More

    ಶ್ರೇಷ್ಠ ಶಾಸ್ತ್ರೀಯ ಸಂಗೀತ ಪರಂಪರೆ ಉಳಿಸಿ

    ಸಾಗರ: ಭಾರತದ ಪುರಾತನ ಶಾಸ್ತ್ರೀಯ ಸಂಗೀತ ಪರಂಪರೆಯು ಶ್ರೇಷ್ಠತೆಯಿಂದ ಕೂಡಿದ್ದು ಪಾಶ್ಚಾತ್ಯ ಸಂಸ್ಕೃತಿ ಪ್ರಭಾವಕ್ಕೆ ನಾವು ಒಳಗಾಗಬಾರದು. ಶಾಸ್ತ್ರೀಯ ಸಂಗೀತಕ್ಕೆ ಹೆಚ್ಚು ಪ್ರಾಧಾನ್ಯತೆ ನೀಡಬೇಕು ಎಂದು ಮ್ಯಾಮ್ಕೋಸ್ ನಿರ್ದೇಶಕಿ ವಿಜಯಲಕ್ಷ್ಮೀ ರಾಮಪ್ಪ ಹೇಳಿದರು.

    ನಗರದಲ್ಲಿ ಸೇವಾಸಾಗರ ಶಾಲೆಯ ಅಜಿತ ಸಭಾಭವನದಲ್ಲಿ ಶ್ರೀ ಗಾಂಧಾರ ಸಂಗೀತ ಸಭಾ ಟ್ರಸ್ಟ್​ನಿಂದ ಶನಿವಾರ ಆಯೋಜಿಸಿದ್ದ ‘ದಶಸಂಭ್ರಮ’ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಇತ್ತೀಚಿನ ವರ್ಷಗಳಲ್ಲಿ ಪಾಶ್ಚಾತ್ಯ ಸಂಸ್ಕೃತಿಯ ಪ್ರಭಾವ ಹೆಚ್ಚು ಬೀರುತ್ತಿದ್ದು ಅದರ ಪ್ರಭಾವಕ್ಕೆ ನಾವು ಸಿಲುಕಬಾರದು. ದಾಸಶ್ರೇಷ್ಠರು ಜ್ಞಾನನಿಧಿಯಾಗಿ ಕೊಡುಗೆ ನೀಡಿರುವ ಶಾಸ್ತ್ರೀಯ ಸಂಗೀತವನ್ನು ಉಳಿಸಿಕೊಂಡು ಮುನ್ನಡೆಯಬೇಕು ಎಂದರು.

    ವಿದ್ಯಾರ್ಥಿಗಳು ಸಂಗೀತ ಕಲಿಕೆ ಪೂರ್ಣಗೊಳಿಸದೇ ರಿಯಾಲಿಟಿ ಶೋಗಳಿಗೆ ಹೋಗುತ್ತಾರೆ. ಇದರಿಂದ ಕಲಿಕೆಯು ಸಮರ್ಪಕವಾಗದೇ, ಪಾಶ್ಚಾತ್ಯ ಶೈಲಿಯು ಪ್ರಭಾವ ಬೀರಿ ವ್ಯತಿರಿಕ್ತ ಪರಿಣಾಮ ಉಂಟಾಗುತ್ತದೆ. ಸೋಲು ಎದುರಾದ ಸಂದರ್ಭಗಳಲ್ಲಿ ಮನಸ್ಸಿನ ಮೇಲೆ ದುಷ್ಟರಿಣಾಮ ಉಂಟಾಗುತ್ತದೆ. ರಿಯಾಲಿಟಿ ಶೋ ವ್ಯಾಮೋಹಕ್ಕೆ ಬಲಿಯಾಗದೇ ಸಂಗೀತ ಕಲಿಕೆಯನ್ನು ಪರಿಪೂರ್ಣಗೊಳಿಸಬೇಕು ಎಂದು ಸಲಹೆ ನೀಡಿದರು.

    ಶ್ರೀ ಗಾಂಧಾರ ಸಂಗೀತ ಸಭಾ ಟ್ರಸ್ಟ್ ಅಧ್ಯಕ್ಷೆ ಅನಿತಾ ವೆಂಕಟೇಶ್ ಮಾತನಾಡಿ, ಸಂಗೀತ ಸಭಾ ಕಳೆದ 10 ವರ್ಷಗಳಿಂದ ಸಂಗೀತ ಕ್ಷೇತ್ರಕ್ಕೆ ತನ್ನದೇ ಆದ ಕೊಡುಗೆ ನೀಡುತ್ತ ಬಂದಿದೆ. 3 ವಿದ್ಯಾರ್ಥಿಗಳಿಂದ ಆರಂಭಗೊಂಡ ಸಂಗೀತ ಶಾಲೆ 110ಕ್ಕೂ ಹೆಚ್ಚಿನ ವಿದ್ಯಾರ್ಥಿಗಳನ್ನು ಒಳಗೊಂಡಿದೆ. ದೇಶ ವಿದೇಶಗಳಲ್ಲಿಯೂ ಸಂಗೀತ ಸಭಾದ ವಿದ್ಯಾರ್ಥಿಗಳು ಇದ್ದು ಅಲ್ಲಿಯೂ ವಿದ್ಯಾರ್ಥಿಗಳು ಕಾರ್ಯಕ್ರಮ ನೀಡುತ್ತಿದ್ದಾರೆ ಎಂದು ಹೇಳಿದರು.

    ದಶಸಂಭ್ರದ ಹಿನ್ನೆಲೆಯಲ್ಲಿ ತ್ಯಾಗರಾಜ ಆರಾಧಾನಾ ಮಹೋತ್ಸವ ಪ್ರಯುಕ್ತ ಶತಕಂಠ ಗಾಯನ ಗೋಷ್ಠಿ ನಡೆಯುತ್ತದೆ. 8 ವರ್ಷಗಳ ಕನಸು ಸಾಕಾರಗೊಳ್ಳುತ್ತಿದೆ. ಮಾ. 1ರಂದು ವಿದ್ವಾಂಸರು ಮತ್ತು ವಿದ್ಯಾರ್ಥಿಗಳು ಒಳಗೊಂಡ 100 ಜನರು ಘನರಾಗ ಪಂಚಕೃತಿಗಳ ಗಾಯನ ನಡೆಸಿಕೊಡಲಿದ್ದಾರೆ ಎಂದು ತಿಳಿಸಿದರು.

    10ನೇ ವಾರ್ಷಿಕೋತ್ಸವ ಪ್ರಯುಕ್ತ ವಿದ್ಯಾಲಯದ ವಿದ್ಯಾರ್ಥಿಗಳಿಂದ ಸಂಗೀತ ಕಾರ್ಯಕ್ರಮ ನಡೆಯಿತು. ಮಧುಮುರಳಿ ಮತ್ತೂರು, ವಿವೇಕಕೃಷ್ಣ ಮತ್ತೂರು ವಯೋಲಿನ್ ವಾದ್ಯ ಹಾಗೂ ರಾಜೀವ್ ಮತ್ತೂರು, ಅರವಿಂದ ಹೊಳ್ಳ ಮೃದಂಗದಲ್ಲಿ ಸಾಥ್ ನೀಡಿದರು.

    ಘನರಾಗ ಪಂಚಕೃತಿಗಳ ಶತಕಂಠ: ಮಾ. 1ರ ಬೆಳಗ್ಗೆ 10ಕ್ಕೆ ಶ್ರೀ ಪುರಂದರ ದಾಸರ ಹಾಗೂ ನಾದಬ್ರಹ್ಮ ಶ್ರೀ ತ್ಯಾಗರಾಜರ ಆರಾಧನೆ ಏರ್ಪಡಿಸಿದೆ. ಸಿಗಂದೂರು ಶ್ರೀ ಕ್ಷೇತ್ರ ಪ್ರಧಾನ ಅರ್ಚಕ ಎಸ್.ಪಿ.ಶೇಷಗಿರಿ ಭಟ್ ಕಾರ್ಯಕ್ರಮ ಉದ್ಘಾಟಿಸುವರು. ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಎಚ್.ಉಮೇಶ್, ನಗರಸಭೆ ಸದಸ್ಯ ಟಿ.ಡಿ.ಮೇಘರಾಜ್ ಪಾಲ್ಗೊಳ್ಳುವರು. ಸಭಾ ಕಾರ್ಯಕ್ರಮದ ನಂತರ ವಿಶೇಷವಾಗಿ ಪಿಳ್ಳಾರಿ ಗೀತೆಗಳ ಮತ್ತು ಘನರಾಗ ಪಂಚರತ್ನ ಕೃತಿಗಳ ಶತಕಂಠಗಾಯನ ಗೋಷ್ಠಿ ನಡೆಯಲಿದೆ. ವಿದ್ವಾಂಸರು ಒಳಗೊಂಡಂತೆ 100 ಜನರು ಪಾಲ್ಗೊಳ್ಳಲಿದ್ದಾರೆ. ಟ್ರಸ್ಟ್​ನ 30ಕ್ಕೂ ಹೆಚ್ಚು ಮಕ್ಕಳು ಭಾಗಿಯಾಗಲಿದ್ದಾರೆ. ಅಲ್ಲದೇ ಶ್ರೀ ರಾಮದೇವರ ಮತ್ತು ಸದ್ಗುರು ಶ್ರೀ ತ್ಯಾಗರಾಜ ಸ್ವಾಮಿಗಳ ಮೂರ್ತಿಗಳಿಗೆ ಪಂಚರತ್ನ ಕೃತಿಗಳ ಮೂಲಕ ಪಂಚಾಮೃತ ಅಭಿಷೇಕ ಮತ್ತು ಪೂಜೆ ನೆರವೇರಲಿದೆ.

    ಟ್ರಸ್ಟ್ ಖಜಾಂಚಿ ಕೃಷ್ಣಮೂರ್ತಿ ಶ್ಯಾನುಭೋಗ್, ಕಾರ್ಯದರ್ಶಿ ವೆಂಕಟೇಶ್ ಶ್ಯಾನುಭೋಗ್, ಅಂಜನ್ ವಿ.ಶ್ಯಾನುಭೋಗ್, ವಿಜಯಲಕ್ಷ್ಮೀ ಕಂಪ್ಲಿ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts