More

    ಸಂತೋಷ ಅನುಭವಿಸಬೇಕು

    ಭೂಮಂಡಲದಲ್ಲಿ ಎಲ್ಲವೂ ಇದೆ. ಸಂತೋಷವನ್ನು ಅನುಭವಿಸಬೇಕು. ಅದಕ್ಕೆ ಸತ್ಸಂಗ ಬೇಕು.

    ಜ್ಯೋತಿ ಬೆಳಗಲು ಪಣತಿ, ಬತ್ತಿ, ಎಣ್ಣೆ ಬೇಕು. ಅದು ಬಂಗಾರದ್ದು ಇರಲಿ, ಬೆಳ್ಳಿಯದೇ ಇರಲಿ ಅಥವಾ ಮಣ್ಣಿನ ಪಣತಿ ಇರಲಿ; ಅದಕ್ಕೆ ಸಂಘ ಬೇಕು. ಇದರ ಅರ್ಥ ಜೀವದ ಜ್ಯೋತಿಗೆ ಬಡವನಾದರೇನು, ಸಿರಿವಂತನಾದರೇನು, ಕುರೂಪಿಯಾದರೇನು, ಶರೀರದ ಸಂಘ ಬೇಕು.

    ಸಾಮಾನ್ಯ ಮನುಷ್ಯ ಅಸಾಮಾನ್ಯ ಆಗುತ್ತಾನೆ ಎಂದರೆ ಅದಕ್ಕೆ ಶರಣರ ಭೇಟಿ ಬೇಕು. ಉದಾಹರಣೆಗೆ-ವಾಲ್ಮೀಕಿ ಒಬ್ಬ ಕ್ರೂರಿ. ಯಾರೂ ಆತನನ್ನು ಭೇಟಿಯಾಗುತ್ತಿರಲಿಲ್ಲ. ಅಂಥ ವ್ಯಕ್ತಿಯಲ್ಲಿ ಬದಲಾವಣೆ ಆಗಿದ್ದು ನಾರದ ಮುನಿಗಳ ಒಂದು ಭೇಟಿಯಿಂದಷ್ಟೆ. ಆ ನಾರದರ ಸಂಘದಿಂದ ಮುಂದೆ ವಾಲ್ಮೀಕಿ ಮಹರ್ಷಿಗಳು ಎಂದು ಎನಿಸಿಕೊಂಡಿದ್ದು.

    ಹಾದಿಯಲ್ಲಿ ಹೋಗುವ ಒಬ್ಬ ಮನುಷ್ಯ ಅತಿಯಾದ ಬಿಸಿಲಿನಿಂದಾಗಿ ಆಯಾಸಗೊಂಡಿದ್ದ. ಆಗ ಅವನಿಗೆ ಕಂಡಿದ್ದು ಒಂದು ವೃಕ್ಷ. ದಣಿವು, ಬಿಸಿಲು ಎಲ್ಲವನ್ನೂ ಮರೆಸಿ ಆ ಮನುಷ್ಯನಿಗೆ ತಂಪು ದೊರೆತಿದ್ದು ವೃಕ್ಷದ ಸಂಘದಿಂದ.

    ಒಂದೊಂದು ವೃಕ್ಷವೂ ಶರಣರು ಇದ್ದಂತೆ.

    ಬುದ್ಧ, ಬಸವಣ್ಣನವರ ಸತ್ಸಂಗದಿಂದ ಲಕ್ಷಾಂತರ ಮನೆತನದವರು ಸುಖಜೀವಿಗಾಳಾದರು, ಶರಣರಾದರು.

    ಸಾಕ್ರೆಟೀಸ್ ಸಂಘದಿಂದ ಸಾವಿರ ಯುವಕರು ಶರಣರಾದರು.

    ಅಕ್ಕಮಹಾದೇವಿ ಮೂರು ಮಾತುಗಳನ್ನು ಹೇಳುತ್ತಾಳೆ. ಸಂಘದಿಂದ ಮಾತ್ರ ಸಾಧ್ಯ ಎಂದು ವಿವರಿಸುತ್ತಾಳೆ.

    1) ಎರಡು ಕಲ್ಲುಗಳನ್ನು ಉಜ್ಜಿದಾಗ ಮಾತ್ರ ಬೆಂಕಿ ಬರುತ್ತದೆ. ಅದಕ್ಕೂ ಸಂಘ ಬೇಕು.

    2) ಬೀಜ ಮೊಳಕೆಯೊಡೆಯಲು ಭೂಮಿ, ಗಾಳಿ, ನೀರು ಬೇಕು. ಸಂಘ ಇಲ್ಲದೇ ಮೊಳಕೆ ಬರಲು ಸಾಧ್ಯವಿಲ್ಲ.

    3) ಮಲ್ಲಿಕಾರ್ಜುನ ನಿನ್ನ ಸಂಘದಿಂದ ಶರಣರನ್ನು ನಾನು ಕಂಡೆ, ಸಾಮಾನ್ಯಳಿಂದ ಅಸಾಮಾನ್ಯಳಾದೆ, ಅದಕ್ಕೆ ನಿನ್ನ ಸಂಘ ಬೇಕು.

    ಮನುಷ್ಯನೇ ನೀನು ಆನಂದದಿಂದ ಬದುಕಲು ಸೃಷ್ಟಿಕರ್ತನ ಸಂಘ ಬೇಕು. ಒಳ್ಳೆಯವರ ಜೊತೆ ಸಂಘ ಮಾಡು, ನಿನ್ನ ಜೀವನ ಆನಂದಮಯವಾಗುತ್ತದೆ.

    ಹೃದಯದಲ್ಲಿ ಒಳ್ಳೆಯ ವಿಚಾರ ಯಾರಲ್ಲಿ ಇರುತ್ತದೆಯೋ ಅವರ ಜೊತೆ ಸಂಘ ಮಾಡಿ. ಅವರ ಸಂಘದಿಂದ ನಿಮ್ಮ ಜೀವನ ಸುಂದರವಾಗುತ್ತದೆ. ಸತ್ಸಂಗದಿಂದ ಜೀವನ ಆನಂದಮಯವಾಗುವುದು

    ನಿರೂಪಣೆ : ತುಕಾರಾಂ ಜಾಧವ, ಕನಕೂರ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts