More

    ಸಂಭ್ರಮದ ಹೊಸಲು ಮಾರಮ್ಮದೇವಿ ಜಾತ್ರೆ

    ಹುಣಸೂರು: ತಾಲೂಕಿನ ಶಕ್ತಿದೇವತೆಯೆಂದೇ ಪ್ರಸಿದ್ಧಿ ಪಡೆದಿರುವ ಬಿಳಿಕೆರೆ ಹೋಬಳಿ ಮಲ್ಲಿನಾಥಪುರದ ಹೊಸಲು ಮಾರಮ್ಮದೇವರ ಜಾತ್ರಾ ಮಹೋತ್ಸವ ಸಾವಿರಾರು ಭಕ್ತರ ಸಮ್ಮುಖದಲ್ಲಿ ವಿಜೃಂಭಣೆಯಿಂದ ನೆರವೇರಿತು.


    ಸೋಮವಾರ ಬೆಳಗ್ಗೆ ಶಕ್ತಿದೇವತೆಗೆ ವಿಶೇಷ ಪೂಜಾ-ಕೈಂಕರ್ಯಗಳನ್ನು ನೆರವರಿಸಲಾಯಿತು. ನಂತರ ಸಂಪ್ರದಾಯದಂತೆ ಮಲ್ಲಿನಾಥಪುರದಲ್ಲಿರುವ ಬೀರೇಶ್ವರ ದೇವರಿಗೆ ಪೂಜೆ ಸಲ್ಲಿಸಿ, ಚಿನ್ನಾಭರಣ, ಕಡಗದೊಂದಿಗೆ ಸಿಂಗರಿಸಲಾಯಿತು. ಬೆಳ್ಳಿಯ ಮುಖವಾಡ ಹಾಕಿ, ದೇವಿಗೆ ಅಲಂಕರಿಸುವ ಚಿನ್ನಾಭರಣಗಳನ್ನು ಇಡುವ ಪೆಟ್ಟಿಗೆ(ಕುರ್ಜು)ಯನ್ನು ಹುಲಿವಾಹನದಲ್ಲಿರಿಸಿ, ನಂದಿಕಂಬದೊಂದಿಗೆ ಉತ್ಸವ ಮೂರ್ತಿಯನ್ನು ಮೆರವಣಿಗೆ ಮೂಲಕ ತರಲಾಯಿತು. ದಾರಿಯುದ್ದಕ್ಕೂ ಗ್ರಾಮಸ್ಥರು ಈಡುಗಾಯಿಯನ್ನು ಹೊಡೆದರು.
    ಮಲ್ಲಿನಾಥಪುರ, ಬಿಳಿಕೆರೆ, ಬೋಳನಹಳ್ಳಿ, ರಾಮೇನಹಳ್ಳಿ, ರಂಗಯ್ಯನಕೊಪ್ಪಲು, ಎಮ್ಮೆಕೊಪ್ಪಲು, ಮೈದನಹಳ್ಳಿ ಗ್ರಾಮಸ್ಥರು ಜಾತ್ರಾ ಮಹೋತ್ಸವದಲ್ಲಿ ಭಾಗವಹಿಸಿದ್ದರು.
    ಜೀವಂತ ಕೋಳಿ ಎಸೆದರು.

    ಹಿಂದಿನಿಂದ ಆಚರಿಸಿಕೊಂಡು ಬಂದಿರುವ ಪದ್ಧತಿಯಂತೆ ಕುರ್ಜು ದೇವಾಲಯದ ಆವರಣಕ್ಕೆ ಆಗಮಿಸುತ್ತಿದ್ದಂತೆ ಹರಕೆ ಹೊತ್ತ ಭಕ್ತರು ಪೂಜೆ ಸಲ್ಲಿಸಿ ಜೀವಂತ ಕೋಳಿಯನ್ನು ದೇವಾಲಯದ ಛಾವಣಿಗೆ ಎಸೆದು ಹರಕೆ ತೀರಿಸಿದರು. ಬಿಳಿಕೆರೆ ನಾಡಕಚೇರಿ ಸಿಬ್ಬಂದಿ ಹಾಜರಿದ್ದರು. ಪೊಲೀಸ್ ಬಿಗಿ ಬಂದೋಬಸ್ತ್ ನಿಯೋಜಿಸಲಾಗಿತ್ತು.

    ಸಂಜೆ 6ರ ನಂತರ ಇರುವಂತಿಲ್ಲ: ಈ ಜಾತ್ರೆಯ ವಿಶೇಷವೆಂದರೆ ಸಂಜೆ 6 ಗಂಟೆಯ ನಂತರ ಜಾತ್ರೆಯ ಮಾಳದಲ್ಲಾಗಲಿ, ದೇವಾಲಯದಲ್ಲಾಗಲಿ ಯಾರೂ ಇರುವಂತಿಲ್ಲ. ದೇವಿಯು ಸಂಜೆಯ ನಂತರ ಭಕ್ತರು ತನಗಾಗಿ ಸಲ್ಲಿಸಿರುವ ಹರಕೆ, ಪೂಜೆಗಳನ್ನು ನೋಡಿಕೊಂಡು ಹೋಗುತ್ತದೆ ಎನ್ನುವ ಧಾರ್ಮಿಕ ನಂಬಿಕೆ ಈ ಭಾಗದ ಜನರದ್ದು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts