More

    ಸಂಘಟನಾ ವೈಫಲ್ಯದಿಂದ ಪಕ್ಷಕ್ಕೆ ಸೋಲು

    ಕೆ.ಆರ್.ಪೇಟೆ: ಕೆ.ಆರ್.ಪೇಟೆ ಕ್ಷೇತ್ರದಲ್ಲಿ ಕಾಂಗ್ರೆಸ್ ಸೋಲಿಗೆ ಅಭ್ಯರ್ಥಿ ಬಿ.ಎಲ್.ದೇವರಾಜು ಅಥವಾ ಮತದಾರರ ವೈಫಲ್ಯ ಕಾರಣವಲ್ಲ. ಬದಲಾಗಿ ಪಕ್ಷದ ಸಂಘಟನಾ ವೈಫಲ್ಯವೇ ಪ್ರಮುಖ ಕಾರಣ ಎಂದು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಸಿ.ಡಿ.ಗಂಗಾಧರ್ ಹೇಳಿದರು.
    ಪಕ್ಷದ ಪರಾಜಿತ ಅಭ್ಯರ್ಥಿ ಬಿ.ಎಲ್.ದೇವರಾಜು ಅವರ ನಿವಾಸಕ್ಕೆ ಬುಧವಾರ ತೆರಳಿ ಸಾಂತ್ವನ ಹೇಳಿ ಮಾತನಾಡಿದ ಅವರು, ಸೋಲಿನಿಂದ ನೀವು ಧೃತಿಗೆಡಬೇಡಿ. ಪಕ್ಷ ನಿಮ್ಮೊಂದಿಗಿದೆ. ನಿಮಗಾಗಿರುವ ಆರ್ಥಿಕ ನಷ್ಟದ ಅರಿವು ನಮಗಿದೆ. ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರದಲ್ಲಿದೆ. ನಿಮಗೆ ರಾಜಕೀಯ ಶಕ್ತಿಯನ್ನು ಪಕ್ಷ ನೀಡುತ್ತದೆ. ಕ್ಷೇತ್ರದ ಜನರ ಕಷ್ಟ ಸುಖಗಳಿಗೆ ಧ್ವನಿಯಾಗಿ. ಸೋಲಿನ ಬಗ್ಗೆ ಕಾರ್ಯಕರ್ತರ ಜೊತೆ ಕುಳಿತು ವಿಶ್ಲೇಷಿಸಿ ಕಾರಣಗಳನ್ನು ತಿಳಿದುಕೊಂಡು ಗಟ್ಟಿಯಾಗಿ ಪಕ್ಷವನ್ನು ಸಂಘಟಿಸಿ. ಮುಂಬರುವ ತಾಪಂ, ಜಿಪಂ ಚುನಾವಣೆಗಳನ್ನು ಗೆಲ್ಲುವತ್ತ ಗಮನಹರಿಸುವಂತೆ ಸಲಹೆ ನೀಡಿದರು.
    ಜೆಡಿಎಸ್ ಗೆಲುವಿನ ಬಗ್ಗೆ ಮಾತನಾಡುವುದಿಲ್ಲ. ಆದರೆ, ಜಿಲ್ಲೆಯಲ್ಲಿ ಕಾಂಗ್ರೆಸ್ ಮುಗಿದೇ ಹೋಯಿತು ಎನ್ನುತ್ತಿದ್ದವರಿಗೆ ಮತದಾರರು ತಕ್ಕ ಉತ್ತರ ನೀಡಿದ್ದಾರೆ. ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ನಮ್ಮ ಅಭ್ಯರ್ಥಿ ದಿನೇಶ್ ಗೂಳೀಗೌಡ ಮತ್ತು ಪದವೀಧರರ ಕ್ಷೇತ್ರದಲ್ಲಿ ಮಧು ಮಾದೇಗೌಡ ಅವರ ಗೆಲುವಿನಿಂದಲೇ ಜಿಲ್ಲೆಯಲ್ಲಿ ಕಾಂಗ್ರೆಸ್ ಗೆಲುವಿನ ಪರ್ವ ಆರಂಭವಾಗಿತ್ತು. ಕೆ.ಆರ್.ಪೇಟೆ ಕ್ಷೇತ್ರದಲ್ಲಿ ನಾವು ಸೋತಿದ್ದರೂ ಎರಡನೇ ಸ್ಥಾನಕ್ಕೆ ಬಂದಿದ್ದೇವೆ. ಜಿಲ್ಲೆಯಲ್ಲಿ ಕಾಂಗ್ರೆಸ್ ಸದೃಢವಾಗಿರುವುದರಿಂದ ಮುಂದಿನ ದಿನಗಳಲ್ಲಿ ನಾನು ಬಿ.ಎಲ್.ದೇವರಾಜು ಮತ್ತು ಮಾಜಿ ಶಾಸಕ ಕೆ.ಬಿ.ಚಂದ್ರಶೇಖರ್ ನೇತೃತ್ವದಲ್ಲಿ ಪಕ್ಷ ಸಂಘಟಿಸುತ್ತೇವೆ ಎಂದರು.
    ಪಿಎಲ್‌ಡಿ ಬ್ಯಾಂಕ್ ನಿರ್ದೇಶಕ ಹರಳಹಳ್ಳಿ ವಿಶ್ವನಾಥ್, ಮುಖಂಡ ಬಸ್ ಕೃಷ್ಣೇಗೌಡ, ವಕೀಲರಾದ ಬಂಡೀಹೊಳೆ ಗಣೇಶ್, ಬಳ್ಳೇಕೆರೆ ಯೋಗೇಶ್, ಪಕ್ಷದ ವೀಕ್ಷಕ ಚಿನಕುರಳಿ ರಮೇಶ್, ಜಿಲ್ಲಾ ಕಾಂಗ್ರೆಸ್ ಕಾರ್ಯದರ್ಶಿ ಟಿ.ಎನ್. ದಿವಾಕರ್, ತಾಲೂಕು ಕಾರ್ಯದರ್ಶಿ ಚೇತನ ಮಹೇಶ್ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts