More

    ಸಂಸದರ ವಿರುದ್ಧ ಪ್ರತಿಭಟನೆ

    ಶಿರಸಿ: ಸ್ವಾತಂತ್ರ್ಯ ಹೋರಾಟಗಾರರು ಹಾಗೂ ಮಹಾತ್ಮ ಗಾಂಧೀಜಿ ಕುರಿತು ಅವಹೇಳನಕಾರಿಯಾಗಿ ಮಾತನಾಡಿದ ಉತ್ತರ ಕನ್ನಡ ಸಂಸದ ಅನಂತಕುಮಾರ ಹೆಗಡೆ ವಿರುದ್ಧ ಜಿಲ್ಲಾ ಕಾಂಗ್ರೆಸ್ ವತಿಯಿಂದ ನಗರದಲ್ಲಿ ಮಂಗಳವಾರ ಪ್ರತಿಭಟನೆ ನಡೆಸಲಾಯಿತು.

    ನಗರದ ಬಿಡ್ಕಿಬೈಲ್​ನಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಹಾಗೂ ಮುಖಂಡರು ಗಾಂಧೀಜಿ ಪ್ರತಿಮೆಗೆ ಮಾಲಾರ್ಪಣೆ ಮಾಡಿದರು.

    ಜಿಲ್ಲಾ ಕಾಂಗ್ರೆಸ್ ಘಟಕದ ಅಧ್ಯಕ್ಷ ಭೀಮಣ್ಣ ನಾಯ್ಕ ಮಾತನಾಡಿ, ದೇಶಕ್ಕೆ ಸ್ವಾತಂತ್ರ್ಯ ತಂದುಕೊಡುವಲ್ಲಿ ಮಹತ್ವದ ಪಾತ್ರ ವಹಿಸಿದ್ದ ಮಹಾತ್ಮ ಗಾಂಧೀಜಿ ಹಾಗೂ ಸ್ವಾತಂತ್ರ್ಯ ಹೋರಾಟಗಾರರ ಬಗ್ಗೆ ಬೇಕಾಬಿಟ್ಟಿ ಮಾತನಾಡಿರುವ ಅನಂತಕುಮಾರ ವಿರುದ್ಧ ಕೂಡಲೇ ಕ್ರಮ ಕೈಗೊಳ್ಳಬೇಕು. ಒಂದಿಲ್ಲೊಂದು ವಿವಾದಾತ್ಮಕ ಹೇಳಿಕೆ ನೀಡಿ ಸಮಾಜದ ಸ್ವಾಸ್ಥ್ಯ ಹಾಳು ಮಾಡುತ್ತಿರುವ ಅನಂತಕುಮಾರ ಸಂಸದರಾಗಲು ಯೋಗ್ಯರಲ್ಲ. ಸಂಸದ ಸ್ಥಾನಕ್ಕೆ ಮಸಿ ಬಳಿಯುತ್ತಿರುವ ಇವರ ವಿರುದ್ಧ ತಕ್ಷಣ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು. ಶಿರಸಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಜಗದೀಶ ಗೌಡ, ಬನವಾಸಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸಿ.ಎಫ್. ನಾಯ್ಕ, ಜಿಪಂ ಸದಸ್ಯ ಬಸವರಾಜ ದೊಡ್ಮನಿ, ಪ್ರಮುಖರಾದ ಎಸ್.ಕೆ. ಭಾಗ್ವತ್, ದೀಪಕ ದೊಡ್ಡೂರ, ರಾಜು ಉಗ್ರಾಣಕರ್, ಸತೀಶ ನಾಯ್ಕ ಮಧುರವಳ್ಳಿ,

    ಎಚ್.ಯು.ಪಠಾಣ್, ಅಬ್ಬಾಸ್ ತೋನ್ಸೆ, ಪ್ರದೀಪ ಶೆಟ್ಟಿ, ಖಾದರ್ ಆನವಟ್ಟಿ, ಗಾಯತ್ರಿ ನೇತ್ರೇಕರ, ವಿಕ್ಟರ್ ಡಯಾಸ್, ಮೋಹಿನಿ ಬೈಲೂರ, ಗೀತಾ ಭೋವಿ, ಶೈಲೇಶ ಜೋಗಳೇಕರ್, ಪ್ರಸನ್ನ ಶೆಟ್ಟಿ ಇತರರು ಉಪಸ್ಥಿತರಿದ್ದರು.

    ಬಿಜೆಪಿ ನಿಲುವು ತಿಳಿಸಲು ದೇಶಪಾಂಡೆ ಆಗ್ರಹ
    ಹಳಿಯಾಳ:
    ಮಹಾತ್ಮಾ ಗಾಂಧೀಜಿಯವರ ಅಹಿಂಸಾ ಹೋರಾಟ ಹಾಗೂ ಉಪವಾಸ ಸತ್ಯಾಗ್ರಹವನ್ನು ಒಂದು ನಾಟಕ ಎನ್ನುವಂತೆ ಮಾತನಾಡಿರುವ ಸಂಸದ ಅನಂತಕುಮಾರ ಹೆಗಡೆ ಅವರ ಹೇಳಿಕೆಯನ್ನು ಮಾಜಿ ಸಚಿವ ಆರ್.ವಿ. ದೇಶಪಾಂಡೆ ಖಂಡಿಸಿದ್ದಾರೆ. ಜವಾಬ್ದಾರಿಯುತ ಸ್ಥಾನದಲ್ಲಿರುವ ವ್ಯಕ್ತಿಯೊಬ್ಬರು ಸ್ವಾತಂತ್ರ್ಯ ಹೋರಾಟಗಾರರ ಬಗ್ಗೆ ಅದರಲ್ಲೂ ಗಾಂಧೀಜಿಯವರ ಹೋರಾಟ ಹಾಗೂ ಉಪವಾಸ ಸತ್ಯಾಗ್ರಹವು ಒಂದು ನಾಟಕ, ಬ್ರಿಟಿಷರ ಅನುಮತಿ ಹಾಗೂ ಒಪ್ಪಿಗೆಯ ಮೇರೆಗೆ ಚಳವಳಿ ನಡೆದಿತ್ತು. ಇವರೆಲ್ಲ ಢೋಂಗಿ ಹೋರಾಟಗಾರರು ಎಂದು ಅವಹೇಳನಕಾರಿಯಾಗಿ ಮಾತನಾಡಿದ್ದಾರೆ. ಈ ಹಿಂದೆಯೂ ಸಂವಿಧಾನ ಬದಲಾಯಿಸುತ್ತೇವೆ ಎಂದು ಬಹಿರಂಗ ಹೇಳಿಕೆ ನೀಡಿದ್ದರು. ಗೋಡ್ಸೆಯವರನ್ನು ಹೊಗಳಿದ್ದರು. ಹೀಗೆ ಅನೇಕ ಬಾರಿ ಸಂವಿಧಾನ ವಿರೋಧಿ, ಪ್ರಚೋದನಾತ್ಮಕ ಹಾಗೂ ಅಸಂಬದ್ಧ ಹೇಳಿಕೆಗಳನ್ನು ನೀಡಿ ಟೀಕೆಗೆ ಗುರಿಯಾಗಿದ್ದರು. ಕೇವಲ ಅಗ್ಗದ ಪ್ರಚಾರಕ್ಕಾಗಿ ಅನಗತ್ಯ ವಿವಾದ ಸೃಷ್ಟಿಸುವುದಲ್ಲದೆ, ಅವರನ್ನು ಆರಿಸಿ ಕಳುಹಿಸಿದ ಉತ್ತರ ಕನ್ನಡ ಜನರಿಗೆ ಅಪಮಾನ ಮಾಡಿದ್ದಾರೆ. ಈ ಹೇಳಿಕೆ ಕುರಿತು ಬಿಜೆಪಿ ತನ್ನ ನಿಲುವು ಸ್ಪಷ್ಟಪಡಿಸಬೇಕು. ಸಂಸದರು ದೇಶದ ಜನರ ಬಹಿರಂಗ ಕ್ಷಮೆ ಯಾಚಿಸಬೇಕು. ಅಲ್ಲದೆ, ಲೋಕಸಭೆ ಸ್ಪೀಕರ್ ಅವರು ಸಂಸದರ ಮೇಲೆ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ದೇಶಪಾಂಡೆ ಆಗ್ರಹಿಸಿದ್ದಾರೆ.
    ಹಳಿಯಾಳ ಬಂದ್ ಎಚ್ಚರಿಕೆ
    ಮಹಾತ್ಮ ಗಾಂಧೀಜಿ ಅವರ ಅಹಿಂಸಾ ಹೋರಾಟವನ್ನು ಅವಹೇಳನ ಮಾಡಿ ಅಪಮಾನಿಸಿದ ಸಂಸದ ಅನಂತಕುಮಾರ ಹೆಗಡೆ ಅವರ ವಿರುದ್ಧ ಕೇಂದ್ರ ಸರ್ಕಾರ ಕ್ರಮ ಕೈಗೊಳ್ಳಬೇಕು. ಇಲ್ಲದಿದ್ದರೆ ಹಳಿಯಾಳ ಬಂದ್ ಮಾಡಲಾಗುವುದು ಎಂದು ವಿಧಾನ ಪರಿಷತ್ ಸದಸ್ಯ ಎಸ್.ಎಲ್. ಘೊಟ್ನೇಕರ ಎಚ್ಚರಿಸಿದರು. ಹಳಿಯಾಳದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಅನಂತಕುಮಾರ ಹೆಗಡೆ ಅವರಿಗೆ ಪರೋಕ್ಷವಾಗಿ ಬಿಜೆಪಿ ಹೈಕಮಾಂಡ್ ಬೆಂಬಲವಿದ್ದಂತಿದೆ. ಗಾಂಧೀಜಿ ಬಗ್ಗೆ ಬಿಜೆಪಿಯವರಲ್ಲಿ ಗೌರವವಿದ್ದಲ್ಲಿ ಅವರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದರು. ಬಿಜೆಪಿಯಿಂದ ನಡೆದ ಗಾಂಧಿ ಸಂಕಲ್ಪ ಯಾತ್ರೆಯಲ್ಲಿ ಗಾಂಧಿಯವರನ್ನು ಹೊಗಳಿ ಪ್ರಶಂಸಿದ ಅನಂತಕುಮಾರ ಈಗ ವ್ಯತ್ತಿರಿಕ್ತವಾಗಿ ಮಾತನಾಡುತ್ತಿರುವುದು ನೋಡಿದರೆ ಅವರನ್ನೊಮ್ಮೆ ಚಿಕಿತ್ಸೆಗೊಳಪಡಿಸಬೇಕು. ಮಾತಿನ ಮಲ್ಲರಾಗಿ ರುವ ಅನಂತಕುಮಾರ ಈವರೆಗೆ ಮಾಡಿದ ಅಭಿವೃದ್ಧಿ ಶೂನ್ಯ ಎಂದರು. ಎಪಿಎಂಸಿ ಅಧ್ಯಕ್ಷ ಶ್ರೀನಿವಾಸ ಘೊಟ್ನೇಕರ, ರವಿ ತೋರಣಗಟ್ಟಿ ಇದ್ದರು.

    ಸಂಸದ ಸ್ಥಾನದಿಂದ ಅನರ್ಹಗೊಳಿಸಿ
    ದಾಂಡೇಲಿ:
    ಸಂಸದ ಅನಂತಕುಮಾರ ಹೆಗಡೆ ಹೇಳಿಕೆ ಖಂಡಿಸಿ ಸ್ಥಳೀಯ ಕಾಂಗ್ರೆಸ್ ಘಟಕದಿಂದ ಮಂಗಳವಾರ ಪ್ರತಿಭಟನೆ ನಡೆಸಲಾಯಿತು. ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಎಸ್.ಎಸ್. ಪೂಜಾರ ಮಾತನಾಡಿ, ಮಹಾತ್ಮ ಗಾಂಧಿ ಅವರ ಬಗ್ಗೆ ಅವಹೇಳನಕಾರಿ ಹೇಳಿಕೆ ನೀಡಿರುವುದು ರಾಷ್ಟ್ರದ್ರೋಹದ ಕೆಲಸವಾಗಿದೆ. ಸಂಸದ ಸ್ಥಾನದಿಂದ ಅನರ್ಹಗೊಳಿಸುವವರೆಗೆ ಹೋರಾಟ ಮುಂದುವರಿಸಲಾಗುವುದು ಎಂದರು. ತಹಸೀಲ್ದಾರ್ ಶೈಲೇಶ ಪರಮಾನಂದ ಅವರಿಗೆ ಮನವಿ ಸಲ್ಲಿಸಲಾಯಿತು. ನಗರಸಭೆ ಸದಸ್ಯ ಆದಂ ದೇಸೂರ, ಜಾಫರ್ ಮಸಣಿಕಟ್ಟಿ, ಅಶ್ಪಾಕ್ ಶೇಖ್, ಯಾಸ್ಮಿನ್ ಕಿತ್ತೂರ, ಮಜೀದ್ ಸನದಿ, ಶಾಹಿದಾ ಪಠಾಣ, ರೂಹಿನಾ ಖತೀಬ್, ನೀಲವ್ವ ಬಂಡಿವಡ್ಡರ, ಸರಸ್ವತಿ ರಜಪೂತ, ಪ್ರೀತಿ ನಾಯರ, ಸುಧಾ ಜಾಧವ, ರುಕ್ಮೀಣಿ ಬಾಂಗಡೆ, ಶಿಲ್ಪಾ ಕೊಡೆ, ಅನಿಲ ನಾಯಕರ್, ಸಂಜು ನಂದ್ಯಾಳಕರ, ಆಸಿಫ್ ಮುಜಾವರ, ತಸವರ್ ಸೌದಾಗರ್, ಪ್ರಭುದಾಸ ಎನಿಬೆರ್, ಮುಸ್ತಾಕ ಮಿಶ್ರಿಕೋಟಿ, ಎ. ಬಾಸೂರಿ, ರಿಯಾಜ್ ಬಾಬು ಸೈಯ್ಯದ್, ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts