More

    ಶ್ವಾನಗಳ ಚಾಕಚಕ್ಯತೆ ಪ್ರದರ್ಶನ

    ಶಿರಸಿ: ಅವೆಲ್ಲ ಒಂದೇ ಜಾತಿ. ಆದರೆ ತಳಿ ಮಾತ್ರ ಬೇರೆ ಬೇರೆ. ಒಂದು ಇದ್ದಂತೆ ಮತ್ತೊಂದು ಇಲ್ಲ. ಒಂದರ ಆಹಾರ, ವಿಹಾರ ಮತ್ತೊಂದಕ್ಕೆ ಹೊಂದುವುದಿಲ್ಲ. ಕುಬ್ಜವಾಗಿದ್ದರೂ ಕೆಚ್ಚಿಗೆ ಕಡಿಮೆ ಇಲ್ಲ. ಎತ್ತರದ ಗಾತ್ರ ಇದ್ದರೂ ಮುನ್ನುಗ್ಗುವ ಛಾತಿ ಇಲ್ಲ!

    ಹೌದು… ಇದು ಇಲ್ಲಿನ ಕೆಎಚ್​ಬಿ ಮೈದಾನದಲ್ಲಿ ವಿವೇಕಾನಂದನಗರ ಗೆಳೆಯರ ಬಳಗ ಹಾಗೂ ಪಶುಸಂಗೋಪನಾ ಇಲಾಖೆ ಆಶ್ರಯದಲ್ಲಿ ಭಾನುವಾರ ಏರ್ಪಡಿಸಿದ್ದ ರಾಜ್ಯ ಮಟ್ಟದ ಶ್ವಾನ ಪ್ರದರ್ಶನದಲ್ಲಿ ಕಂಡ ಚಿತ್ರಣ.

    ಡಾಬರ್​ವುನ್, ಜರ್ಮನ್​ಶೆಫರ್ಡ್, ಗ್ರೇಟ್ ಡೇನ್, ಪಗ್, ಪೊಮೊರಿಯನ್, ಮುಧೋಳ, ಡ್ಯಾಷೆಂಡ್, ಲ್ಯಾಬ್ರಡಾರ್, ರ್ಯಾಟ್ ವ್ಹೀಲರ್, ಪಿಟ್​ಬುಲ್, ಸೇಂಟ್ ಬರ್ನಾಡ್, ಗೋಲ್ಡನ್ ರಿಟ್ರಿವರ್, ಡಾಲ್ ಮಿಷನ್, ಪಿಂಚರ್ಸ್, ಸೈಬೀರಿಯನ್ ಹಸ್ಕಿ, ಬಾಕ್ಸರ್ ಸೇರಿ 25ಕ್ಕೂ ಹೆಚ್ಚು ತಳಿಯ 100ಕ್ಕೂ ಹೆಚ್ಚು ಶ್ವಾನಗಳು ರಾಜ್ಯದ ವಿವಿಧೆಡೆಯಿಂದ ಪ್ರದರ್ಶನದಲ್ಲಿ ಪಾಲ್ಗೊಂಡಿದ್ದವು.

    ಗಾತ್ರ, ಬಣ್ಣ, ನಡಿಗೆ, ಚುರುಕುತನ, ದೃಷ್ಟಿ ಹೀಗೆ ಪ್ರತಿಯೊಂದರಲ್ಲೂ ಒಂದಕ್ಕಿಂತ ಒಂದು ಭಿನ್ನವಾಗಿದ್ದ ಶ್ವಾನಗಳು ತಮ್ಮ ಮಾಲೀಕರೊಂದಿಗೆ ಸ್ಪರ್ಧೆಯಲ್ಲಿ ವೈಯ್ಯಾರದಿಂದ ಭಾಗವಹಿಸಿ ತಮ್ಮ ಜಾಣ್ಮೆ ಪ್ರದರ್ಶಿಸಿದವು. ಶ್ವಾನಗಳ ತಳಿ, ನಡಿಗೆ, ಹಲ್ಲು, ಬಾಲ, ದೇಹದ ರಚನೆ, ಗಾತ್ರ ಮತ್ತಿತರ ಅಂಶಗಳನ್ನಾಧರಿಸಿ ತೀರ್ಪಗಾರರು ವಿವಿಧ ಸ್ಥಾನಗಳನ್ನು ನೀಡಿದರು. ಶಿವಮೊಗ್ಗ, ಹುಬ್ಬಳ್ಳಿ, ಹಾವೇರಿ, ಚಿತ್ರದುರ್ಗ, ಮಂಗಳೂರು, ದಾವಣಗೆರೆ ಭಾಗಗಳಿಂದ ತಮ್ಮ ಪ್ರೀತಿಯ ನಾಯಿಗಳನ್ನು ಜನರು ಕರೆ ತಂದಿದ್ದರು.

    ಕೆಲ ನಾಯಿಗಳನ್ನು ಸ್ಪರ್ಧೆಗೆ ಕರೆತಂದಿದ್ದ ಚಿಕ್ಕ ಮಕ್ಕಳು ತೀರ್ಪಗಾರರ ಮನ ಗೆದ್ದರು. ಯಾವುದೇ ಸಂಕೋಚ ಇಲ್ಲದೆ ನಾಯಿಯೊಂದಿಗೆ ಲವವಿಕೆಯಿಂದ ಹೆಜ್ಜೆ ಹಾಕಿ ತೀರ್ಪಗಾರರು ನೀಡಿದ ಸೂಚನೆಗಳನ್ನು ಪಾಲಿಸಿದರಲ್ಲದೇ, ಪ್ರೇಕ್ಷಕರ ಮೆಚ್ಚುಗೆಗಳಿಸಿದರು. ಅದಲ್ಲದೆ, ಪುಟ್ಟ ಪುಟ್ಟ ಮಕ್ಕಳು ಯಾವುದೇ ಅಳುಕಿಲ್ಲದೆ ದೈತ್ಯಗಾತ್ರದ ನಾಯಿಯ ಕೂದಲು ಬಾಚುವುದು, ಕುತ್ತಿಗೆಯ ಬೆಲ್ಟ್ ಸರಿಪಡಿಸುವುದು, ಕಿವಿ ಸ್ವಚ್ಛಗೊಳಿಸುತ್ತ ಖುಷಿ ಪಟ್ಟರು. ಪ್ರದರ್ಶನದ ಅಂಗವಾಗಿ ರಂಜಿತ ಆರ್1 ಡಾಗ್ ಟ್ರೈನಿಂಗ್ ಸ್ಕೂಲ್ ಅವರಿಂದ ತರಬೇತಿ ಹೊಂದಿರುವ ಶ್ವಾನಗಳ ಚಾಕಚಕ್ಯತೆ ಪ್ರದರ್ಶನ ಆಯೋಜಿಸಲಾಗಿತ್ತು. ಕಾರ್ಯಕ್ರಮವನ್ನು ಜಿಲ್ಲಾ ಪಂಚಾಯಿತಿ ಸದಸ್ಯ ಜಿ.ಎನ್.ಹೆಗಡೆ ಉದ್ಘಾಟಿಸಿದರು. ಈ ವೇಳೆ ಪಶುಸಂಗೋನಾ ಇಲಾಖೆ ನಿವೃತ್ತ ಅಧಿಕಾರಿ ಸುಬ್ರಾಯ ಹೆಗಡೆ ಅವರನ್ನು ಸನ್ಮಾನಿಸಲಾಯಿತು. ಶಿರಸಿ ಜೀವಜಲ ಕಾರ್ಯಪಡೆ ಅಧ್ಯಕ್ಷ ಶ್ರೀನಿವಾಸ ಹೆಬ್ಬಾರ, ಸಂಘಟಕ ರಾಘವೇಂದ್ರ ಶೆಟ್ಟಿ, ಇಲಾಖೆಯ ಆರ್.ಜಿ. ಹೆಗಡೆ, ಪಶುವೈದ್ಯ ಪಿ.ಎಸ್.ಹೆಗಡೆ ಇತರರಿದ್ದರು.

    ಸ್ಪರ್ಧೆಯಲ್ಲಿ ಗೆದ್ದವರು: ಸ್ಪರ್ಧೆಯಲ್ಲಿ ಕಾರವಾರದ ಗಣೇಶ ಮೊದಲಿಯಾರ್ ಅವರ ಗ್ರೇಟ್​ಡೆನ್ ಪ್ರಥಮ, ಶಿರಸಿಯ ಗಜೇಶ ವೇರ್ಣೆಕರ್ ಅವರ ಜರ್ಮನ್ ಶಫರ್ಡ್ ದ್ವಿತೀಯ ಹಾಗೂ ದಾವಣಗೆರೆಯ ಬ್ರಿಜೇಶ ಹಾಗೂ ಕಿರಣ ಕೆ. ಅವರ ಡಾಬರ್​ವುನ್ ನಾಯಿಗಳು ತೃತೀಯ ಸ್ಥಾನ ಹಂಚಿಕೊಂಡವು.

    ವಿಶೇಷತೆಯ ಅನಾವರಣ: ಸಾಕು ನಾಯಿ, ಬೇಟೆ ನಾಯಿ, ಕಾವಲು ನಾಯಿ, ಸೌಂದರ್ಯದ ನಾಯಿ, ಆಟದ ನಾಯಿ, ಟೆರ್ರಿಯರ್, ಯುಟಿಲಿಟಿ, ವರ್ಕಿಂಗ್ ಗ್ರೂಪ್, ಫಾಸ್ಟಲ್ ಗ್ರೂಪ್ ಹೀಗೆ ವಿವಿಧ ಉದ್ದೇಶಗಳಿಗೆ ಬಳಕೆಯಾಗುವ ನಾಯಿಗಳನ್ನು ಕರೆತಂದಿದ್ದ ಮಾಲೀಕರು ಅವುಗಳ ವಿಶೇಷತೆಯನ್ನು ಪ್ರದರ್ಶಿಸುವ ಮೂಲಕ ಸಂತಸಪಟ್ಟರು. ಕೆಲ ನಾಯಿಗಳು ಇಲ್ಲಿನ ಬಿಸಿಲಿಗೆ ಹೊಂದಿಕೊಳ್ಳುವುದಕ್ಕೆ ತೊಂದರೆಯಾಗಿ ಸ್ಪರ್ಧೆಯಲ್ಲಿ ಹಿಂದೆ ಬೀಳಬಾರದು ಎಂಬ ಉದ್ದೇಶಕ್ಕೆ ಅದರ ಮಾಲೀಕರು ಶ್ವಾನಗಳನ್ನು ವಾಹನದೊಳಗೆ ಎಸಿಯಲ್ಲಿರಿಸಿ ಆರೈಕೆ ಮಾಡುತ್ತಿದ್ದರು.

    ಸಾಕಣಿಕೆಯ ಮಾಹಿತಿ: ಶ್ವಾನ ಪ್ರದರ್ಶನದ ಹಿನ್ನೆಲೆಯಲ್ಲಿ ಬೆಳಗ್ಗೆಯಿಂದಲೇ ಜನರು ಮೈದಾನದತ್ತ ಮಕ್ಕಳು ಮತ್ತು ಕುಟುಂಬದವರೊಂದಿಗೆ ಆಗಮಿಸಿದ್ದರು. ಪ್ರದರ್ಶನದ ಅಂಗವಾಗಿ ನಿರ್ವಿುಸಿದ್ದ ಮಳಿಗೆಗಳಲ್ಲಿ ನಾಯಿಯ ವೈವಿಧ್ಯಮಯ ಪೌಷ್ಟಿಕ ಆಹಾರ, ಬೆಲ್ಟ್, ಚೈನ್, ಪೌಡರ್ ಮತ್ತಿತರ ಸಾಧನಗಳ ಮಾಹಿತಿ ಪಡೆದುಕೊಂಡರು.

    ನಾಯಿಯ ಆರೋಗ್ಯ ಪಾಲನೆಯಲ್ಲಿ ಶುಚಿತ್ವ ಪ್ರಮುಖ ಅಂಶವಾಗಿದ್ದು, ಶುಚಿಯಾಗಿರುವ ನಾಯಿಗಳು ದೀರ್ಘಕಾಲ ಬದುಕುತ್ತವೆ. ನಾಯಿಗಳಿಗಾಗಿಯೇ ಇರುವ ಸಾಬೂನು ಅಥವಾ ಶಾಂಪೋ ಉಪಯೋಗಿಸಿ ಬೆಚ್ಚನೆಯ ನೀರಿನಲ್ಲಿ ಸ್ನಾನ ಮಾಡಿಸಬೇಕು. ಈ ವೇಳೆ ಕಿವಿಗೆ ನೀರು ಹೋಗದಂತೆ ಎಚ್ಚರಿಕೆ ವಹಿಸಬೇಕು. ಕೂದಲನ್ನು ಸರಿಯಾಗಿ ಬ್ರಷ್ ಮಾಡಬೇಕು. ಇದರಿಂದ ಧೂಳು, ಮಣ್ಣು ಮತ್ತು ನಿರ್ಜೀವ ಕೂದಲುಗಳು ದೂರವಾಗುವ ಜತೆ ಚರ್ಮಕ್ಕೆ ರಕ್ತ ಸಂಚಾರ ಹೆಚ್ಚಾಗುವುದರಿಂದ ಆರೋಗ್ಯಕರವಾಗಿರುತ್ತದೆ.
    | ವೈಭವ ಎಂ.ಎಚ್. ಶ್ವಾನದ ಮಾಲೀಕ

    ನಾಯಿಗಳ ಆಹಾರದ ಬಗ್ಗೆ ಹೆಚ್ಚಿನ ಕಾಳಜಿ ವಹಿಸಬೇಕು. ಮೂರು ವಾರದವರೆಗೆ ಮರಿಗಳಿಗೆ ತಾಯಿಯ ಹಾಲು ಆಧಾರ. ನಂತರ ಅವುಗಳಿಗೆ ಲ್ಯಾಕ್ಟೋಪೆಟ್, ಪಪ್​ಲ್ಯಾಕ್​ನಂತಹ ಸಿದ್ಧ ಆಹಾರವನ್ನು ಅಥವಾ ರಾಗಿ ಗಂಜಿಯನ್ನು ನೀಡಬಹುದು. ಮರಿಗೆ 6-8 ವಾರ ವಯಸ್ಸಾಗುವ ಹೊತ್ತಿಗೆ ಬ್ರೆಡ್, ಬಿಸ್ಕತ್, ಚೆನ್ನಾಗಿ ಬೇಯಿಸಿದ ಅನ್ನ, ಗಂಜಿ, ಚಪಾತಿ, ರೊಟ್ಟಿ, ಕೊಚ್ಚಲ್ಪಟ್ಟ ಮಾಂಸ, ಮೊಟ್ಟೆ, ಹಣ್ಣು, ತರಕಾರಿ ಕೊಡಬಹುದು. ಮೂಳೆ, ನಾಯಿ ಬಿಸ್ಕತ್​ನಂತಹ ಗಟ್ಟಿ ಪದಾರ್ಥಗಳನ್ನು ನೀಡಿದರೆ ಹಲ್ಲುಗಳು ಶುಚಿಯಾಗಿರುತ್ತವೆ.
    ವಾರಿಜಾ ನಾಯ್ಕ ಶ್ವಾನದ ಮಾಲಕಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts