More

    ಸಂಕಷ್ಟದಲ್ಲಿ ಹೆಸ್ಕಾಂ ಉಪವಿಭಾಗ

    ರಾಜೇಂದ್ರ ಶಿಂಗನಮನೆ ಶಿರಸಿ

    ಉಪವಿಭಾಗ ವ್ಯಾಪ್ತಿಯ ಸ್ಥಳೀಯ ಸಂಸ್ಥೆಗಳಿಂದ ಕೋಟ್ಯಂತರ ರೂಪಾಯಿ ವಿದ್ಯುತ್ ಬಿಲ್ ಬಾಕಿ ಉಳಿದಿರುವುದು ಹೆಸ್ಕಾಂಗೆ ಹೊರೆಯಾಗಿ ಪರಿಣಮಿಸಿದೆ. ಅತ್ತ ಬಿಲ್ ವಸೂಲಿ ಮಾಡಲಾಗದೆ, ಇತ್ತ ವಿದ್ಯುತ್ ಕಡಿತಕ್ಕೂ ಮುಂದಾಗದೆ ಸಂಕಷ್ಟದ ಸ್ಥಿತಿ ಅನುಭವಿಸುತ್ತಿದೆ.

    ಬೀದಿ ದೀಪ, ಕುಡಿಯುವ ನೀರು ಯೋಜನೆ, ಸಾರ್ವಜನಿಕ ಸಭೆ, ಸಮಾರಂಭ ಹಾಗೂ ಕಚೇರಿಗೆ ಸಂಬಂಧಿಸಿದಂತೆ ವಿದ್ಯುತ್ ಬಿಲ್ ಪಾವತಿಗೆ ಸರ್ಕಾರದಿಂದ ಪ್ರತಿ ವರ್ಷ ಲಕ್ಷಾಂತರ ರೂ. ಅನುದಾನ ಬರುತ್ತದೆ. 14ನೇ ಹಣಕಾಸು ಯೋಜನೆಯಡಿ ಕೇಂದ್ರದಿಂದ ಲಕ್ಷಾಂತರ ರೂಪಾಯಿ ಅನುದಾನ ವಿದ್ಯುತ್ ಬಿಲ್, ಸಿಬ್ಬಂದಿ ವೇತನ, ಪಂಚಾಯಿತಿ ನಿರ್ವಹಣೆಗೆಂದು ಬಿಡುಗಡೆಯಾಗುತ್ತದೆ. ಆದರೆ, ಬಹುತೇಕ ಗ್ರಾಮ ಪಂಚಾಯಿತಿಗಳು ಇಂದಿಗೂ ಲಕ್ಷಾಂತರ ರೂ. ವಿದ್ಯುತ್ ಬಿಲ್ ಉಳಿಸಿಕೊಂಡಿವೆ. ಅನೇಕ ವರ್ಷಗಳಿಂದ ಈ ಬಾಕಿಯುಳಿದ ಮೊತ್ತದ ಕಾರಣ ಹೆಸ್ಕಾಂ ನಷ್ಟ ಅನುಭವಿಸುವಂತಾಗಿದೆ.

    2 ಕೋಟಿ ರೂ. ಬಾಕಿ: ಶಿರಸಿ 32, ಸಿದ್ದಾಪುರ 23, ಯಲ್ಲಾಪುರ 15, ಮುಂಡಗೋಡ 16 ಸೇರಿ ಒಟ್ಟು 86 ಪಂಚಾಯಿತಿಗಳಿಂದ 1.08 ಕೋಟಿ ರೂ., 4 ಸ್ಥಳೀಯ ಸಂಸ್ಥೆಗಳಿಂದ 82.44 ಲಕ್ಷ ರೂ. ಬಿಲ್ ಬಾಕಿ ಇದೆ.

    ಗ್ರಾಮ ಪಂಚಾಯಿತಿ, ನಗರಸಭೆ, ಪಟ್ಟಣ ಪಂಚಾಯಿತಿಗಳಲ್ಲಿ ವಿದ್ಯುತ್ ಬಿಲ್ ಪಾವತಿಗೆ ಸಾಕಷ್ಟು ಹಣ ಮೀಸಲಿದ್ದರೂ ಪ್ರತಿ ತಿಂಗಳು ಬಾಕಿ ಉಳಿಸಿಕೊಳ್ಳುತ್ತ ಹೋಗುತ್ತಿವೆ. ಬಾಕಿ ಮೊತ್ತ ಈಗ ಕೋಟ್ಯಂತರ ರೂಪಾಯಿ ಆಗಿದೆ. ಬಾಕಿ ಪಾವತಿಗೆ ಹೆಸ್ಕಾಂ ಹಲವಾರು ತಂತ್ರಗಳನ್ನು ರೂಪಿಸಿದ್ದರೂ ಸ್ಥಳೀಯ ಸಂಸ್ಥೆಗಳು ಮಾತ್ರ ವಿವಿಧ ಕಾರಣ ಹೇಳಿ ಬಿಲ್ ಪಾವತಿಸದೆ ಕಾಲಹರಣ ಮಾಡುತ್ತಿವೆ. ಪ್ರತಿ ವರ್ಷ ಬಿಲ್ ತುಂಬದೇ ಉಳಿಸಿಕೊಂಡ ಹಣಕ್ಕೆ ಶೇ. 1ರಷ್ಟು ದಂಡ ವಿಧಿಸಲಾಗುತ್ತಿದೆ.

    ಹೀಗಾಗಿ, ವಿದ್ಯುತ್ ಬಿಲ್ ಬಾಕಿಯ ಬಡ್ಡಿ ಹಣವು ತಿಂಗಳಿಂದ ತಿಂಗಳಿಗೆ ಬೆಳೆಯುತ್ತಿದೆ. ಈ ಕುರಿತು ಹೆಸ್ಕಾಂ ಅಧಿಕಾರಿಗಳು, ಪಿಡಿಒಗಳು ಹಾಗೂ ನಗರಾಡಳಿತ ಮುಖ್ಯಸ್ಥರಿಗೆ ಹೇಳಿದರೂ ಬಿಲ್ ಕಟ್ಟುವ ಗೋಜಿಗೆ ಹೋಗದಿರುವುದು ಬಾಕಿ ಮೊತ್ತ ಬೆಳೆಯಲು ಕಾರಣವಾಗಿದೆ.

    ವಿದ್ಯುತ್ ಬಿಲ್ ಬಾಕಿ ಉಳಿಸದಂತೆ ಮೇಲಧಿಕಾರಿಗಳ ಆದೇಶವಿದೆ. ಈ ಹಿನ್ನೆಲೆಯಲ್ಲಿ ನಗರ ಸ್ಥಳೀಯ ಸಂಸ್ಥೆಗಳು ಹಾಗೂ ಗ್ರಾಮ ಪಂಚಾಯಿತಿಗಳಿಗೆ ಬಾಕಿ ಪಾವತಿಸುವಂತೆ ಈಗಾಗಲೇ ಸೂಚನೆ ನೀಡಲಾಗಿದೆ. ಸರ್ಕಾರ ಪ್ರತಿ ಮೂರು ತಿಂಗಳಿಗೊಮ್ಮೆ ಹಣ ಬಿಡುಗಡೆ ಮಾಡಲಿರುವ ಕಾರಣ ಹೆಚ್ಚು ಸಮಸ್ಯೆ ಆಗಲಾರದು. ಆದರೂ ವಿದ್ಯುತ್ ಬಿಲ್ ಬಾಕಿ ಉಳಿಸಿಕೊಂಡಿವೆ. ಬಿಲ್ ಕಟ್ಟುವಂತೆ ಎಲ್ಲ ಪಿಡಿಒಗಳು, ಕಾರ್ಯದರ್ಶಿಗಳು ಹಾಗೂ ನಗರ ಸ್ಥಳೀಯ ಸಂಸ್ಥೆ ಅಧಿಕಾರಿಗಳಿಗೆ ಪ್ರತಿ ತಿಂಗಳು ಹೇಳಲಾಗುತ್ತಿದೆ.
    | ದೀಪಕ ಕಾಮತ್ ಹೆಸ್ಕಾಂ ಇಇ

    ಗ್ರಾಹಕ ಬಿಲ್ ತುಂಬಲು ಕೆಲವು ದಿನ ತಡವಾದರೆ ವಿದ್ಯುತ್ ಕಡಿತ ಮಾಡುವ ಹೆಸ್ಕಾಂ ಅಧಿಕಾರಿಗಳು, ಕೋಟ್ಯಂತರ ರೂಪಾಯಿ ಬಿಲ್ ಬಾಕಿ ಇದ್ದರೂ ಸ್ಥಳೀಯ ಸಂಸ್ಥೆಗಳ ವಿದ್ಯುತ್ ಸಂಪರ್ಕ ಕಡಿತಗೊಳಿಸಲು ಮುಂದಾಗುವುದಿಲ್ಲ. ಒಂದು ವೇಳೆ ಬಾಕಿ ಇರುವವರ ವಿದ್ಯುತ್ ಸಂಪರ್ಕ ಕಡಿತ ಮಾಡಿದರೆ ರಾಜಕೀಯ ಪ್ರಭಾವ ಅಧಿಕಾರಿಗಳ ಮೇಲಾಗುತ್ತದೆ. ಇದರಿಂದ ಹೆಸ್ಕಾಂ ತಮ್ಮ ಬಾಕಿ ವಸೂಲಿಯಲ್ಲಿ ಹಿನ್ನಡೆ ಅನುಭವಿಸುತ್ತಿದೆ.
    | ಮಾದೇವ ನಾಯ್ಕ, ಸಾಮಾಜಿಕ ಕಾರ್ಯಕರ್ತ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts