More

    ಶ್ರೀ ಮಹಾಂತೇಶ ಕವಟಗಿಮಠ ಸೌಹಾರ್ದ ಸಹಕಾರಿ ಸಂಘ ಉದ್ಘಾಟನೆ 15ರಂದು

    ಬೆಳಗಾವಿ: ಶಿವಬಸವ ನಗರದ ಗಿರಿನಾರ್ ಪ್ರೈಡ್ ಮೊದಲ ಮಹಡಿಯಲ್ಲಿ ‘ಶ್ರೀ ಮಹಾಂತೇಶ ಕವಟಗಿಮಠ ಸೌಹಾರ್ದ ಸಹಕಾರಿ ಸಂಘ ನಿಯಮಿತ’ದ ಉದ್ಘಾಟನೆಯನ್ನು ಮಾ.15ರಂದು ಬೆಳಗ್ಗೆ 10:30ಕ್ಕೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನೆರವೇರಿಸಲಿದ್ದಾರೆ. 10:45ಕ್ಕೆ ನೆಹರು ನಗರದ ಜೆಎನ್‌ಎಂಸಿಯ ಡಾ.ಜೀರಗೆ ಸಬಾಂಗಣದಲ್ಲಿ ವೇದಿಕೆ ಕಾರ್ಯಕ್ರಮ ಜರುಗಲಿದೆ ಎಂದು ವಿಧಾನ ಪರಿಷತ್ ಮಾಜಿ ಮುಖ್ಯ ಸಚೇತಕ ಮಹಾಂತೇಶ ಕವಟಗಿಮಠ ತಿಳಿಸಿದರು.

    ನಗರದ ಖಾಸಗಿ ಹೋಟೆಲ್‌ನಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸುತ್ತೂರು ವೀರಸಿಂಹಾಸನ ಮಹಾಸಂಸ್ಥಾನ ಮಠದ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ, ನಿಡಸೋಸಿ ಸಿದ್ಧಸಂಸ್ಥಾನ ಮಠದ ಜಗದ್ಗುರು ಪಂಚಮಶಿವಲಿಂಗೇಶ್ವರ ಸ್ವಾಮೀಜಿ, ಡಂಬಳ-ಗದಗದ ಜಗದ್ಗುರು ಡಾ.ತೋಂಟದ ಸಿದ್ಧರಾಮ ಸ್ವಾಮೀಜಿ, ನಾಗನೂರು ರುದ್ರಾಕ್ಷಿಮಠದ ಡಾ.ಅಲ್ಲಮಪ್ರಭು ಸ್ವಾಮೀಜಿ ಸಾನ್ನಿಧ್ಯ ವಹಿಸುವರು. ಕೆಎಲ್‌ಇ ಸಂಸ್ಥೆಯ ಕಾರ್ಯಾಧ್ಯಕ್ಷ ಡಾ.ಪ್ರಭಾಕರ ಕೋರೆ ಅಧ್ಯಕ್ಷತೆ ವಹಿಸುವರು. ಮುಖ್ಯ ಅತಿಥಿಗಳಾಗಿ ಸಹಕಾರ ಸಚಿವ ಎಸ್.ಟಿ.ಸೋಮಶೇಖರ ಆಗಮಿಸುವರು. ಮಹಾಂತೇಶ ಕವಟಗಿಮಠ ರಚಿಸಿದ ‘ನನ್ನ ಬದುಕು ಸದನದ ಒಳಗೆ ಹೊರಗೆ’ ಎಂಬ ಪುಸ್ತಕವನ್ನು ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ಬಿಡುಗಡೆ ಮಾಡಲಿದ್ದಾರೆ. ಶಾಸಕರಾದ ಅನಿಲ ಬೆನಕೆ, ಅಭಯ ಪಾಟೀಲ ಹಾಗೂ ರಾಜ್ಯ ಸೌಹಾರ್ದ ಸಂಯುಕ್ತ ಸಹಕಾರಿ ನಿಯಮಿತ ಅಧ್ಯಕ್ಷ ಜಿ. ನಂಜನಗೌಡ ಅತಿಥಿಗಳಾಗಿ ಪಾಲ್ಗೊಳ್ಳಲಿದ್ದಾರೆಂದು ತಿಳಿಸಿದರು.

    ಕವಟಗಿಮಠ ಮನೆತನ ಕನಸಿನ ಕೂಸಾಗಿರುವ ‘ಮಹಾಂತೇಶ ಕವಟಗಿಮಠ ಸೌಹಾರ್ದ ಸಹಕಾರಿ ಸಂಘ ನಿಯಮಿತ’ ಸಹಕಾರಿ ತತ್ತ್ವದಡಿ ಕಾರ್ಯ ನಿರ್ವಹಿಸಲಿದೆ. ‘ಒಟ್ಟಿಗೆ ಬೆಳೆಯೋಣ’ ಎಂಬ ಧ್ಯೇಯದೊಂದಿಗೆ ನೂತನ ಬ್ಯಾಂಕ್ 21ನೇ ಶತಮಾನದಲ್ಲಿ ದಾಪುಗಾಲಿಡಲಿದೆ ಎಂದರು. ರೈತರು, ರೈತ ಮಹಿಳೆಯರು ಕೃಷಿ ಕಾರ್ಮಿಕರು, ಸ್ವಯಂ ಉದ್ಯೋಗಿಗಳ ಆರ್ಥಿಕ ಬೇಕು-ಬೇಡಿಕೆಗಳನ್ನು ಗಮನದಲ್ಲಿಟ್ಟುಕೊಂಡು ಕಾರ್ಯನಿರ್ವಹಿಸಲಿದೆ. ಕೇವಲ ಲಾಭ ಗಳಿಕೆಯೊಂದೇ ಸಂಘದ ಉದ್ದೇಶವಾಗದೇ ಸಹಕಾರಿ ತತ್ತ್ವದಡಿ ಆರ್ಥಿಕವಾಗಿ ಹಿಂದುಳಿದವರನ್ನು ಮೇಲೆತ್ತುವ ಕಾರ್ಯ ಮಾಡಲಿದೆ.

    ಪ್ರಾರಂಭಿಕ ಹಂತದಲ್ಲಿ ಬೆಳಗಾವಿ, ಧಾರವಾಡ, ಗದಗ ಜಿಲ್ಲೆಗಳಲ್ಲಿ ಕಾರ್ಯ ನಿರ್ವಹಿಸಲಿದೆ. 30 ಲಕ್ಷ ಷೇರು ಬಂಡವಾಳದೊಂದಿಗೆ ಜನತೆಯ ಸೇವೆ ತೊಡಗಲಿದ್ದು, ಇದು ಬ್ಯಾಂಕಿಂಗ್ ವ್ಯವಸ್ಥೆಯ ಎಲ್ಲ ಬೇಕು-ಬೇಡಿಕೆಗಳಿಗೆ ಸ್ಪಂದಿಸಲಿದೆ ಎಂದರು.

    ಶರತಚಂದ್ರ ಮಹಾಂತೇಶ ಕವಟಗಿಮಠ ಅವರು ಈ ಬ್ಯಾಂಕ್‌ನ ಅಧ್ಯಕ್ಷರಾಗಿದ್ದಾರೆ. ರಾಜೇಂದ್ರ ಯಲ್ಲಪ್ಪ ಮುತಗೇಕರ ಉಪಾಧ್ಯಕ್ಷ ಹಾಗೂ ಮಹಾಂತೇಶ ಮಲ್ಲಿಕಾರ್ಜುನ ಕವಟಗಿಮಠ, ಲಕ್ಷ್ಮೀಶ ಫಕ್ಕೀರಪ್ಪ ಹುಂಡೇಕರ, ಚಂದ್ರಗೌಡ ರುದ್ರಗೌಡ ಪಾಟೀಲ, ಪ್ರಮೋದ ಸೂರ್ಯಕಾಂತ ಕೋಚೇರಿ, ಡಾ. ಸಂತೋಷ ಸುಬಾರಾವ್ ಪಾಟೀಲ, ಸತೀಶ ಮಹಾದೇವ ಅಪ್ಪಾಜಿಗೋಳ, ಡಾ. ವಿನಿತಾ ವಿಜಯಾನಂದ ಮೆಟಗುಡ್ಡಮಠ, ಶಿವಲಿಂಗಯ್ಯ ಮಹಾಂತಯ್ಯ ಶಿವಯೋಗಿಮಠ, ಅರುಣ ಅಪ್ಪಸಾಹೇಬ ಮಾನೆ ನಿರ್ದೇಶಕರಾಗಿ ಕಾರ್ಯ ನಿರ್ವಹಿಸಲಿದ್ದಾರೆ ಎಂದರು.

    ಕವಟಗಿಮಠ ಮನೆತನ ಕೃಷಿ, ವ್ಯಾಪಾರ, ಸರಾಫಿ ವೃತ್ತಿ ಹಾಗೂ ರಾಜಕೀಯದಲ್ಲಿ ಮಹತ್ತರವಾಗಿ ತೊಡಗಿಸಿಕೊಂಡಂತೆ ಸಹಕಾರ ಕ್ಷೇತ್ರದಲ್ಲೂ ಮೂರು ತಲೆಮಾರುಗಳಿಂದ ದಾಖಲಾರ್ಹ ಕೊಡುಗೆಯನ್ನು ನೀಡಿದೆ. ಕುಟುಂಬಸ್ಥರು, ಹಿತೈಷಿಗಳು ಜತೆಯಾಗಿ ಸಹಕಾರಿ ಬ್ಯಾಂಕ್ ಸ್ಥಾಪಿಸುತ್ತಿದ್ದು, ಈ ಮೂಲಕ ಮತ್ತೊಂದು ಮೈಲುಗಲ್ಲನ್ನು ನಿರ್ಮಿಸಲಿದೆ. ಗ್ರಾಹಕರ ವಿಶ್ವಾಸಕ್ಕೆ ಕಿಂಚಿತ್ತೂ ಹುಸಿಗೊಳಿಸದೆ ಪಾರದರ್ಶಕವಾಗಿ ಸಹಕಾರಿ ಬ್ಯಾಂಕ್ ಮುನ್ನಡೆಯಲಿದೆ ಎಂದರು.

    ಶರತಚಂದ್ರ ಮಹಾಂತೇಶ ಕವಟಗಿಮಠ, ರಾಜೇಂದ್ರ ಯಲ್ಲಪ್ಪ ಮುತಗೇಕರ, ಲಕ್ಷ್ಮೀಶ ಫಕ್ಕೀರಪ್ಪ ಹುಂಡೇಕರ, ಚಂದ್ರಗೌಡ ರುದ್ರಗೌಡ ಪಾಟೀಲ, ಡಾ. ಸಂತೋಷ ಸುಬರಾವ್ ಪಾಟೀಲ, ಶಿವಲಿಂಗಯ್ಯ ಮಹಾಂತಯ್ಯ ಶಿವಯೋಗಿಮಠ, ಅರುಣ ಅಪ್ಪಾಸಾಹೇಬ ಮಾನೆ ಸುದ್ದಿಗೋಷ್ಠಿಯಲ್ಲಿದ್ದರು.


    ಫೋಟೋ: 13ಜಗ್ಗು 1: ಬೆಳಗಾವಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಹಾಂತೇಶ ಕವಟಗಿಮಠ ಮಾತನಾಡಿದರು. ಶರತಚಂದ್ರ ಮಹಾಂತೇಶ ಕವಟಗಿಮಠ, ರಾಜೇಂದ್ರ ಯಲ್ಲಪ್ಪ ಮುತಗೇಕರ, ಲಕ್ಷ್ಮೀಶ ಫಕ್ಕೀರಪ್ಪ ಹುಂಡೇಕರ, ಚಂದ್ರಗೌಡ ರುದ್ರಗೌಡ ಪಾಟೀಲ, ಡಾ. ಸಂತೋಷ ಸುಬರಾವ್ ಪಾಟೀಲ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts