More

    ಸಂತೆ ಶುಲ್ಕ ವಸೂಲಿ ಹರಾಜು ಮುಂದೂಡಿಕೆ

    ರಾಣೆಬ್ನೆನೂರ: ನಗರದ ವಿವಿಧೆಡೆಯ ಸಂತೆ ಶುಲ್ಕ ವಸೂಲಿಗಾಗಿ ಮಂಗಳವಾರ ನಗರಸಭೆ ಸಭಾಂಗಣದಲ್ಲಿ ಆಯೋಜಿಸಿದ್ದ ಗುತ್ತಿಗೆ ಅರ್ಜಿದಾರರ ಸಭೆಯಲ್ಲಿ ದರ ಹಾಗೂ ಸ್ಥಳ ಪರಿಷ್ಕರಣೆ ನಿಗದಿಯಾಗದ ಕಾರಣ ಹರಾಜು ಪ್ರಕ್ರಿಯೆ ಮುಂದೂಡಲಾಯಿತು.

    ಹರಾಜು ಪ್ರಕ್ರಿಯೆಗೆ ಚಾಲನೆ ನೀಡಲು ನಗರಸಭೆ ಆಯುಕ್ತ ಡಾ. ಎನ್. ಮಹಾಂತೇಶ ಸೂಚಿಸುತ್ತಿದ್ದಂತೆ ಅದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಟೆಂಡರ್ ಅರ್ಜಿದಾರ ಶ್ರೀನಿವಾಸ ಹುಟ್ಟಿ, ಟೆಂಡರ್​ನಲ್ಲಿ ನಗರದ ಬಹುತೇಕ ಮಾರುಕಟ್ಟೆಗಳನ್ನು ಕೈಬಿಡಲಾಗಿದೆ. ದರ ಪರಿಷ್ಕರಣೆಯೂ ಆಗಿಲ್ಲ ಎಂದು ತಕರಾರು ಅರ್ಜಿ ಸಲ್ಲಿಸಿದರು.

    ನಗರಸಭೆ ಸದಸ್ಯ ಪುಟ್ಟಪ್ಪ ಮರಿಯಮ್ಮನವರ ಮಾತನಾಡಿ, ಶುಲ್ಕ ವಸೂಲಿಯಲ್ಲಿ ನಗರದ ದೊಡ್ಡಪೇಟೆ, ತರಕಾರಿ ಮಾರುಕಟ್ಟೆ ಹಾಗೂ ಎಂ.ಜಿ. ಮಾರುಕಟ್ಟೆಯನ್ನು ಮಾತ್ರ ಸೇರಿಸಲಾಗಿದೆ. ಆದರೆ, ಬೀದಿ ಬದಿಯ ವ್ಯಾಪಾರಸ್ಥರು, ಬೀಡಾ ಅಂಗಡಿ, ಎಗ್​ರೈಸ್ ಅಂಗಡಿ ಸೇರಿ ಪ್ರಮುಖ ಬಡಾವಣೆಗಳನ್ನು ಕೈ ಬಿಡಲಾಗಿದೆ. ಈ ಎಲ್ಲ ಬಡಾವಣೆಯಲ್ಲಿ ಶುಲ್ಕ ವಸೂಲಿ ಮಾಡಲು ನಗರಸಭೆಯಲ್ಲಿ ಸಿಬ್ಬಂದಿ ಕೊರತೆಯಿದೆ. ಹಲವಾರು ವರ್ಷಗಳಿಂದ ದರ ಪರಿಷ್ಕರಣೆಯೂ ಆಗಿಲ್ಲ. ಆದ್ದರಿಂದ ಎಲ್ಲ ವ್ಯಾಪಾರಸ್ಥರು ಹಾಗೂ ದರ ಪರಿಷ್ಕರಣೆ ಮಾಡಿಯೇ ಟೆಂಡರ್ ನೀಡಬೇಕು ಎಂದು ಒತ್ತಾಯಿಸಿದರು.

    ಸದಸ್ಯ ಮಲ್ಲಣ್ಣ ಅಂಗಡಿ ಮಾತನಾಡಿ, ಈ ಸಮಸ್ಯೆಗಳಿಗೆ ಅಧಿಕಾರಿಗಳು ಟೆಂಡರ್ ಕರೆಯುವ ಮುನ್ನವೇ ಪರಿಹಾರ ಕಂಡುಕೊಳ್ಳಬೇಕಿತ್ತು. ನಗರದಲ್ಲಿ ಎಷ್ಟು ಬೀದಿಗಳಿವೆ? ಎಷ್ಟು ಅಂಗಡಿಗಳಿವೆ? ಶುಲ್ಕ ಪರಿಷ್ಕರಣೆ ಮಾಡಬೇಕೋ ಅಥವಾ ಬೇಡವೋ? ಎಂದು ಮೊದಲೇ ನಿರ್ಧರಿಸಿ ಟೆಂಡರ್ ಕರೆಯಬೇಕು. ಅದನ್ನು ಬಿಟ್ಟು ಟೆಂಡರ್ ಹರಾಜು ಕರೆದು ಈ ರೀತಿ ಮಾಡುವುದು ಸರಿಯಲ್ಲ. ಟೆಂಡರ್ ಕರೆಯಲು ನಗರಸಭೆ ಅಧಿಕಾರಿಗಳು ಪತ್ರಿಕಾ ಪ್ರಕಟಣೆ ನೀಡಿರುವುದು ಸೇರಿ ಎಲ್ಲವೂ ನಗರಸಭೆಗೆ ನಷ್ಟ ಮಾಡಿದಂತೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

    ಟೆಂಡರ್ ಹರಾಜು ಪ್ರಕ್ರಿಯೆಯಲ್ಲಿ ಪಾಲ್ಗೊಂಡ ಎಂಟು ಅರ್ಜಿದಾರರಲ್ಲಿ ಕೆಲವರು ಟೆಂಡರ್ ಕೂಗಬೇಕು ಎಂದು ವಾದಿಸಿದರೆ, ಇನ್ನು ಕೆಲವರು ದರ ಪರಿಷ್ಕರಣೆ ಮಾಡುವವರೆಗೂ ಮುಂದೂಡಬೇಕು ಎಂದು ಪಟ್ಟುಹಿಡಿದರು.

    ಆಯುಕ್ತ ಡಾ. ಎನ್. ಮಹಾಂತೇಶ ಮಾತನಾಡಿ, ಬೀದಿ ಬದಿಯ ವ್ಯಾಪಾರಸ್ಥರು, ಕೆಲವು ಬಡಾವಣೆಗಳನ್ನು ಕೈಬಿಟ್ಟಿದ್ದರಿಂದ ಹಾಗೂ ದರ ಪರಿಷ್ಕರಣೆ ಮಾಡದ ಕಾರಣ ಮುಂದಿನ ಎಂಟು ದಿನದೊಳಗೆ ಎಲ್ಲವನ್ನೂ ಸರಿಪಡಿಸಿಕೊಂಡು ಮತ್ತೊಂದು ಬಾರಿ ಟೆಂಡರ್ ಕರೆಯಲಾಗುವುದು. ಇದರಿಂದ ನಗರಸಭೆ ಆದಾಯವೂ ಹೆಚ್ಚಾಗಲಿದೆ. ಮುಂದಿನ ಎಂಟು ದಿನಗಳ ಕಾಲ ಟೆಂಡರ್ ಪ್ರಕ್ರಿಯೆಯನ್ನು ಮುಂದೂಡಲಾಗಿದೆ ಎಂದು ತಿಳಿಸಿದರು. ಇದಕ್ಕೆ ಎಲ್ಲರೂ ಒಪ್ಪಿಗೆ ಸೂಚಿಸಿದರು.

    ನಗರಸಭೆ ಸದಸ್ಯರಾದ ರಮೇಶ ಕರಡೆಣ್ಣವರ, ಲಿಂಗರಾಜ ಕೋಡಿಹಳ್ಳಿ, ಪಾಂಡುರಂಗ ಗಂಗಾವತಿ, ಮಂಜುಳಾ ಹತ್ತಿ, ಗಂಗಮ್ಮ ಹಾವನೂರ, ಪ್ರಭಾವತಿ ತಿಳವಳ್ಳಿ, ಕಂದಾಯ ನಿರೀಕ್ಷಕ ರಮೇಶ ಸುಣಗಾರ ಹಾಗೂ ನಗರಸಭೆ ಸಿಬ್ಬಂದಿ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts