More

    ಸಂಗೀತದ ರಸದೌತಣ ನೀಡಿದ ಬಿದರಿ ಉತ್ಸವ

    ಬೀದರ್: ಬಿದರಿ, ಬೀದರ್ ಜಿಲ್ಲೆಯ ಸಾಂಸ್ಕೃತಿಕ ವೇದಿಕೆಯ ಅಧ್ಯಕ್ಷೆ ರೇಖಾ ಅಪ್ಪಾರಾವ್ ಸೌದಿ ನೇತೃತ್ವದಲ್ಲಿ ಕನ್ನಡ ಮತ್ತು ಸಂಸ್ಕøತಿ ಇಲಾಖೆ ಸಹಯೋಗದಲ್ಲಿ ಸ್ವಾತಂತ್ರ್ಯದ ಅಮೃತ ಮಹೋತ್ಸವದ ನಿಮಿತ್ತ ಇಲ್ಲಿನ ಪೂಜ್ಯ ಚನ್ನಬಸವ ಪಟ್ಟದ್ದೇವರು ರಂಗಮಂದಿರದಲ್ಲಿ ಆಯೋಜಿಸಿದ್ದ ಬಿದರಿ ಉತ್ಸವದ ಸಂಗೀತ ಸಂಜೆ ಕಾರ್ಯಕ್ರಮ ಕಿಕ್ಕಿರಿದಿದ್ದ ಪ್ರೇಕ್ಷಕರನ್ನು ರಂಜಿಸುವಲ್ಲಿ ಯಶಸ್ವಿ ಆಯಿತು.

    ಸರಿಗಮಪ ಖ್ಯಾತಿಯ ಹರ್ಷಧ್ವನಿ ಶ್ರೀಹರ್ಷ, ಖ್ಯಾತ ಗಾಯಕಿ ರೇಖಾ ಸೌದಿ, ಗಾಯಕ ಅಮಿತ್ ಹಾಗೂ ವಿಷ್ಣು ಜನವಾಡಕರ್ ಅವರ ಸಂಗೀತದ ರಸದೌತಣ ನೆರೆದ ಪ್ರೇಕ್ಷಕರನ್ನು ಕುಣಿದು ಕುಪ್ಪಳಿಸುವಂತೆ ಮಾಡಿದರೆ, ‘ಹುಟ್ಟಿದರೆ ಕನ್ನಡ ನಾಡಲ್ಲಿ ಹುಟ್ಟಬೇಕು’ ಹಾಡು ಪ್ರೇಕ್ಷಕರನ್ನು ವೇದಿಕೆ ಮೇಲೇರಿ ಹೆಜ್ಜೆ ಹಾಕುವಂತೆ ಮಾಡಿತು. ಕೊನೆಯಲ್ಲಿ ರೇಖಾ ಸೌದಿ ಸಿರಿಕಂಠದಲ್ಲಿ ಮೂಡಿಬಂದ ‘ಏ ಮೇರೆ ವತನ್ ಕೆ ಲೋಗೊ’ ಹಾಡು ಎಲ್ಲರನ್ನೂ ಮಂತ್ರಮುಗ್ಧಗೊಳಿಸಿತು.

    ಕಾರ್ಯಕ್ರಮದ ಆರಂಭದಲ್ಲಿ ಶ್ರೀ ರಾಘವೇಂದ್ರ ಸ್ವಾಮಿಗಳ ಆರಾಧನೆಯ ನಿಮಿತ್ತ ರೇಖಾ ಸೌದಿ ದೇವತಾ ಮನುಷ್ಯ ಚಲನಚಿತ್ರದ ‘ಹಾಲಲ್ಲಾದರೂ ಹಾಕು ನೀರಲ್ಲಾದರೂ ಹಾಕು’ ಎಂಬ ಹಾಡು ಹಾಡುವ ಮೂಲಕ ಸಂಗೀತ ಸಂಜೆಗೆ ಚಾಲನೆ ನೀಡಿದರು. ನಂತರ ಗಾಯಕ ಅಮಿತ್, ಸಿಬಿಐ ಶಂಕರ ಚಿತ್ರದ ಗೀತಾಂಜಲಿ ಪ್ರೇಕ್ಷಕರ ಚಪ್ಪಾಳೆಯ ಸುರಿಮಳೆ ಕಂಡಿತು.

    ಸರಿಗಮಪ ಖ್ಯಾತಿಯ ಹರ್ಷಧ್ವನಿ ಶ್ರೀಹರ್ಷ, ಕಿರಿಕ್ ಪಾರ್ಟಿಯ ಬೆಳಗಾಗಲೆದ್ದು ಯಾರ ಮುಖವ ನೋಡಿದೆ ಹಾಡನ್ನು ಹಾಗೂ ರೇಖಾ ಸೌದಿ ಜೊತೆ ಹಾಡಿದ ನನ್ನ ನೀನು ಗೆಲ್ಲಲಾರೆ ಚಿತ್ರದ ನನ್ನ ನೀನು ಗೆಲ್ಲಲಾರೆ ಹಾಡು ಪ್ರೇಕ್ಷಕರನ್ನು ಕುಣಿಯುವಂತೆ ಮಾಡಿದವು. ತದನಂತರ ರೇಖಾ ಸೌದಿ ಹಾಡಿದ ನೀನೇ ರಾಮಾ ನೀನೆ ಶಾಮಾ ಹಾಡಂತೂ ಪ್ರೇಕ್ಷಕರ ಮನ ಗೆದ್ದಿತು. ಇವರಿಬ್ಬರ ಮಧ್ಯ ಪುಟಾಣಿ ಮಗು ಮಧುಶ್ರೀ ಹತ್ತಾರು ವಾದ್ಯಗಾರರ ವಾದ್ಯಗಳೊಂದಿಗೆ ಹಾಡಿದ ಸುರಮಯಿ ಅಖಿಯೋಮೆ ಹಾಡು ಎಲ್ಲರನ್ನೂ ಅಚ್ಚರಿಗೊಳಿಸಿತು.

    ಅಮಿತ ಹಾಗೂ ರೇಖಾ ಸೌದಿ ಹಾಡಿದ ಜರಾಸಂಧ ಚಿತ್ರದ ನೀ ನೀರಿಗೆ ಬಾರೆ ಚೆನ್ನಿ ಮತ್ತು ರೇಖಾ ಸೌದಿ ಮತ್ತು ಶ್ರೀಹರ್ಷ ಹಾಡಿದ ಅಯೋಗ ಚಲನಚಿತ್ರದ ಏನಮ್ಮಿ ಏನಮ್ಮಿ ಅಲ್ಲದೆ ವಿಷ್ಣು ಮತ್ತು ಅಮಿತ್ ಜೊತೆಯಾಗಿ ಹಾಡಿದ ಲಗನ್ ಲಗಿ ಮತ್ತು ಝಿಂಗಾಟ್, ಶ್ರೀವಲ್ಲಿ ಹಾಡುಗಳಂತೂ ಪ್ರೇಕ್ಷಕರನ್ನು ಕುಣಿದು ಕುಪ್ಪಳಿಸುವಂತೆ ಮಾಡಿದರೆ, ದ.ರಾ ಬೇಂದ್ರೆ ಅವರು ರಚಿತ ನಾಕು ತಂತಿ ಹಾಡಿದ ರೇಖಾ ಸೌದಿ ಅವರ ಕಂಠ ಸಿರಿ ಎಲ್ಲರನ್ನೂ ಮಂತ್ರಮುಗ್ಧಗೊಳಿಸಿತು.

    ಸ್ವಾತಂತ್ರ್ಯದ ಅಮೃತ ಮಹೋತ್ಸವದ ನಿಮಿತ್ತ ಗಡಿಯಲ್ಲಿ ದೇಶವನ್ನು ಕಾಯುತ್ತಿರುವ ಸೈನಿಕರನ್ನು ಸ್ಮರಿಸುವ ಮತ್ತು ಭಾರತ ರತ್ನ ಲತಾ ಮಂಗೇಶ್ಕರ್ ಅವರನ್ನು ನೆನಪಿಸುವ ಏ ಮೇರೆ ವತನ್ ಕೆ ಲೋಗೋ ಸುಶ್ರಾವ್ಯವಾಗಿ ಮೂಡಿಬಂದವು ಹೀಗೆಯೇ ಶ್ರೀಹರ್ಷ ಹಾಡಿದ ಬೊಂಬೆ ಹೇಳುತೈತೆ, ತರವಲ್ಲ ತಗಿ, ಸಂತೋಷಕೆ ಹಾಡು ಸಂತೋಷಕೆ ಮತ್ತು ಯಾರೇ ನೀನು ರೋಜಾ ಹೂವೆ ಹಾಡುಗಳು ಅಪಾರ ಸಂಖ್ಯೆಯ ಪ್ರೇಕ್ಷಕರ ಮನಗೆದ್ದವು.

    ಬಿದರಿ ಸಂಗೀತ ಸಂಜೆ ಕಾರ್ಯಕ್ರಮದಲ್ಲಿ ಲಕ್ಷ್ಮಿ ಸೌದಿ ಭರತ ನಾಟ್ಯ ಪ್ರಸ್ತುತ ಪಡಿಸಿದರು. ಕನ್ನಡ ಮತ್ತು ಸಂಸ್ಕøತಿ ಇಲಾಖೆ ಸಹಾಯಕ ನಿರ್ದೇಶಕ ಸಿದ್ರಾಮ ಸಿಂದೆ ಅವರು ವಾದ್ಯ ಬಾರಿಸುವ ಮೂಲಕ ಸಂಗೀತ ಸಂಜೆ ಉದ್ಘಾಟಿಸಿದರು ಭಕ್ತ ಕುಂಬಾರ ನಿರೂಪಿಸಿದರೆ, ದೇವಿದಾಸ ಜೋಶಿ ವಂದಿಸಿದರು. ಸೊಲ್ಲಾಪೂರದ ಸ್ಟಾರ್ ಆಫ್ ಮೆಲೋಡೀಸ್ ವಾದ್ಯ ವೃಂದದವರು ಗಾಯಕರಿಗೆ ವಾದ್ಯ ಪರಿಕರಗಳ ಸಹಕಾರ ನೀಡಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts