆ. ಮೀನುಗಾರರ ಸಂಘಟನೆಗಳು ಕಾಮಗಾರಿಗೆ ತಡೆ ಕೋರಿ ಹೈಕೋರ್ಟ್ ಮೆಟ್ಟಿಲೇರುವ ಸನ್ನಿವೇಶ ಇರುವುದರಿಂದ ಕಂಪನಿ ಮುನ್ನೆಚ್ಚರಿಕೆ ಕ್ರಮವಾಗಿ ಬೆಂಗಳೂರು ಹೈಕೋರ್ಟ್​ಗೆ ಕೆವಿಯಟ್ ಅರ್ಜಿ ಸಲ್ಲಿಸಿ ಕಾಮಗಾರಿ ಸಂಬಂಧ ಯಾವುದೇ ಮಧ್ಯಂತರ ಆದೇಶ ನೀಡುವುದಿದ್ದಲ್ಲಿ ತನ್ನ ಗಮನಕ್ಕೆ ತರಬೇಕು ಎಂದು ವಿನಂತಿಸಿದೆ.

    ಹಿಂದೆ ರೂಪಾಲಿ ನಾಯ್ಕ ಅವರಿಗೆ ಟಿಕೆಟ್ ನೀಡಬೇಕು ಎಂದು ಆಗ್ರಹಿಸಲು ನಾವು ಕುಂದಾಪುರಕ್ಕೆ ಹೋಗಿದ್ದೆವು. ಆದರೆ, ಅದನ್ನು ಅವರು ಮರೆತಿದ್ದಾರೆ. ಮೀನುಗಾರರ ಜತೆಯೇ ನಾನು ಬೆಳೆದಿದ್ದೇನೆ. ಅವರ ಕಷ್ಟ ನನಗೆ ಗೊತ್ತು ಎಂದು ಭಾಷಣ ಮಾಡುವವರು ಶಾಸಕಿಯಾದ ನಂತರ ಒಂದು ದಿನವೂ ಮೀನು ಮಾರುಕಟ್ಟೆಗೆ ಬಂದು ನಮ್ಮ ಕಷ್ಟ ಕೇಳಿಲ್ಲ. ನಾವು ಅವರ ಕಚೇರಿಯ ಬಳಿ ಹೋದರೆ, ಅದು, ಇದು ಮಾತನಾಡಿ ವಾಪಸ್ ಕಳಿಸಿದರು. ಅವರೂ ನಮ್ಮಂತೆ ಒಂದು ಹೆಣ್ಣಲ್ಲವೇ? ಶಾಸಕಿಯಾಗಿ ನಮ್ಮ ಕಷ್ಟ ಕೇಳದಿದ್ದರೆ ಬೇರ್ಯಾರು ಕೇಳುತ್ತಾರೆ…?
    ಸುಶೀಲಾ ಹರಿಕಂತ್ರ, ಕಾರವಾರ ಮೀನು ಮಾರಾಟಗಾರ ಮಹಿಳೆಯರ ಸಂಘದ ಅಧ್ಯಕ್ಷೆ

    ಕಾರವಾರಕ್ಕೆ ಮಾತ್ರವಲ್ಲ ಸಾಗರ ಮಾಲಾ: ಇತ್ತೀಚೆಗೆ ಸಾಗರ ಮಾಲಾ ಯೋಜನೆ ಹೆಚ್ಚು ಚರ್ಚೆಯಲ್ಲಿದೆ. ಮೀನುಗಾರರು ಇದೇ ವಿಷಯವಾಗಿ ಪ್ರತಿಭಟನೆ ನಡೆಸಿದ್ದಾರೆ. ಹಾಗಾದರೆ, ಈ ಯೋಜನೆ ಏನು..? ಎಂಬ ಮಾಹಿತಿ ಇಲ್ಲಿದೆ.

    ಸಾಗರ ಮಾಲಾ ಯೋಜನೆ ಕೇವಲ ಕಾರವಾರಕ್ಕೆ ಸೀಮಿತವಲ್ಲ.ಬೇಲೆಕೇರಿಯಲ್ಲೂ ಜಾರಿಗೆ ಬರುತ್ತಿದೆ. ಇದನ್ನು ಹೊರತುಪಡಿಸಿ ರಾಜ್ಯ ಸರ್ಕಾರ ತನ್ನ ಅನುದಾನದಲ್ಲಿ ಅಥವಾ ಖಾಸಗಿ ಸಹಭಾಗಿತ್ವದಲ್ಲಿ ಜಿಲ್ಲೆಯ ಇತರೆಡೆಯೂ ಬಂದರು ನಿರ್ಮಾಣ ಮಾಡುವ ಯೋಜನೆಯನ್ನು ಈಗ ಮರಿಟೈಮ್ ಬೋರ್ಡ್ ಮೂಲಕ ಚುರುಕು ಮಾಡಲು ಮುಂದಾಗಿದೆ. ಈಗ ಕೆಲ ದಿನಗಳಿಂದ ಕಾರವಾರದಲ್ಲಿ ನಡೆಯುತ್ತಿರುವ ಪ್ರತಿಭಟನೆಗಳು ಮುಂದಿನ ಕೆಲ ದಿನಗಳಲ್ಲಿ ಬೇಲೆಕೇರಿ, ಹೊನ್ನಾವರದಲ್ಲಿ ಪ್ರಾರಂಭವಾದರೆ ಅಚ್ಚರಿಯಿಲ್ಲ.

    ನರೇಂದ್ರ ಮೋದಿ ಸರ್ಕಾರವು ದೇಶದ ಬಂದರುಗಳನ್ನು ಅಭಿವೃದ್ಧಿಪಡಿಸಲು ಕರಾವಳಿ ಪ್ರದೇಶ ಹೊಂದಿರುವ ರಾಜ್ಯಗಳಲ್ಲಿ 570 ಕ್ಕೂ ಅಧಿಕ ಕಾಮಗಾರಿಗಳನ್ನು ಸಾಗರ ಮಾಲಾ ಯೋಜನೆಯಡಿ ಕೈಗೊಳ್ಳುತ್ತಿದೆ. ಇದರಲ್ಲಿ ಬಂದರು, ಅಲೆ ತಡೆಗೋಡೆ ಅಭಿವೃದ್ಧಿ , ಬಂದರುಗಳಿಗೆ ರಸ್ತೆ, ರೈಲು ಸಂಪರ್ಕ, ಮೀನುಗಾರಿಕೆ ಜಟ್ಟಿ ನಿರ್ವಣ, ಹಾಗೂ ಕೌಶಲಾಭಿವೃದ್ಧಿ ತರಬೇತಿ ಇಷ್ಟು ಯೋಜನೆಗಳಿವೆ.

    ಕರ್ನಾಟಕದಲ್ಲಿ ಮೂರು ಕರಾವಳಿ ಜಿಲ್ಲೆಗಳಲ್ಲಿ ಒಟ್ಟು 24,772 ಕೋಟಿ ರೂ.ಗಳಿಗೆ 48 ಕಾಮಗಾರಿಗಳನ್ನು ಕೈಗೊಳ್ಳಲು ಯೋಜಿಸಲಾಗಿದೆ. ರಾಜ್ಯ ಸರ್ಕಾರ ತನ್ನ ಅನುದಾನವನ್ನು ಸೇರಿಸಿ ಇಲ್ಲಿನ ಬಂದರುಗಳ ಅಭಿವೃದ್ಧಿಗೆ ಹಣ ಹೂಡಿಕೆ ಮಾಡುತ್ತಿದೆ.

    ಸಾಗರ ಮಾಲಾ ಯೋಜನೆಯಲ್ಲಿ ಮುಖ್ಯವಾಗಿ 3,039 ಕೋಟಿ ರೂ. ವೆಚ್ಚದಲ್ಲಿ 300 ಲಕ್ಷ ಟನ್ ಸಾಮರ್ಥ್ಯದ ಬೇಲೆಕೇರಿ ಬಂದರು ಅಭಿವೃದ್ಧಿಗೆ ಯೋಜಿಸಲಾಗಿದೆ. ಅದಕ್ಕಾಗಿ ಹುಬ್ಬಳ್ಳಿ-ಶಿರಸಿ-ಕುಮಟಾ-ಬೇಲೆಕೇರಿ ಮಾರ್ಗವನ್ನು ರಾಷ್ಟ್ರೀಯ ಹೆದ್ದಾರಿಯಾಗಿ ಪರಿವರ್ತಿಸಲಾಗುತ್ತಿದೆ.

    ಕೋಸ್ಟಲ್ ಬರ್ತ್ ಸ್ಕೀಂನಲ್ಲಿ ಹಾಲಿ ಇರುವ ದಕ್ಷಿಣ ಅಲೆ ತಡೆಗೋಡೆಯನ್ನು 145 ಮೀಟರ್ ವಿಸ್ತರಿಸಲು ಹಾಗೂ 1,160 ಮೀಟರ್ ಉತ್ತರದ ತಡೆಗೋಡೆ ನಿರ್ವಣಕ್ಕೆ 224 ಕೋಟಿ ರೂ. ಮಂಜೂರು ಮಾಡಲಾಗಿದೆ. ಮೊದಲ ಹಂತದಲ್ಲಿ 125 ಕೋಟಿ ರೂ. ವೆಚ್ಚದಲ್ಲಿ ಟ್ಯಾಗೋರ್ ತೀರದಿಂದ 880 ಮೀಟರ್ ಅಲೆ ತಡೆಗೋಡೆ ಕಾಮಗಾರಿ ಈಗ ಪ್ರಾರಂಭವಾಗಿದೆ.

    ಕಾರವಾರ ಜಟ್ಟಿಯನ್ನು 250 ಮೀಟರ್ ವಿಸ್ತರಿಸಲು 61 ಕೋಟಿ, ಬಂದರು ಪ್ರದೇಶದಲ್ಲಿ ಸಮುದ್ರದ ಆಳ 16 ಮೀಟರ್ ಆಗುವಂತೆ ಡ್ರಜ್ಜಿಂಗ್ ಮಾಡಲು 50 ಕೋಟಿ ರೂ., ಕಾರವಾರ, ಬೇಲೆಕೇರಿ ಸೇರಿ ವಿವಿಧ ಬಂದರುಗಳಿಗೆ ರೈಲು ಸಂಪರ್ಕಕ್ಕೆ 3,075 ಕೋಟಿ ರೂ., ಅಮದಳ್ಳಿ ಮೀನುಗಾರಿಕೆ ಬಂದರು ಅಭಿವೃದ್ಧಿಗೆ 19 ಕೋಟಿ ರೂ. ವಿನಿಯೋಗಿಸಲು ಯೋಜಿಸಲಾಗಿದೆ.

    ರೈಲ್ವೆ ಸಂಪರ್ಕದ ಭರವಸೆ : ರಾಜ್ಯ ಸರ್ಕಾರದಿಂದ ಜಿಲ್ಲೆಯಲ್ಲಿ ನಿರ್ವಣವಾಗಲಿರುವ ಎಲ್ಲ ಬಂದರುಗಳ ಅಭಿವೃದ್ಧಿಗೆ ರೈಲ್ವೆ ಸಂಪರ್ಕ ಕಲ್ಪಿಸಿಕೊಡುವುದಾಗಿ ರೈಲ್ವೆ ಸಚಿವ ಪೀಯೂಶ ಗೋಯಲ್ ಭರವಸೆ ನೀಡಿದ್ದಾರೆ. ಕಳೆದ ಡಿಸೆಂಬರ್​ನಲ್ಲಿ ಜಿಲ್ಲೆಯ ಸಂಸದ ಅನಂತ ಕುಮಾರ ಹೆಗಡೆ ಅವರಿಗೆ ಪತ್ರ ಬರೆದಿರುವ ಅವರು, ಮೊದಲು ಕೊಂಕಣ ರೈಲ್ವೆ, ಜಲಸಾರಿಗೆ ಇಲಾಖೆ ಹಾಗೂ ಕರ್ನಾಟಕ ಸರ್ಕಾರ ಸೇರಿ ಸಮಗ್ರ ಯೋಜನೆ ರೂಪಿಸಿ ಜಾರಿಗೆ ತರಲಿ. ಕಾಮಗಾರಿ ಪೂರ್ಣಗೊಳ್ಳುವ ಹೊತ್ತಿಗೆ ಎಲ್ಲ ಕಡೆ ರೈಲ್ವೆ ಸಂಪರ್ಕ ಕಲ್ಪಿಸಿಕೊಡುವ ಜವಾಬ್ದಾರಿ ನಮ್ಮದು ಎಂದಿದ್ದಾರೆ.

    ಎಲ್ಲೆಲ್ಲಿ ಸಂಪರ್ಕ : ಕಾರವಾರ, ತದಡಿ, ಬೇಲೆಕೇರಿ, ಕೇಣಿ, ಹೊನ್ನಾವರ ಹಾಗೂ ಪಾವಿನಕುರ್ವಾದಲ್ಲಿ ಬಂದರು ನಿರ್ವಣವಾಗಲಿದ್ದು, ಅಲ್ಲಿಗೆ ರೈಲ್ವೆ ಸಂಪರ್ಕ ಕಲ್ಪಿಸುವುದಾಗಿ ಗೋಯಲ್ ತಮ್ಮ ಪತ್ರದಲ್ಲಿ ಮಾಹಿತಿ ನೀಡಿದ್ದಾರೆ. ಪಾವಿನಕುರ್ವಾದಲ್ಲಿ ಜೆಎಎಸ್​ಡಬ್ಲ್ಯು ಕಂಪನಿಯಿಂದ ಬಂದರು ನಿರ್ಮಾಣ ಪ್ರಸ್ತಾವನೆಯನ್ನು ಅವರು ತಮ್ಮ ಪತ್ರದಲ್ಲಿ ಉಲ್ಲೇಖಿಸಿದ್ದಾರೆ.

    ನಿಯಮ ಮೀರಿ ಕಲ್ಲು ಸಾಗಣೆ : ಅಲೆ ತಡೆಗೋಡೆ ಕಾಮಗಾರಿಗೆ ನಿಯಮ ಮೀರಿ ಕಲ್ಲು ಸಂಗ್ರಹ ಹಾಗೂ ಬಳಕೆ ಮಾಡಲಾಗುತ್ತಿದೆ ಎಂದು ಪಕ್ಷಾತೀತ ಜನಪರ ವೇದಿಕೆಯ ಅಂತೋನ್ ಫರ್ನಾಂಡಿಸ್ ಆರೋಪಿಸಿದರು.

    ನಗರದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಷ್ಟ್ರೀಯ ಹೆದ್ದಾರಿ 66ರ ಚತುಷ್ಪಥ ಕಾಮಗಾರಿ ಗುತ್ತಿಗೆ ಪಡೆದ ಐಆರ್​ಬಿ ಕಂಪನಿ ರಸ್ತೆ ಮಾಡಲು ಕಲ್ಲು ತೆಗೆಯಲು ಪರವಾನಗಿ ಪಡೆದಿದೆ. ಆದರೆ, ಅದನ್ನು ಮಾರಾಟ ಮಾಡಲು ಅವಕಾಶವಿಲ್ಲ.

    ಅಲೆ ತಡೆಗೋಡೆ ಕಾಮಗಾರಿ ಗುತ್ತಿಗೆ ಪಡೆದ ಡಿವಿಪಿ ಇನ್​ಫ್ರಾಸ್ಟ್ರಕ್ಚರ್ ಪ್ರೖೆ.ಲಿ. ಕಾನೂನು ಬಾಹಿರವಾಗಿ ಐಆರ್​ಬಿ ಕಂಪನಿಯಿಂದ ಕಲ್ಲು ಪಡೆದು ಬಳಕೆ ಮಾಡುತ್ತಿದೆ. ಅಲ್ಲದೆ, ಬಂದರಿನ ಸಮೀಪ 20 ಎಕರೆ ಅರಣ್ಯ ಜಾಗದಲ್ಲಿ ಅಕ್ರಮವಾಗಿ ಅದನ್ನು ಸಂಗ್ರಹಿಸಿದೆ. ಅರಣ್ಯ ಇಲಾಖೆ ತಕ್ಷಣ ಕಲ್ಲನ್ನು ವಶಕ್ಕೆ ಪಡೆಯಬೇಕು. ತಪ್ಪಿತಸ್ಥ ಕಂಪನಿಯ ವಿರುದ್ಧ ಕ್ರಮ ವಹಿಸಬೇಕು. ಇಲ್ಲದಿದ್ದಲ್ಲಿ ಈ ಸಂಬಂಧ ಕಾನೂನು ಹೋರಾಟ ನಡೆಸಲಾಗುವುದು ಎಂದರು. ಸಮಿತಿ ಅಧ್ಯಕ್ಷ ಗಜೇಂದ್ರ ನಾಯ್ಕ, ಸಂದೀಪ ನೇತಲಕರ್, ನೂರ್ ಮಹಮದ್ ಶೇಖ್, ಚಂದ್ರಕಾಂತ ಹರಿಕಂತ್ರ, ಮಧುಕರ ನಾಯ್ಕ ಇದ್ದರು.

    ರಾಜಕೀಯ ಹುನ್ನಾರ ಬಿಜೆಪಿ ಆರೋಪ: ಮೀನುಗಾರರ ಪ್ರತಿಭಟನೆ ಹಾಗೂ ಸಂಸದ, ಶಾಸಕರ ಅವಹೇಳನ ಮಾಜಿ ಶಾಸಕ ಸತೀಶ ಸೈಲ್ ಅವರ ರಾಜಕೀಯ ಹುನ್ನಾರ ಎಂದು ಬಿಜೆಪಿ ಆರೋಪಿಸಿದೆ. ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಬಿಜೆಪಿ ಜಿಲ್ಲಾ ವಕ್ತಾರ ರಾಜೇಶ ನಾಯ್ಕ, ಈ ಹಿಂದೆ ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ಈ ಯೋಜನೆಗೆ ಶಂಕುಸ್ಥಾಪನೆ ನೆರವೇರಿಸಲಾಗಿತ್ತು. ಆಗ ನಮಗೆ ಯೋಜನೆ ಬರಲಿ ಎಂದು ಹೇಳಿದ ಸತೀಶ ಸೈಲ್ ಈಗ ವಿರೋಧ ವ್ಯಕ್ತಪಡಿಸುತ್ತಿದ್ದು, ಕಲ್ಲು ಸಂಗ್ರಹಿಸಿ ಮಾರಾಟ ಮಾಡಿ ಉದ್ಯಮ ಅಭಿವೃದ್ಧಿ ಮಾಡುವ ಹಾಗೂ ರಾಜಕೀಯ ಲಾಭ ಪಡೆಯುವ ಹುನ್ನಾರ ನಡೆಸಿದ್ದಾರೆ. ಅದಕ್ಕಾಗಿ ಮುಗ್ಧ ಮೀನುಗಾರರನ್ನು ಬಳಸಿಕೊಳ್ಳುತ್ತಿದ್ದಾರೆ ಎಂದು ದೂರಿದ್ದಾರೆ. ವಿಷಯವನ್ನು ಅರಿಯದೇ ಶಾಸಕಿ ಬಗ್ಗೆ ಅವಹೇಳನ ಸಲ್ಲ ಎಂದಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts