More

    ಸಂಡೇ ಕರ್ಫ್ಯೂಗೆ ಜನರ ಸಹಕಾರ

    ಗದಗ: ದೇಶದಲ್ಲಿ ವ್ಯಾಪಕವಾಗಿ ಆವರಿಸುತ್ತಿರುವ ಕರೊನಾ ವೈರಸ್ ತಡೆಗಟ್ಟಲು ಸರ್ಕಾರ ಘೊಷಿಸಿರುವ ಭಾನುವಾರದ ಕರ್ಫ್ಯೂಗೆ ಗದಗ-ಬೆಟಗೇರಿ ಅವಳಿನಗರ ಸೇರಿ ಸಂಪೂರ್ಣ ಜಿಲ್ಲೆಯಲ್ಲಿ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಯಿತು. ಜನರ ಓಡಾಟವಿರಲಿಲ್ಲ. ಶನಿವಾರವೇ ಹಾಲು ಸೇರಿ ಇತರೆ ಅಗತ್ಯ ವಸ್ತುಗಳನ್ನು ಮನೆಗೆ ತೆಗೆದುಕೊಂಡು ಹೋಗಿದ್ದರಿಂದ ಬಹುತೇಕ ಜನರು ಭಾನುವಾರ ಮನೆ ಬಿಟ್ಟು ಹೊರಗೆ ಬರಲಿಲ್ಲ.

    ಗದಗ-ಬೆಟಗೇರಿ ಅವಳಿನಗರದ ಜನನಿಬಿಡ ಪ್ರದೇಶಗಳಾದ ಸ್ಟೇಷನ್ ರಸ್ತೆ, ನಾಮಜೋಶಿ ರಸ್ತೆ, ಬ್ಯಾಂಕ್ ರಸ್ತೆ, ಮುಳಗುಂದ ನಾಕಾ, ಹಾಲಗೇರಿ ನಾಕಾ, ಬೆಟಗೇರಿ ಟೆಂಗಿನಕಾಯಿ ಬಜಾರ್, ಹೆಲ್ತ್​ಕ್ಯಾಂಪ್, ಹಳೇ ಡಿಸಿ ಕಚೇರಿ ಬಳಿ ಜನರಿಲ್ಲದೆ ಭಣಗುಟ್ಟಿದವು. ಬಸ್ ಸಂಚಾರ ಮತ್ತು ರೈಲ್ವೆ ಸಂಚಾರ ಸ್ಥಗಿತಗೊಳಿಸಿದ್ದರಿಂದ ಬಸ್ ಮತ್ತು ರೈಲು ನಿಲ್ದಾಣಗಳು ಖಾಲಿ ಖಾಲಿಯಾಗಿದ್ದವು.

    ತರಕಾರಿ ಮಾರ್ಕೆಟ್, ಸರಾಫ್ ಬಜಾರ್, ಮದ್ಯದದಂಗಡಿಗಳು, ಪಾರ್ಸಲ್ ನೀಡುವ ಹೋಟೆಲ್​ಗಳು ಬಂದ್ ಆಗಿದ್ದವು. ಔಷಧ ಮತ್ತಿತರ ಅಗತ್ಯ ವಸ್ತು ಖರೀದಿಗಾಗಿ ಒಬ್ಬಿಬ್ಬರು ಸಂಚಾರ ಮಾಡುತ್ತಿರುವುದು ಕಂಡುಬಂದಿತು. ಕೆಲ ಬಡಾವಣೆಗಳಲ್ಲಿ ಸಣ್ಣ ಸಣ್ಣ ಕಿರಾಣಿ ಅಂಗಡಿಗಳು ತೆರೆದಿದ್ದವು. ಇದನ್ನು ಹೊರತುಪಡಿಸಿದರೆ ಜನರು ಕರ್ಫ್ಯೂಗೆ ಸಂಪೂರ್ಣ ಬೆಂಬಲ ನೀಡಿದರು.

    ಮಾಂಸ ಮಾರಾಟ ಅಬಾಧಿತ: ಭಾನುವಾರದ ಕರ್ಫ್ಯೂ ಮಧ್ಯೆಯೂ ಮಾಂಸ ಮಾರಾಟ ಜೋರಾಗಿ ನಡೆಯಿತು. ಮಾಸ ಮಾರ್ಕೆಟ್​ನಲ್ಲಿ ಜನರು ದೈಹಿಕ ಅಂತರ ಕಾಪಾಡಿಕೊಂಡು, ಮುಖಕ್ಕೆ ಮಾಸ್ಕ್ ಧರಿಸಿ ಮಾಂಸ ಖರೀದಿಸಿ ಮನೆಗೆ ತೆಗೆದುಕೊಂಡು ಹೋದರು. ಜಿಲ್ಲಾಡಳಿತ ಅನುಮತಿ ನೀಡಿದ್ದರಿಂದ ಪೊಲೀಸರ ಉಪಸ್ಥಿತಿಯಲ್ಲಿ ಮಾಂಸ ಮಾರಾಟ ನಡೆಯಿತು.

    ಕಠಿಣಕ್ರಮದ ಎಚ್ಚರಿಕೆ: ಕೋವಿಡ್ 19 ಸೋಂಕು ನಿಯಂತ್ರಣಕ್ಕಾಗಿ ಇದ್ದ ಲಾಕ್​ಡೌನ್ ನಿಯಮಗಳನ್ನು ಸಡಿಲಿಸಿ ಹೊರ ಜಿಲ್ಲೆ ಮತ್ತು ರಾಜ್ಯಗಳಿಂದ ಸ್ವಂತ ಊರುಗಳಿಗೆ ಮರಳಲು ಷರತ್ತುಬದ್ಧ ಅವಕಾಶ ನೀಡಲಾಗಿದೆ. ಇದರಿಂದ ಜಿಲ್ಲೆಗೆ ಮರಳಿದವರನ್ನು ಪ್ರವೇಶ ಕೇಂದ್ರ ಬಸ್ ನಿಲ್ದಾಣದಲ್ಲಿ ಆರೋಗ್ಯ ತಪಾಸಣೆಗೆ ಒಳಪಡಿಸಿ ಸೋಂಕು ಲಕ್ಷಣವಿರುವ ವ್ಯಕ್ತಿಗಳನ್ನು ನಿಗದಿತ ಕ್ವಾರಂಟೈನ್​ಗಳಲ್ಲಿ 14 ದಿನ ಇರಿಸಲಾಗುತ್ತದೆ. ಆರೋಗ್ಯ ಪರೀಕ್ಷೆ ನಂತರ ಸ್ವಯಂ ವರದಿಯ ಅವಧಿಯಾಗಿ ಮನೆಯಲ್ಲಿ 14 ದಿನ ಪ್ರತ್ಯೇಕ ವಾಸದಲ್ಲಿ ಇರಿಸಲಾಗುತ್ತಿದೆ. ಇಂತಹ ವ್ಯಕ್ತಿಗಳ ಎಡಗೈಗೆ ಮುದ್ರೆ ಹಾಕಲಾಗುತ್ತದೆ ಮತ್ತು ಅವರಿಂದ ಮನೆಯಲ್ಲಿ ಪ್ರತ್ಯೇಕ ವಾಸದ ಕಟ್ಟುನಿಟ್ಟಿನ ಮುಚ್ಚಳಿಕೆ ಬರೆಸಿಕೊಳ್ಳಲಾಗಿರುತ್ತದೆ. ಸ್ವಂತ ಗೃಹ ಬಂಧನ ಅಥವಾ ಸಾಂಸ್ಥಿಕ ಬಂಧನ ಅವಧಿಯಲ್ಲಿ ನಿಬಂಧನೆಗಳನ್ನು ಉಲ್ಲಂಘಿಸುವವರ ವಿರುದ್ಧ ರಾಷ್ಟ್ರೀಯ ವಿಪತ್ತು ನಿರ್ವಹಣೆ ಕಾಯ್ದೆ, ಸಾಂಕ್ರಾಮಿಕ ಕಾಯ್ದೆ ಮತ್ತು ಐಪಿಸಿ ಕಲಂ 188ರ ಅಡಿ ಕಠಿಣ ಕ್ರಮ ಕೈಕೊಳ್ಳಲಾಗುವುದು ಎಂದು ಜಿಲ್ಲಾಧಿಕಾರಿ ಎಂ.ಜಿ. ಹಿರೇಮಠ ಎಚ್ಚರಿಕೆ ನೀಡಿದ್ದಾರೆ.

    ಲಕ್ಷ್ಮೇಶ್ವರ ಸಂಪೂರ್ಣ ಸ್ತಬ್ಧ

    ಲಕ್ಷ್ಮೇಶ್ವರ: ಸಂಡೆ ಕರ್ಫ್ಯೂಗೆ ಪಟ್ಟಣದಲ್ಲಿಯೂ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಯಿತು. ಶನಿವಾರ ದಿನವೇ ಜನರು ಅಗತ್ಯ ವಸ್ತುಗಳ ಖರೀಸದಿ ಮಾಡಿಕೊಂಡಿದ್ದರು. ಅವಶ್ಯಕ ವಸ್ತುಗಳ ಮಾರಾಟಕ್ಕೆ ಸರ್ಕಾರ ಅನುಮತಿ ನೀಡಿದ್ದರೂ ಪಟ್ಟಣದಲ್ಲಿ ಹೂವು, ಹಣ್ಣು, ತರಕಾರಿ, ದಿನಸಿ ಸೇರಿ ಯಾವುದೇ ವ್ಯಾಪಾರ ನಡೆಯಲಿಲ್ಲ.

    ಪೊಲೀಸರ ಸೂಚನೆ, ರೌಂಡ್ಸ್ ಇಲ್ಲದಿದ್ದರೂ ಬೆಳಗ್ಗೆಯಿಂದಲೇ ವ್ಯಾಪಾರಸ್ಥರು ಸ್ವಯಂ ಪ್ರೇರಿತವಾಗಿ ಅಂಗಡಿ ಮುಂಗಟ್ಟುಗಳನ್ನು ಬಂದ್ ಮಾಡಿದ್ದರು. ಬಸ್, ಆಟೋ ಮತ್ತು ಖಾಸಗಿ ವಾಹನಗಳು ರೋಡಿಗೆ ಇಳಿಯದ್ದರಿಂದ ಸಂಚಾರವೂ ಸ್ತಬ್ಧಗೊಂಡಿತ್ತು. ಹೋಟೆಲ್, ಚಲನಚಿತ್ರ ಮಂದಿರ, ಬಾರ್ ಮತ್ತು ರೆಸ್ಟೋರೆಂಟ್ ಹಾಗೂ ಮಾಂಸದ ಅಂಗಡಿಗಳು ಸೇರಿದಂತೆ ಸಣ್ಣ ಸಣ್ಣ ಬೀದಿ ಬದಿ ಅಂಗಡಿಗಳು ಬಂದ್ ಮಾಡಿದ್ದು ಲಾಕ್​ಡೌನ್ ಭಯದಿಂದ ಜನರು ಹೊರಗಡೆ ಬರುವದು ಕಡಿಮೆಯಾಗಿತ್ತು. ಪೋಲೀಸ್ ಇಲಾಖೆ ಸಿಬ್ಬಂದಿ ವಿನಾಕಾರಣ ಹೊರಗಡೆ ಬಂದವರಿಗೆ ಎಚ್ಚರಿಕೆ ನೀಡಿ ಕೆಲವರಿಗೆ ಪೊಲೀಸರು ಲಾಠಿಯ ರುಚಿ ತೋರಿಸಿದರು.

    ರಸ್ತೆಗಳೆಲ್ಲ ಖಾಲಿ ಖಾಲಿ

    ರೋಣ: ಕರೊನಾ ನಿಯಂತ್ರಣಕ್ಕಾಗಿ ಘೊಷಿಸಲಾದ ಲಾಕ್​ಡೌನ್​ಗೆ ಪಟ್ಟಣ ಸೇರಿ ತಾಲೂಕು ವ್ಯಾಪ್ತಿಯಲ್ಲಿ ಭಾನುವಾರ ಉತ್ತಮ ಸ್ಪಂದನೆ ವ್ಯಕ್ತವಾಯಿತು. ವ್ಯಾಪಾರಸ್ಥರು ಅಂಗಡಿ ಮುಂಗಟ್ಟುಗಳನ್ನು ಸಂಪೂರ್ಣವಾಗಿ ಮುಚ್ಚಿದರೆ, ಆಟೋ ಸೇರಿ ಬಹುತೇಕ ವಾಹನ ಸವಾರರು ರಸ್ತೆಗಿಳಿಯದೇ ಲಾಕ್​ಡೌನ್​ಗೆ ಸ್ಪಂದಿಸಿದರು. ಬಹುತೇಕ ರಸ್ತೆಗಳು ಬಿಕೋ ಎನ್ನುತ್ತಿದ್ದವು, ಜನ ಸಂಚಾರ ಸಂಪೂರ್ಣ ಸ್ತಬ್ಧವಾಗಿತ್ತು. ಅಗತ್ಯ ಸೇವೆಗಳಾದ ಆಸ್ಪತ್ರೆ, ಹಾಲು, ಮೆಡಿಕಲ್ ಸ್ಟೋರ್ ಹೊರತು ಪಡಿಸಿ ಎಲ್ಲ ಅಗಡಿಗಳು ಮುಚ್ಚಿದ್ದವು.

    ವಾಹನ, ಜನ ಸಂಚಾರ ವಿರಳ

    ನರೇಗಲ್ಲ: ಸಂಡೇ ಕರ್ಫ್ಯೂಗೆ ಜನರ ಸಹಕಾರ ಪಟ್ಟಣ ಸೇರಿ ಹೋಬಳಿಯಾದ್ಯಂತ ಕರ್ಫ್ಯೂಗೆ ಉತ್ತಮ ಬೆಂಬಲ ವ್ಯಕ್ತವಾಯಿತು. ಶನಿವಾರ ಸಂಜೆಯಿಂದಲೇ ಅಂಗಡಿ ಮುಂಗಟ್ಟುಗಳು ಮುಚ್ಚಿದ್ದು, ರಸ್ತೆ ಸಂಚಾರ ಸಂಪೂರ್ಣ ಬಂದ್ ಆಗಿತ್ತು. ಭಾನುವಾರ ಬೆಳಗ್ಗೆಯಿಂದಲೇ ಹಾಲಿನ ವಿತರಣೆ ಹೊರತುಪಡಿಸಿದರೆ ಬಹುತೇಕ ಉಳಿದೆಲ್ಲ ಸೇವೆಗಳು ಸ್ಥಗಿತಗೊಂಡಿದ್ದವು. ವಾಹನಗಳ ಓಡಾಟ ಇರಲಿಲ್ಲ. ಬಸ್ ನಿಲ್ದಾಣ ಬಿಕೋ ಎನ್ನುತ್ತಿತ್ತು.

    ಒಂದು ವಾರದಿಂದ ಲಾಕ್​ಡೌನ್ ಸಡಿಲವಾಗಿದ್ದರಿಂದ ಜನಜೀವನ ಸಹಜ ಸ್ಥಿತಿಗೆ ಬಂದಿತ್ತು. ಜನರ, ವಾಹನಗಳ ಓಡಾಟ ಜೋರಾಗಿತ್ತು. ಆದರೆ, ಶನಿವಾರ ಸಂಜೆಯಿಂದ ಸೋಮವಾರ ಬೆಳಗಿನ 7ರವರೆಗೆ ಜನರಿಲ್ಲದೇ ರಸ್ತೆಗಳು ಭಣಗುಡುತ್ತಿದ್ದವು. ಪಿಎಸ್​ಐ ಬಿ.ಬಿ. ಕೊಳ್ಳಿ ಮತ್ತು ಸಿಬ್ಬಂದಿ ಸೂಕ್ತ ಬಂದೋಬಸ್ತ್ ಏರ್ಪಡಿಸಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts