More

    ಸಂಭ್ರಮದ ರಂಜಾನ್ ಆಚರಣೆ

    ಚಿತ್ರದುರ್ಗ: ಕೋಟೆನಗರಿ ಸೇರಿ ಜಿಲ್ಲಾದ್ಯಂತ ಒಂದು ತಿಂಗಳ ಉಪವಾಸ ವ್ರತಾಚರಣೆ ಪೂರೈಸಿದ ಮುಸ್ಲಿಂ ಸಮುದಾಯದವರು ಶ್ರದ್ಧಾ-ಭಕ್ತಿ, ದಾನ-ಧರ್ಮದ ಸಂಕೇತವಾದ ಪವಿತ್ರ ರಂಜಾನ್ ಹಬ್ಬವನ್ನು ಗುರುವಾರ ಅತ್ಯಂತ ಸಂಭ್ರಮದಿಂದ ಆಚರಿಸಿದರು.

    ದೇವನ ಉಡುಗೊರೆಯ ಈದುಲ್ ಫಿತ್ರ್ ಎಂದೇ ಕರೆಸಿಕೊಳ್ಳುವ ಈ ಹಬ್ಬದ ಅಂಗವಾಗಿ ನಗರದ ವಿವಿಧ ಮೂಲೆಗಳಿಂದ ಸಮುದಾಯದ ಹಲವರು ಬೆಳಗ್ಗೆಯಿಂದಲೇ ಈದ್ಗಾ ಮೈದಾನ ಪ್ರವೇಶಿಸಲು ಮುಂದಾದರು. ಇಲ್ಲಿ ಸಾಮೂಹಿಕ ಪ್ರಾರ್ಥನೆ ಸಲ್ಲಿಸಿದರೆ, ಶ್ರೇಷ್ಠ ಎಂಬ ನಂಬಿಕೆ ಹಿನ್ನೆಲೆಯಲ್ಲಿ ಕೆಲವೇ ನಿಮಿಷಗಳಲ್ಲಿ ಇಡೀ ಆವರಣ ಭರ್ತಿಯಾಯಿತು.

    ಶ್ವೇತ ವಸ್ತ್ರಧಾರಿಗಳಾಗಿದ್ದ ಎಲ್ಲರೂ ಒಬ್ಬರ ಹಿಂದೆ ಮತ್ತೊಬ್ಬರಂತೆ ಸಾಲಾಗಿ ಕುಳಿತರು. ಮೌಲ್ವಿಗಳು ಸೂಚನೆ ನೀಡುತ್ತಿದ್ದಂತೆ ಅಲ್ಲಾಹು ಸ್ಮರಣೆಯೊಂದಿಗೆ ಸಾಮೂಹಿಕ ಪ್ರಾರ್ಥನೆ ಸಲ್ಲಿಸಿದರು. ಇದಕ್ಕೆ ಜಿಲ್ಲೆಯ ಹಲವು ಮಸೀದಿಗಳು ಕೂಡ ಹೊರತಾಗಿರಲಿಲ್ಲ. ಬಳಿಕ ಪರಸ್ಪರ ಆಲಿಂಗನ ಮಾಡಿಕೊಂಡು ಹಬ್ಬದ ಶುಭಾಶಯ ವಿನಿಮಯ ಮಾಡಿಕೊಂಡರು.

    ಚಂದ್ರ ದರ್ಶನವಾದ ನಂತರ ಮಸೀದಿ, ಮನೆಗಳಲ್ಲಿ ತಕ್‌ಬೀರ್ ಎಂಬುದಾಗಿ ದೈವ ಸ್ಮರಣೆ ಮಾಡುವ ಸಂಪ್ರದಾಯ ಈ ಸಮುದಾಯದವರಲ್ಲಿದ್ದು, ಆದಾದ ನಂತರ ಹಬ್ಬದಾಚರಣೆ ನಡೆಯಿತು.

    ನಗರದ ಜಾಮೀಯಾ, ಜುಮ್ಮಾ ಮಸೀದಿ, ಬಡಮಕಾನ್, ಚಂದ್ರವಳ್ಳಿ, ಎಪಿಎಂಸಿ ಸಮೀಪ, ಅಗಸನಕಲ್ಲು ಸಮೀಪವಿರುವ ಈದ್ಗಾ ಮೈದಾನಗಳಲ್ಲೂ ಸಾಮೂಹಿಕ ಪ್ರಾರ್ಥನೆ ಸಲ್ಲಿಸಿದರು. ಚಂದ್ರವಳ್ಳಿ ಸಮೀಪದ ಮೈದಾನದಲ್ಲಿ ಮುಸ್ಲಿಂ ಮಹಿಳೆಯರು ಪ್ರಾರ್ಥನೆಗೆ ಹಾಜರಾಗಿದ್ದು, ವಿಶೇಷ.

    ಈದ್ ಎಂದರೆ ಹಬ್ಬ, ಫಿತರ್ ಎಂಬುದು ದಾನದ ಸಂಕೇತವಾಗಿದೆ. ಹೀಗಾಗಿ ರಂಜಾನ್ ದಾನ-ಧರ್ಮಗಳ ಹಬ್ಬ. ವರ್ಷದೊಳಗೆ ದುಡಿದ ಹಣದಲ್ಲಿ ಒಂದಿಷ್ಟನ್ನು ಸಮುದಾಯದ ಉಳ್ಳವರು ಬಡವರಿಗೆ ದಾನ ಮಾಡಿದರು. ಹಿಂದು ಧರ್ಮೀಯರ ಪೈಕಿ ಕೆಲವರು ಮುಸ್ಲಿಂ ಸಮುದಾಯದ ಕೆಲ ಬಡವರಿಗೆ ವಿವಿಧ ದವಸ, ಧಾನ್ಯವನ್ನು ದಾನವಾಗಿ ನೀಡುವ ಮೂಲಕ ಹಬ್ಬದ ಶುಭಾಶಯ ಕೋರಿದ್ದು, ವಿಶೇಷವಾಗಿತ್ತು.

    ಸಮುದಾಯದ ಮುಖಂಡರಾದ ಎಂ.ಕೆ.ತಾಜ್‌ಪೀರ್, ಅನ್ವರ್ ಬಾಷಾ, ಎಂ.ಸಿ.ಒ.ಬಾಬು, ಆರ್.ಕೆ.ಸರ್ದಾರ್, ಬಿ.ಕೆ.ರೆಹಮತ್‌ವುಲ್ಲಾ, ಟಿಪ್ಪು ಖಾಸಿಂ ಆಲಿ, ಚಿತ್ರದುರ್ಗ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಬಿ.ಎನ್.ಚಂದ್ರಪ್ಪ, ಶಾಸಕ ಕೆ.ಸಿ.ವೀರೇಂದ್ರ ಪಪ್ಪಿ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts